ಸಿಂದಗಿ: ಕಳೆದ ಬಾರಿಗಿಂತಲೂ ಮುಂಗಾರು, ಹಿಂಗಾರು ಮಳೆ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಹವಾಮಾನದ ಮುನ್ಸೂಚನೆಯಿದ್ದು ಕಾರಣ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳ ನಿರ್ದೇಶನವಿದ್ದು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ತಹಶೀಲ್ದಾರ ಸಂಜೀವಕುಮಾರ ದಾಸರ ಅವರು ಸೂಚಿಸಿದರು.
ತಾಲೂಕಿನ ದೇವಣಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2021 ನೇ ಸಾಲಿನ ಮುಂಗಾರು ಮಳೆಯಿಂದ ಉಂಟಾಗುವ ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ಯೋಜನೆ ಸದಸ್ಯರೊಂದಿಗೆ ಭೀಮಾ ನದಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುನ್ನೆಚ್ಚರಿಕೆ ಕುರಿತು ಸಾರ್ವಜನಿಕರ ತಿಳಿವಳಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವಿಜಯಪುರ ರವರ ನಿರ್ದೇಶನದಂತೆ, ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿಗಳ ತಂಡ ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ಬೋಟ್ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಸಲಕರಣೆ ಸುರಕ್ಷತೆಯ ಕುರಿತು. ಪ್ರವಾಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಆರ್.ಎಸ್. ಇಂಗಳೆ, ತಾಪಂ ಸದಸ್ಯ ಶಂಕರಲಿಂಗ ಕಡ್ಲೇವಾಡ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ರಾಕೇಶ ಜೈನಾಪುರ, ಕಂದಾಯ ನಿರೀಕ್ಷಕ ಎಂ.ಎ.ಅತ್ತಾರ, ಅಗ್ನಿಶಾಮಕ ಜಿಲ್ಲಾಧಿಕಾರಿ ರಂಗನಾಥ ರಾಠೋಡ, ಠಾಣಾಧಿಕಾರಿಗಳಾದ ಪ್ರಕಾಶ ಪವಾರ, ಶಿವಕುಮಾರ ಬಾಗೇವಾಡಿ, ಗ್ರಾಮ ಲೆಕ್ಕಿಗ ಶ್ರೀನಿವಾಸ ಕಾಂಬಳೆ, ಜಗದೀಶ ಶಹಾಪುರ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ