ಅವಸರದ ಬದುಕು ಇಂದಿನದು. ಸಮಯ ನೋಡುವುದಕ್ಕೂ ಸಮಯ ಸಿಗುತ್ತಿಲ್ಲ ಸಮಯ ಸಿಕ್ಕಾಗ ಸ್ವಲ್ಪ ಹೆಚ್ಚು ಅಡುಗೆ ಮಾಡಿ ಫ್ರಿಜ್‍ನಲ್ಲಿಟ್ಟು ಬಿಡುವುದು ಒಳ್ಳೆಯದು. ಬೇಕಾದಾಗ ಮನೆ ಮಂದಿಯೆಲ್ಲ ಬಿಸಿ ಮಾಡಿಕೊಂಡು ತಿನ್ನುತ್ತಾರೆ ಎನ್ನುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಕೆಲವರಂತೂ ಅನ್ನ ಪಲ್ಯ ಸಾರು ಇನ್ನಿತರೆ ಪದಾರ್ಥಗಳನ್ನು ಪ್ರತಿದಿನ ಮಾಡಲು ಪುರುಸೊತ್ತಿಲ್ಲವೆಂದು ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಫ್ರಿಜ್‍ನಲ್ಲಿಟ್ಟು ಬೇಕಾದಾಗ ಬಿಸಿ ಮಾಡಿ ತಿನ್ನುತ್ತಾರೆ. ಸ್ವಲ್ಪ ಜನ ರಾತ್ರಿ ಉಳಿದಿದ್ದೆನ್ನೆಲ್ಲ ಫ್ರಿಜ್‍ನಲ್ಲಿ ತುಂಬಿ ಮಾರನೆಯ ದಿನ ತಾಜಾ ಅಡುಗೆಯೊಂದಿಗೆ ಅದನ್ನೂ ಬಿಸಿ ಮಾಡಿ ಸೇವಿಸುತ್ತಾರೆ. ಹೀಗೆ ಮಾಡುವುದರಿಂದ ನಿನ್ನೆಯ ಆಹಾರ ಇಂದಿನ ತಾಜಾ ಆಹಾರ ಮಿಶ್ರಣವಾಗುವುದು.
’ಬಿಸಿಗೂಡಿ ತಂಗಳುಣಬೇಡ’ ಎಂದು ಸರ್ವಜ್ಞ ಹೇಳಿದ್ದು ನೂರರಷ್ಟು ಸರಿಯಾಗಿದೆ. ಬಿಸಿಗೂಡಿ ತಂಗಳು ತಿನ್ನುವವರನ್ನು ಪ್ರಶ್ನಿಸಿದರೆ, ಆಹಾರವನ್ನು ಕೆಡಿಸಬಾರದು ಎಂಬ ಸದುದ್ದೇಶದಿಂದ ಇದನ್ನು ರೂಡಿಸಿಕೊಂಡಿದ್ದೇವೆ ಎಂಬ ಉತ್ತರವನ್ನುಸಿದ್ಧ ಮಾದರಿಯಲ್ಲಿ ನೀಡುತ್ತಾರೆ. ಆಹಾರ ಹಾಳು ಮಾಡುವುದು ಒಂದು ರೀತಿಯಲ್ಲಿ ಅಕ್ಷಮ್ಯ ಅಪರಾಧ. ಹಾಗಂತ ಬೇಡವಾದುದನ್ನು ಹೊಟ್ಟೆಗಿಳಿಸಿದರೆ ಕ್ರಮೇಣ ಬೊಜ್ಜು ದೇಹದಲ್ಲಿ ಶೇಖರಣೆಗೊಳ್ಳುವುದು. ಬಹಳಷ್ಟು ಮಹಿಳೆಯರು ತಂಗಳು ಆಹಾರದ ಬಿಸಿಗೆ ಬಲಿಯಾಗುತ್ತಾರೆ. ಮಾಡಿದ್ದನ್ನು ಕೆಡಿಸಲು ಮನಸ್ಸಾಗುತ್ತಿಲ್ಲ ಎನ್ನುತ್ತ ಒಲ್ಲದ ಮನಸ್ಸಿನಿಂದ ಉಳಿದಿದ್ದೆಲ್ಲವನ್ನೂ ನುಂಗುತ್ತಾರೆ. ಇಂಥ ಅನಾರೋಗ್ಯಕರ ಅಭ್ಯಾಸದಿಂದ ಆರೋಗ್ಯ ಕೆಡುವುದು ಖಚಿತ.
ಕಾದಿದೆ ಅಪಾಯ!
ಅಡುಗೆಯನ್ನು ಫ್ರಿಜ್‍ನಲ್ಲಿಟ್ಟು ಬಿಸಿ ಮಾಡಿ ತಿನ್ನುವುದರಿಂದ ತಾಜಾ ಅಡುಗೆಯಲ್ಲಿರುವಂಥ ಹೆಚ್ಚಿನ ಪೋಷಕಾಂಶಗಳು ದೊರೆಯುವುದಿಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ಪ್ರಮಾಣದಲ್ಲಿ ಪೋಷಕ ಪದಾರ್ಥಗಳು ಜೀವಸತ್ವಗಳು ಖನಿಜಗಳು ಇರುವ ಆಹಾರಗಳೂ ಕೆಲ ಮಟ್ಟಿಗೆ ಸತ್ವವನ್ನು ಕಳೆದುಕೊಳ್ಳುತ್ತವೆ. ಸತ್ವ ರಹಿತ ಆಹಾರ ಸೇವಿಸುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಫ್ರಿಜ್‍ನಲ್ಲಿ ಶೇಖರಿಸಿಟ್ಟ ಆಹಾರ ಸೇವಿಸುವುದರಿಂದ ಅನೇಕ ರೋಗಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೇವೆ. ಫ್ರಿಜ್‍ನಲ್ಲಿಟ್ಟ ಆಹಾರಕ್ಕೆ ಕೆಲವು ಸೂಕ್ಷ್ಮಾಣು ಜೀವಿಗಳು ಸೇರಿಕೊಳ್ಳುವ ಸಂಭವನೀಯತೆ ಇದೆ. ಆಹಾರ ಬಿಸಿ ಮಾಡಿದಾಗ ಸೂಕ್ಷ್ಮಾಣು ಜೀವಿಗಳು ನಾಶವಾಗಬಹುದು. ಆದರೆ ತಣ್ಣಗಾಗಿದ್ದ ಆಹಾರವನ್ನು ಬಿಸಿ ಮಾಡಿದ್ದರಿಂದ ನಮಗೆ ಅತಿ ಅವಶ್ಯಕವಾಗಿ ಬೇಕಿದ್ದ ಪೋಷಕಾಂಶಗಳು ಇಲ್ಲದಾಗುತ್ತವೆ.
ಇದರಿಂದ ಬರಿದಾದ ಹೊಟ್ಟೆಯನ್ನು ತುಂಬಿಸಿದಂತಾಗುತ್ತದೆ ವಿನಃ ಎಳ್ಳಷ್ಟೂ ಶಕ್ತಿ ದಕ್ಕುವುದಿಲ್ಲ. ರೆಫ್ರಿಜಿರೇಟರ್ ಇರುವುದು ಹಣ್ಣು ತರಕಾರಿಗಳು ಕೆಡದಂತೆ ತಾಜಾ ಆಗಿ ಇಡಲು. ಇಂದು ಮಾಡಿದ ಅಡುಗೆಯನ್ನು ಇಂದೇ ತಿನ್ನುವುದು ಉತ್ತಮ. ಬೇಕಾದಾಗ ತಾಜಾ ಅಡುಗೆ ಮಾಡಿ ಸೇವಿಸುವುದು ಆರೋಗ್ಯಕರ ಪ್ರವೃತ್ತಿ. ಇನ್ಮೇಲೆ ಫ್ರಿಜ್‍ನಲ್ಲಿಟ್ಟ ಅಡುಗೆ ತಿನ್ನುವ ಮುನ್ನ ಕೊಂಚ ಯೋಚಿಸಿ! ಇಂಥ ಅಭ್ಯಾಸ ಬೆಳೆಸಿಕೊಳ್ಳುವುದು ತಪ್ಪು ಎಂಬುದು ತಜ್ಞ ವೈಜ್ಞರ ಸಲಹೆಯೂ ಹೌದು. ಈ ಸಂಗತಿ ಅರಿವಾದ ತಕ್ಷಣ ಮನಸ್ಸನ್ನು ನಿಯಂತ್ರಿಸಿಕೊಂಡು ಉತ್ತಮ ಆಹಾರ ಸೇವನೆಯ ಪದ್ದತಿ ರೂಡಿಸಿಕೊಳ್ಳುವುದು ಒಳಿತು. ಆರೋಗ್ಯ ಭಾಗ್ಯ ನಮ್ಮದಾಗಿಸಿಕೊಂಡರೆ ಸಕಲ ಭಾಗ್ಯವೂ ನಮ್ಮದಾಗುವುದು.
ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ 9449234142