spot_img
spot_img

ಸಣ್ಣಾಟಗಳ ತವರು ಮನೆ ಬೆಳಗಾವಿ ಜಿಲ್ಲೆ – ಪ್ರಕಾಶ ಗಿರಿಮಲ್ಲನವರ

Must Read

- Advertisement -

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ನಡೆದ ೪ನೇ ವೆಬಿನಾರ್ ಉಪನ್ಯಾಸ ಕಾರ್ಯಕ್ರಮ ದಿನಾಂಕ ೨೫ ರಂದು ಸಾಯಂಕಾಲ ೪ ಗಂಟೆಗೆ ಜರುಗಿತು. ಬೆಳಗಾವಿ ಜಿಲ್ಲೆಯ ಸಣ್ಣಾಟ ಪರಂಪರೆ ವಿಷಯ ಕುರಿತು ಉಪನ್ಯಾಸ ನೀಡಿದ ಪ್ರಕಾಶ ಗಿರಿಮಲ್ಲನವರ ಅವರು ಸಣ್ಣಾಟಗಳ ತವರು ಮನೆ ಬೆಳಗಾವಿ ಜಿಲ್ಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.

‘ಸಣ್ಣಾಟ’ ಉತ್ತರ ಕರ್ನಾಟಕದಲ್ಲಿ ಪ್ರಚಾರದಲ್ಲಿರುವ ಒಂದು ಜನಪದ ರಂಗಪ್ರಕಾರವಾಗಿದೆ. ಸಣ್ಣಾಟವೆಂದರೆ ಸಣ್ಣದಾದ, ಸರಳವಾದ ಆಟ (ರಂಗಪ್ರದರ್ಶನ) ಎಂದು ಅರ್ಥ. ಸಣ್ಣಾಟದ ಬೆಳವಣಿಗೆಯಲ್ಲಿ ಎರಡು ಘಟ್ಟಗಳಿವೆ. ಆರಂಭದಿಂದ ಅಂದರೆ ೧೮೬೦ರಿಂದ ೧೯೨೦ರವರೆಗೆ ಪ್ರಥಮ ಘಟ್ಟ. ೧೯೨೦ರಿಂದೀಚೆಗೆ ದ್ವಿತೀಯ ಘಟ್ಟ. ಪ್ರಥಮ ಘಟ್ಟದ ಸಣ್ಣಾಟಗಳು ಗೀತನಾಟಕಗಳು. ಒಂದು ಶತಮಾನದ ಅವಧಿಯಲ್ಲಿ ಸುಮಾರು ಇನ್ನೂರು ಸಣ್ಣಾಟಗಳು ರಚನೆಗೊಂಡಿವೆ. ಇವುಗಳ ಕರ್ತೃಗಳು ಅಷ್ಟಿಷ್ಟು ಓದಿಕೊಂಡ ವಿದ್ಯಾವಂತರು. ಆರಂಭದ ಸಣ್ಣಾಟಗಳು ಸಾಮಾಜಿಕ ವಸ್ತುವನ್ನು ಬಳಸಿಕೊಂಡವು. ನಂತರದ ಕಾಲಾವಧಿಯಲ್ಲಿ ಕಥಾವಸ್ತುವಿನ ಆಯ್ಕೆಯಲ್ಲಿ ಧಾರಾಳತನ ವೈವಿಧ್ಯತೆಗಳು ಕಂಡು ಬಂದವು. ವೈವಿಧ್ಯತೆಯ ಅಪೇಕ್ಷೆ ಮತ್ತು ಹೊಸತನದ ಹುಮ್ಮಸ್ಸುಗಳ ಕಾರಣದಿಂದಾಗಿ ಸಣ್ಣಾಟದ ಕವಿಗಳು ಎಲ್ಲ ತರದ ಕತೆಗಳನ್ನು ಸ್ವೀಕರಿಸಿದರು.

ಸಣ್ಣಾಟ ಪರಂಪರೆಗೆ ನಾಂದಿ ಹಾಡಿದ ಪ್ರಥಮ ಘಟ್ಟದ ಅತ್ಯಂತ ಜನಪ್ರಿಯ ಕೃತಿಯೆಂದರೆ ‘ಸಂಗ್ಯಾಬಾಳ್ಯಾ’. ಸದ್ಯಕ್ಕೆ ಇದೇ ಪ್ರಥಮ ಸಣ್ಣಾಟವೆನಿಸಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ೧೮೬೦ರ ಸುಮಾರಿಗೆ ನಡೆದ ನೈಜಘಟನೆಯನ್ನಾಧರಿಸಿ ಇದು ರಚನೆಗೊಂಡಿದೆ. ಇದನ್ನು ರಚಿಸಿದವನು ಬೈಲಹೊಂಗಲಕ್ಕೆ ಸಮೀಪದಲ್ಲಿರುವ ಬೈಲವಾಡ ಗ್ರಾಮದ ರಾಯಪ್ಪ ಪತ್ತಾರ್ ಮಾಸ್ತರ್ ಎಂಬ ಕವಿ. ಸಂಗ್ಯಾಬಾಳ್ಯಾ ಇಬ್ಬರೂ ಪ್ರಾಣಸ್ನೇಹಿತರು. ಬಾಳ್ಯಾ ಅದೇ ಊರಿನ ಶ್ರೀಮಂತ ವ್ಯಾಪಾರಿ. ಅವನ ತರುಣ ಹೆಂಡತಿ ಗಂಗಿ ಅತ್ಯಂತ ಚೆಲುವೆ. ಹಾಗೂ ಗಂಡನಿಂದ ದಾಂಪತ್ಯ ಸುಖ ಕಾಣದ ಅತೃಪ್ತ ಗೃಹಿಣಿ. ಅವಳನ್ನು ಸಂಗ್ಯಾ ಒಲಿಸಿಕೊಳ್ಳುತ್ತಾನೆ. ಗಂಗಿ-ಸಂಗ್ಯಾರ ಅನೈತಿಕ ಸಂಬಂಧ ಊರ ತುಂಬ ಸುದ್ದಿಯಾದಾಗ ಕೋಪಗೊಂಡ ಬಾಳ್ಯಾ ಸಂಗ್ಯಾನನ್ನು ಕೊಲೆ ಮಾಡಿ ಸೇಡು ತೀರಿಸಿಕೊಳ್ಳುವನು. ಘಟನೆ ನಡೆದ ತಾಜಾ ಸಂದರ್ಭದಲ್ಲಿ ಸಂಗ್ಯಾಬಾಳ್ಯಾ ಸಣ್ಣಾಟ ರಚನೆಗೊಂಡದ್ದರಿಂದ ಜನರಿಗೆ ತುಂಬಾ ಆಕರ್ಷಕವೆನಿಸಿ ವ್ಯಾಪಕ ಪ್ರಚಾರ ಪಡೆದುಕೊಂಡಿತು. ಇದರಷ್ಟು ಪ್ರಚಾರಗೊಂಡ ಸಣ್ಣಾಟ ಮತ್ತೊಂದಿಲ್ಲ. ತನ್ನ ಭೌಗೋಳಿಕ ಗಡಿಯನ್ನು ದಾಟಿ ಕರ್ನಾಟಕದ ತುಂಬ ಹರಡಿಕೊಂಡು ಅಲ್ಲಲ್ಲಿಯ ಪ್ರಾದೇಶಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡು ಸಂಗ್ಯಾಬಾಳ್ಯಾ ಜನಪ್ರಿಯವಾಗಿದೆ.

- Advertisement -

ಪ್ರಥಮ ಘಟ್ಟದ ಸಣ್ಣಾಟಗಳಲ್ಲಿ ಸಂಗ್ಯಾಬಾಳ್ಯಾದ ನಂತರದ ಸ್ಥಾನ ರಾಧಾನಾಟಕ್ಕೆ ಸಲ್ಲುತ್ತದೆ. ಮಹಾರಾಷ್ಟ್ರದ ತಮಾಷಾದ ಪ್ರೇರಣೆಯಿಂದ ಹುಟ್ಟಿಕೊಂಡಿರುವ ಜನಪದ ನಾಟಕವಿದು.

ಬೆಳಗಾವಿ ಜಿಲ್ಲೆಯ ಕಾದ್ರೊಳ್ಳಿ ಗ್ರಾಮದ ನೀಲಕಂಠಪ್ಪ ಈ ಎರಡನೆಯ ಘಟ್ಟದ ಪ್ರವರ್ತಕ. ನೀಲಕಂಠಪ್ಪ ತನ್ನ ಹದಿಹರೆಯದಲ್ಲಿ ಒಂದು ನಾಟಕ ಕಂಪನಿ ಯಲ್ಲಿದ್ದ ನಾಟಕದ ಲಿಖಿತ ಸಂಭಾಷಣೆ-ಹಾಡುಗಳು ಅವನ ಮನಸೆಳೆದವು. ಹೀಗೆ ನಾಟಕದಿಂದ ಪ್ರೇರಣೆ ಪಡೆದ ನೀಲಕಂಠಪ್ಪನು ಚಲಾವಣೆಯಲ್ಲಿದ್ದ ಸಣ್ಣಾಟಕ್ಕೆ ನಾಟಕದ ಅಂಶಗಳನ್ನು ಸೇರಿಸಿ ಕಸಿ ಮಾಡಿ ಹೊಸ ಪ್ರಕಾರವೊಂದನ್ನು ಸೃಷ್ಟಿಸಿದ. ಲಿಖಿತ ಸಂಭಾಷಣೆಗಳು ಮತ್ತು ಶಿಷ್ಟಶೈಲಿಯನ್ನಾಧರಿಸಿ ಹಾಡಿನ ಧಾಟಿಗಳು ಇವು ಸೇರಿಸಲ್ಪಟ್ಟ ನಾಟಕದ ಅಂಶಗಳು. ಪ್ರಥಮ ಘಟ್ಟದ ಸಣ್ಣಾಟಗಳ ಅನಿರ್ಬಂಧಿತ ಆಶು ಸಂಭಾಷಣೆಗಳಿಗಿಂತ ಹೊಸತರದ ಲಿಖಿತ ಮತ್ತು ತರ್ಕಬದ್ಧ ಸಂಭಾಷಣೆಗಳು ಹಳ್ಳಿಗರಿಗೆ ಆಕರ್ಷಕವೆನಿಸಿದವು.

‘ಸಂಗ್ಯಾಬಾಳ್ಯಾ’, ‘ರಾಧಾನಾಟ’, ‘ಅಲ್ಲಮಪ್ರಭು’, ‘ನಿಜಗುಣ ಶಿವಯೋಗಿ’, ‘ಬಸವಂತ ಬಲವಂತ’ ‘ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ್’ ಮುಂತಾದವು ತಮ್ಮ ವೈಶಿಷ್ಟ್ಯ ಮತ್ತು ಆಕರ್ಷಣೆಯಿಂದಾಗಿ ಜನಪ್ರಿಯಗೊಂಡು ಸಣ್ಣಾಟ ಪರಂಪರೆಯನ್ನು ಸ್ಥಾಪಿಸಿದವು. ಇವುಗಳನ್ನು ಅನುಕರಿಸಿ ಸಣ್ಣಾಟಗಳು ಹುಟ್ಟಿಕೊಂಡವು. ಸಣ್ಣಾಟದ ಸ್ವಭಾವಕ್ಕೆ ಹೊಂದಲಾರದಂಥ ಐತಿಹಾಸಿಕ ಪ್ರಸಂಗಗಳೂ ಸಣ್ಣಾಟಗಳಾದವು. ‘ಕಬೀರದಾಸ’, ‘ಬಸವೇಶ್ವರ’ ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದಾಗಿದೆ. ಸಣ್ಣಾಟದ ರೂಪ (ಫರ‍್ಮ) ಎಷ್ಟೊಂದು ಮುಕ್ತ ಮತ್ತು ಹಗುರ ಎಂದರೆ, ‘ಗುಲೇಬಕಾವಲಿ’ ಕತೆಯನ್ನು, ‘ರುದ್ರಾಕ್ಷಿ ಮಹಿಮೆ’ಯಂಥ ಪಕ್ಕಾ ಧಾರ್ಮಿಕ ವಿಷಯವನ್ನು, ‘ಹರಿಶ್ಚಂದ್ರ’ದಂಥ ಪುರಾಣ ಕತೆಯನ್ನು ತನ್ನ ಆಕಾರಕ್ಕೆ ಅಳವಡಿಸಿಕೊಂಡಿರುವುದುAಟು. ವೈವಿಧ್ಯಮಯ ವಸ್ತುವನ್ನಾಧರಿಸಿ ನೂರಾರು ಸಣ್ಣಾಟಗಳು ರಚನೆಗೊಂಡಿವೆ.

- Advertisement -

ಇಂಥ ಅಪರೂಪದ ಸಣ್ಣಾಟಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಾಗತೀಕರಣದ ಪರಿಣಾಮವಾಗಿ ನಮ್ಮ ಸಂಸ್ಕೃತಿ ಮೌಲ್ಯಗಳೆಲ್ಲ ಅಧಃಪತನ ಹೊಂದುತ್ತಿರುವ ಈ ಕಾಲದಲ್ಲಿ ಸಣ್ಣಾಟ ಪರಂಪರೆಗೆ ಮತ್ತೆ ಪುನರುಜ್ಜೀವನ ನೀಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಮಾತನಾಡುತ್ತ- ಸಣ್ಣಾಟಗಳು ಬೆಳಗಾವಿ ಜಿಲ್ಲೆಯ ಕೊಡುಗೆಯಾಗಿರುವುದು ನಾವೆಲ್ಲ ಹೆಮ್ಮೆ ಮತ್ತು ಅಭಿಮಾನ ಪಡುವ ವಿಷಯವಾಗಿದೆ. ಆದ್ದರಿಂದ ಇಂಥ ಸಣ್ಣಾಟ ಪರಂಪರೆಯನ್ನು ಉಳಿಸಿ ಬೆಳೆಸುವ ಸಕಲ ಪ್ರಯತ್ನವನ್ನು ನಾವು ಪರಿಷತ್ತಿನ ಮೂಲಕ ಮಾಡುತ್ತೇವೆ ಎಂದು ಹೇಳಿದರು.

ಪ್ರಾರಂಭದಲ್ಲಿ ಶ್ರೀ ಶೇಖರ ಹಲಸಗಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶ್ರೀಮತಿ ಪ್ರಭಾವತಿ ಲದ್ದಿಮಠ ಅವರು ಪ್ರಾರ್ಥನೆ ಮಾಡಿದರು. ಖಾನಾಪೂರ ತಾಲೂಕು ಅಧ್ಯಕ್ಷರಾದ ಶ್ರೀ ವಿಜಯ ಬಡಿಗೇರ ಅವರು ಆಶಯ ನುಡಿಗಳನ್ನಾಡಿದರು. ರಾಜೇಂದ್ರ ವಾಲಿ ಅವರು ಸ್ವಾಗತ ಪರಿಚಯ ಮಾಡಿದರು. ಶ್ರೀಮತಿ ವಿದ್ಯಾ ಜನವಾಡೆ ವಂದನಾರ್ಪಣೆ ಮಾಡಿದರು. ಶ್ರೀಮತಿ ಜ್ಯೋತಿ ಬದಾಮಿ, ಶ್ರೀ ಎಂ.ವಾಯ್. ಮೆಣಸಿನಕಾಯಿ, ಡಾ. ಬಾಳಿ, ಶ್ರೀ ಬಸವರಾಜ ಗಾರ್ಗಿ ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group