ಬೀದರ – ಗಡಿ ಜಿಲ್ಲೆ ಬೀದರ್ ನ ಕೆಲವು ಕ್ಷೇತ್ರದಲ್ಲಿ ಮಾತ್ರ ವರುಣನ ಆರ್ಭಟ ಆರಂ.ಭವಾಗಿದ್ದು ನಿನ್ನೆ ಸಂಜೆಯಿಂದ ಭಾರೀ ಮಳೆ ಸುರಿಯುತ್ತಿದೆ
ಆದರೆ ಇದೇ ಜಿಲ್ಲೆಯ ಇನ್ನೊಂದು ಕಡೆ ಸಕಾಲಕ್ಕೆ ಮಳೆ ಬೀಳದ ಕಾರಣ ನಾಗರಿಕರು ಗೊಂಬೆಗಳ ಮದುವೆ ಮಾಡಿದ್ದಾರೆ.
ಬೀದರ್, ಔರಾದ್, ಭಾಲ್ಕಿ ಸೇರಿದಂತೆ ಹಲವೆಡೆ ಮಳೆರಾಯ ಆರ್ಭಟ ತೋರಿದ್ದು ಹಲವೆಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಉಕ್ಕಿ ಹರಿಯುತ್ತಿರುವ ನದಿ, ಹಳ್ಳ- ಕೊಳ್ಳಗಳು, ರೈತರ ಜಮೀನುಗಳಿಗೆ ನುಗ್ಗಿದ ನೀರು….ಹೀಗಾಗಿ ಮಳೆರಾಯ ತನ್ನ ತಾಂಡವ ತೋರಿಸಿದ್ದಾನೆ.
ಆದರೆ ಚಿಟ್ಟಗುಪ್ಪಾ ಕ್ಷೇತ್ರದಲ್ಲಿ ಮಳೆ ಇಲ್ಲದೇ ರೈತರು ಗಂಡು ಹೆಣ್ಣು ಗೊಂಬೆಗಳ ಮದುವೆಗೆ ಮೊರೆ ಹೋಗಿದ್ದಾರೆ.
ಮುಂಗಾರು ಮಳೆ ಪ್ರಾರಂಭದಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಭಜನೆ, ಸಪ್ತಾಹ ಮಾಡುವುದು ಸಹಜ ಆದರೆ ಮೀನಕೇರಾ ಗ್ರಾಮದ ಹಿರಿಯರು ಮಹಿಳೆಯರು ಸೇರಿ ಮಳೆಗಾಗಿ ಗಂಡು ಹೆಣ್ಣು ಗೊಂಬೆ ಜೋಡಿಗಳ ಮದುವೆ ಮಾಡಿ ಸಂಭ್ರಮಿಸಿರುವುದು ನೋಡುಗರನ್ನು ಆಕರ್ಷಿಸುತ್ತಿದೆ.
ಹೌದು ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ತಾಲ್ಲೂಕಿನ ಮೀನಕೇರಾ ಗ್ರಾಮದಲ್ಲಿ ಉತ್ತಮ ಮಳೆಯಾಗಲೆಂದು ಗ್ರಾಮದ ಜನರು ಸೇರಿ ವಿಜೃಂಭಣೆಯಿಂದ ಗೊಂಬೆಗಳ ಮದುವೆ ಮಾಡಿದ್ದಾರೆ.
ಈ ಗ್ರಾಮದಲ್ಲಿ ಮಳೆಗಾಗಿ ಮದುವೆಯ ಸಡಗರವಿತ್ತು, ಮದುವೆಯ ಸಂದರ್ಭದಲ್ಲಿ ಮಾಡಬೇಕಾದ ಎಲ್ಲ ಕೈಂಕರ್ಯಗಳು ನಡೆಯುತ್ತಿದ್ದವು. ಗ್ರಾಮದ ಎಲ್ಲರೂ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರು. ಗೊಂಬೆಗಳ ಮದುವೆ ಮಾಡಿ ಜನರು ಮಳೆರಾಯನ ಕೃಪೆಗಾಗಿ ಪ್ರಾರ್ಥನೆ ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ