spot_img
spot_img

ನೋವಿರಲಿ ನಲಿವಿರಲಿ ಪ್ರೀತಿಯ ಅಮೃತ ಜೊತೆಯಲಿರಲಿ

Must Read

- Advertisement -

ನಿನಗೆ ಬೇಕಾದ ಎಲ್ಲಾ ಸಾಮಾನುಗಳನ್ನು ನೀನು ಬಾಯಿ ಬಿಟ್ಟು ಕೇಳುವದರೊಳಗೆ ಮನೆಯಲ್ಲಿ ತುಂಬಿಸಿರ್ತಿನಿ ಆದರೂ ನಿನ್ನದೇನು ಕಿರಿ ಕಿರಿ ಎನ್ನುವದು ಪ್ರಶಾಂತನ ಪ್ರಶ್ನೆ ಪತ್ನಿ ಪ್ರೇರಣಾಳಿಗೆ. ವಾಸ್ತವದಲ್ಲಿ ಪ್ರೇರಣಾ ಬಯಸುತ್ತಿರುವದು ನಾನಾ ನಮೂನೆಯ ಸಾಮಾನುಗಳನ್ನಲ್ಲ. ಅವಳಿಗೆ ಬೇಕಾಗಿರುವದು ಪ್ರಶಾಂತನ ಪ್ರೀತಿ ತುಂಬಿದ ಮಾತುಗಳು. ಅವಳೆಡೆಗೆ ಬೀರುವ ಒಂದು ತುಟಿಯಂಚಿನ ಕಿರುನಗೆ ಕಸಿವಿಸಿಯಾದಾಗ ಮನದ ತಲ್ಲಣ ಹಂಚಿಕೊಳ್ಳಲು ಅವನ ಮುದ್ದಾದ ಮನಸ್ಸು.

ದಾಂಪತ್ಯದ ಪ್ರಾರಂಭದಲ್ಲಿ ಅವಳಲ್ಲಿ ತೋರುತ್ತಿದ್ದ ಉತ್ಸಾಹ ಪ್ರೀತಿ ಆನಂದ ತಂದ ಬೆಸುಗೆಯ ಒಲವು ದಿನದಿಂದ ದಿನಕ್ಕೆ ಇತ್ತೀಚಿಗೆ ಕಡಿಮೆಯೆನಿಸುತ್ತಿದೆ. ಜೀವನ ಕೇವಲ ಮಟೆರಿಯಾಲಿಸ್ಟಿಕ್ ಆಗಿ ರಿಯಾಲಿಸ್ಟಿಕ್‍ನ್ನು ಮರೆಯುತ್ತಿದೆ ಸಂಸಾರದಲ್ಲಿ ಪ್ರೀತಿಯ ತೀವ್ರತೆ ಕಡಿಮೆಯೆನಿಸುತ್ತಿದೆ ಎನ್ನುವ ನೋವು ಪ್ರೇರಣಾಳನ್ನು ಕಾಡುತ್ತಿದೆ.. ಇಷ್ಟೊಂದು ಪ್ರೀತಿಸಿದರೂ ಪ್ರೀತಿಯ ಭಾವದಲ್ಲಿ ಅಭಾವವೆಂದು ರಾಗ ತೆಗೆಯುತ್ತಿ ಏಕೆ ಎನ್ನುವ ನೋವಿನ ಪ್ರಶ್ನೆ ಪ್ರಶಾಂತನದು ಎಂದು ಗೆಳತಿ ಪ್ರೇರಣಾ ತನ್ನ ಅಳಲನ್ನು ನನ್ನ ಮುಂದೆ ತೋಡಿಕೊಂಡಾಗ ಇದು ಬರಿ ಪ್ರಶಾಂತನ ಪ್ರೇರಣಾಳ ನೋವಲ್ಲ. ವಿವಾಹ ಬಂಧನಕ್ಕೊಳಗಾದ ಬಹಳಷ್ಟು ದಂಪತಿಗಳ ನೋವು ಎಂದೆನಿಸಿತು.

ಬದುಕಿನ ಜೀವ ದ್ರವ್ಯವೇ ಪ್ರೀತಿ ಎಂದ ಮೇಲೆ ಅದು ಇರದೇ ಬದುಕುವುದಾದರೂ ಹೇಗೆ ಸಾಧ್ಯ? ಎಂಬ ಪ್ರಶ್ನೆ ನನ್ನ ತಲೆಯನ್ನು ಕೊರೆಯುತ್ತಿತ್ತು. ಅದೇ ಸಂಜೆ ನನ್ನ ಗೆಳತಿಯ ಹೆತ್ತವರು ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತಿದ್ದ ಸಮಾರಂಭಕ್ಕೆ ಹಾಜರಾಗಿದ್ದೆ. ದಂಪತಿಗಳನ್ನು ಹಾಡಿ ಹೊಗಳಿ ಅವರ ದಾಂಪತ್ಯದ ಜೀವನದ ಯಶಸ್ಸಿನ ಗುಟ್ಟೇನು ಎಂದು ಕೇಳಿದೆ.ಅದಕ್ಕೆ ಅವರು ಬಚ್ಚ ಬಾಯಿ ತೆರೆದು ನಗುತ್ತ ನಾವಿಬ್ಬರೂ ಮುದ್ದಾಡಿದ್ದಕ್ಕಿಂತ ಪ್ರೀತಿಸಿದ್ದೇ ಜಾಸ್ತಿ ಎಂದರು ನಾನು ಗಲಿಬಿಲಿಗೊಂಡೆ. ಮನಸ್ಸು ಮನಸ್ಸು ಬೆರೆತು ನಿನಗಾಗಿ ನಾನು ನನಗಾಗಿ ನೀನು ನನಗಾಗಿಯೇ ನೀನು ಜನ್ಮ ತಳೆದಿರುವೆ ಎನ್ನುವ ಭಾವ ತಳೆದು ಒಂದಾದ ಬಾಂಧವ್ಯ ಬರೀ ಮುದ್ದಾಟದಿಂದ ಕೂಡಿ ಪ್ರೀತಿಯ ಜಲವಿಲ್ಲದೆ ಒಣಗುತ್ತಿದೆ. ಮುದ್ದಾಟವನ್ನೇ ಪ್ರೀತಿಯೆಂದು ತಪ್ಪಾಗಿ ಅರ್ಥೈಸಿಕೊಂಡು ಇತ್ತೀಚಿನ ದಿನಗಳಲ್ಲಿ ಮದುವೆಯ ಬಂಧ ಸಡಿಲಗೊಂಡು ಕೇವಲ ವರ್ಷಗಳಷ್ಟು ಇಲ್ಲವೇ ತಿಂಗಳುಗಳಷ್ಟೇ ಉಸಿರಾಡುವ ದುಸ್ಥಿತಿಗೆ ಬಂದಿವೆ ಎಂದರು.

- Advertisement -

ನಾನು ಅಚ್ಚರಿಯಿಂದ ಮುದ್ದಾಟವೇ ಪ್ರೀತಿಯಲ್ಲವೇ? ಮುದ್ದಾಟಕ್ಕೂ ಪ್ರೀತಿಗೂ ವ್ಯತ್ಯಾಸವೇನು ?ಎಂದೆ.

ಅದಕ್ಕವರು ಅನಿವಾರ್ಯತೆ ಮುದ್ದಾಟಕ್ಕಿಂತ ಪ್ರೀತಿಸುವ ಅನಿವಾರ್ಯತೆ ಮಹತ್ವದ ಹಂಬಲವೆಂದು ತೋರುತ್ತದೆ. ಪ್ರೀತಿಸುವದೆಂದರೆ ಅವರು ಹೇಳುವ ಪ್ರತಿಯೊಂದಕ್ಕೂ ಸುಮ್ಮನೇ ಗೋಣು ಹಾಕಿ ಹೂಂ ಎನ್ನಬೇಕು. ಯಾವತ್ತೂ ಅವರ ವಿರುದ್ಧ ದೂರಬಾರದು. ಅವರ ಅನುಕೂಲದ ಪರೀಧಿಯೊಳಗೆ ಅವರನ್ನು ಬಿಟ್ಟು ಬಿಡಬೇಕು. ಅದರಾಚೆಗೆ ಬರುವಂತೆ ಅವರನ್ನು ಒತ್ತಾಯಿಸಬಾರದು. ಅಂದರೆ ಅವರನ್ನು ಅವರಷ್ಟಕ್ಕೆ ಬಿಡಬೇಕು. ಅವರನ್ನು ಬದಲಾಗುವಂತೆ ತಾಕೀತು ಮಾಡಕೂಡದು. ಮುದ್ದಿಸುವದೆಂದರೆ ನನಗೆ ಇಷ್ಟವಾದ ರೀತಿಯಲ್ಲಿ ಮಾತ್ರ ಪ್ರೀತಿಸು ಎನ್ನುವಂಥದ್ದು. ಮುದ್ದಿಸುವ ಪ್ರೀತಿಯ ರೀತಿ ನಿಜವಾದ ಪ್ರೀತಿಯಾಗಲಾರದು. ಮುದ್ದಾಟ ನಿಮ್ಮನ್ನು ದುರ್ಬಲಗೊಳಿಸಿದರೆ ಪ್ರೀತಿ ನಿಮ್ಮನ್ನು ರೂಪಿಸುವ ಶಕ್ತಿ ಹೊಂದಿದೆ ಎಂದರು ದೃಢವಾಗಿ. ಒಂದೇ ಎಳನೀರಿನಲ್ಲಿ ಒಂದೇ ಸ್ಟ್ರಾದಿಂದ ದಂಪತಿಗಳಿಬ್ಬರೂ ನಗುತ್ತ ಒಬ್ಬರನೊಬ್ಬರು ಛೇಡಿಸುತ್ತ ಎಳನೀರು ಕುಡಿದ ನಂತರ ನನ್ನನ್ನುದ್ದೇಶಿಸಿ ಜಯಾ, ನಿನಗೆ ಗೊತ್ತಿದ್ದಂತೆ ಜಗದಲ್ಲಿ ಯಾರೂ ಪರಿಪೂರ್ಣರಲ್ಲ ನಮ್ಮನ್ನು ನಾವು ಸುಧಾರಿಸಿಕೊಳ್ಳೋಕೆ ಕೊನೆ ಮೊದಲಲ್ಲಿದ ಅವಕಾಶಗಳಿರುತ್ತವೆ. ನಿಮ್ಮನ್ನು ಪ್ರೀತಿಸುವವರನ್ನು ಬಿಟ್ಟರೆ ಬೇರೆ ಯಾರಿಗೂ ನೀವು ಸುಧಾರಿಸುತ್ತಿದ್ದೀರಾ ಇಲ್ಲವೆ ಎನ್ನುವ ಬಗ್ಗೆ ಕಾಳಜಿ ಇರುವದಿಲ್ಲ. ಸಹನೆಯ ಹೆಸರಿನಲ್ಲಿ ಮುದ್ದಾಟ ನಿಮ್ಮನ್ನು ಅಪರಿಪೂರ್ಣರನ್ನಾಗಿಸುವದಲ್ಲದೇ ನಿಮ್ಮ ಅಹಂನ್ನು ಘಾಸಿಗೊಳಿಸುತ್ತದೆ. ಆದರೆ ಪ್ರೀತಿ ನಿಮ್ಮನ್ನು ಬೇರೆ ತೆರನಾಗಿ ರೂಪುಗೊಳ್ಳುವದಕ್ಕೆ ಸೂಕ್ತ ರಹದಾರಿಯನ್ನು ಒದಗಿಸಬಲ್ಲದು. ಮುದ್ದಾಟ ಯಾವುದು ಸರಿ ಅಲ್ಲವೋ ಅದೇ ಸರಿ ಎಂದು ತೋರಿಸುತ್ತದೆ. ಮುದ್ದಾಟ ಸಂಜೆಯ ಕುಡಿತದ ಹಾಗೆ ಮೋಜು ತರುತ್ತೆ ನಿಮ್ಮನ್ನು ಬದಲಾಯಿಸಲಾರದು. ಪ್ರೀತಿ ಕನ್ನಡಿಯಿದ್ದಂತೆ ನಿಮ್ಮನ್ನು ನೀವಿದ್ದ ಹಾಗೆಯೇ ತೋರಿಸುತ್ತದೆ. ಮುದ್ದಾಟ ನಿಮಗೆ ನೀವು ಹೇಗೆ ಕಾಣಬೇಕೆಂದು ಬಯಸುತ್ತಿರೋ ಹಾಗೆ ತೋರಿಸುವ ಮಾಯಾವಿ ಕನ್ನಡಿ. ಪ್ರೀತಿ ಧ್ಯಾನದ ಹಾಗೆ ಅದರಿಂದ ಏನೂ ಘಟಿಸುತ್ತಿಲ್ಲ ಅಂತ ಅನ್ನಿಸಬಹುದು. ಆದರೆ ಪ್ರತಿಯೊಂದು ಅದರಿಂದ ಬದಲಿಸಲ್ಪಡುತ್ತದೆ ನೋವಿರಲಿ ನಲಿವಿರಲಿ ಪ್ರೀತಿಯ ಅಮೃತ ಜೊತೆಯಲ್ಲಿರಲಿ. ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು ಅಂದುಕೊಳ್ತಿನಿ ಎಂದು ನಗುತ್ತ ಪತ್ನಿಯ ಕಿರು ಬೆರಳು ಹಿಡಿದು ಊಟಕ್ಕೆ ನಡೆದರು.

ಹೌದಲ್ವೇ? ಅವರು ಹೇಳಿದ ಮಾತುಗಳು ಅದೆಷ್ಟು ಸತ್ಯ ಎಂದೆನಿಸಿ ಏಳು ಜನುಮದ ಅನುಬಂಧ ಎನಿಸಿರುವ ವಿವಾಹದಲ್ಲಿ ಬಿರುಕು ಬಿಡಲು ಯಾರು ಕಾರಣ ಎಂಬ ಪ್ರಶ್ನೆ ತಲೆ ಹೊಕ್ಕಿತು. ಬದುಕಿಗೊಂದು ಜೊತೆ ಸಿಕ್ಕಾಗ ಜಗವೆಲ್ಲ ಅತೀ ಸುಂದರವಾಗಿ ರಮಣೀಯವಾಗಿ ಕಂಡು ಖುಷಿಯಿಂದ ನಲಿಯುವಂತೆ ಮಾಡುತ್ತೆ. ಅದೇ ಪ್ರೀತಿಯ ಹಳಿಗಂಟಿಕೊಂಡೇ ಜೀವನ ಸಾಗಲಿ ಎಂಬ ಹುರುಪು ಹುಮ್ಮಸ್ಸು ಇರುವಾಗಲೇ ಮದುವೆಯಾದ ಮೊದ ಮೊದಲು ಅಪ್ಪನ ಪ್ರತಿರೂಪವೇನೋ ಅನಿಸುತ್ತಿದ್ದ ಜೀವದ ಗೆಳೆಯ, ದರ್ಪದ ಅಧಿಕಾರಿಯಾಗಿ, ಜಂಭ ತೋರಿಸುವ ಗಂಡನಾಗಿ ಬದಲಾಗಿರುತ್ತಾನೆ. ನಿನ್ನ ಪ್ರೀತಿಯ ಹೊರತು ಜೀವನವೇ ಇಲ್ಲ ಎನ್ನುವ ಪ್ರಿಯತಮ ಪಕ್ಕದಲ್ಲೇ ಇದ್ದರೂ ಬೇರೊಬ್ಬನೊಂದಿಗೆ ಮನಸ್ಸಿಲ್ಲದೇ ಹೆಜ್ಜೆ ಹಾಕುತ್ತಿದ್ದೇನೆ ಎನ್ನಿಸಿ ಬದುಕೇ ಅಸಹನೀಯವಾಗಿ ಬಿಡುತ್ತದೆ.

- Advertisement -

ಮನದರಸಿಯಂತಿದ್ದ ಹೆಂಡತಿ ಕಾಲ ಉರುಳಿದಂತೆ ದೂರುಗಳೇ ತುಂಬಿರುವ ಡಬ್ಬಿಯಂತೆ,ಇತಿ ಮಿತಿಯಿಲ್ಲದ ಬೇಡಿಕೆ ಪಟ್ಟಿಯಂತೆ ಕಾಣತೊಡುಗುತ್ತಾಳೆ. ಪ್ರಾಣ ಸ್ನೇಹಿತೆಯಂತಿದ್ದವಳು ಪ್ರಾಣ ಹಿಂಡುವ ರಕ್ಕಸಿಯಂತೆ ಕಾಣತೊಡುಗುತ್ತಾಳೆ.ಮನ ಅರಳಿಸುವ ಮಾತುಗಳು ಕಡಿಮೆಯಾಗಿ ಬದುಕಿನ ಬಂಡಿಗೆ ಪ್ರೀತಿಯ ಕೀಲೆಣ್ಣೆ ಇಲ್ಲದಂತಾಗಿ ಘಳಿಗೆಗೊಮ್ಮೆ ಕೊರ್ ಕೊರ್ ಎನ್ನುವ ಸದ್ದು ಮಾಡತೊಡಗುತ್ತದೆ. ಗಟ್ಟಿಯಾದ ಬಂಧ ಸಡಿಲುಗೊಳ್ಳಲು ಪ್ರಾರಂಭಿಸುತ್ತದೆ. ಸಾಮಾಜಿಕ ಪ್ರತಿಷ್ಠೆಗಾಗಿ ಹಣದ ಬೆನ್ನು ಬಿದ್ದು ಗಡಿಬಿಡಿಯನ್ನೇ ಪ್ರಧಾನವಾಗಿಸಿಕೊಂಡು ಒಂದೇ ಒಂದು ನಿಜವಾದ ಪ್ರೀತಿಯ ಬಿಸಿ ಅಪ್ಪುಗೆಗೂ ಮನಸ್ಸು ಹಾತೊರೆಯುವಂತ ಪರಿಸ್ಥಿತಿ ಬಂದೊದುಗುತ್ತದೆ. ಈ ಪುರುಷಾರ್ಥಕ್ಕೆ ಮದುವೆಯಾಗಬೇಕಿತ್ತಾ? ಎನಿಸತೊಡುಗುತ್ತದೆ. ಅಹಂಕಾರದ ಕೋಟೆಯಿಂದ ಹೊರಬಂದು ಮೌನದ ಕಟ್ಟೆಯೊಡೆಯುವ ಮನಸ್ಸು ಮಾಡುವದೇ ಇಲ್ಲ. ದೇಹಗಳು ಸನಿಹದಲ್ಲಿದ್ದರೂ ಮನಸ್ಸುಗಳು ದೂರವಾಗಿವೆ ಎಂಬ ಕಟು ಸತ್ಯ ಕಾಡತೊಡುಗುತ್ತದೆ. ಮನಸ್ಸು ಮಾಡಿದರೆ ಈ ದೂರ ಅತಿ ದೂರವೇನಲ್ಲ. ಒಲವು ತುಂಬಿದ ಮನಸ್ಸಿನಿಂದ ಒಂದೇ ಒಂದು ಅಡಿ ಮುಂದಿಟ್ಟರೆ ಸಾಕು ಸಂಗಾತಿಯ ಒಲವ ಧಾರೆಗೆ ಸಾಕ್ಷಿಯಾಗುವಿರಿ.

ಹೊರಗಿನವರನ್ನು ಕ್ಷಮೆ ಕೇಳಲು ಬಹಳ ವಿಚಾರ ಮಾಡದೆÀ, ಹಿಂಜರಿಯದೆ ಮನಸ್ಸು ಸ್ಸಾರಿ ಎಂದು ಕೇಳಿಬಿಡುತ್ತದೆ ಆದರೆ ದಾಂಪತ್ಯದಲ್ಲೇಕೆ ಚಿಕ್ಕ ಚಿಕ್ಕ ತಪ್ಪುಗಳನ್ನು ಗುರುತಿಸಿ ಬೈದು ಮನಸ್ತಾಪ ಹೆಚ್ಚಿಸಿಕೊಳ್ಳುವದು ಮತ್ತು ತಪ್ಪು ನನ್ನದೇ ಅಂತ ಗೊತ್ತಿದ್ದರೂ ಕ್ಷಮೆ ಕೇಳಲು ಮನಸ್ಸು ಮಾಡದಿರುವದು. ವಿಚಿತ್ರವಾದರೂ ಸತ್ಯ. ತಪ್ಪು ಯಾರದಾದರೇನು? ದಾಂಪತ್ಯ ನಮ್ಮದಲ್ಲವೇ? ನಾನು ಸೋತರೂ ದಾಂಪತ್ಯ ಗೆಲ್ಲಿಸುತ್ತೇನೆ ಸಂಗಾತಿಯೊಂದಿಗೆ ಹೆಜ್ಜೆ ಹಾಕುತ್ತ ಪ್ರೀತಿಗೆ ಅದರ ರೀತಿಗೆ ಮಾರು ಹೋಗುತ್ತ ದಾಂಪತ್ಯದ ಸೈಕಲ್ ಪೆಡಲ್ ಇಬ್ಬರೂ ತುಳಿಯುತ್ತಲೇ ಸಾಗಬೇಕು. ಪ್ಲೀಸ್, ಸ್ಸಾರಿ, ಥ್ಯಾಂಕ್ಯೂ ಪದಗಳ ಬಳಕೆ ಹೆಚ್ಚಿಸಿ ಸುಳ್ಳು ಕೋಪಗಳ ಬಳಕೆ ಬೇಡವೇ ಬೇಡ.

ಹೃದಯ ಚಿಕ್ಕದಾದಷ್ಟು ನಾಲಿಗೆ ದೊಡ್ಡದಾಗುತ್ತದೆ, ಕಚ್ಚಿಕೊಳ್ಳುವ ಮೊಳೆಯನ್ನು ಸುತ್ತಿಗೆಯಿಂದ ಗೋಡೆಯ ಒಳಕ್ಕೆ ಹೊಡೆಯಲಾಗುತ್ತದೆ. ಪ್ರೀತಿಯ ದಾರಿ ತುಳಿಯಲ್ಪಟ್ಟಷ್ಟು ಕ್ಷೇಮಕರವಾಗಿರುತ್ತದೆ ಜೀವನದಲ್ಲಿ ನಿರಂತರ ಸಂತೋಷ ಎಂಬುದಿಲ್ಲ ಕೇವಲ ಸಂತಸದ ಕ್ಷಣಗಳಿರುತ್ತವೆ ಉರಿಯುತ್ತಿರುವ ಪುಟ್ಟ ಹಣತೆಯು ತಾನು ಸುಡುತ್ತ ಇತರರಿಗೆ ಬೆಳಕು ನೀಡುತ್ತದೆ ಈ ಕ್ರಿಯೆಯಲ್ಲಿ ನಮಗೆ ಸಂತೃಪ್ತಿಯ ಅಂತರ್ ಹೊಳಪು ದೊರೆಯುತ್ತದೆ ಎಂಬ ಮಾತುಗಳು ನೆನಪಿನಲ್ಲಿರಲಿ. ಪ್ರೀತಿ ಸಿರಿವಂತಿಕೆ ಬಡತನ ಕೇಳುವದಿಲ್ಲ. ಪ್ರೀತಿಯಲ್ಲಿ ಸಿರಿವಂತಿಕೆ ಇದ್ದರೆ ದಾಂಪತ್ಯ ನೆಮ್ಮದಿಯ ಬೀಡಾಗುತ್ತದೆ. ನೋವು ನಲಿವುಗಳ ಚಕ್ರವೇ ದಾಂಪತ್ಯ. ನೋವಿರಲಿ ನಲಿವಿರಲಿ ಪ್ರೀತಿಯ ಅಮೃತ ಜೊತೆಯಲಿರಲಿ. ಹೂಂ ಅಂತೀರಿ ತಾನೆ?


ಜಯಶ್ರೀ.ಜೆ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಸ ಪ ಪೂ ಕಾಲೇಜು ಹಿರೇಬಾಗೇವಾಡಿ

- Advertisement -

1 COMMENT

Comments are closed.

- Advertisement -

Latest News

ತಾಯ ಹಾಲಿಗಿಂತಲೂ ‘ಇಪ್ಪೆ’ ಹಣ್ಣಿನ ರಸವೇ ಶ್ರೇಷ್ಠ !

ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. ಇದನ್ನು BUTTER TREE ಎಂದೂ...
- Advertisement -

More Articles Like This

- Advertisement -
close
error: Content is protected !!
Join WhatsApp Group