spot_img
spot_img

ಸಾಲು ಸಾಲು ಸೋಲುಗಳ ನಡುವೆ ಗೆಲುವಿದೆ

Must Read

ನನಗೇನೋ ದೊಡ್ಡದನ್ನು ಸಾಧಿಸಬೇಕೆನ್ನುವ ಬಯಕೆ ಮನದಲ್ಲಿ ತುಂಬಿದೆ. ಆದರೆ ಸಾಧಿಸಲು ಆಗದೇ ನಡುವೆ ಮುಗ್ಗರಿಸಿ ಬಿದ್ದು ಬಿಟ್ಟರೆ ಎಲ್ಲರ ಮುಂದೆ ಅವಮಾನ ಸಹಿಸಲಾಗುವುದಿಲ್ಲ. ಸೋತು ಸುಣ್ಣವಾಗಿ ಸಮಾಜದಲ್ಲಿ ಮುಖ ಎತ್ತಿಕೊಂಡು ಅಡ್ಡಾಡಲು ಸಾಧ್ಯವೇ? ಅಲ್ಲದೇ ಸಾಲು ಸಾಲು ಸೋಲುಗಳು ನನ್ನನ್ನು ಹಣ್ಣು ಮಾಡುತ್ತವೆ. ಮತ್ತೆ ಎದ್ದು ನಿಲ್ಲಲು ಸಾಧ್ಯವೇ ಇಲ್ಲ. ಇದನ್ನೆಲ್ಲ ನೆನಪಿಸಿಕೊಂಡರೆ ಸುಮ್ಮನಿರುವುದೇ ಲೇಸು ಎಂದೆನಿಸಿಬಿಡುತ್ತದೆ. ಇದ್ದುದರಲ್ಲಿಯೇ ಇದ್ದಷ್ಟನ್ನೇ ನೆಚ್ಚಿಕೊಂಡು, ಹೇಗೋ ಒಂದಿದ್ದರೆ ಒಂದಿಲ್ಲದ ಹಾಗೆ ಜೀವನ ನಡೆಸಿದರಾಯಿತು ಎನ್ನುವ ಜನರೇ ಬಹಳ. ಸೋಲು ತನ್ನ ಖಾತೆಯಲ್ಲಿ ನಮೂದಾಗಲೇ ಬಾರದು ಎಂಬುದು ನಮ್ಮೆಲ್ಲರ ಹಟ. ಅದ್ಹೇಗೆ ಸಾಧ್ಯ? ಜೀವನದಲ್ಲಿ ಏರಿಳಿತದಂತೆ. ಪ್ರಯತ್ನದಲ್ಲಿ ಸೋಲು ಗೆಲುವು ಇದ್ದದ್ದೇ. ನಮ್ಮಲ್ಲಿ ಬಹುತೇಕರು ಸೋಲನ್ನು ಬಯಸದೇ ಪ್ರಯತ್ನಿಸುವುದನ್ನೇ ಬಿಟ್ಟು ಬಿಡುತ್ತಾರೆ. ನಿಜ ಹೇಳಬೇಕೆಂದರೆ, ‘ಪ್ರಯತ್ನಿಸಿ ಸೋತರೆ ಅದು ಸೋಲಲ್ಲ. ಪ್ರಯತ್ನಿಸದೇ ಇರುವುದೇ ಸೋಲು.’ ಸಾಲು ಸಾಲು ಸೋಲುಗಳ ನಡುವೆ ಯಶಸ್ವಿ ಬದುಕಿದೆ ಎಂಬುದನ್ನು ತಿಳಿಯದೇ ತಿಳಿಗೇಡಿತನದ ಬದುಕು ಸಾಗಿಸಿ, ಬದುಕಿನ ಕೊನೆಯಲ್ಲಿ ನಿಜಾಂಶ ತಿಳಿದು ಪಶ್ಚಾತ್ತಾಪ ಪಡುವವರನ್ನು ಕಂಡು ನಾವು ಪಾಠ ಕಲಿಯದಿದ್ದರೆ ನಮ್ಮಂಥ ಹುಚ್ಚರು ಯಾರೂ ಇಲ್ಲ. “ಎಲ್ಲ ತಪ್ಪುಗಳನ್ನು ನಾವೇ ಮಾಡಿ ತಿಳಿದುಕೊಳ್ಳುವಷ್ಟು ಜೀವನ ದೊಡ್ಡದಿಲ್ಲ.” ಹೀಗಾಗಿ ಇತರರ ತಪ್ಪುಗಳಿಂದ ಪಾಠ ಕಲಿತುಕೊಳ್ಳಬೇಕು. ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದರೆ ಸಾಧಾರಣ ವ್ಯಕ್ತಿಗಳಾಗಿದ್ದವರು ಅಸಾಧಾರಣ ವ್ಯಕ್ತಿತ್ವವನ್ನು ಬೆಳೆಸಿಕೊಂಡ ಸಾಧಕರ ಬಗೆಗೆ ಅಧ್ಯಯನ ಮಾಡುವ ಅಗತ್ಯತೆ ಇದೆ. ಸೋಲುಗಳ ನಡುವೆಯೇ ಯಶಸ್ಸಿನ ಬದುಕನ್ನು ರೂಪಿಸಿಕೊಳ್ಳಬೇಕಾದರೆ ದೊಡ್ಡ ಕನಸನ್ನು ಕಂಡರೆ ಸಾಲದು. ಅದನ್ನು ಸಾಕಾರಗೊಳಿಸಲು ಅವಕಾಶಗಳನ್ನು ಬಳಸಿಕೊಳ್ಳುವ ಕಲೆ ಸಿದ್ಧಿಸಿಕೊಳ್ಳಬೇಕು.

ಸೋಲು ಅಂತಿಮವಲ್ಲ:

ಇತ್ತೀಚೆಗೆ ಬದುಕು ಹಿಂದೆಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿ ಉದ್ಯೋಗ ಪಡೆದುಕೊಳ್ಳಲು ಹಂಬಲಿಸುವವರು, ಸೋಲಿನ ದವಡೆಗೆ ಸಿಕ್ಕು ಪ್ರಯತ್ನದ ಮೈದಾನ ಬಿಟ್ಟು ಓಡುತ್ತಾರೆ. ಕೆಲವರು ಅಂಕ ಗಳಿಸಿ ಸಂದರ್ಶನದಲ್ಲಿ ಸೋಲಿನ ಮುಖ ಕಂಡು ದಿಕ್ಕು ತಪ್ಪಿದವರಂತೆ ಆಡುತ್ತಾರೆ. ಬದುಕು ಮುಗಿದೇ ಹೋಯಿತು ಎಂದು ಘೋಷಿಸಿಬಿಡುತ್ತಾರೆ.’ನಾನಿನ್ನು ಜೀವನ ಪರ್ಯಂತ ನಿರುದ್ಯೋಗಿ.’ ಎಂದು ಉದ್ಯೋಗದ ಹುಡುಕಾಟಕ್ಕೆ ಎಳ್ಳು ನೀರು ಬಿಟ್ಟವರು ಸಹ ಕಾಣ ಸಿಗುತ್ತಾರೆ. ಇನ್ನಷ್ಟು ಮತ್ತಷ್ಟು ಮಗದಷ್ಟು ಗೆಲ್ಲಲು ಹೋರಾಟ ನಡೆಸಿದರೂ ಯಾರ ಕೈಗೂ ಸಿಗದೇ ತಪ್ಪಿಸಿಕೊಂಡು ಓಡುತ್ತಿದೆ.ಎಲ್ಲೋ ಒಂದಿಷ್ಟು ಜನರ  ಬಳಿ ಕೆಲ ಸಮಯ ನಿಂತು ಮತ್ತೆ ಕೈಗೆ ಸಿಗದೇ ಆಟವಾಡಿಸುತ್ತದೆ ಈ ಗೆಲುವು. ಎಂಬುದು ಹಲವು ಬಾರಿ ಸೋಲುಗಳನ್ನು ಮೈಗೆ ಅಂಟಿಸಿಕೊಂಡವರ ಅಭಿಪ್ರಾಯ. ಒಂದೇ ಒಂದು ಸೋಲು ಎದೆಯಾಳಕ್ಕೆ ತಲುಪಿ ನೋವುಣಿಸುವಷ್ಟು ತಾಕತ್ತು ಹೊಂದಿದೆ. ಹಾಗಿರುವಾಗ ಸೋಲಿನ ದಾರಿಯಲ್ಲೇ ನಡೆಯುತ್ತಿರುವ ನಮ್ಮಂಥವರ ಗತಿ ಅಧೋಗತಿ ಎಂದು ಕೊರಗದಿರಿ. ಮನದಲ್ಲಿ ಅದಮ್ಯ ಚೇತನ, ನಿರಂತರ ಪ್ರಯತ್ನ, ಪ್ರಾಮಾಣಿಕ ಹೋರಾಟಗಳೇ ಯಶಸ್ಸಿನ ಏಣಿಯ ಮೆಟ್ಟಿಲುಗಳು ಎಂಬುದು ಈಗಾಗಲೇ ಸಾಬೀತಾಗಿದೆ.

ಇಂದಿನ ಸೋಲು ನಾಳಿನ ಗೆಲುವು:

ಬೆವರು ಸುರಿಸಿದರೆ ಗೆಲುವು ಖಚಿತ ಎನ್ನುತ್ತಾರೆ. ನಾನು ಪಡುವ ಶ್ರಮಕ್ಕೆ ಗೆಲುವು ನನ್ನ ನೆರಳಿನಂತೆ ಬೆನ್ನತ್ತಿ ಬರಬೇಕು ಆದರೆ ಹಾಗಾಗುತ್ತಿಲ್ಲ ಎಂದು ಕೊರಗುವ ಜನರನ್ನು ಕಾಣುತ್ತೇವೆ. ಕೆಲವೊಮ್ಮೆ ಕೊರಗುವವರಲ್ಲಿ ನಾವೂ ಒಬ್ಬರಾಗಿರುತ್ತೇವೆ. ‘ಸೋಲು ಹಿನ್ನಡೆಯಲ್ಲ. ಶಾಶ್ವತ ವೈಫಲ್ಯವಲ್ಲ. ಸೋಲೆನ್ನುವುದು ತಾತ್ಕಾಲಿಕವಾಗಿ ಗೆಲುವು ಮುಂದೂಡಲ್ಪಟ್ಟ ಸ್ಥಿತಿ.’ ಎಂದು ತಿಳಿದರೆ ಸೋಲಿನಿಂದ ಕಹಿ ಅನುಭವ ಪಡೆಯುವುದರ ಬದಲು ಚೆಂದದ ಪಾಠ ಕಲಿಯಬಹುದು. ಸೋಲು ಕಲಿಸುವ ಪಾಠ ಇನ್ನಾವುದೂ ಕಲಿಸಲು ಸಾಧ್ಯವಿಲ್ಲ. ಸೋಲು ಜೀವನದ ಅವಿಭಾಜ್ಯ ಅಂಗ.ಹೊಸದನ್ನು ಕಲಿಯಲು ರಹದಾರಿ.  ಅದು ಇರುವಾಗಲೇ ಗೆಲುವಿನ ರುಚಿ ಹೆಚ್ಚುವುದು. ಗೆಲುವಿಗೆ ಮುನ್ನುಡಿ ಬರೆಯಬಹುದು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಥಾಮಸ್ ಅಲ್ವಾ ಎಡಿಸನ್. ಒಂದೆರಡು ಬಾರಿ ಸೋತವನಲ್ಲ. ಸಾವಿರ ಸಲ ಸೋತರೂ ಬೇಸರಿಸಿಕೊಳ್ಳಲಿಲ್ಲ. ಬದಲಿಗೆ ‘ನನಗೆ ಕೆಲಸ ಮಾಡಲು ಸಾವಿರ ದಾರಿಗಳು ಸಿಕ್ಕವು.’ ಎಂದು ಖುಷಿಪಟ್ಟ ಎಂಥ ಮನೋಭಾವವಲ್ಲವೇ?ಸೋಲಿನ ಕಠಿಣ ಪಾಠಗಳೇ ಯಶಸ್ಸಿನ ಮೈಲಿಗಲ್ಲುಗಳು ಎಂದು ಅರಿಯುವ  ಈ ರೀತಿಯ ಮನೋಭಾವವೇ ಆತನನ್ನು ‘ಸಂಶೋಧನೆಗಳ ಸರದಾರ’ನೆಂಬ ಪಟ್ಟಕ್ಕೇರಿಸಿತು. ಇಂಥ ಮನೋಭಾವ ರೂಢಿಸಿಕೊಂಡರೆ ಗೆಲುವು ತಾನಾಗಿಯೇ ಹತ್ತಿರ ಸುಳಿಯುತ್ತದೆ. ಸೋಲು ಏಕಾಯಿತು ಎಂದು ವಿಶ್ಲೇಷಿಸಿದರೆ ಆ ಸೋಲೇ ಯಶದ ಮೆಟ್ಟಿಲಾಗಿ ಪರಿವರ್ತನೆಯಾಗುತ್ತದೆ. ಡಿವಿಜಿ ಹೇಳಿದಂತೆ, ‘ಇಂದಿನ ಸೋಲು ನಾಳಿನ ಗೆಲುವು.’

ಸೋಲದೇ ಗೆಲ್ಲುವುದು ಅಸಾಧ್ಯ:

‘ಶಾಂತ ಸಮುದ್ರ ಉತ್ತಮ ನಾವಿಕನನನ್ನು ಸೃಷ್ಟಿಸಲು ಸಾಧ್ಯವಿಲ್ಲ. ಏರಿಳಿತಗಳಿಲ್ಲದ ರಸ್ತೆ  ಉತ್ತಮ ಚಾಲಕನನ್ನು ಸೃಷ್ಟಿಸಲಾಗದು.’ ಹಾಗೆಯೇ ಸೋಲುಗಳಿಲ್ಲದ ಗೆಲುವು ಚಾಂಪಿಯನ್‍ನನ್ನು, ಧೀರ ಸಾಧಕನನ್ನು ಹುಟ್ಟಿಸಲಾಗದು. ಸೋಲು ಎದುರಿಸುವ ಛಾತಿ ಹೆಚ್ಚಾದಷ್ಟು ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿಸುವ ಚಾಣಾಕ್ಷತೆ ಹೆಚ್ಚಾಗುತ್ತದೆ.ಸುಲಭವಾಗಿ ದಕ್ಕಿದ್ದು ಸುಖ ನೀಡುವುದಕ್ಕಿಂತ, ಹೋರಾಡಿ ವಶ ಪಡಿಸಿಕೊಂಡಿದ್ದು ಹೆಚ್ಚು ಸುಖ ನೀಡುತ್ತದೆ.  ಗೆಲುವಿನ ಒಂದೇ ಒಂದು ಮುಖ ನೋಡುವುದಕ್ಕೆ ಇಷ್ಟೆಲ್ಲ ಕಷ್ಟ ಪಡಬೇಕಾ? ಎಂಬ ನೋವಿನ ರಾಗವೂ ಕೇಳಿ ಬರುತ್ತದೆ. ಹೌದು ಸೋಲಿನ ನೋವುಂಡಾಗಲೇ ಗೆಲುವು ತನ್ನ ನಗುವಿನ ದರುಶನ ತೋರುವುದು. ವಾಷಿಂಗ್ಟನ್ ಇರ್ವಿನ್ ಹೇಳಿದಂತೆ, ‘ ಮಹಾನ್ ವಿದ್ವಾಂಸರಿಗೆ ಗುರಿ ಧ್ಯೇಯಗಳಿರುತ್ತವೆ. ಇತರರಿಗೆ ಬರೀ ಆಸೆ ಆಕಾಂಕ್ಷೆಗಳಿರುತ್ತವೆ.’ ಮುಂದೇನು ಮಾಡಬೇಕೆಂದು ತಿಳಿಯದೇ ದಿಕ್ಕು ತೋಚದಂತೆ ತಿರುಗದೇ ಹೆಚ್ಚು ಬುದ್ಧಿವಂತಿಕೆಯಿಂದ ಪ್ರಾರಂಭಿಸಿದರೆ ವಿಫಲತೆಯು ಮತ್ತೊಂದು ಅವಕಾಶವಾಗುವುದು.

ನಮ್ಮ ಹೆದರಿಕೆಗಳಿಗೆ ಸವಾಲೆಸೆದಾಗ ನಾವು ಅವುಗಳನ್ನು ಸೋಲಿಸುತ್ತೇವೆ. ‘ಸೋಲದೇ ಗೆಲ್ಲುವುದು ಅಸಾಧ್ಯ’ ಎಂಬುದು ರಷ್ಯನ್ ಗಾದೆ ಅದು ವಾಸ್ತವ ಕೂಡ.

ಬೆಂಕಿ ಇದ್ದ ಹಾಗೆ:

ಸೋಲೆಂಬುದು ಸಹಜ.ಆದರೆ ವಾಸ್ತವದಲ್ಲಿ ‘ನಾವು ಸೋಲು ಒಪ್ಪಿಕೊಳ್ಳುವವರೆಗೆ ಸೋಲಲಾರೆವು.’ ವೈಫಲ್ಯವೇ ಗೆಲುವು ನಾವು ಅದರಿಂದ ಕಲಿಯಲು ಸಾಧ್ಯವಾದರೆ. ನಮ್ಮ ಇತಿ ಮಿತಿಗಳನ್ನು ಅತಿಯಾಗಿ ತಿಳಿದು ವರ್ತಿಸಬಾರದು.ವಿಲ್ಫಾ ರುಡಾಲ್ಫ ಪಾಶ್ರ್ವವಾಯುವಿನಿಂದ ಬಾಧಿತಳಾಗಿದ್ದಳು. ಅದಮ್ಯ ಹಂಬಲ ಮತ್ತು ಉತ್ಕಟ ಕ್ರಿಯಾ ಶಕ್ತಿಯು ಆಕೆಯನ್ನು ಬಾನೆತ್ತರಕ್ಕೆ ಬೆಳಗುವಂತೆ ಮಾಡಿತು. ಆಕೆ 1960ರ ಓಲಂಪಿಕ್ಸ್ ನಲ್ಲಿ ವೇಗದ ಓಟಕ್ಕೆ 3 ಚಿನ್ನದ ಪದಕ ಪಡೆದಳು. ಸೋಲು ಗೆಲುವಿಗಿಂತ ಶಕ್ತಿಯುತವಾದುದು. ಸೋಲಿನಿಂದ ಮತ್ತೆ ಎದ್ದು ನಿಂತು ಗೆಲುವಿಗೆ ಯೋಜನೆ ಹಾಕಿ ಅದರಂತೆ ನಡೆಯದಿದ್ದರೆ ಮತ್ತೆ ಸೋಲು ಖಚಿತ. ಸೋಲು ಬೆಂಕಿ ಇದ್ದ ಹಾಗೆ ಅದಕ್ಕೆ ಅಶಿಸ್ತು,ಅಧೈರ್ಯ, ಸೋಮಾರಿತನ, ನಿರ್ಲಕ್ಷ್ಯಗಳ ಉರುವಲು ಹಾಕಿದರೆ ಮತ್ತೆ ಹೆಚ್ಚೆಚ್ಚು ಉರಿಯುತ್ತದೆ. ಗೆಲುವಿನ ಯೋಜನೆಯನ್ನು ಕಾರ್ಯಾನುಷ್ಠಾನಕ್ಕೆ ತರದಿದ್ದರೆ ಸೋಲಿನ ಗಡಿ ದಾಟಲಾರೆವು. ಸೋಲು ಗೆಲುವಿನ ಕಡೆಗೆ ಮೊದಲ ಅವಶ್ಯಕ ಹೆಜ್ಜೆ. ಉದುರಿ ಹೋದ ಹೂಗಳೂ ಪರಿಮಳ ಸೂಸುವವು ಹಾಗೇ ಇಂದಿನ ಸೋಲು ನಾಳಿನ ಗೆಲುವಿನ ನಗೆ ಬೀರಿಸುವುದು. ಗುರಿ ಯಾವುದೇ ಇರಲಿ. ಅಡ್ಡ ದಾರಿಗಳಲ್ಲಿ ಸಾಗದಿದ್ದರೆ ಸಾಕು. ಅಗಾಧವಾದ ಶ್ರದ್ಧೆ,ಆತ್ಮವಿಶ್ವಾಸ, ಸಮರ್ಪಣಾ ಭಾವದ ಅಪಾರ ಶ್ರಮ., ಯಶಸ್ಸಿನ ಏಣಿಯ ಕೊನೆಯ ಮೆಟ್ಟಿಲವರೆಗೂ ಕರೆದೊಯ್ಯುತ್ತದೆ.  ಗೆಲುವಿನ ಪರ್ವತ ನಮ್ಮ ಪಾದದಡಿ ಇರುತ್ತದೆ.ಆಗ  ನಾವೇರಿದ ಎತ್ತರ ಕಂಡು ಪುಳಕಿತರಾಗುವ ಸರದಿ ನಮ್ಮದಾಗುವುದು.


ಜಯಶ್ರೀ ಅಬ್ಬಿಗೇರಿ, ಬೆಳಗಾವಿ
9449234142

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!