ಬನವಾಸಿ: ಸಮೀಪದ ಗುಡ್ನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜರಣಿಯಿಂದ ಬನವಾಸಿ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆಯು ಮಳೆಯಿಂದ ಕುಸಿಯುವ ಹಂತದಲ್ಲಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಪಕ್ಕದಲ್ಲಿ ಹಾಕಿರುವ ಮಣ್ಣು ಕುಸಿದು ಹೋಗಿರುವುದರಿಂದ ಕಾಂಕ್ರಿಟ್ ರಸ್ತೆ ಕುಸಿಯಲಾರಂಭಿಸಿದೆ.
ಏತ ನೀರಾವರಿ ಯೋಜನೆಯಲ್ಲಿ ಅಚ್ಚುಕಟ್ಟು ಪ್ರದೇಶದ ರಸ್ತೆ ನಿರ್ಮಾಣದ ಅನುದಾನದಲ್ಲಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆ ಕಳಪೆ ಮತ್ತು ಅವೈಜ್ಞಾನಿಕ ಕ್ರಮದಿಂದ ಕುಸಿದು ಹೋಗಿದ್ದು ಶೀಘ್ರದಲ್ಲಿ ದುರಸ್ತಿಪಡಿಸದಿದ್ದರೆ ಸಂಪೂರ್ಣ ರಸ್ತೆಯೇ ಸರ್ವನಾಶವಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಕಾಂಕ್ರಿಟ್ ರಸ್ತೆ ನಿರ್ಮಾಣ ಸಮಯದಲ್ಲಿ ನೀರು ಹರಿಯುವಿಕೆಗಾಗಿ ಸಿಮೆಂಟ್ ಪೈಪುಗಳನ್ನು ಹಾಕಿದ್ದು ಈ ಕುಸಿತಕ್ಕೆ ಕಾರಣವಾಗಿದೆ. ಪೈಪುಗಳನ್ನು ಹಾಕಿರುವ ಜಾಗದಲ್ಲಿ ಸರಿಯಾಗಿ ಮಣ್ಣು ಬಿಗಿಗೊಳಿಸದೆ ಇದ್ದುದರಿಂದ ನೀರಿನ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಪ್ರವಾಹ ಪೀಡಿತ ಪ್ರದೇಶದ ರಸ್ತೆಗೆ ನೀರು ಹರಿಯುವುದಕ್ಕೆ ಸೇತುವೆ ನಿರ್ಮಾಣ ಮಾಡದೇ ಸಣ್ಣ ಸಣ್ಣ ಸಿಮೆಂಟ್ ಪೈಪುಗಳನ್ನು ಹಾಕಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಇದೇ ರೀತಿಯಲ್ಲಿ ಇನ್ನೆರಡು ದಿನ ಮಳೆ ಬಂದರೆ ರಸ್ತೆ ಕುಸಿದು ಜನ ಓಡಾಟಕ್ಕೆ ತೀವ್ರ ತೊಂದರೆ ಅನುಭವಿಸಲಿದ್ದಾರೆ.
ಅಜ್ಜರಣಿ ಬನವಾಸಿಗೆ ಸಂಪರ್ಕ ಕಲ್ಪಿಸುವ ಮತ್ತೊಂದು ರಸ್ತೆಯನ್ನು ಹೊಸ ಸೇತುವೆ ನಿರ್ಮಾಣದ ಹೆಸರಿನಲ್ಲಿ ಸೇತುವೆ ಕೆಡವಿ ಹಾಕಿದ್ದು ಆ ಕಾಮಗಾರಿಯೂ ಸ್ಥಗಿತಗೊಂಡಿದೆ. ಈಗ ಈ ಕಾಂಕ್ರೀಟ್ ರಸ್ತೆಯೇ ಪ್ರಮುಖ ರಸ್ತೆಯಾಗಿದ್ದು ಇದು ದುರಸ್ಥಿ ಮಾಡದಿದ್ದರೆ ಅಜ್ಜರಣೆ ಗ್ರಾಮಸ್ಥರು ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಅಪಾಯವಾಗುವುದಕ್ಕಿಂತ ಮುಂಚೆ ಎಚ್ಚೆತ್ತುಕೊಂಡು ಇನ್ನೆರಡು ದಿನಗಳಲ್ಲಿ ರಸ್ತೆ ದುರಸ್ಥಿ ಮಾಡಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಕಾಂಕ್ರಿಟ್ ರಸ್ತೆ ಕುಸಿಯುವ ಹಂತದಲ್ಲಿರುವುದು ನನ್ನ ಗಮನಕ್ಕೆ ಬಂದಿದೆ. ರಸ್ತೆಯ ಕ್ರಿಯಾ ಯೋಜನೆಯಲ್ಲಿ ಸಿಮೆಂಟ್ ಪೈಪು ಆಳವಡಿಸುವುದು ಇರಲಿಲ್ಲ. ಗ್ರಾಮ ಪಂಚಾಯಿತಿಯ ಸದಸ್ಯರ ಒತ್ತಾಯಕ್ಕೆ ಪೈಪುಗಳನ್ನು ಹಾಕಲಾಗಿದೆ. ಮಳೆಯ ಹೊಡೆತಕ್ಕೆ ಮಣ್ಣು ಸಡಿಲಗೊಂಡು ಕುಸಿಯುತ್ತಿದೆ. ಕೂಡಲೇ ದುರಸ್ತಿ ಮಾಡಲು ಗುತ್ತಿಗೆದಾರನಿಗೆ ಸೂಚಿಸಲಾಗಿದೆ.
ಅರುಣ್ ಕೆ.ಎಸ್
ಅಭಿಯಂತರರು ಕರ್ನಾಟಕ ನೀರಾವರಿ ನಿಗಮ, ಸೊರಬ
ಅಜ್ಜರಣಿಯ ಕಾಂಕ್ರಿಟ್ ರಸ್ತೆಯನ್ನು ಪರಿಶೀಲನೆ ಮಾಡಿದ್ದೇವೆ. ನಿರಂತರ ಮಳೆಯಿಂದಾಗಿ ಮಣ್ಣು ಕುಸಿದಿದೆ ಕೂಡಲೇ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಜ್ಯೋತಿ ಎಸ್. ನಾಯ್ಕ್
ಉಪಾಧ್ಯಕ್ಷರು ಗ್ರಾಪಂ ಗುಡ್ನಾಪೂರ