spot_img
spot_img

ಅಗಲಿದ ಕರುನಾಡಿನ ಧೀಮಂತ ಚೇತನ ಅರವಿಂದ ಕಟ್ಟಿ

Must Read

- Advertisement -

ಯುವಕರನ್ನೂ ನಾಚಿಸುವಂತಿದ್ದ 70 ರ ಹರೆಯದ, ದಣಿವರಿಯದ ಚೈತನ್ಯದ ಚೇತನ, ಮೃದು ಮಾತಿನ, ನಗು ಮೊಗದ ಸಜ್ಜನ.. ಇನ್ನಿಲ್ಲ..

ನಾಡಿನ ಮನೆ-ಮನೆಗಳನ್ನು ತಮ್ಮ ಅಪೂರ್ವ ಚಿತ್ರಿಕೆಗಳಿಂದ ಆವರಿಸಿಕೊಂಡಿರುವ ಅನನ್ಯ ಚಿತ್ರಕಾರ. ಕೆ.ಜಿ.ಎಫ್. ನಂತಹ ಕನ್ನಡರಹಿತ ಪ್ರದೇಶದಲ್ಲಿ ಕನ್ನಡ ಬಾವುಟ ಹಾರಿಸಿ, ನಿರಂತರ 40 ವರ್ಷಗಳ ಕಾಲ ಅವಿರತ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಾಗಿ ಅಹರ್ನಿಶಿ ದುಡಿದ ಅಪ್ರತಿಮ ಹೋರಾಟಗಾರ. ಅಸಮಾನ್ಯ ಸಂಘಟನೆಕಾರ.. ಇನ್ನು ನಮ್ಮ ಪಾಲಿಗಿಲ್ಲ..

ಅದ್ವಿತೀಯ ಕುಂಚಕಾರ. ಸಹನೆ, ಸೌಜನ್ಯ, ಸಾತ್ವಿಕತೆ, ಸಹೃದಯತೆ, ಕಲಾ ಫ್ರೌಡಿಮೆಯ ಸಾಕಾರ ರೂಪ.. ನನ್ನಂತಹ ಕಿರಿಯರ ಪಾಲಿನ ಮಮತೆಯ ದಾರಿದೀಪ. ಅಸಂಖ್ಯಾತ ಪ್ರತಿಭೆಗಳಿಗೆ ಸ್ಫೂರ್ತಿಯ ಬೆಳಕಾಗಿದ್ದ, ಚಿತ್ರಕಲೆ, ಸಾಹಿತ್ಯ, ಲಲಿತಕಲೆಗಳನ್ನೇ ಬದುಕಾಗಿಸಿಕೊಂಡಿದ್ದ, ತನುವಿನ ಕಣ ಕಣದಲ್ಲೂ ಕನ್ನಡವನ್ನೇ ಉಸಿರಾಗಿಸಿಕೊಂದಿದ್ದ ದಿವ್ಯಜ್ಯೋತಿ ನಂದಿ ಹೋಯಿತು. ಭವ್ಯವಾದ ಸಾರ್ಥಕ ಬದುಕನ್ನು ಮುಗಿಸಿ ಶ್ರೀಹರಿಯ ಹೃದಯದಲ್ಲಿ ಲೀನವಾಯಿತು.

- Advertisement -

ನನಗಂತೂ ಅರವಿಂದರು ಅಕ್ಷರಶಃ ಗುರು ಸಮಾನರಾಗಿದ್ದರು. “ಅಬ್ಬಾ ಅದೇನು ಬರೆದಿದ್ದೀರಾ ಗುಬ್ಬಿಯವರೇ.. ಹೀಗೆ ನಿತ್ಯ ನಿರಂತರ ಬರೆಯುತ್ತಲೇ ಇರಿ..” ಎಂದು ಪ್ರತಿದಿನ ಆಶೀರ್ವದಿಸುತ್ತಿದ್ದ ಆ ಧ್ವನಿಯಲ್ಲಿ ಅದೆಷ್ಟು ಪ್ರೀತಿ, ಅದೆಂತಹ ಅಕ್ಕರೆ, ವಾತ್ಸಲ್ಯ, ಅದೇನು ಮಮತೆ, ಪ್ರೋತ್ಸಾಹ.. ಆ ವಯಸ್ಸಿನಲ್ಲೂ ಅವರ ಅಕ್ಷರ ಪ್ರೀತಿ, ಕಾವ್ಯದ ಸೆಳೆತ, ಕನ್ನಡದ ಅಭಿಮಾನ ನನ್ನನ್ನು ದಿಗ್ಮೂಢನನ್ನಾಗಿಸುತ್ತಿತ್ತು.

ಸಂಕಷ್ಟಿಯಂದು ಮಡಿಯುಟ್ಟು ಕುಂಚ ಹಿಡಿದು, ನಿಟ್ಟುಪವಾಸ ಮಾಡುತ್ತ ಕುಳಿತರೆಂದರೆ ಸಂಜೆಯೊಳಗೆ ಅನನ್ಯ ಅಪೂರ್ವ ಚಿತ್ರಕೃತಿಯೊಂದು ಜೀವತಳೆಯುತ್ತಿತ್ತು. ನಾಡಿನ ಮನೆ-ಮನೆಯಲ್ಲೂ ದೇವರಕೋಣೆಯಲ್ಲಿ ಪೂಜಿಸಲ್ಪಡುತ್ತಿರುವ ಲಲಿತಾ ಸಹಸ್ರನಾಮ, ವಿಷ್ಣುಸಹಸ್ರನಾಮದ ಚಿತ್ರಕೃತಿಗಳು ಅರವಿಂದರ ಕುಂಚದಲ್ಲರಳಿದ್ದೆಂದು ಎಷ್ಟೋ ಜನರಿಗೆ ಗೊತ್ತಿಲ್ಲ.

- Advertisement -

ಕಾರಣ ಅರವಿಂದರ ವ್ಯಕ್ತಿತ್ವವೇ ಹಾಗೆ. ಸದ್ದು, ಸುದ್ದಿಗಳಿಲ್ಲದ ಅವಿರತ ಅನವರತ ಕಲಾ ಸೇವೆ, ಕನ್ನಡ ಸೇವೆ ಅವರದು. (ಸಹಸ್ರಾರು ಅರವಿಂದರ ಚಿತ್ರಕೃತಿಗಳಿಂದ 2-3 ಚಿತ್ರಕೃತಿಗಳನ್ನು ಈ ಲೇಖನದೊಂದಿಗೆ ಲಗತ್ತಿಸಿದ್ದೇನೆ ನೋಡಿ)

ನನ್ನ ಮತ್ತು ಅರವಿಂದರ ಪ್ರಪ್ರಥಮ ಭೇಟಿಯಾಗಿದ್ದು 2013 ರ ನವೆಂಬರಿನಲ್ಲಿ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅರವಿಂದರ ಮುಂದಾಳತ್ವದಲ್ಲಿ ನಡೆದ ಕೋಲಾರದ “ಚುಟುಕು ಸೌರಭ ಕಾವ್ಯೋತ್ಸವ”ದಲ್ಲಿ. ಅಬ್ಬಾ ಅದೆಂತಹ ಅಪೂರ್ವ ಕ್ಷಣ.

ನನ್ನ ಜೀವಿತದ ಅವಿಸ್ಮರಣೀಯ ಕ್ಷಣ.. ನನ್ನ “ಕೇಶವನಾಮ ಚೈತನ್ಯಧಾಮ” ಕೃತಿಯ 3 ಚುಟುಕುಗಳಿಗೆ 3 ಚಿತ್ರಕೃತಿಗಳನ್ನು ರಚಿಸಿದ್ದರು. ನನ್ನ ಕೈಗಳಿಂದಲೇ ಆ ಚಿತ್ರಕೃತಿಗಳನ್ನು ಅನಾವರಣ ಮಾಡಿಸುವುದರ ಮೂಲಕ ಅಂದಿನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಿದ್ದರು. ಡಾ ಎಂ.ಜಿ.ಆರ್. ಅರಸ್, ಅರವಿಂದರು ಸೇರಿದಂತೆ ಅಂದು ನೆರೆದಿದ್ದ ಗಣ್ಯಾತಿಗಣ್ಯರೆದುರು ಏನೇನೂ ಅಲ್ಲದ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದ ನನಗೆ ನೀಡಿದ ಪುರಸ್ಕಾರ, ಗೌರವ..

ಅರವಿಂದರು ಕಿರಿಯರನ್ನು ಬೆಳೆಸುತ್ತಿದ್ದ ಪ್ರಕ್ರಿಯೆಗೊಂದು ನಿದರ್ಶನ. ಕಾರ್ಯಕ್ರಮದ ನಂತರ ಅರವಿಂದರು ಆ ಕಲಾಕೃತಿಗಳನ್ನು ನನಗೇ ನೀಡಿ ಅದರೊಟ್ಟಿಗೆ ಹತ್ತಾರು ಅಪೂರ್ವ ಪುಸ್ತಕಗಳನ್ನು ನೀಡಿ ಆಶೀರ್ವದಿಸಿದ್ದರು.

ಆ ಕಲಕೃತಿಗಳು ನನ್ನ ಮನೆಯ ಗೋಡೆಗಳನ್ನಲಂಕರಿಸಿ ಇಂದಿಗೂ ಪ್ರತಿ ಮುಂಜಾನೆ ಅರವಿಂದರ ಸಹೃದತೆಯ ದರ್ಶನ ಮಾಡಿಸುತ್ತಿರುತ್ತದೆ. (ಆ ಕಲಾಕೃತಿಗಳನ್ನು ಈ ಲೇಖನದೊಂದಿಗೆ ಲಗತ್ತಿಸಿದ್ದೇನೆ ನೋಡಿ)

ಅಂದಿನಿಂದ ಆರಂಭವಾದ ನನ್ನ ಅರವಿಂದರ ಸಾಹಿತ್ಯಬಾಂದವ್ಯ, ಭಾವಬಂಧ ನಿನ್ನೆಯವರೆಗೂ ಚಿರಂತನವಾಗಿ ಮಿಡಿಯುತ್ತಲೇ ಇತ್ತು. ನಾಳೆಯಿಂದ ನನ್ನ ಕವಿತೆಗಳಿಗೆ ಅರವಿಂದರ ಸ್ಪಂದನೆಯಿಲ್ಲ. ನನ್ನಂತೆ ಅಸಂಖ್ಯಾತ ಹಿರಿ-ಕಿರಿಯ ಜೀವಗಳು ಅರವಿಂದರನ್ನು ಕಳೆದುಕೊಂಡು ಹನಿಗಣ್ಣಾಗಿವೆ. ನನ್ನ ಇತ್ತೀಚಿನ ಹಾಸ್ಯಗವನ ಸಂಕಲನ “ಸಂಸಾರವೆಂಬ ಹಾರ(ರ್)ಮೋನಿಯಮ್” ಗೆ ಅರವಿಂದರು ಹಾಸ್ಯಕವನಕ್ಕು ಚಿತ ಬರೆದುಕೊಟ್ಟು ಅನುಗ್ರಹಿಸಿದ್ದರು.

ಅತ್ಯಂತ ಸೌಮ್ಯ, ಗಂಭೀರ, ಸಾತ್ವಿಕ ಸ್ವಭಾವದವರಾದ ಅರವಿಂದರು, ನನ್ನ ತುಂಟ, ತರಲೆ, ವಿನೋದ ಕವಿತೆಗಳಿಗೆ ಚಿತ್ರ ರಚಿಸಿಕೊಟ್ಟಿದ್ದು ಅವರ ಮೇರು ವ್ಯಕ್ತಿತ್ವಕ್ಕೆ, ಹೃದಯ ವೈಶಾಲ್ಯತೆಗೆ ಸಾಕ್ಷಿ. ನನ್ನೆ ಸಂಕಲನದ ಹಸ್ತಪ್ರತಿಯನ್ನು ಪೋಸ್ಟಿನ ಮೂಲಕ ತರಿಸಿಕೊಂಡ ಅರವಿಂದರು, ಕನ್ನಡ ಸಾರಸ್ವತ ಲೋಕದ ದಿಗ್ಗಜರೂ, ಮಹಾನ್ ವಿದ್ವಾಂಸರೂ ಆದ ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜರಿಗೆ ತಾವೆ ಸ್ವತಃ ನೀಡಿ, ಅವರಿಂದ ಮುನ್ನುಡಿ ಬರೆಸಿಕೊಟ್ಟಿದ್ದರು. ಇದು ಅರವಿಂದರು ಕಿರಿಯರಿಗೆ ನೀಡುತ್ತಿದ್ದ ಪ್ರೋತ್ಸಾಹ, ಸಹಕಾರಗಳಿಗೆ ಮತ್ತೊಂದು ನಿದರ್ಶನ.

ಕಿರಿಯನೊಬ್ಬನ ಹಾಸ್ಯಕೃತಿಗೆ ಕರುನಾಡಿನ ಮೇರು ವಿದ್ವಾಂಸರು ಮುನ್ನುಡಿ ಬರೆದು, ಮತ್ತೊಬ್ಬ ಮೇರು ಕಲಾವಿದರು ಚಿತ್ರ ಬರೆದುಕೊಟ್ಟಿದ್ದು ಬಹುಶಃ ಇದೇ ಮೊದಲು. ಅಂತಹ ಹೆಗ್ಗಳಿಕೆ ನನ್ನ “ಸಂಸಾರವೆಂಬ ಹಾರ(ರ್)ಮೊನಿಯಮ್”ದು. ಅದರ ಸಂಪೂರ್ಣ ಶ್ರೇಯಸ್ಸು, ಯಶಸ್ಸು ಸಲ್ಲಬೇಕಾದು ಕುಂಚ ತಪಸ್ವಿ ಅರವಿಂದರಿಗೆ.(ಅರವಿಂದರು ರಚಿಸಿಕೊಟ್ಟ ಕೃತಿಯ ಮುಖಪುಟವನ್ನು ಈ ಲೇಖನದೊಂದಿಗೆ ಲಗತ್ತಿಸಿದ್ದೇನೆ ನೋಡಿ)

ಅರವಿಂದರ ಬಗ್ಗೆ ಎಷ್ಟೆಷ್ಟು ಬರೆದರೂ ಸಾಲದು. ಪದಗಳಿಗೆ ನಿಲುಕದ ಸಾಧನೆ ಅವರದು. ಶಬ್ದಗಳಿಗೂ ಎಟುಕದ ವ್ಯಕ್ತಿತ್ವ ಅವರದು. ಭಾವಗಳಿಗೂ ನಿಲುಕದ ಅನುಭಾವಿ ಅವರು. ಅಂತಹ ಧೀಮಂತರನ್ನು ಕಳೆದುಕೊಂಡ ಸಾಹಿತ್ಯ ಲೊಕ ಬರಡಾಯಿತು. ಅಂತಹ ಕೆಚ್ಚೆದೆಯ ಕಟ್ಟಾಳುವನ್ನು ಕಳೆದುಕೊಂಡ ಕರುನಾಡು ಕಳಾಹೀನವಾಯಿತು.

ನನ್ನಂತಹ ಲಕ್ಷಾಂತರ ಅಭಿಮಾನಿಗಳು ಅವರ ಅಗಲಿಕೆಯಿಂದ ಅಕ್ಷರಶಃ ಆರ್ದ್ರರಾಗಿದ್ದೇವೆ. ಆ ಭಗವಂತ ಅರವಿಂದರ ಕುಟುಂಬಕ್ಕೆ ಈ ಅಘಾತವನ್ನೆದುರಿಸುವ ಶಕ್ತಿ ಕೊಡಲಿ. ಅರವಿಂದರ ಆತ್ಮಕ್ಕೆ ಚಿರಶಾಂತಿ ಸಿಗಲಿ.

ಮತ್ತೆ ಹುಟ್ಟಿ ಬನ್ನಿ ಅರವಿಂದರೆ.. ನಮ್ಮಂತಹ ಕಿರಿಯರನ್ನು ಮುನ್ನಡೆಸಲು, ಕನ್ನಡದ ಹೋರಾಟಕ್ಕೆ ಶಕ್ತಿ ತುಂಬಲು, ಮತ್ತಷ್ಟು ಅಪೂರ್ವ ಚಿತ್ರಕೃತಿಗಳನ್ನು ರಚಿಸಲು.. – ಕಂಬನಿಯ ಬಿಂದುಗಳೊಂದಿಗೆ

ಎ.ಎನ್.ರಮೇಶ್, ಗುಬ್ಬಿ.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group