ವಿಜಯಪುರ ನಗರದ ಅಂಜುಮನ್ – ಎ – ಇಸ್ಲಾಂ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ೨೨ ನೇ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಅಲ್ ಹಜ್ ಜನಾಬ್ ಸಜ್ಜಾದೆ ಪೀರ್ ಮುಷರಿಫ್, ಮೊದಲ ಮಹಾ ಪೌರರು ವಿಜಯಪುರ ನಗರ ಇವರು ವಹಿಸಿದ್ದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಶ್ರೀಮತಿ ಬಿ. ಕೆ. ತುಳಸಿಮಾಲಾರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಶಿಕ್ಷಕನ ಪಾತ್ರ ಹಾಗೂ ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ವಿಧ್ಯಾರ್ಥಿಗಳ ಪಾಲುದಾರಿಕೆಯಡಿಯ ಬಗ್ಗೆ ಸ್ಪೂರ್ತಿಯ ಮಾತುಗಳನ್ನಾಡಿದರು. ಇನ್ನೋರ್ವ ಅತಿಥಿಗಳಾಗಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರುಕ್ಸಾನಾ ಉಸ್ತಾದ ಅವರು ಮಹಿಳಾ ಸಬಲಿಕರಣದ ಅವಶ್ಯಕತೆಗಳ ಬಗ್ಗೆ ಹಲವಾರು ವಿಷಯಗಳನ್ನು ಪ್ರಶಿಕ್ಷಣಾರ್ಥಿಗಳ ಮನಮುಟ್ಟುವಂತೆ ಮಾತನಾಡಿದರು.
ಆಂಜುಮನ್ ಶಿಕ್ಷಣ ಮಹಾವಿದ್ಯಾಲಯದ ಚೊಚ್ಚಲ ವೃತ್ತ ಪತ್ರಿಕೆ “ಇಬ್ಬನಿ” ಯನ್ನು ಕಾರ್ಯಕ್ರಮದ ಅತಿಥಿಗಳಾದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಶ್ರೀಮತಿ ಬಿ. ಕೆ. ತುಳಸಿಮಾಲಾರವರು ಮತ್ತು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರುಕ್ಸಾನಾ ಉಸ್ತಾದ ಅವರು ಬಿಡುಗಡೆ ಮಾಡಿದರು.
ವಾರ್ಷಿಕ ಸ್ನೇಹ ಸಮ್ಮೇಳನದ ಜವಾಬ್ದಾರಿಯನ್ನು ಹೊತ್ತ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಆಸ್ಮಾ ಪರವಿನ್ ಜಂಬಗಿ ಅವರು ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ವರದಿಯನ್ನು ಸವಿವರವಾಗಿ ಮಾತನಾಡಿದರು. ಅಂಜುಮನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಶಿಕ್ಷಣ ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರ ಬಳಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅದೇ ರೀತಿ ವಾರ್ಷಿಕ ಸ್ನೇಹ ಸಮ್ಮೇಳನದ ನಂತರ ಸಾಯಂಕಾಲ ದೀಪದಾನ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣತೆಯಿಂದ ನಡೆಸಲಾಯಿತು. ಸ್ವಾಭಿಮಾನಿ ಶಿಕ್ಷಕರ ಅವಶ್ಯಕತೆ ನಮ್ಮ ದೇಶಕ್ಕೆ ಬಹಳ ಅನಿವಾರ್ಯ ಎಂದು ಅದ್ಭುತವಾಗಿ ಮಾತನಾಡಿದ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಶೋಕ ಎಸ್ ಹಂಚಲಿ, ಸಹಾಯಕ ಶಿಕ್ಷಕರು, ಅಕ್ಕ ನಾಗಮ್ಮ ಪ್ರೌಢಶಾಲೆ, ಬಸವನ ಬಾಗೆವಾಡಿ ಇವರು ದೇಶ ಕಟ್ಟುವಲ್ಲಿ ಶಿಕ್ಷಕನ ಪಾತ್ರ ತುಂಬಾ ದೊಡ್ಡದು, ಅಂತಹ ಹುದ್ದೆಯಲ್ಲಿ ತಾವೆಲ್ಲರು ಸಾಗುತ್ತಿರುವುದು ತುಂಬಾ ಶ್ಲಾಘನೀಯ ಎಂದು ತಮ್ಮ ಅನಿಸಿಕೆಗಳನ್ನು ಜಾನಪದ ಹಾಡಿನ ಮೂಲಕ ಹಾಡಿ ಹೇಳಿದರು. ದೀಪದಾನ ಕಾರ್ಯಕ್ರಮದ ಕೊನೆಗೆ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಈ ವೃತ್ತಿಗೆ ನನ್ನ ತನು – ಮನ – ಧನಗಳನ್ನ ಅರ್ಪಿಸಿ ನೈತಿಕ ಹೊಣೆಯನ್ನು ಹೊತ್ತು ಕಾರ್ಯ ಮಾಡುವಂತೆ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್.ಹುನಶಾಳ ಅವರು ಪ್ರಮಾಣ ವಚನವನ್ನು ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.