ಮೂಡಲಗಿ: ‘ಲಿಂಗಾಯತ ಎಲ್ಲ ಉಪಪಂಗಡಗಳು ಬೆಳೆಯುವುದರೊಂದಿಗೆ ಇಡೀ ವಿಶ್ವಮಟ್ಟದಲ್ಲಿ ಲಿಂಗಾಯತ ಸಮಾಜ ಒಂದೇ ಎನ್ನುವ ಬದ್ಧತೆ ಹೊಂದಬೇಕು’ ಎಂದು ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಹೇಳಿದರು.
ಮೂಡಲಗಿಯ ಕೆ.ಎಚ್. ಸೋನವಾಲ್ಕರ್ ಕಲ್ಯಾಣ ಮಂಟಪದಲ್ಲಿ ಜರುಗಿದ ತಾಲ್ಲೂಕಾ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ೧೬ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪಪಂಗಡಗಳು ಮೂಲ ಲಿಂಗಾಯತ ಧರ್ಮಕ್ಕೆ ಚ್ಯುತಿಬಾರದಂತೆ ಎಚ್ಚರವಹಿಸಬೇಕು ಎಂದರು.
ಜಾತಿ, ಮತ ಭೇದ ಮಾಡದೆ ಎಲ್ಲ ಸಮಾಜಗಳೊಂದಿಗೆ ಸೋದರತೆ, ಸೌಜನ್ಯತೆ ಹೊಂದಿದ್ದು ಹಾಗೂ ಬಣಜಿಗ ಸಮಾಜದ ಜನರು ಸೌಹಾರ್ದತೆ ಮತ್ತು ಶಾಂತಿ ಪ್ರಿಯರು. ಬಣಜಿಗ ಸಮಾಜದಲ್ಲಿಯ ದುರ್ಬಲ ಜನರನ್ನು ಪಟ್ಟಿ ಮಾಡಿ ಅವರನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ರಾಜ್ಯದ ಬಣಜಿಗ ಸಂಘಟನೆಯಲ್ಲಿ ಆಗಿರುವ ಬಿಕ್ಕಟ್ಟು ಇಷ್ಟರಲ್ಲಿಯೆ ನಿವಾರಣೆಯಾಗಿ ರಾಜ್ಯ ಸಂಘಟನೆಗೆ ಆದಷ್ಟು ಬೇಗೆ ಕಾಯಕಲ್ಪ ನೀಡಲಾಗುವುದು. ಬಣಜಿಗ ಸಮಾಜದವರು ತಾವು ಬೆಳೆಯುವುದರೊಂದಿಗೆ ಬೇರೆ ಸಮಾಜದ ಜನರನ್ನು ಪ್ರೀತಿಸುವಂತಾಗಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲ ಸಮಾಜದವರ ಪ್ರೀತಿ, ವಿಶ್ವಾಸದಲ್ಲಿ ಚುನಾಯಿತನಾಗಿರುವೆನು. ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಸಹಕಾರವು ಮುಖ್ಯವಾಗಿದೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ಹಿಂದಿನ ಸಂಸದರಾದ ಸುರೇಶ ಅಂಗಡಿ ಮತ್ತು ಮಂಗಲಾ ಅಂಗಡಿ ಅವರು ಸಾಕಷ್ಟು ಅಭಿವೃದ್ಧಿಗೆ ಒತ್ತು ನೀಡಿದ್ದರು. ಇತ್ತಿಚೆಗೆ ಜರುಗಿದ ಲೋಕಸಭಾ ಮೊದಲ ಅಧಿವೇಶನದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನಸೆಳೆದಿರುವೆ. ಅವೆಲ್ಲವೂ ಕಾರ್ಯರೂಪಕ್ಕೆ ತರುತ್ತೇನೆ ಎಂದರು.
ಮುಖ್ಯ ಅತಿಥಿ ಸಾಹಿತಿ ಡಾ. ಸಂಗಮನಾಥ ಲೋಕಾಪುರ ಅವರು ಉಪನ್ಯಾಸವನ್ನು ನೀಡಿದರು.ದತ್ತಾತ್ರೇಯಬೋಧ ಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಬಣಜಿಗ ಸಮಾಜದ ಅಧ್ಯಕ್ಷ ಶಿವಪ್ಪ ಭುಜನ್ನವರ ಅಧ್ಯಕ್ಷತೆವಹಿಸಿದ್ದರು.
ಬಣಜಿಗ ಸಮಾಜದ ೭೫ ವಯಸ್ಸು ಪೂರೈಸಿದ ಹಿರಿಯ ಜೀವಿಗಳಿಗೆ, ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿಯಲ್ಲಿ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಮತ್ತು ದಾನಿಗಳಿಗೆ ಸಮಾರಂಭದಲ್ಲಿ ಸನ್ಮಾನಿಸಿದರು.
ವೇದಿಕೆಯಲ್ಲಿ ಬಣಜಿಗ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ಉಪಾಧ್ಯಕ್ಷ ಪ್ರಕಾಶ ಪುಠಾಣಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ವಾಣಿ, ಉಪಾಧ್ಯಕೆ ರಾಜೇಶ್ವರಿ ಗಾಡವಿ, ವೀರಭದ್ರ ಜಕಾತಿ, ಚಿದಾನಂದ ಶೆಟ್ಟರ, ಶಿವಾನಂದ ಗಾಡವಿ, ವಿರೂಪಾಕ್ಷ ಗಾಡವಿ, ಸುಭಾಸ ಅವಟಿ, ಸಂತೋಷ ಅಂಗಡಿ, ಪ್ರಕಾಶ ಶೀಲವಂತ, ಸಂಗಪ್ಪ ಅಂಗಡಿ, ಬಸವಣ್ಣೆಪ್ಪ ಅಂಗಡಿ ಇದ್ದರು. ಸಂಘದ ಕಾರ್ಯದರ್ಶಿ ಚಿದಾನಂದ ಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ಪ್ರಭಾವತಿ ಜಕಾತಿ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು, ನಿಂಗಪ್ಪ ಯಕ್ಕುಂಡಿ ವಂದಿಸಿದರು.