ಕಾಕೋಳು, ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಚಾರಿತ್ರಿಕ ಪ್ರೇಕ್ಷಣೀಯ ತಾಣ. ಇಲ್ಲಿನ ಶ್ರೀಪಾದರಾಜ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಕೃಷ್ಣನ ಮತ್ತು ಶ್ರೀವ್ಯಾಸರಾಜರಿಂದ ಸ್ಥಾಪಿತ ಕಂಬದ ಆಂಜನೇಯ ಸ್ವಾಮಿಯ ಜಾಗೃತ ಸನ್ನಿಧಾನದ ಪಾಂಚಜನ್ಯ ಸಭಾಂಗಣದಲ್ಲಿ ಜೂನ್ 22 ಶನಿವಾರ ಮಹಿಮಾನ್ವಿತ ಮಾಧ್ವ ತಪಸ್ವಿ , ವ್ಯಾಸ-ದಾಸ ಸಾಹಿತ್ಯಗಳ ಸವ್ಯಸಾಚಿ, ಸಾಧನದ ಸತ್ಪಥ ತೋರುವ ಭಕ್ತಾನುಕಂಪಿ ಯತಿಪುಂಗವ ,ಪರಮ ಭಾಗವತ ಶಿರೋಮಣಿ, ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜರ – ಉತ್ತರಾರಾಧನಾ ಮಹೋತ್ಸವವನ್ನು ಗಾನ- ಜ್ಞಾನ ಯಜ್ಞವಾಗಿ ವಿಶೇಷವಾಗಿ ಆಚರಿಸಲಾಗುವುದು.
ಪಾಂಚಜನ್ಯ ಪ್ರತಿಷ್ಠಾನ ಮತ್ತು ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಸಹಯೋಗದಲ್ಲಿ ಕೀರ್ತಿಶೇಷ ಹೊಳವನಹಳ್ಳಿ ನಾಗರಾಜಮೂರ್ತಿ ಸ್ಮರಣಾರ್ಥ ಶ್ರೀಮತಿ ಪಂಕಜಾ ಮೂರ್ತಿ ಕುಟುಂಬ ವರ್ಗದವರು ಪ್ರಧಾನ ಸೇವಾಕರ್ತರಾಗಿ ಆಯೋಜಿಸಿರುವ ಈ ಗುರುಭಕ್ತಿ ಉತ್ಸವದಲ್ಲಿ ಅಂದು ಬೆಳಿಗ್ಗೆ 9.00ರಿಂದ ವಿದ್ಯಾರಣ್ಯಪುರದ ಶ್ರೀ ವಿಜಯವಿಠ್ಠಲ ಭಜನಾ ಮಂಡಲಿಯವರಿಂದ ನಾಮಸಂಕೀರ್ತನೆ ನಂತರ 10.00 ಗಂಟೆಗೆ ಖ್ಯಾತ ವಾಗ್ಮಿ ಮ.ಶಾ.ಸಂ ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯ ಹಾಗು ವಿದ್ವಾನ್ ಆಯನೂರು ಮಧುಸೂಧನಾಚಾರ್ಯರಿಂದ ಶ್ರೀಪಾದರಾಜರ ಮಹಿಮ ಕುರಿತು ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .