spot_img
spot_img

ಬೀದರ ವಾಟರ್ ಟ್ರಬಲ್; ನೀರಿಗಾಗಿ ಪ್ರಯಾಣಿಕರ ಪರದಾಟ

Must Read

ಸಾರಿಗೆ ಅಧಿಕಾರಿಗಳ ಹೊಣೆಗೇಡಿತನದಿಂದ ಸ್ಥಗಿತಗೊಂಡಿವೆ ಶುದ್ಧ ನೀರಿನ ಘಟಕಗಳು

ಬೀದರ – ಸಾರಿಗೆ ಅಧಿಕಾರಿಗಳ ಮಹಾ ನಿರ್ಲಕ್ಷ್ಯ ಹಾಗೂ ಹೊಣೆಗೇಡಿತನದಿಂದಾಗಿ ಇಂದು ಬಸ್ ಪ್ರಯಾಣಿಕರು ನೀರಿಗಾಗಿ ಹಪಹಪಿಸುವಂತೆ ಆಗಿದ್ದು ಬಡ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಬಸ್ ನಿಲ್ದಾಣಗಳ ಈ ಅವ್ಯವಸ್ಥೆ ಜಿಲ್ಲಾ ಕೇಂದ್ರ ಬಸ್ ನಿಲ್ದಾಣಗಳಲ್ಲೂ ಕಾಣಿಸಿಕೊಂಡಿದ್ದು ಪ್ರಯಾಣಿಕರು ಹನಿ ನೀರಿಗೆ ಹಾಹಾಕಾರ ಪಡುವಂತಾಗಿದೆ ಎಂದರೆ ನೀವು ನಂಬಲೇಬೇಕು.

ಜಿಲ್ಲೆಯಾದ್ಯಂತ ಬಿಸಿಲಿನ ತಾಪ ಜೋರಾಗಿದ್ದು ಕುಗ್ರಾಮದಿಂದ ಬಂದ ಬಡ ಪ್ರಯಾಣಿಕರು ನೀರಿಗಾಗಿ 20 ರಿಂದ 30 ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಸಾರಿಗೆ ಇಲಾಖೆಯ ಅಧಿಕಾರಿಗಳ ಮಹಾ ನಿರ್ಲಕ್ಷ್ಯ ಇನ್ನೊಂದು ಕಡೆ ಸರ್ಕಾರದ ಹೊಣೆಗೇಡಿತನದಿಂದಾಗಿ ಬಸ್ ಪ್ರಯಾಣಿಕರು ಹನಿ ನೀರಿಗಾಗಿ ಪರದಾಡುತ್ತಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತಿವೆ.

ಬಸ್ ನಿಲ್ದಾಣದಲ್ಲಿ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕದ ಪರಿಸ್ಥಿತಿ ಅಧೋಗತಿಯಾಗಿದ್ದು ಸಾರಿಗೆ ಇಲಾಖೆಯ ಕಾರ್ಯವೈಖರಿಯನ್ನು ಅಣಕಿಸುವಂತಿದೆ.

ಹೌದು ಸಾರಿಗೆ ಇಲಾಖೆಯ ಅಧಿಕಾರಿಗಳ ಮಹಾ ನಿರ್ಲಕ್ಷ್ಯಕ್ಕೆ ಇಂದು ಲಕ್ಷಾಂತರ ರೂ.ಗಳ ಅನುದಾನದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಸ್ಥಗಿತಗೊಂಡಿದ್ದು ಧೂಳು, ಜೇಡರ ಬಲೆಯಿಂದ ತುಂಬಿಕೊಂಡಿದೆ. ಇತ್ತ ಬೇಸಿಗೆಯ ಬೇಗೆಯಲ್ಲಿ ಬೇಯುತ್ತಿರುವ ಪ್ರಯಾಣಿಕರು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಸಿಗದೆ ಅನಿವಾರ್ಯವಾಗಿ ಬಾಟಲಿ ನೀರಿನ ಮೊರೆ ಹೋಗುವಂತಾಗಿದೆ. ಇದರಿಂದ ಬಡವರ ಜೇಬಿಗೆ ಕತ್ತರಿ ಬಿದ್ದು ಬಂಡವಾಳಶಾಹಿಗಳು ಮಾತ್ರ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಹಾಳು ಬಿದ್ದಿದ್ದರು ಸಾರಿಗೆ ಇಲಾಖೆಯ ಅಧಿಕಾರಿಗಳು ದುರಸ್ತಿಗೆ ಪ್ರಯತ್ನ ಮಾಡುವುದಿರಲಿ ಈ ಕಡೆ ಕಣ್ಣೆತ್ತಿ ಕೂಡಾ ನೋಡಿಲ್ಲ. ಲಕ್ಷಾಂತರ ರೂ. ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದರೂ ನಮಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳ ಮಹಾ ನಿರ್ಲಕ್ಷ್ಯಕ್ಕೆ ಇಂದು ನಮ್ಮ ಜೇಬಿಗೆ ಕತ್ತರಿ ಹಾಕಿಕೊಂಡು ನೀರು ಕುಡಿಯುತ್ತಿದ್ದೇವೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ದ ಪ್ರಯಾಣಿಕರಯ ಹಿಡಿಶಾಪ ಹಾಕುತ್ತಿದ್ದಾರೆ.

ಈ ದುರವಸ್ಥೆ ಬೀದರ್ ಕೇಂದ್ರ ಬಸ್ ನಿಲ್ದಾಣಕ್ಕೆ ಮಾತ್ರ ಸೀಮಿತವಾಗಿಲ್ಲ ಜಿಲ್ಲೆಯ ಹುಮನಾಬಾದ್ ಸೇರಿದಂತೆ ಜಿಲ್ಲೆಯ ಬಹುತೇಕ ಬಸ್ ನಿಲ್ದಾಣದಲ್ಲಿ ಇದೇ ರೀತಿಯ ಸಮಸ್ಯೆ ಇದೆ… ಹೀಗೀದ್ದರೂ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೈತೊಳೆದುಕೊಂಡು ಬಿಟ್ಟಿದ್ದಾರೆ. ಯಾಕೆ ? ಬೀದರ ಜಿಲ್ಲೆಯ ಬಿಸಿಲಿನ ತಾಪದ ಅರಿವು ಇವರಿಗೆ ಇಲ್ಲವೆ ? ಬಡ ಜನರು ಪರದಾಡುತ್ತಿರುವುದು ಇವರಿಗೆ ಕಾಣುತ್ತಿಲ್ಲವೆ ? ಬಡ ಜನರು ನೀರು ಕೊಂಡು ತಂದು ಕುಡಿಯುತ್ತಿದ್ದರೂ ಈ ಅಧಿಕಾರಿಗಳು ಸುಮ್ಮನಿರುವ ಉದ್ದೇಶವೇನು ? ಎಂಬೆಲ್ಲ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ.

ಕುಗ್ರಾಮದಿಂದ ಬರುವ ಬಡ ಪ್ರಯಾಣಿಕರಿಗೆ 2 ರೂಪಾಯಿಯಲ್ಲಿ 1 ಲೀಟರ್ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಸಾರಿಗೆ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಶಾಶ್ವತವಾಗಿ ಬಂದ್ ಆಗಿದ್ದಂತೂ ಸುಳ್ಳಲ್ಲ.ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಸರ್ಕಾರದ ಉದ್ದೇಶ ಇಲ್ಲಿ ಹಾಳಾಗಿದೆ.

ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಅವರಿಗೂ ಸರಿಯಾದ ಮಾಹಿತಿ ಇಲ್ಲದಿರುವುದು ಕಂಡು ಬಂದಿತು.

ಈಗ ಇದು ನನ್ನ ಗಮನಕ್ಕೆ ಬಂದಿದ್ದು ಒಂದು ವಾರದಲ್ಲಿ ದುರಸ್ತಿ ಮಾಡಬೇಕು ಎಂದು ನಾನು ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ… ಆದಷ್ಟು ಬೇಗ ಈ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ನೀರು ಕೊಡುತ್ತೇವೆ ಎಂದು ಸಿದ್ಧ ಉತ್ತರ ನೀಡಿ ಅಧಿಕಾರಿಗಳು ಜಾರಿಕೊಂಡು ಬಿಟ್ಟರು ಇಲ್ಲಿನ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿಯವರು.

ಸಾರಿಗೆ ಇಲಾಖೆಯ ಅಧಿಕಾರಿಗಳ ಮಹಾ ನಿರ್ಲಕ್ಷ್ಯಕ್ಕೆ ಇಂದು ಬೇಸಿಗೆಯ ಬಿಸಿ ಬಸ್ ನಿಲ್ದಾಣಗಳಿಗೂ ತಟ್ಟಿದ್ದು ವಿಪರ್ಯಾಸದ ಸಂಗತಿಯಾಗಿದೆ. ಲಕ್ಷಾಂತರ ಅನುದಾನದಲ್ಲಿ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕ ಇಂದು ಹಾಳಾಗಿ ತುಕ್ಕು ಹಿಡಿಯುತ್ತಿರುವುದು ದುರಂತವೇ ಸರಿ.ಇನ್ನಾದರೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕುಗ್ರಾಮದಿಂದ ಬರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಕೊಟ್ಟು ಬೇಸಿಗೆ ದಾಹ ನೀಗಿಸಿ ಅವರ ಜೇಬಿಗೆ ಕತ್ತರಿ ಹಾಕೋದನ್ನು ನಿಲ್ಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!