ಎಂ.ಕೆ. ಹುಬ್ಬಳ್ಳಿ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ನೀಡುವ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ಗೆ ಆಯ್ಕೆಯಾದ ಬೆಳಗಾವಿಯ ಹಿರಿಯ ಸಾಹಿತಿ, ರಂಗಕರ್ಮಿ, ಶಿಕ್ಷಣ ತಜ್ಞ ಪ್ರೊ.ಬಿ.ಎಸ್.ಗವಿಮಠ ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ, ನಾಡು, ನುಡಿ, ಸಾಹಿತ್ಯ ಹಾಗೂ ಕನ್ನಡ ಭಾಷೆಗಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಹಾಗೂ ಹೊರ ರಾಜ್ಯದ ಗಡಿ ಕನ್ನಡ ಪ್ರದೇಶಗಳ ಸಂಘ- ಸಂಸ್ಥೆಗಳು, ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು ಗವಿಮಠ ಅವರಿಗೆ ಈ ಗೌರವ ದೊರೆತಿದ್ದು ಅವರ ಸಾಧನೆ ಹೆಮ್ಮೆ ಪಡುವಂತದ್ದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಬಿ.ಎಸ್.ಗವಿಮಠ ಅನಿರೀಕ್ಷಿತವಾಗಿ ಲಭಿಸಿದ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಹಾಗೂ ನನ್ನ 55 ವರ್ಷಗಳ ಕನ್ನಡ ಸೇವೆಯನ್ನು ಮೆಲುಕು ಹಾಕುವಂತೆ ಮಾಡಿದೆ ಎಂದರು. ಅತ್ಯಂತ ಪ್ರೀತಿಯಿಂದ ಗೌರವ ಸಲ್ಲಿಸಿದ್ದು ಮನಸ್ಸಿಗೆ ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿ, ಸದಾ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಗವಿಮಠ ಅವರು 50 ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಹೊರತಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಬಾಗೇವಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಡಾ. ಷಣ್ಮುಖ ಗಣಾಚಾರಿ ಶಿಕ್ಷಕರಾಗಿದ್ದಾಗ ಅತ್ಯಂತ ಪ್ರೀತಿಯಿಂದ ಪರಿಣಾಮಕಾರಿಯಾಗಿ ಬೋಧನೆ ಮಾಡಿ ಸಾಕಷ್ಟು ವಿದ್ಯಾರ್ಥಿಗಳಿಗೆ ದಾರಿತೋರಿದ ಗುರುಗಳ ಆದರ್ಶ ನಮಗೆಲ್ಲ ಪ್ರೇರಣೆ ಎಂದು ಅಭಿಪ್ರಾಯಪಟ್ಟರು. ಮಲ್ಲಾಪೂರ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಸುನೀಲ ಕಿತ್ತೂರ ಮಾತನಾಡಿ ಕನ್ನಡ ನಾಡುನುಡಿಗೆ ಗವಿಮಠ ಅವರು ಸಲ್ಲಿಸಿದ ಸೇವೆ ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕರಾದ ಜಿ.ಸಿ ಹಿತಾಪೆ ಸ್ವಾಗತಿಸಿದರು. ಎಸ್.ಎಸ್.ಸಂಗಣ್ಣವರ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ.ಎಸ್.ಗಂಗಾಧರಮಠ, ಸುರೇಶ ನಾಡಗೌಡರ ಉಪಸ್ಥಿತರಿದ್ದರು.