ಪಿ ಎಸ್ ಐ ಅವಿನಾಶ್ ಹುಟ್ಟೂರು ದಾಸರವಾಡಿ ಗ್ರಾಮದಲ್ಲಿ ಮೌನ.
ಬೀದರ – ಆಂಧ್ರ ಪ್ರದೇಶದ ಕೊತ್ತಕೊತ್ತ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ ಮೂಲದ ಬೆಂಗಳೂರು ಶಿವಾಜಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ರವಿವಾರ ಬೆಳಿಗ್ಗೆ ನಡೆದಿದ್ದು ಬಸವಕಲ್ಯಾಣ ತಾಲೂಕಿನ ದಾಸರವಾಡಿಯ ಅವಿನಾಶ ಯಾದವ (29) ಮೃತಪಟ್ಟಿದ್ದು ದಾಸರವಾಡಿಯಲ್ಲಿ ಮೌನ ಮನೆ ಮಾಡಿದೆ.
2017 ರ ಪಿಎಸ್ಐ ಬ್ಯಾಚ್ ನ ಅವಿನಾಶ ಯುನಿವರ್ಸಿಟಿ ಮತ್ತು ಪೀಣ್ಯ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿ ಇತ್ತೀಚಿಗಷ್ಟೇ ಶಿವಾಜಿನಗರ ಠಾಣೆಗೆ ವರ್ಗವಾಗಿದ್ದರು.
ಗಾಂಜಾ ಗ್ಯಾಂಗ್ ಹಿಡಿಯಲು ಎಂಟು ಮಂದಿ ಸಿಬ್ಬಂದಿಗಳು ಕಾರಿನಲ್ಲಿ ಎರಡು ತಂಡಗಳಾಗಿ ಬೆಂಗಳೂರಿನಿಂದ ಆಂಧ್ರದ ಕಡೆಗೆ ಹೋಗುವಾಗ ಕೊತ್ತಕೊತ್ತ ಗ್ರಾಮದ ಬಳಿ ನಸುಕಿನ ಜಾವ 3 ಗಂಟೆ ಸುಮಾರಿಗೆ ಒಂದು ಕಾರು ಅಪಘಾತವಾಗಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಪಿಎಸ್ಐ ಅವಿನಾಶ ಸೇರಿ ಮೂವರು ಜೀವ ಕಳೆದುಕೊಂಡಿದ್ದಾರೆ.
ಅವಿನಾಶ್ ಅವರ ತಂದೆ ಕಾಶಿನಾಥ ಯಾದವ ಸಹ ಪಿಎಸ್ಐ ಆಗಿ ಕಳೆದ 31ಕ್ಕೆ ನಿವೃತ್ತಿ ಹೊಂದಿದ್ದರು. ಅವಿನಾಶ ಸಾವು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದ್ದು, ಆಕ್ರಂದನ ಹೆಚ್ಚಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಅಂತ್ಯಕ್ರಿಯೆ ಸ್ವ ಗ್ರಾಮ ಬಸವಕಲ್ಯಾಣ ತಾಲೂಕಿನ ದಾಸರವಾಡಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪಿಎಸ್ ಐ ಅವಿನಾಶ ಜಾಧವ ಮೃತದೇಹವು ರಾತ್ರಿಯವರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವರದಿ: ನಂದಕುಮಾರ ಕರಂಜೆ, ಬೀದರ