ಸಿಂದಗಿ: ತಾಲೂಕಿನ ರೈತರ ನೀರಿನ ಬವಣೆ ನೀಗಿಸುತ್ತಿರುವ ಗುತ್ತಿ ಬಸವಣ್ಣ ಏತ ನೀರಾವರಿಯ ಕಾಲುವೆಗೆ ನೀರು ಹರಿಸಲು ಎರಡು ಮೋಟಾರಗಳು ಚಾಲ್ತಿಯಲ್ಲಿರುತ್ತವೆ. ಆದಾಗ್ಯೂ ಪ್ರತಿ ವರ್ಷವೂ ನಿರ್ವಹಣೆಗಾಗಿ ರೂ.25 ಲಕ್ಷ ಹಣ ಮಂಜೂರಾಗುತ್ತದೆ ಅದರಲ್ಲಿ ಯಾವುದೇ ಕಾಮಗಾರಿ ಕೈಕೊಳ್ಳದೇ ಅಧಿಕಾರಿಗಳ ಜೇಬಿಗೆ ಹೋಗುತ್ತವೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 6 ತಿಂಗಳ ಹಿಂದೆ ಕೊರವಾರ ಬ್ರ್ಯಾಂಚ್ ಕಾಲುವೆಯ ಕಾಮಗಾರಿ ಟೆಂಡರ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಿಗೂ ಸಾಕಷ್ಟು ಬಾರಿ ತಿಳಿಸಿದರೂ 3 ತಿಂಗಳಿನಿಂದ ಅವರೂ ಕೂಡಾ ಟೆಂಡರ್ ನೆಪ ಹೇಳುತ್ತಿದ್ದಾರೆ. ಇದರಿಂದ ಹಿಂಗಾರಿ ಬೆಳೆಗಳಾದ ಶೆಂಗಾ, ಕಬ್ಬು, ಕಡಲೆ, ದ್ರಾಕ್ಷಿ, ಲಿಂಬೆ, ಗೋದಿ, ಮೆಕ್ಕೆ ಜೋಳ ಹಾಗೂ ಮುಂತಾದ ಬೆಳೆಗಳಿಗೆ ನೀರಿಲ್ಲದೆ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಆದುದರಿಂದ ತಕ್ಷಣವೆ ನೂತನ 6 ಮೋಟರ ಅಳವಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಿ.ಎಮ್ ಸಿ ಮನಗೂಳಿಯವರ ಅಧಿಕಾರಾವಧಿಯಲ್ಲಿ ನೂತನ ಮಿನಿ ವಿಧಾನಸೌಧಕ್ಕಾಗಿ 9.75 ಕೋಟಿ ಮಂಜೂರಾಗಿದ್ದು. ಇತ್ತೀಚೆಗೆ ಸ್ಥಳಿಯ ಶಾಸಕರು, ಲೋಕೋಪಯೋಗಿ ಅಧಿಕಾರಿಗಳು, ಗುತ್ತಿಗೆದಾರರೆಲ್ಲರು ಸೇರಿ ಭೂಮಿ ಪೂಜೆಯಲ್ಲಿ ಸ್ಥಳೀಯ ಪುರಸಭೆ ಅಧ್ಯಕ್ಷ ಡಾ|| ಶಾಂತವೀರ ಮನಗೂಳಿ ಹಾಗೂ ಉಪಾಧ್ಯಕ್ಷ ಹಾಸೀಂಪೀರ ಆಳಂದ ರವರಿಗೆ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಗಳ ವಿರುದ್ಧ ತಕ್ಷಣವೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಿಂದಗಿ ನಗರದ ಸ.ನಂ 763 ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಆಯ್ಕೆಯಾದ ಸ.ನಂ 763 ರಲ್ಲಿ ಈಗಾಗಲೆ ಆಯ್ಕೆಯಾಗಿರುವಂತಹ 329 ಫಲಾನುಭವಿಗಳಿಗೆ ವಸತಿ ಸೂರು ಕಲ್ಪಿಸಲು ಈಗಾಗಲೆ 19.00 ಕೋಟಿ ರೂಪಾಯಿ ಟೆಂಡರ ಆಗಿದ್ದು ಆ 329 ಫಲಾನುಭವಿಗಳಿಗೆ ಸರ್ಕಾರದಿಂದ ಅಧಿಕೃತವಾದ ಹಕ್ಕು ಪತ್ರ ವಿತರಣೆ ಮಾಡುವ ಮೂಲಕ ತಿಳಿವಳಿಕೆ ಪತ್ರ ನೀಡಿ, ಸರ್ಕಾರದಿಂದ ಮಂಜೂರಾದ ನೀಲಿ ನಕ್ಷೆ ಪ್ರಕಾರ ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ, ವಿದ್ಯುತ್, ರೋಡು, ಉದ್ಯಾನವನ ನಿರ್ಮಿಸುವುದರ ಮೂಲಕ ಕಾಮಗಾರಿ ಪ್ರಾರಂಭಿಸಬೇಕು ಅಲ್ಲದೆ ದಿ. ಎಮ್ ಸಿ ಮನಗೂಳಿಯವರು ಅಧಿಕಾರಾವಧಿಯಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸ ನಂ. 954/ಅ1ಅ1 ರಲ್ಲಿ 01ಎ-26ಗು ಗಾಯರಾಣ ಜಮೀನಿನ ಪೈಕಿ 00ಎ-15ಗು ಗುಂಟೆ ಜಾಗವನ್ನು ತರಕಾರಿ ಮಾರುಕಟ್ಟೆಯ ಸಲುವಾಗಿ ರೂ.2 ಕೋಟಿ ಮಂಜೂರು ಮಾಡಿ ಮೂಲಭೂತ ಸೌಕರ್ಯವನ್ನು ಒದಗಿಸಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಕಾಯಿಪಲ್ಲೆ ಮಾರುಕಟ್ಟೆ ನಿರ್ಮಿಸಿ ಅಲ್ಲಿರುವ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಅಶೋಕ ಮನಗೂಳಿ ಒತ್ತಾಯಿಸಿದ್ದಾರೆ.