ಅಂದ ಚೆಂದದ ಸುಂದರ ನಗರವೆನಿಸಿದ ಮೈಸೂರು, ತನ್ನ ಪ್ರಾಚೀನ ಸಾಂಸ್ಕೃತಿಕ ಸಂಪತ್ತಿನಿಂದ, ಜಗದ್ವಿಖ್ಯಾತ ದಸರಾ ವೈಭವದಿಂದ ಪ್ರವಾಸಿಗರ ಸ್ವರ್ಗವೆನಿಸಿದೆ. ಇಂಥ ಮೈಸೂರಲ್ಲಿ ನವರಾತ್ರಿ ವೈಭವ ಒಂದೆಡೆಯಾದರೆ ಭಾದ್ರಪದ ಮಾಸದ ಗಣೇಶ ಹಬ್ಬದ ಸಡಗರ ಕೂಡ ವಿಶಿಷ್ಟವಾದದ್ದು.
ಇಲ್ಲಿನ ಅಗ್ರಹಾರದ ತ್ಯಾಗರಾಜರ ವೃತ್ತದಲ್ಲಿರುವ ನೂರೊಂದು ಗಣಪತಿ ದೇಗುಲ ಕಳೆದ ೬೦ ವರ್ಷಗಳ ಇತಿಹಾಸ ತನ್ನೊಡಲಲ್ಲಿ ಅಡಗಿಸಿಕೊಂಡು ಇಂದಿಗೂ ಭಕ್ತರ ಆರಾಧ್ಯ ದೈವವಾಗಿ ನಿಂತಿದೆ. ಮೈಸೂರು ಬಸ್ ನಿಲ್ದಾಣದಿಂದ ೪ಕಿ.ಮೀ, ನಗರ ಬಸ್ ನಿಲ್ದಾಣದಿಂದ ೨ ಕಿ.ಮೀ ಅಂತರದಲ್ಲಿ ಅಗ್ರಹಾರ ನಿಲುಗಡೆಯುಂಟು, ಆ ನಿಲುಗಡೆ ದಾರಿಯಲ್ಲಿ ನಾಲ್ಕಾರು ಹೆಜ್ಜೆ ನಡೆದು ಬಂದರೆ ಕಾಣುವ ಬೃಹತ್ ದೇಗುಲವೆ ನೂರೊಂದು ಗಣಪತಿ ದೇವಾಲಯ.
ಈ ದೇಗುಲ ನಿರ್ಮಾಣದ ಹಿಂದೆ ಹತ್ತಾರು ಶ್ರಮಜೀವಿಗಳ ಕೈಗಳಿವೆ. ಆ ಕೈಗಳಿಗೆ ಕೈಗೂಡಿದ ಸಾವಿರಾರು ಭಕ್ತರ ಸಹಕಾರವಿದೆ. ಈಗ್ಗೆ ೬೫ ವರ್ಷಗಳ ಹಿಂದೆ ತ್ಯಾಗರಾಜ ವೃತ್ತದ ನೈಋತ್ಯ ಮೂಲೆಯಲ್ಲಿರುವ ಸೈಕಲ್ ಅಂಗಡಿಯೊಂದರ ಮಳಿಗೆಯಲ್ಲಿ ಭಾದ್ರಪದ ಮಾಸ ಬಂತೆಂದರೆ ಸಾಕು, ಆ ಸಂದರ್ಭ ಸೈಕಲ್ ಅಂಗಡಿಯೊಳಗಿನ ಎಲ್ಲ ಸೈಕಲ್ ಹೊರಬಂದು ಸಂಪೂರ್ಣ ಸ್ವಚ್ಛಗೊಂಡು ಸುಣ್ಣ-ಬಣ್ಣಗಳಿಂದ ಸಿಂಗರಿಸಿಕೊಂಡು ಗಣೇಶನ ಬರುವಿಕೆಗೆ ಸಿದ್ದವಾಗುತ್ತಿತ್ತು. ಇದು ಹೇಗಿರುತ್ತಿತ್ತು ಎಂದರೆ ಇಲ್ಲಿ ನೂರೊಂದು ಗಣಪತಿ ಪ್ರತಿಷ್ಠಾಪಿಸಿ ೪೦ ದಿನಗಳ ಕಾಲ ಅವ್ಯಾಹತವಾಗಿ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮ ಜರುಗಿಸಿ ೪೦ ನೆಯ ದಿನಕ್ಕೆ ಸಡಗರದಿಂದ ಕಾರಂಜಿ ಕೆರೆಯಲ್ಲಿ ಮೂರ್ತಿ ವಿಸರ್ಜಿಸುವವರೆಗೆ ಪ್ರತಿದಿನದ ಪೂಜೆಯ ಜೊತೆಗೆ ಸುಶ್ರಾವ್ಯಗಾಯನ, ನರ್ತನ, ಕೀರ್ತನೆ, ಕಾವ್ಯವಾಚನ, ಪ್ರವಚನ, ಹೀಗೆ ಹತ್ತಾರು ಕರ‍್ಯಕ್ರಮಗಳನ್ನು ಇಲ್ಲಿನ ಭಕ್ತ ಮಂಡಳಿ ಆಯೋಜಿಸಿರುತ್ತಿತ್ತು.
ಆಗ ಮೈಸೂರು ಸುತ್ತಮುತ್ತಲಿನ ಜನ ಜಾತ್ರೆಯೋಪಾದಿಯಲ್ಲಿ ನೂರೊಂದು ಗಣಪತಿಯ ಸಡಗರ ಸಂಭ್ರಮ ನೋಡಲು ಬರುತ್ತಿದ್ದರು ಎಂಬುದನ್ನು ಹಿರಿಯರಾದ ಶಿವರುದ್ರಪ್ಪನವರು ನೆನೆಯುತ್ತಾರೆ. ತ್ಯಾಗರಾಜ ವೃತ್ತ ಮೈಸೂರು ನಗರದಲ್ಲಿ ಸುಪ್ರಸಿದ್ಧವಾದ ಸಾಕಷ್ಟು ದೊಡ್ಡದಾದ ವೃತ್ತ. ಸುತ್ತಲೂ ಹೊಟೆಲ್, ಪದ್ಮ ಚಲನಚಿತ್ರ ಮಂದಿರ. ಅಂಗಡಿ, ವ್ಯಾಪಾರ ವಾಣಿಜ್ಯ ಮಳಿಗೆ ಹೊಂದಿದ ಸದಾ ಜನದಟ್ಟಣೆಯಿಂದ ಕೂಡಿದ ಒಂದು ಮನಮೋಹಕ ವೃತ್ತ.
ಇಂಥ ವೃತ್ತದಲ್ಲಿ ಪ್ರತಿವರ್ಷ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದ ಭಕ್ತ ಜನರು, ಸತತ ೩೦ ವರ್ಷಗಳ ಕಾಲ ಎಡೆಬಿಡದಂತೆ ೪೦ ದಿನ ಭಾದ್ರಪದ ಮಾಸದಲ್ಲಿ ಆಚರಿಸುತ್ತ ಬರಲು ಕೊನೆಯ ದಿನ ಕಾರಂಜಿಕೆರೆಗೆ ಹೋಗಿ ಗಣಪತಿಯ ನೂರೊಂದು ಮೃಣ್ಮಯ ಮೂರ್ತಿಗಳನ್ನು ವಿಸರ್ಜಿಸಿ ವಾಪಸ್ಸು ಬಂದಾಗ ತ್ಯಾಗರಾಜ ವೃತ್ತ ಮೊದಲಿದ್ದಂತೆ ಏನೋ ಶೂನ್ಯ, ಮತ್ತೊಂದು ಗಣೇಶ ಹಬ್ಬದವರೆಗೆ ಇಲ್ಲಿನ ಸ್ಥಳದಲ್ಲಿ ಜನ ಜಾತ್ರೆಯ ಸೊಬಗನ್ನು ಕಾಣಬೇಕಲ್ಲ. ಇದು ಶಾಶ್ವಸವಾಗಿ ಉಳಿಯಬೇಕು. ನಿತ್ಯವೂ ಇಲ್ಲಿ ಗಣೇಶನ ಆರಾಧನೆಗೆ ಜನ ಸೇರುವಂತೆ ಮಾಡಬೇಕು ಎಂಬ ಆಲೋಚನೆ ಇಲ್ಲಿನ ಹಿರಿಯರ ಮನದಲ್ಲಿ ಮೂಡಿಬಂತು. ಈ ಆಲೋಚನೆ ಭಕ್ತ ಮಂಡಳಿಗೆ ಬಂದಿದ್ದೇ ತಡ ನಾ ಮುಂದು ತಾ ಮುಂದು ಎನ್ನುವಂತೆ ಕಾಣಿಕೆಗಳನ್ನು ವಿವಿಧ ವಸ್ತುಗಳನ್ನು ನೀಡುವ ಕಾರ್ಯ ಸಾಗಿಯೇ ಬಿಟ್ಟಿತು.
ಹೀಗೆ ಭಕ್ತ ಸಮುದಾಯದ ಸಹಕಾರದ ಫಲವಾಗಿ ದೇಗುಲದ ಕಾರ್ಯ ಪ್ರಾರಂಭವಾಯಿತು. ವೃತ್ತದ ಮಧ್ಯ ಭಾಗದಲ್ಲಿ ಉತ್ತರಾಭಿಮುಖವಾದ ಪುಟ್ಟ ದೇವಾಲಯ ಪೂರ್ವದ ಕಡೆಗೆ ನವಗ್ರಹ ದೇವಸ್ಥಾನ. ಪಶ್ಚಿಮದ ಕಡೆಗೆ ಎತ್ತರದ ವೇದಿಕೆಯ ಸುಂದರ ಸಭಾಮಂಟಪ, ನೆಲಮಹಡಿ ದೇವಾಲಯ ಕಛೇರಿ ಇತ್ಯಾದಿ ಬೆಳೆದು ನಿಂತು ೧೯೮೫ರ ಫೆಬ್ರುವರಿ ೨ರಿಂದ ೪ರವರೆಗೆ ಪ್ರತಿಷ್ಠಾಪನಾ ಮಹೋತ್ಸವ ಜರುಗುವ ಮೂಲಕ ೩೦ ವರ್ಷದಿಂದ ಮೂರ್ತಿ ಪ್ರತಿಷ್ಠಾಪಿಸಿ ಗಣೇಶ ವಿಸರ್ಜನೆ ಮಾಡುತ್ತಿರುವ ನೂರೊಂದು ಗಣಪ, ಶಾಶ್ವತವಾಗಿ ದೇವಾಲಯ ಗರ್ಭಗುಡಿಯಲ್ಲಿ ವಿರಾಜಮಾನನಾಗಿ ವರ್ಷವಿಡೀ ಪ್ರತಿನಿತ್ಯ ದರ್ಶನ ನೀಡುವ ಮೂಲಕ ಇಂದು ಅಮೇರಿಕಾ, ದುಬೈ, ಬೆಂಗಳೂರು, ಕೊಡಗು, ಮಡಿಕೇರಿ, ಬಾಂಬೆ ಮೊದಲಾದಂತೆ ನಾಡಿನ ಎಲ್ಲೆಡೆ ಭಕ್ತ ಸಮೂಹದ ಆರಾಧ್ಯ ದೈವವಾಗಿ ವಿಘ್ನೇಶ್ವರ ನೆಲೆಸಿದ್ದು ಇತಿಹಾಸ. ಇನ್ನು ಈ ದೇವಾಲಯದ ನೂರೊಂದು ಮೂರ್ತಿ ಕಲಾಕಾರರು ಕೂಡ ಮೈಸೂರಿನ ಪ್ರಸಿದ್ದ ‘ಮಾಸ್ಟರ್ ಕ್ರಾಫ್ಟ್ಮನ್’ ಎಂದೇ ಖ್ಯಾತರಾಗಿದ್ದ ಎಸ್.ನರಸಿಂಹಾಚಾರ್ಯರು. ಇವರು ಗಣಪತಿ ವಿಗ್ರಹಗಳಷ್ಟೇ ಅಲ್ಲ ದೇವಸ್ಥಾನದ ಇನ್ನಿತರ ಕೆಲಸಗಳಾದ ವಿವಿಧ ಕೆತ್ತನೆಗಳು, ಗರ್ಭಗುಡಿಯ ಬಾಗಿಲುಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು ಇವುಗಳು ಇವರ ಕಲಾಕೌಶಲ್ಯಕ್ಕೆ ಹಿಡಿದ ಕೈಗನ್ನಡಿ.
‘ಶ್ರೀ ವಿಘ್ನೇಶ್ವರ ಪ್ರಸನ್ನ ಭಕ್ತ ಮಂಡಳಿ’ ಸಂಸ್ಥೆಯು ಮೈಸೂರ ನಗರದ ತ್ಯಾಗರಾಜ ವೃತ್ತದ ಬಳಿ ಇರುವ ಮಳಿಗೆಯೊಂದರಲ್ಲಿ ೧೯೫೫ರಲ್ಲಿ ಸಂಸ್ಥಾಪನೆಗೊಂಡಿದ್ದು. ಇಂದಿಗೂ ಕೂಡ ಈ ಸಂಸ್ಥೆಯಲ್ಲಿ ಅನೇಕ ಹಿರಿಯ ಮುಖಂಡರು, ಪುರ ಪ್ರಮುಖರು, ವಾಣಿಜ್ಯೋದ್ಯಮಿಗಳು ಇದ್ದು. ಇಂದಿಗೂ ಈ ಸಂಸ್ಥೆ ದೇವಾಲಯದ ಕಾರ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ.
ಇಲ್ಲಿನ ಗಣೇಶ ಮೂರ್ತಿ ಶ್ರೀ ಚಕ್ರ ಸಹಿತವಾಗಿದ್ದು ಮೊದಲ ಮೆಟ್ಟಿಲ ಹಂತದಲ್ಲಿ ೩೨ ವಿಗ್ರಹಗಳಿದ್ದು, (ನೆಲದಿಂದ ಮೊದಲನೆಯದು) ಎರಡನೆಯ ಮೆಟ್ಟಿಲ ಹಂತದಲ್ಲಿ ೨೮ ಗಣೇಶ ವಿಗ್ರಹಗಳಿವೆ. ಮೂರನೆಯ ಮೆಟ್ಟಿಲಲ್ಲಿ ೨೪ ನಾಲ್ಕನೆಯ ಮೆಟ್ಟಿಲಲ್ಲಿ ೧೬ ಪ್ರಧಾನ ಹಂತ ಮೇಲೆ ಪ್ರಧಾನ ಗಣಪತಿ ಕಪ್ಪು ಶಿಲೆಯಲ್ಲಿ ಗಮನ ಸೆಳೆಯುತ್ತವೆ. ಜೊತೆಗೆ ಇಲ್ಲಿ ಜನ್ಮ ನಕ್ಷತ್ರಕ್ಕನುಗುಣವಾಗಿ ಕೂಡ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.ಈ ದೇವಾಲಯದ ಈಶಾನ್ಯ ಮೂಲೆಯಲ್ಲಿ ೧೦೮ ಶಿವಲಿಂಗ ಅಂದರೆ ಈಶ್ವರ ಲಿಂಗದ ಮುಖಭಾಗದಲ್ಲಿ ೧೦೮ ಶಿವಲಿಂಗ ಕೆತ್ತನೆ ಇದ್ದು,ಪೂರ್ವಕ್ಕೆ ನವಗ್ರಹ, ನವಗ್ರಹಗಳಿರುವ ದೇಗುಲದಲ್ಲಿ ಅಪರೂಪವೆನಿಸುವ ಮೃತ್ಯುಂಜಯ ವಿಗ್ರಹ, ಆಗ್ನೇಯದಲ್ಲಿ ಪಾರ್ವತಿ, ನಂದೀಶ್ವರ, ನಾಗದೇವತೆ ಮತ್ತು ಚಂಡಿಕೇಶ್ವರ ವಿಗ್ರಹಗಳು ಪೂಜೆಗೊಳ್ಳುತ್ತಿರುವುದು ಕೂಡ ವಿಶೇಷ. ಚಂಡಿಕೇಶ್ವರ ವಿಗ್ರಹ ಬೀಜಾಕ್ಷರ ಸಹಿತವಿದ್ದು ಇದು ಕೂಡ ಅಪರೂಪದ್ದು.ನಿತ್ಯವೂ ಮೂರು ಜನ ಅರ್ಚಕರು ಇಲ್ಲಿ ಪೂಜಾ ಕಾರ್ಯದಲ್ಲಿ ತೊಡಗಿದ್ದು ವಿದ್ವಾನ್ ಸುನೀಲಕುಮಾರ್ ಶಾಸ್ತ್ರೀಯವರು ದೇವಸ್ಥಾನದ ವಿಶೇಷಗಳನ್ನು ತಿಳಿಸುವರು.
ಪ್ರತಿದಿನ ಬೆಳಿಗ್ಗೆ ೫ ರಿಂದ ಅಭಿಷೇಕ ಪೂಜೆ ಪ್ರಾರಂಭಗೊಂಡು ೭ ಗಂಟೆಗೆ ಮಹಾಮಂಗಳಾರತಿ ಜರುಗುತ್ತದೆ, ೧೧ ಗಂಟೆಗೆ ದೇವಾಲಯ ಮುಚ್ಚಲಾಗುತ್ತದೆ. ಮತ್ತೆ ಸಾಯಂಕಾಲ ೫-೩೦ ರಿಂದ ರಾತ್ರಿ ೯ ರ ವರೆಗೆ ತೆರೆದಿದ್ದು ಸಂಕಷ್ಟ ಸಮಯದಲ್ಲಿ ಮಾತ್ರ ಚಂದ್ರೋದಯ ಸಮಯದವರೆಗೂ ಅರ್ಚನೆ ಮಹಾಮಂಗಳಾರುತಿ ಇತ್ಯಾದಿ ಜರುಗಿ ಪ್ರಸಾದ ವಿನಿಯೋಗವಾಗುವವರೆಗೂ ತೆರೆದಿರುತ್ತದೆ.ಪ್ರತಿ ಮಂಗಳಾರವೂ ಕೂಡ ವಿಶೇಷ ಪೂಜೆ ಇಲ್ಲಿ ಜರುಗುತ್ತಿರುವುದು.ಇಂದಿಗೂ ಕೂಡ ಗಣೇಶ ಹಬ್ಬದ ಸಂದರ್ಭದಲ್ಲಿ ೫ ದಿನಗಳ ಕಾಲ ವಿಶೇಷ ಕಾರ್ಯಕ್ರಮ ಪೂಜಾ ವಿಧಿವಿಧಾನಗಳು ಇಲ್ಲಿ ಜರುಗುತ್ತ ಬಂದಿದ್ದು ಈ ದೇವಾಲಯದ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿದ್ವಾನ್ ಸುನೀಲಕುಮಾರ್ ಶಾಸ್ತ್ರೀ ೯೯೮೬೭೧೧೦೩೧ ಇವರನ್ನು ಸಂಪರ್ಕಿಸಬಹುದಾಗಿದೆ,.ಇದೊಂದು ಸರ್ವಧರ್ಮ ಸಮನ್ವಯ ತಾಣವೂ ಹೌದು. ಈ ದೇವಾಲಯದ ಗೋಪುರಗಳಲ್ಲಿ ಈ ಭಾವೈಕ್ಯತೆಯ ಸಂಕೇತಗಳನ್ನು ಕಾಣಬಹುದು. ಇಂದಿಗೂ ಕೂಡ ಎಲ್ಲ ಜನಾಂಗದ ಜನರೂ ಈ ದೇವರ ಆರಾಧಕರಿರುವುದು. ವಿಶೇಷ.
ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ತಾಲೂಕಃ ಸವದತ್ತಿ
ಜಿಲ್ಲೆಃಬೆಳಗಾವಿ
೯೪೪೯೫೧೮೪೦೦ ೮೯೭೧೧೧೭೪೪೨