ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲದೆ ನನ್ನ ಮುಖಕ್ಕೆ ಆಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದಾಗಿ ನಿಗಮದ ಎಂಡಿ ರೂಪಾ ಮೌದ್ಗಿಲ್ ಆರೋಪಿಸಿದ್ದಾರೆ.
ಇದರ ಜೊತೆ ಜೊತೆಗೇ ರಾಘವೇಂದ್ರ ಶೆಟ್ಟಿ ಕೂಡಾ, ತಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರೂಪಾ ಅವರೇ ಕಾರಣ ಎಂಬುದಾಗಿ ಪ್ರತಿ ಆರೋಪ ಮಾಡಿದ್ದು ಇಬ್ಬರು ಅಧಿಕಾರಿಗಳ ನಡುವಣ ಜಟಾಪಟಿ ತಾರಕಕ್ಕೇರಿದೆ.
ಈ ಹಿಂದೆ ರೂಪಾ ಮೌದ್ಗಿಲ್ ಅವರು ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಆರೋಪ ಮಾಡಿ ಸುದೀರ್ಘ 6 ಪುಟಗಳ ದೂರಿನ ವರದಿ ಸಲ್ಲಿಸಿದ್ದರು. ಇದಾದ ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳನ್ನು ತಳ್ಳಿ ಹಾಕಿ ರೂಪ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದರು. ಇದರ ನಡುವೆ ಈಗ ನಿಗಮದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಕೂಡ ರಾಘವೇಂದ್ರ ಶೆಟ್ಟಿ ಹಾಗೂ ರೂಪಾ ಮೌದ್ಗಿಲ್ ನಡುವೆ ಗಲಾಟೆ ನಡೆದಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇದೇ ಸಭೆಯಲ್ಲಿ ರಾಘವೇಂದ್ರ ಶೆಟ್ಟಿ ಯು ತಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೇ ರೂಪಾ ಕಾರಣ ಎಂದು ಹೇಳುವ ಮೂಲಕ ಬೆದರಿಕೆ ಒಡ್ಡಿದ್ದಲ್ಲದೆ ಮುಖಕ್ಕೆ ಆಸಿಡ್ ಎರಚಿಸುವ ಧಮಕಿ ಕೂಡ ಕೊಟ್ಟಿದ್ದಾರೆಂದು ರೂಪಾ ಮೌದ್ಗಿಲ್ ಹೇಳಿದ್ದಾರೆ.
ಸಭೆ ನಡೆದಾಗ ಇಬ್ಬರೂ ಅಧಿಕಾರಿಗಳ ವಾಗ್ವಾದ ನಡೆದು ರೂಪಾ ಅವರು ಸಭೆಯಿಂದ ಹೊರ ನಡೆಯುತ್ತಿರುವ ವೀಡಿಯೋ ವೈರಲ್ ಆಗಿದ್ದು ನಿಗಮದಲ್ಲಿ ಯಾವುದೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದ್ದು ಸಾರ್ವಜನಿಕರಿಗೆ ಉಪಯೋಗವಾಗಬಹುದಾಗಿದೆ ಈ ಬಗ್ಗೆ ಅಧಿಕಾರಿಗಳು, ಆಡಳಿತ ಮಂಡಳಿಯವರು ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಅಭಿವೃದ್ಧಿ ಕಾರ್ಯಗಳತ್ತ ಮನಸು ಮಾಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ