ಕಂಪ್ಯೂಟರ್ ಅಂಗಡಿಗೆ ತಹಸೀಲ್ದಾರ್ ದಾಮಾ ಭೇಟಿ
ಬೀದರ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದ ಗ್ರಾಮ ಒನ್ ಕೇಂದ್ರವೊಂದರ ಮೇಲೆ ದಾಳಿ ಮಾಡಿದ ಬೀದರನ ಹುಮನಾಬಾದ ತಹಶೀಲ್ದಾರರು ಕೇಂದ್ರದ ಲಾಗಿನ್ ಐಡಿ ರದ್ದು ಮಾಡಿದ ಪ್ರಸಂಗ ನಡೆಯಿತು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಜುಲೈ 19 ರಿಂದ ಆರಂಭವಾಗಿದ್ದು, ಯೋಜನೆಯ ಅರ್ಹ ಫಲಾನುಭವಿಗಳು ನೋಂದಣಿಗೆ ಗುರುತಿಸಲ್ಪಟ್ಟಿರುವ ಗ್ರಾಮ ಒನ್/ಬೆಂಗಳೂರು ಒನ್/ ಕರ್ನಾಟಕ ಒನ್/ಬಾಪೂಜಿ ಸೇವಾ ಕೇಂದ್ರ/ನಗರ ಸ್ಥಳೀಯ ಆಡಳಿತ ಕಚೇರಿಯ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸ್ವೀಕರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿತ್ತು.
ಆದರೆ ಬೀದರ್ ನ ಕೆಲವು ಕಂಪ್ಯೂಟರ್ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹುಮನಾಬಾದ ತಹಸೀಲ್ದಾರ್ ರವೀಂದ್ರ ದಾಮಾ ಚಿಟಗುಪ್ಪಾ ಗ್ರಾಮದ ಕಂಪ್ಯೂಟರ್ ಅಂಗಡಿಯೊಂದಕ್ಕೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕಂಪ್ಯೂಟರ್ ಅಂಗಡಿಯವನು ಗ್ರಾಮ ಒನ್ ಶಾಖೆಯವರ ಲಾಗಿನ್ ಐ ಡಿ ಪಡೆದು ಅರ್ಜಿ ಸಲ್ಲಿಕೆ ಮಾಡಿ ಒಂದು ಅರ್ಜಿಗೆ 100ರೂ. ಹಣವನ್ನು ಪಡೆದುಕೊಳ್ಳುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಿದ ಕಂಪ್ಯೂಟರ್ ಆಪರೇಟರ್ ನನ್ನು ತರಾಟೆಗೆ ತೆಗೆದುಗೊಂಡು ಮುಂದೆ ಈ ರೀತಿ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದರಲ್ಲದೆ ಇದು ಸೇರಿದಂತೆ ಕಾನೂನಿನ ವಿರುದ್ದವಾಗಿ ಲಾಗಿನ್ ನೀಡಿದ ಬೆಳಕೇರಾ, ನಂದಗಾಂವ,ಹಳ್ಳಿಖೇಡ (ಕೆ) ಗ್ರಾಮ ಒನ್ ಶಾಖೆಯ ಲಾಗಿನ್ ಐಡಿ ರದ್ದು ಪಡಿಸಲಾಗಿದೆ ಎಂದು ತಹಸೀಲ್ದಾರ್ ರವೀಂದ್ರ ದಾಮಾ ತಿಳಿಸಿದರು.
ಇದು ಒಂದೇ ಪಟ್ಟಣದಲ್ಲಿ ಅಲ್ಲದೆ ಇಡೀ ಬೀದರ್ ಜಿಲ್ಲೆಯಾದ್ಯಂತ ಕಂಪ್ಯೂಟರ್ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಹಣವನ್ನು ವಸೂಲಿ ಮಾಡುತ್ತಿರುವುದು ಕಂಡುಬರುತ್ತದೆ. ಆದರೆ ಚಿಟಗುಪ್ಪ ತಾಲೂಕಿನ ತಹಶಿಲ್ದಾರರ ಒಬ್ಬರು ಮಾತ್ರ ಕೆಂದ್ರದ ಮೇಲೆ ದಾಳಿ ಮಾಡಿದ್ದರು
ಜನಹಿತಕ್ಕಾಗಿ ಕೈಗೊಳ್ಳಲಾದ ಈ ಯೋಜನೆಯನ್ನು ಯಾರೂ ದುರುಪಯೋಗ ಮಾಡಿಕೊಳ್ಳಬಾರದು. ಇನ್ನು ಮುಂದೆ ಯಾರಾದರೂ ದುಡ್ಡು ವಸೂಲಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶಿಲ್ದಾರ ದಾಮಾ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ