spot_img
spot_img

ಲೇಖನ : ಚಿತ್ತದ ಸುತ್ತೊಂದು ಸುತ್ತು

Must Read

spot_img
- Advertisement -

ಲಾವಿದನೊಬ್ಬ ತೆಗೆದ ಸುಂದರ ಭಿತ್ತಿ ಚಿತ್ರವನ್ನು ಕಣ್ಣು ನೋಡುತ್ತದೆ. ತಕ್ಷಣ ಮನಸ್ಸಿಗೆ ಆನಂದವಾಗುತ್ತದೆ. ವಾವ್! ಚಿತ್ತಾಕರ್ಷಕ ಚಿತ್ರವೆಂದು ಬಾಯಿ ಉದ್ಗರಿಸುತ್ತದೆ. ಕಣ್ಣಿಗೂ ಮನಸ್ಸಿಗೂ ಬಾಯಿಗೂ ಭಾವನೆಗೂ ಅವಿನಾಭಾವ ಸಂಬಂಧವಿದೆ.

ಕಣ್ಣು ನಾಲಿಗೆ ಮನವು ತನ್ನದೆನಬೇಡ
ಅನ್ಯರನು ಕೊಂದರೆನಬೇಡ, ಇವು ಮೂರು
ತನ್ನ ಕೊಲ್ಲುವವು ಸರ್ವಜ್ಞ
ಎಂಬ ವಚನದಲ್ಲಿ ಕಣ್ಣು ನಾಲಿಗೆ ಮನಸ್ಸು ಇವು ಮೂರನ್ನೂ ನಿನ್ನದೆಂದುಕೊಳ್ಳಬೇಡ. ಇವು ಮೂರು ನಿನ್ನನ್ನೇ ಕೊಲ್ಲುತ್ತವೆ. ಆಗ ಮಾತ್ರ ‘ನನ್ನನ್ನು ಅನ್ಯರು ಕೊಂದರು’ ಎಂದು ನುಡಿಯಬೇಡ ಎಂದು ತನ್ನ ತ್ಪಿಪದಿಯಲ್ಲಿ ಸರ್ವಜ್ಞ ಎಚ್ಚರಿಸಿದ್ದಾನೆ. ಮನವೆಂಬುದು ಮರ್ಕಟ ಎಂಬ ಮಾತೂ ಇದೆ. ಮನಸ್ಸನ್ನು ಮಂಗಕ್ಕೆ ಹೋಲಿಸಲಾಗಿದೆ. ‘ಕಪಿಗೆ ಚಪಲತೆ ಸಹಜಂ’ ಎಂದು ರನ್ನ ಹೇಳಿದ್ದಾನೆ. ಮಂಗ ಮರದಿಂದ ಮರಕ್ಕೆ ಹಾರುತ್ತಲೇ ಇರುತ್ತದೆ. ಅದನ್ನು ಒಂದೆಡೆ ಹಿಡಿದು ನಿಲ್ಲಿಸುವುದು ತುಂಬಾ ಕಷ್ಟದ ಕೆಲಸ ಎನ್ನುವುದನ್ನು ಪ್ರತಿನಿತ್ಯ ಅನುಭವಿಸಿಯೇ ಇರುತ್ತೇವೆ.

ಶ್ವಾನ ತಿಪ್ಪೆಯ ಮೇಲೆ ಮಲಗಿರಲು
ಪೂರ್ವಿಕ ಜ್ಞಾನ ಪಶ್ಚಾತ್ತಾಪ ಶುಭಚಿಂತೆಯಂತೆ
ಏನೋ ವಾಸನೆ ಬೀಸಲದು ಹಾರಿ
ದುಮುಕುವುದು
ಮಾನವನ ಮನಸಂತು – ಮಂಕುತಿಮ್ಮ
ಈ ಕಗ್ಗದಲ್ಲಿ ಮಾನವನ ಮನಸ್ಸನ್ನು ನಾಯಿಗೆ ಹೋಲಿಸಿದ್ದಾರೆ. ನಾಯಿಯ ಉಪಮೇಯವನ್ನು ಕೊಟ್ಟು, ತಿಪ್ಪೆಗುಂಡಿಯ ಮೇಲೆ ಮಲಗಿದ ನಾಯಿ ಕಣ್ಣ ಮುಚ್ಚಿ ತನ್ನ ಪೂರ್ವ ಜ್ಞಾನವನ್ನು ಕೆದಕಿ ಅಲ್ಲಿ ಆದ ತಪ್ಪುಗಳನ್ನು ಕುರಿತು ಪಶ್ಚಾತ್ತಾಪ ಪಡುತ್ತಿರಲು ಅದಕ್ಕೆ ಮತ್ತೆ ಯಾವುದಾದರೂ ವಸ್ತುವಿನ ವಾಸನೆ ಬರಲು ತಕ್ಷಣ ತನ್ನೆಲ್ಲ ಆಲೋಚನೆ ಪಶ್ಚಾತ್ತಾಪಗಳನ್ನು ತೊರೆದು ಚಂಗೆಂದು ಹಾರುತ್ತದೆ. ಹಾಗೆಯೇ ಮಾನವನ ಮನಸ್ಸು ಕೂಡ ಎಂದಿದ್ದಾರೆ ಡಿವಿಜಿಯವರು.

- Advertisement -

ನಮ್ಮ ಮನಸ್ಸು ಸಹ ಗತ ಜೀವನದಲ್ಲಿ ನಡೆದ ಘಟನೆಗಳನ್ನು ನೆನೆಯುತ್ತದೆ. ಅಲ್ಲಿ ನಡೆದ ತಪ್ಪು-ಒಪ್ಪುಗಳನ್ನು ಲೆಕ್ಕ ಹಾಕುತ್ತದೆ. ಅದು ಹಾಗಾಗಬಾರದಿತ್ತೆಂದು ಮರುಕಪಡುತ್ತದೆ. ಹಿಂದಿನದೆಲ್ಲ ಕೆದಕುತ್ತದೆ ಹಾಗಾಗದೇ ಹೋಗಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲವೆಂದು ಪಶ್ಚಾತ್ತಾಪ ಪಡುತ್ತದೆ. ಮನದಲ್ಲಿ ಹೊಳೆಯುವ ಕೆಟ್ಟ ಆಲೋಚನೆಗಳೇ ತಿಪ್ಪೆಗುಂಡಿ. ಮಾಡಿದ ತಪ್ಪುಗಳನ್ನು ಮತ್ತೆ ಮಾಡದೇ ಮನೋನಿಗ್ರಹವನ್ನು ಸಾಧಿಸಬೇಕು.

ಮನಸ್ಸೆಂಬ ಮನಸ್ಸಿನ ಬಗ್ಗೆ ಹೇಳಲು ಮನಸ್ಸು ಮಾಡಿದರೆ ಮನಸನ್ನು ಮನಸಾರೆ ಚಿತ್ರಿಸಬಹುದು. ಮನಸ್ಸು ಮಾಡಿದರೆ ಮನಸ್ಸು ನಮ್ಮನ್ನು ಹಕ್ಕಿಯಂತೆ ಆಗಸದೆತ್ತರಕ್ಕೆ ಹಾರಿಸುತ್ತದೆ. ಮನಃಪಟಲದಲ್ಲಿ ಅಚ್ಚೊತ್ತಿದಂತೆ ಉಳಿಸುತ್ತದೆ. ಮನಸ್ಸು ಮುನಿಸಿಕೊಂಡರೆ ಪಾತಾಳಕ್ಕೆ ಬೀಳಿಸುತ್ತದೆ. ಆದ್ದರಿಂದಲೇ ಸಂಸ್ಕೃತದಲ್ಲಿ ಹೇಳಿದ ಮಾತು ಸೂಕ್ತವಾಗಿದೆ.

‘ಮನೋ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’ ಮನುಷ್ಯನಿಗೆ ಬಂಧನ ಅಥವಾ ಮೋಕ್ಷ ಪ್ರಾಪ್ತವಾಗಲು ಮನಸ್ಸೇ ಕಾರಣೀಭೂತವಾಗಿದೆ. ಕುದುರೆಗೆ ಕಾಪು ಕಟ್ಟಿದಂತೆ ದನಗಳಿಗೆ ಮೂಗುದಾರ ಹಾಕಿದಂತೆ ನಾವು ಮನಸ್ಸಿಗೆ ಕಡಿವಾಣ ಹಾಕಿದರೆ ನಮ್ಮ ಮೌಲ್ಯ ಹಿಗ್ಗಿಸಬಹುದು. ಕಡಿವಾಣ ಬಿಗಿಯದಿದ್ದರೆ ಮೌಲ್ಯ ತನ್ನಿಂದ ತಾನೇ ಕುಗ್ಗುತ್ತದೆ. ಎಲ್ಲ ಪ್ರಾಣಿಗಳಲ್ಲಿ ಮನುಷ್ಯ ಮಾತ್ರ ತನ್ನನ್ನು ತಾನು ಮೌಲ್ಯಮಾಪನ ಮಾಡಿಕೊಳ್ಳಬಲ್ಲ. ದಯೆ, ಕರುಣೆ ಸಹನೆ ಅನುಕಂಪ, ಸ್ನೇಹ, ಪ್ರೇಮಗಳೆಂಬ ಭಾವಗಳಿಂದ ಮನೋಮೂಲದ ಭಾವ ಸಂಪತ್ತಿನಿಂದಲೇ ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾನೆ.
ಮನಸ್ಸಿನ ಮಹಿಮೆಯ ಬಗ್ಗೆ ಹೀಗೆ ಹೇಳುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತ ಹೋಗುತ್ತದೆ. ಅದೊಂದು ಅಗೋಚರ ಶಕ್ತಿ. ನಾವು ಮಾಡುವ ಎಲ್ಲ ಕೆಲಸಗಳಿಗೆ ಕಾರಣವಾಗುವುದೇ ಮನಸ್ಸು. ಮನಸ್ಸನ್ನು ಚಿತ್ತವೆಂದೂ ಕರೆಯುವುದುಂಟು ಮನಸ್ಸು ಫಲವತ್ತಾದ ಭೂಮಿಯಿದ್ದಂತೆ ಆಲೋಚನೆಗಳು ಬೀಜಗಳಿದ್ದಂತೆ. ನಾವೀಗ ಬದುಕುತ್ತಿರುವ ಜಗತ್ತಿನಲ್ಲಿ ಪಡೆದಿದ್ದೆಲ್ಲವೂ ಆಲೋಚನೆಗಳ ಫಲವಲ್ಲದೇ ಮತ್ತೇನೂ ಅಲ್ಲ ಅಲ್ಲವೇ?

- Advertisement -

ಮನಸ್ಸೆಂಬ ಭೂಮಿಯನ್ನು ಉತ್ತಿ ಬಿತ್ತಿ ಕಳೆ ಕಿತ್ತು ಹಸನಾಗಿಸಿದರೆ ಅದರಲ್ಲಿಯ ಆಲೋಚನೆಗಳು ಶುದ್ಧವಾಗಿ ಹೊರಹೊಮ್ಮುತ್ತವೆ. ಮತ್ತು ಫಲಗಳು ಪ್ರಗತಿಗೆ ನಾಂದಿಯಾಗುತ್ತವೆ. ಆಲೋಚನೆಯ ಬೀಜ ಬಿತ್ತಿದ್ದನ್ನು ಮನಸ್ಸು ಬೆಳೆಯುತ್ತದೆ. ಬೆಳೆದದ್ದನ್ನು ಬಳಸುವ, ಉಳಿಸುವ, ಬಳಸಿದ್ದನ್ನು ಮರು ಬಳಕೆಗೆ ಮರು ತಯಾರಿಸುವ ಕಲೆಯೂ ಅದಕ್ಕೆ ಗೊತ್ತಿದೆ. ಅದಕ್ಕೆ ಯೋಚಿಸುವುದು ಗೊತ್ತು ಯೋಜಿಸುವುದೂ ಗೊತ್ತು. ಯೋಚಿಸಿ ಯೋಜಿಸಿದರೆ ಅದನ್ನು ಕಾರ್ಯ ರೂಪಕ್ಕೆ ಇಳಿಸುವುದು ಗೊತ್ತು. ಸಾಧ್ಯತೆಗಳನ್ನು ಮೀರಿ ಅಸಾಧ್ಯವೆನಿಸಿದ್ದನ್ನೂ ಸಾಧ್ಯವಾಗಿಸುವ ಪ್ರಚಂಡ ಬುದ್ಧಿಶಕ್ತಿಯೂ ಇದೆ. ಉತ್ತಮ ಆಲೋಚನೆಗಳು ಮನಸ್ಸನ್ನು ಅರಳಿಸುತ್ತವೆ. ಕೆಟ್ಟ ಆಲೋಚನೆಗಳು ಮುದುಡಿಸುತ್ತವೆ. ನಾನೇ ಬುದ್ಧಿವಂತನೆಂದು ಅಹಮಿಕೆಯಿಂದ ಹಾರಾಡುವ ಬುದ್ಧಿಯೂ ಸಹ ಚಿತ್ತ ಹಾಳಾದರೆ ಮಂಕಾಗಿ ಬಿಡುತ್ತದೆ. ಅಹಮಿಕೆ ತೊರೆದರೆ ಆಗಸಕ್ಕೆ ಏಣಿ ಹಾಕಬಹುದು.
ಗುರಿಗೆ ಗುರಿ ಇಡುವಲ್ಲಿ ಮನಸ್ಸಿನ ಪಾಲು ಸಿಂಹಪಾಲು.

ಒಮ್ಮೆ ಮನಸ್ಸು ದೃಢ ಸಂಕಲ್ಪ ಮಾಡಿ ನುಗ್ಗಿದರೆ ಸಾಕು ಯಾರಿಂದಲೂ ಯಾವುದರಿಂದಲೂ ತಡೆಯಲಾಗದು. ವಿಕಲಚೇತನರಿಗೂ ಮನಸ್ಸು ಸಾಧನೆಗೆ ಅಡ್ಡಿ ಉಂಟುಮಾಡದು. ಗೆಲುವಿನ ಹಾದಿಯಲ್ಲಿ ಅಡಚಣೆಗಳು ಎದುರಾಗುವುದು ಸಹಜ. ಅವುಗಳನ್ನೆಲ್ಲ ಮನಸ್ಸು ಎದೆಗಾರಿಕೆಯಿಂದ ಎದುರಿಸುತ್ತದೆ. ಮುಂದೆ ಬರುವ ಎಲ್ಲ ಸಮಸ್ಯೆಗಳನ್ನು ಅಡ್ಡಿ ಎಂದುಕೊಳ್ಳದೇ ಬಲಗೊಳಿಸುವ ಪ್ರಬಲ ಅಸ್ತ್ರಗಳೆಂದುಕೊಳ್ಳುತ್ತದೆ. ಅವುಗಳನ್ನೆಲ್ಲ ಎದುರಿಸುವ ಚಾತುರ್ಯ ಮನಸ್ಸಿಗಿದೆ. ಹೊಗಳಿಕೆಗೆ ಹಿಗ್ಗುವ ಮನುಷ್ಯ ತೆಗಳಿಕೆಗೆ ಕುಗ್ಗುವುದು ಸಹಜ. ಹೊಗಳಿಕೆಯಿಂದ ಉಬ್ಬಿ, ನಡೆಯುವ ದಾರಿಯನ್ನು ಮರೆಯುವಂತೆ ಮಾಡುತ್ತದೆ ಮನಸ್ಸು. ತೆಗಳಿಕೆಯಿಂದ ತರಚುಗಾಯ ಮಾಡಿಕೊಂಡು ಅಳುತ್ತದೆ. ಆದ್ದರಿಂದ ಮನಸ್ಸೆಂಬ ಬಂಡಿಯನ್ನು ಸರಿದಾರಿಯಲ್ಲಿ ಮುನ್ನೆಡೆಸುವುದು ಮನಸ್ಸಿನ ಬಲಿಷ್ಟತೆಯ ಮೇಲೆ ಜೀವನ ರೂಪಿಸಿಕೊಳ್ಳಬೇಕು. ಆಗ ಜೀವನ ಯಾನ ನಂದನವನವಾಗುತ್ತದೆ.

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group