ಎರಡು ಎಕರೆ ಜಮೀನಿನಲ್ಲಿ ಇದ್ದ ನುಗ್ಗೆಕಾಯಿ ನೆಲಸಮ.
ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಸತತವಾಗಿ ಎರಡು ದಿವಸ ದಿಂದ ಅಕಾಲಿಕ ಮಳೆ ಬೀಳುತ್ತಿದ್ದು ಇದರಿಂದಾಗಿ ಹಲವೆಡೆ ಭಾರಿ ಅವಾಂತರ ಸೃಷ್ಟಿಸಿದೆ. ಬಯಲು ಸೀಮೆ ಭಾಗಗಳಲ್ಲಿ ಬೀದರ್ ಜಿಲ್ಲೆಯ ಹಲವೆಡೆ ಸುರಿದ ಮಳೆ ಅನಾಹುತಗಳನ್ನು ಸೃಷ್ಟಿಸಿದೆ. ಭಾಲ್ಕಿ ತಾಲೂಕಿನ ಕೂಡ್ಲಿ ಗ್ರಾಮದಲ್ಲಿ ಮಳೆಗೆ 8,000ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಗಾಳಿ, ಮಳೆಗೆ ಶೆಡ್ ಕುಸಿದು ಬಿದ್ದು ಕೋಳಿಗಳ ಮಾರಣಹೋಮವಾಗಿದೆ.
ಶುಕ್ರವಾರ ರಾತ್ರಿ ಯಿಂದ ಸುರಿದ ಮಳೆಯಿಂದಾಗಿ ಮದನರಾವ್ ಪಾಟೀಲ್ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ಶೆಡ್ ಕುಸಿದು ಬಿದ್ದು 8,000ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಸಾಲ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದ ಮದನರಾವ್ ಕಂಗಾಲಾಗಿದ್ದಾರೆ.
ಇನ್ನು ಭಾಲ್ಕಿ ತಾಲೂಕಿನಲ್ಲೇ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ, ಮನೆಗಳು ಕುಸಿದಿವೆ. ಕೂಡ್ಲಿ, ನಾಗರಾಳ, ನಿಟ್ಟೂರು ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಭಾರಿ ಗಾಳಿ, ಮಳೆಗೆ ಬೃಹತ್ ಗಾತ್ರದ ಮರಗಳು ಧರೆಗುರಳಿವೆ.
ಇನ್ನು ಬೀದರ ತಾಲ್ಲೂಕಿನ ಸುಲ್ತಾನಪುರ ಗ್ರಾಮದಲ್ಲಿ ರೈತ ಬೆಳೆದ ನುಗ್ಗೆಕಾಯಿ ಮರಗಳು ಸಂಪೂರ್ಣ ನೆಲಕಚ್ಚಿವೆ.ರೈತ ನಾಗೇಂದ್ರ ಪಾಟೀಲ ಅವರ ಹೊಲದಲ್ಲಿ 2 ಎಕರೆ ಜಮೀನಿನಲ್ಲಿ ನುಗ್ಗೆಕಾಯಿ ಗಿಡ ಬೆಳೆದಿದ್ದು ರೈತ ಸುಮಾರು 80 ಲಕ್ಷ ರೂಪಾಯಿ ಖರ್ಚು ಮಾಡಿದ್ದರೆನ್ನಲಾಗಿದೆ ಇನ್ನೂ ಫಸಲು ಕೈಗೆ ಸೇರುವ ಮುನ್ನವೇ ಮಳೆರಾಯನ ಅವಾಂತರದಿಂದಾಗಿ ಸಂಪೂರ್ಣ ನೆಲಸಮವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇದೇ ರೀತಿ ಭಾರೀ ಮಳೆ ಇನ್ನೂ ಅನೇಕ ಕಡೆ ಅನಾಹುತ ಮಾಡಿದ್ದು ಜಿಲ್ಲೆಯಾದ್ಯಂತ ರೈತ ಸಮೂಹ ಕಂಗಾಲಾಗಿದೆ. ಚುನಾವಣೆಯಲ್ಲಿ ಬಿಸಿಯಾಗಿರುವ ಸರ್ಕಾರ ಕಣ್ಣು ತೆರೆಯಬೇಕಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ