ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ ಅನಿಸಿಕೆ ಅಭಿಪ್ರಾಯಗಳನ್ನು ಯಾವ ಅಂಶಗಳು ಬಿಡದಂತೆ ತನ್ನ ಕಲಾಕೃತಿಯ ಮೂಲಕ ತನ್ನ ಭಾವನೆಗಳನ್ನು ಹೊರಹಾಕುತ್ತಾನೆ. ಹೀಗಾಗಿ ಕಲೆಯು ಒಂದು ಅಭಿವ್ಯಕ್ತಿ..
ಆರ್.ಸಿ.ಕಾರದಕಟ್ಟಿಯವರು ನಾನು ೨೦೧೨ರಲ್ಲಿ ಪ್ರಕಟಿಸಿದ ಚಿತ್ರಕಲಾವಿದರ ಪರಿಚಯದ ಕೃತಿ ಪ್ರಕೃತಿ ವಿಕೃತಿ ಕಲಾಕೃತಿಗೆ ಬರೆದಿದ್ದ ಮುನ್ನುಡಿಯ ಆರಂಭಿಕ ಸಾಲುಗಳು ಇವು. ಇವರು ಹಾಸನದ ನಿರ್ಮಲ ಚಿತ್ರಕಲಾ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಮೊನ್ನೆ ನಿವೃತ್ತರಾದರು. ಅವರ ಶಿಷ್ಯ ಬಳಗ ಒಂದು ಅಭೂತಪೂರ್ವ ಕಾರ್ಯಕ್ರಮ ಏರ್ಪಡಿಸಿ ಗುರುನಮನ ಸಲ್ಲಿಸಿದ್ದನ್ನು ನಾನು ವೀಕ್ಷಿಸಿ ಮೂಕವಿಸ್ಮಿತನಾಗಿದ್ದೆ. ಅವರು ಇವತ್ತಿನ ವೇದಿಕೆಯಲ್ಲಿ ಜೊತೆಗಿದ್ದರು. ಅದು ನಗರದ ಸಂಸ್ಕೃತ ಭವನದಲ್ಲಿ ನಡೆದ ಶಾಂತಲಾ ಗ್ರೂಪ್ ಶೋ. ಇಲ್ಲಿ ಅಂತರಾಷ್ಟ್ರೀಯ ಚಿತ್ರ ಕಲಾವಿದರು ಕೆ.ಟಿ.ಶಿವಪ್ರಸಾದ್ ಇದ್ದರು. ಅವರಲ್ಲಿ ಒಂದು ಕೊರಗಿತ್ತು. ಸಿಂಹಾಸನಪುರಿಗೊಂದು ಕಲಾ ಗ್ಯಾಲರಿ ಇಲ್ಲವಲ್ಲ..! ಆದರೆ ಏಕೋ ಕಲಾವಿದರ ೨೫ ವರ್ಷದ ಬೇಡಿಕೆ ಇಂದಿಗೂ ನೆರವೇರಿಲ್ಲ. ಹಾಗೆಂದು ನಮ್ಮ ಕಲಾವಿದರು ತಮ್ಮ ಪ್ರಯತ್ನ ನಿಲ್ಲಿಸಿಲ್ಲ. ಕಲಾವಿದರೇ ಸಂಘಟಿತರಾಗಿ ಸಮೂಹ ಕಲಾ ಪ್ರದರ್ಶನ ಮಾಡಿಕೊಂಡು ಬಂದಿದ್ದಾರೆ. ಭಾನು ಸೋಮ ೨ ರಜಾ ದಿನಗಳಲ್ಲಿ ನಡೆದ ಗ್ರೂಪ್ ಶೋನಲ್ಲಿ ೨೯ ಕಲಾವಿದರು ತಮ್ಮ ಒಂದೊಂದು ಕಲಾಕೃತಿ ಪ್ರದರ್ಶನಕ್ಕಿರಿಸಿದ್ದರು.
ಬಹುತೇಕ ಕಲಾಕೃತಿಗಳು ಅಕ್ರಾಲಿಕ್ ಮಾಧ್ಯಮದಲ್ಲಿ ರೂಪುಗೊಂಡಿವೆ ಎಂದು ಹೇಳಿದರು. ಬಸವರಾಜ್ ಸಿ.ಎಸ್. ಅವರ ಓಂಕಾರ ಗಣಪ ಹಿನ್ನಲೆಯಲ್ಲಿ ಶಿವಲಿಂಗ ಪೂಜ್ಯ ಭಾವನೆ ಮೂಡಿಸುತ್ತದೆ. ಕಲಾವಿದ ಶಿವಕುಮಾರ್ ಕಲಾ ಸಂಘಟನೆಯಲ್ಲಿ ಕ್ರಿಯಾಶೀಲರು. ಹಿಂದೆ ಕಲಾ ಭವನದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಕಾವ್ಯ ಕುಂಚ ಗಾಯನ ವಿಶೇಷವಾಗಿತ್ತು. ಅದಕ್ಕೂ ಹಿಂದೆ ಹಲ್ಮಿಡಿಯಲ್ಲಿ ನಡೆದ ಹೊಯ್ಸಳೋತ್ಸವದಲ್ಲಿ ನೃತ್ಯವೂ ಸಂಯೋಜನೆಗೊಂಡಿತ್ತು.
ಈ ಎರಡರಲ್ಲೂ ನಾನು ಕವಿಯಾಗಿ ಭಾಗವಹಿಸಿದ್ದು ಸವಿ ನೆನಪು. ಆರ್. ಶಿವಕುಮಾರ್ ಅವರು ಮನುಷ್ಯಾಕೃತಿಯ ಬ್ಯಾಗ್ರೌಂಡ್‌ನಲ್ಲಿ ಆನೆಯ ಸೊಂಡಿಲು ಬಿಡಿಸಿ ತರ್ಕ ವೀಕ್ಷಕರಿಗೆ ಬಿಟ್ಟಿದ್ದರು. ಲತಾ ಎಲ್.ಜಿ. ಅವರು ಶಾಂತಲಾ ಕಲಾ ಶಾಲೆಯಲ್ಲಿ ಶಿಕ್ಷಕರು. ಇದು ಹಾಸನದಲ್ಲಿ ಇರುವ ಮತ್ತೊಂದು ಕಲಾಶಾಲೆ. ಲತಾರವರು ಚಿತ್ರಿಸಿರುವ ಸ್ತ್ರೀಯರು ಗೋವುಗಳು ಸಾಧು ಸೌಮ್ಯತೆ ಪ್ರತಿಬಿಂಬಿಸಿವೆ. ಕೆ.ಜೆ.ಶಿವಕುಮಾರ್ ಡಾ.ಅಂಬೇಡ್ಕರ್ ಪ್ರತಿಕೃತಿಯನ್ನು ಫೈಬರ್ ಮೋಲ್ಡ್ನಲ್ಲಿ ತಯಾರಿಸಿದ್ದರು. ಹೇಮಲತಾ. ಮೋನಿಶಾ ಬಿ, ವೃತಿಕಾ ಇವರ ಕಲಾಕೃತಿಗಳು ಸಂಪ್ರದಾಯ ಶೈಲಿಯಲ್ಲಿ ರೂಪು ತೆಳೆದಿವೆ. ಕೋಮಲ ಜೈನ್‌ರ ಕಲಾವಂತಿಕೆ ಅಧ್ಯಾತ್ಮ ಹಿನ್ನೆಲೆಯಲ್ಲಿ ಮೈತೆಳೆದಿದೆ. ಬಸವರಾಜ ಭಾಗತ್‌ರ ಟೀ ಲೋಟ ಕಣ್ಣೋಟಕಷ್ಟೇ. ಚಂದ್ರಕಾಂತ ನಾಯರ್ ಚಿತ್ರಣದಲ್ಲಿ ಅದ್ಭುತ ಕಲ್ಪನಾ ಲೋಕವಿದೆ. ನಿಜಾಂ ಹೆಚ್.ಎಂ.ರ ಕಲಾಕೃತಿ ಕಾಂತಾರ ಚಿತ್ರದ ಪೋಸ್ಟರ್ ಪ್ರತಿಕೃತಿ. ಪ್ರೀತಿ ಹೆಚ್.ಪಿ.ಅವರ ನವ್ಯಕಲೆ, ಯೋಗಾನಂದ ಹೆಚ್.ಎನ್.ರ ಕಲಾತ್ಮಕ ಚಿತ್ರಣ ಸೊಗಸಿದೆ. ದೇವರಾಜ್ ರಚನೆ ಯೋಧ ಗುರಾಣಿ ಹಿಡಿದಂತೆ ಕೆಂಬೀರ ಕಂಡಿದೆ. ವಿರೂಪಾಕ್ಷರು ಬೇಲೂರು ದರ್ಪಣ ಸುಂದರಿಯ ಪ್ರತಿಕೃತಿ ಚಿತ್ರಿಸಿದ್ದಾರೆ. ವಿಮಲರವರು ತೈಲವರ್ಣದಲ್ಲಿ ಉಳುವ ಯೋಗಿ ರೈತನನ್ನು ಚಿತ್ರಿಸಿದ್ದಾರೆ. ಉಳಿದಂತೆ ಅಕ್ಷತಾ ಯೂ.ಎಂ. ರಕ್ಷಿತ್, ದಿವ್ಯ ಭಾರತಿ, ಅನುಗ್ನಾ ಕೆ. ಲಕ್ಷ್ಮಿ, ಕಿರಣ್, ಪ್ರೇಮ, ವೆಂಕಟೇಶ್ ಹೆಚ್.ಡಿ. ನಂದಿನಿ, ಮಂಜುಳಾ, ಅಶ್ವಿನಿ, ಸ್ವಾತಿ ರಾಹುಲ್ ಅವರು ವಾಲ್‌ಗೆ ತಮ್ಮ ಕಲಾಕೃತಿಗಳನ್ನು ನೇತುಹಾಕಿದ್ದರು.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.