spot_img
spot_img

ಮೂಡಲಗಿ ಮ್ಯಾಲ ಸಾವಕಾರಗ ಸಿಟ್ಟ ಐತಿ… ಅದಕ್ಕ ಏನೂ ಕೆಲ್ಸಾ ಮಾಡಾತಿಲ್ಲಾ.

Must Read

spot_img

ಬಾಲಚಂದ್ರ ಜಾರಕಿಹೊಳಿ ಸಾವಕಾರರಿಗೆ ಮೂಡಲಗಿ ನಗರದ ಮ್ಯಾಲ ಸಿಟ್ಟ ಬಂದೈತಿ ಅದಕ್ಕs ಅವ್ರು ಮೂಡಲಗಿ ನಗರಕ್ಕ ಏನೂ ಕೆಲ್ಸಾ ಮಾಡಾಕತಿಲ್ಲಾ…

ಹೀಗೊಂದು ಮಾತು ಮೂಡಲಗಿ ಭಾಗದ ಸಾರ್ವಜನಿಕರಲ್ಲಿ ಹರಿದಾಡುತ್ತಿರುವುದು ಸುಳ್ಳಲ್ಲ. ಯಾವಾಗ ತಾಲೂಕಾಗಿದ್ದ ಮೂಡಲಗಿ ಕ್ಯಾನ್ಸಲ್ ಆಗಿ, ಅದಕ್ಕಾಗಿ ಹೋರಾಟ ಆಗಿ….ಮತ್ತೆ ಮರಳಿ ಮೂಡಲಗಿ ತಾಲೂಕಾಯಿತೋ….ಆ ಹೋರಾಟದಲ್ಲಿ ಶೈನ್ ಆದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಮ್ಎಲ್ಎ ಇಲೆಕ್ಷನ್ ಗೆ ನಿಂತು ಬಾಲಚಂದ್ರ ಜಾರಕಿಹೊಳಿಯವರ ಆಯ್ಕೆ ಸ್ವಲ್ಪ ಟಫ್ ಆಯಿತೋ ಆಗಿನಿಂದ ಬಾಲಚಂದ್ರ ಅವರು ಮೂಡಲಗಿಯ ಜನತೆಯ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ. ಚುನಾವಣೆಯ ನಂತರ ಅವರ ಹತ್ತಿರ ಹೋದ ಸ್ಥಳೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಗುಸುಗುಸು ಮೂಡಲಗಿ ತಾಲೂಕಿನಾದ್ಯಂತ ಹರಿದಾಡುತ್ತಿದೆ. ಇದಕ್ಕೆ ಪೂರಕ ಸಾಕ್ಷಿಯೆಂಬಂತೆ ಮೂಡಲಗಿ ತಾಲೂಕಿನ ಹಾಗೂ ನಗರಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳು ಆಗುತ್ತಿಲ್ಲವೆನ್ನುವುದು ಸರ್ವವೇದ್ಯವಾಗಿದೆ.

ಉದಾಹರಣೆಗೆ ತೀರಾ ಇತ್ತೀಚೆಗೆ ಮೂಡಲಗಿ ನಗರಕ್ಕೆ ಸಬ್ ರಜಿಸ್ಟ್ರಾರ್ ಕಚೇರಿ ಆಗಿಯೇ ಬಿಟ್ಟಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಅದು ಇನ್ನೂ ಆಗಿಯೇ ಇಲ್ಲ. ಮೂಡಲಗಿ ತಾಲೂಕಿಗೆ ಸಂಬಂಧಿಸಿದ ಇನ್ನೂ ಹಲವಾರು ಕಚೇರಿಗಳು ಆರಂಭವಾಗಬೇಕು ಆದರೆ ಆಗುತ್ತಿಲ್ಲ. ಶಾಸಕರಾದಿಯಾಗಿ ತಾಲೂಕಿನ ಯಾವ ಮುಖಂಡರಿಗೂ ಈ ಕಚೇರಿಗಳನ್ನು ಆರಂಭಿಸಬೇಕೆಂಬ ಇಚ್ಛಾಶಕ್ತಿ ಇದ್ದಂತಿಲ್ಲ‌.

ಇನ್ನು ಮೂಡಲಗಿ ನಗರದ ರಸ್ತೆಗಳನ್ನು ನೋಡಿದರೆ ಯಾರಿಗಾದರೂ ಜೀವನದಲ್ಲಿಯೇ ಜಿಗುಪ್ಸೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ! ಇಲ್ಲಿನ ಪುರಸಭೆಯಂತೂ ಗಾಢ ನಿದ್ರೆಯಲ್ಲಿ ಕುಂಭಕರ್ಣನನ್ನೂ ಮೀರಿಸಿದೆಯೆನ್ನಬಹುದು. ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡಿ ಮನೆಗಳ ಕಟ್ಟಡಕ್ಕೆ ಪರವಾನಿಗೆ ನೀಡುವುದಷ್ಟೇ ಪುರಸಭೆಯವರ ಕೆಲಸ. ಅಲ್ಲಿ ಬೇಕಾದ ಸವಲತ್ತುಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಸರಿಯಾದ ಗಟಾರುಗಳಿಲ್ಲ. ಇದ್ದರೆ ಅವು ಸ್ವಚ್ಛವಾಗಿಲ್ಲ. ಎಲ್ಲಿ ನೋಡಿದಲ್ಲಿ ಹಂದಿಗಳ ಕಾಟ. ಸಾರ್ವಜನಿಕ ಶೌಚಾಲಯಗಳಂತೂ ಗಬ್ಬೆದ್ದು ಹೋಗಿ ರೋಗ ರುಜಿನಗಳ ತಾಣಗಳಾಗಿವೆ. ಸಾರ್ವಜನಿಕರ ಯಾವುದೇ ಕೆಲಸ ಹಣ ಕೊಡದೆ ಆಗುವುದೇ ಇಲ್ಲ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.

ನಗರದಲ್ಲಿನ ರಸ್ತೆಗಳ ಬಗ್ಗೆ ಇನ್ನೊಮ್ಮೆ ಹೇಳಬೇಕು. ಗೋಕಾಕ ಕ್ರಾಸ್ ದಿಂದ ಕಾಲೇಜಿನವರೆಗೆ ರಸ್ತೆ ಡಾಂಬರೀಕರಣವೇನೋ ಆಯಿತು. ಇದನ್ನು ಮಾಡಿದ ಗುತ್ತಿಗೆದಾರರಿಗೆ ಪ್ರಶಸ್ತಿ ಕೊಡಬೇಕು ! ಯಾಕೆಂದರೆ ರಸ್ತೆ ಎರಡೇ ತಿಂಗಳಲ್ಲಿ ಕಿತ್ತ ಕಿನಾರೆ ! ರಸ್ತೆಯಲ್ಲಿ ಅಲ್ಲಲ್ಲಿ ತಗ್ಗುಗಳು ಈಗಲೇ ಬಿದ್ದಿದ್ದು ಇನ್ನು ಕೆಲವೇ ದಿನಗಳಲ್ಲಿ ಮೊದಲಿನ ವೈಭವ ಎದ್ದು ಕಾಣಲಿದೆ ! ಮೂಡಲಗಿಯ ಜನರು ಸಜ್ಜಾಗಬೇಕು.

ಇನ್ನು ಕಲ್ಮೇಶ್ವರ ವೃತ್ತದಿಂದ ನೀವು ಯಾವುದೇ ದಿಕ್ಕಿಗೆ ನೀವು ವಾಹನ ಚಲಾಯಿಸಿದರೂ ಡಾನ್ಸ್ ಮಾಡಿಕೊಂಡೇ ಹೋಗಬೇಕು ! ನಮ್ಮ ಊರಿನ ಹಳ್ಳದ ಪೂಲ್ ನಂಥ ಪೂಲ್ ಯಾವ ಊರಿನಲ್ಲಿಯೂ ಇಲ್ಲವೆನ್ನಬಹುದು. ಇಲ್ಲಿ ಒಂದು ಪೂಲ್ ಮೇಲೆ ಜನ-ವಾಹನ ಹಾಯುವುದೇ ಇಲ್ಲ ! ಅಷ್ಟೊಂದು ಪುಣ್ಯ ಮಾಡಿದೆ ಅದು ! ಇನ್ನೊಂದು ದೊಡ್ಡ ಪೂಲ್ ನಲ್ಲಿ ತಗ್ಗು ದಿನ್ನೆಗಳಿದ್ದರೂ ಜನ ವಾಹನ ಹಾಯಲೇಬೇಕು ಅಷ್ಟು ಪಾಪ ಮಾಡಿದೆ ಅದು ! ಇದೇ ರೀತಿಯ ಪರಿಸ್ಥಿತಿ ನಗರದ ಎಲ್ಲಾ ರಸ್ತೆಗಳದು.

ಮೂಡಲಗಿ ನಗರದ ಈ ಹೀನಾಯ ಪರಿಸ್ಥಿತಿಯಬಗ್ಗೆ ಪುರಸಭೆಯ ಯಾವ ಸದಸ್ಯರೂ ತಲೆ ಕೆಡಿಸಿಕೊಂಡಿಲ್ಲ. ಯಾರಿಗೂ ಅಭಿವೃದ್ಧಿ ಬೇಕಾಗಿಲ್ಲ. ನಾವು ಜನಸಾಮಾನ್ಯರೂ ಕಣ್ಣಿದ್ದೂ ಕುರುಡರಾಗಿದ್ದೇವೆ ಯಾಕೆಂದರೆ, ‘ ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು….’ ಅನ್ನುವಂತಾಗಿದೆ ನಮ್ಮ ಪರಿಸ್ಥಿತಿ.

ಮೂಡಲಗಿಯಲ್ಲಿ ಸಮಾಜ ಸೇವಕರಿದ್ದಾರೆ, ಮಾಹಿತಿ ಹಕ್ಕು ಕಾರ್ಯಕರ್ತರಿದ್ದಾರೆ, ವಿರೋಧ ಪಕ್ಷಗಳ ಮುಖಂಡರಿದ್ದಾರೆ ಎಲ್ಲರೂ ಇದ್ದಾರೆ. ಆದರೆ ಎಲ್ಲರೂ ತಂತಮ್ಮ ಕೆಲಸಗಳಲ್ಲಿ ಬಿಸಿಯಾಗಿದ್ದಾರೆ.

ಉತ್ತರ ಕರ್ನಾಟಕದ ಹೀರೋ ಅನಿಸಿಕೊಂಡಿರುವ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಇಡೀ ರಾಜ್ಯದ ಕೆಲಸ ಮಾಡುತ್ತಾರೆ. ಮೂಡಲಗಿ ನಗರದ ಅಭಿವೃದ್ಧಿ ಅವರ ಗಮನಕ್ಕೆ ಬರುವುದಿಲ್ಲ. ಅವರ ಹೆಸರು ಹೇಳಿಕೊಂಡು ಕೆಲವು ಸೇವಕರು ‘ ನಾ ಗಡಾದ ಅವರ ಅಳಿಯಾ ಮಾತಾಡೂದರಿ…’ ಎಂದು ಆರಂಭಿಸಿ ತಂತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಸಂದರ್ಭ ಬಂದರೆ ಸರ್ಕಾರಿ ಅಧಿಕಾರಿಗಳನ್ನೇ ದಬಾಯಿಸುವ ಮಟ್ಟಿಗೆ ಗಡಾದ ಅವರ ದುರುಪಯೋಗ ನಡೆದಿದೆ. ಇದು ಗಡಾದ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಚುನಾವಣೆಯಲ್ಲಿ ಅಭಿವೃದ್ಧಿ ಕುರಿತಂತೆ ಗಡಾದ ಅವರಿಗೆ ಇದ್ದ ಜೋಶ್ ಈಗ ಮಾಯವಾಗಿದೆ. ನಗರದ ಅಧ್ವಾನಗಳ ಬಗ್ಗೆ ಅವರು ಮೌನವಾಗಿದ್ದಾರೆ.

ಮೂಡಲಗಿ ನಗರವು ಯಾವುದೇ ಅಭಿವೃದ್ಧಿ ಇಲ್ಲದೆ ಸುಮಾರು ಇಪ್ಪತ್ತು ವರ್ಷ ಹಿಂದೆ ಹೋಗಿದ್ದನ್ನು ನೋಡಲಾಗದೆ ಏನೇನೋ ಬಡಬಡಿಸಬೇಕಾಯಿತು.  ಆದರೂ ಶಾಸಕರು ಸೇರಿದಂತೆ ಎಲ್ಲಾ ಮುಖಂಡರು, ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಮೂಡಲಗಿಯ ಇಂದಿನ ಪರಿಸ್ಥಿತಿಗೆ ಕಾರಣರು.

ಸತ್ಯ ಹೇಳಿದರೆ ಕೋಪ ಬರಬಹುದು. ಅದಕ್ಕಿಂತಲೂ ಸತ್ಯ ಒಪ್ಪಿಕೊಂಡು ಶಿವಬೋಧರಂಗನ ಸ್ಥಾನವಾದ ಮೂಡಲಗಿಯನ್ನು ಯಾವುದೇ ಪೂರ್ವಗ್ರಹ ಇಟ್ಟುಕೊಳ್ಳದೆ, ಯಾವುದೇ ಕೋಪ ಇಟ್ಟುಕೊಳ್ಳದೆ ಅಭಿವೃದ್ಧಿ ಮಾಡುವುದು ಶಾಸಕರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಹಾಗೆ ನೋಡಿದರೆ ಇಷ್ಟೊತ್ತಿಗೆ ಮೂಡಲಗಿ ಎಂಬ ನಗರ ಎಲ್ಲಾ ರೀತಿಯಿಂದ ಅಭಿವೃದ್ಧಿ, ಸೌಂದರ್ಯ ಕಾಣಬೇಕಾಗಿತ್ತು ಇನ್ನಾದರೂ ಕಾಣಲಿ ಎಂಬ ಆಶಾಭಾವನೆಯಿಂದ.


ಉಮೇಶ ಬೆಳಕೂಡ, ಮೂಡಲಗಿ

- Advertisement -

2 COMMENTS

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!