ಬೀದರ: ಗಡಿ ಬೀದರ್ ಜಿಲ್ಲೆಯಲ್ಲಿ ಒಂದು ಕಡೆ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿ ಅಧಿಕಾರಿ ವಿರುದ್ಧ ಘಾಮ ತಾಂಡಾದ ಹೆಣ್ಣು ಮಕ್ಕಳು ಖಾಲಿ ಕೂಡ ಹಿಡಿದು ಪ್ರತಿಭಟನೆ ನಡೆಸಿದ್ದರೆ ಇನ್ನೊಂದು ಕಡೆ ಕಲುಷಿತ ನೀರು ಕುಡಿದು ಒಟ್ಟು ಹದಿನೆಂಟು ಮಂದಿ ಅಸ್ವಸ್ಥರಾಗಿರುವ ಘಟನೆ ಜರುಗಿದ್ದು ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ.
ಔರಾದ ತಾಲೂಕಿನ ಎಕಂಬಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಕ್ಯಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಲಭ್ಯವಿರುವ ಜೀವಜಲ ಕಲುಷಿತವಾಗಿದ್ದು ಅದನ್ನೇ ಸೇವಿಸಿದ ಪರಿಣಾಮ ವಾಟರ್ ಮ್ಯಾನ್, 6 ಮಕ್ಕಳು ಸೇರಿದಂತೆ ಒಟ್ಟು 18 ಜನ ಅಸ್ವಸ್ಥರಾದರು.
ಔರಾದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಎಲ್ಲರನ್ನೂ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.
ಔರಾದ್ ತಾಲೂಕಿನ ಎಕಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕ್ಯಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡ ಕಾರಣ ತೆರೆದ ಬಾವಿಯ ನೀರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸರಬರಾಜು ಮಾಡಲಾಗಿತ್ತು. ಈ ನೀರನ್ನು ಸೇವಿಸಿದ ಗ್ರಾಮಸ್ಥರು ಅಮೃತಾ, ಸಾಕ್ಷಿ, ಜಯಶಂಕರ್, ದಿವ್ಯಾ, ಗಾಯಿತ್ರಿ ಹಾಗೂ ಕಾರ್ತಿಕ ಎಂಬ ಆರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಅವರಿಗೆ ವಾಂತಿ ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಎಲ್ಲರನ್ನು ಔರಾದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚರಂಡಿಯ ಮೇಲೆ ಕುಡಿಯುವ ನೀರಿನ ಬಾವಿ ಇದ್ದು, ಕಲುಷಿತಗೊಂಡ ನೀರು ಕುಡಿದ ಕಾರಣ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಇನ್ನೂ ಗ್ರಾಮದಲ್ಲಿ ಹಲವರಿಗೆ ವಾಂತಿ ಭೇದಿ ಶುರುವಾಗಿದೆ, ಗ್ರಾಮಕ್ಕೆ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು ಅಸ್ವಸ್ಥರಾಗಿದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ