ಸಿಂದಗಿ : ಸೆ. ೧೫ ರಂದು ಬೀದರದಿಂದ ಚಾಮರಾಜ ನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಆಚರಣೆ ಮಾಡುವ ಸರಕಾರದ ಮಹಾದಾಸೆಯಿದ್ದು ಅದಕ್ಕೆ ಮುದ್ದೇಬಿಹಾಳ ತಾಲೂಕಿಗೆ ತೆರಳಲು ಬೆಳಿಗ್ಗೆ ೬ ಗಂಟೆಗೆ ೨ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಕಾರಣ ಸಾರ್ವಜನಿಕರು ಆಗಮಿಸಿ ಅದನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.
ಪಟ್ಟಣದ ತಹಸೀಲ್ದಾರರ ಕಾರ್ಯಾಲಯದಲ್ಲಿ ಸೆ. ೧೫ ರಂದು ೮.೩೦ರಿಂದ ೯.೩೦ವರೆಗೆ ಆಯೋಜಿಸುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾನವ ಸರಪಳಿ ಹಾಗೂ ವಿಶ್ವಕರ್ಮ ಜಯಂತಿ ಕುರಿತು ಕರೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಜಿಲ್ಲೆಯಲ್ಲಿ ಬರುವ ಮುದ್ದೇಬಿಹಾಳ ತಾಲೂಕಿನ ನಾಗಬೆನಾಳ ವೀರೇಶ ನಗರದಿಂದ ನಾಲತವಾಡ, ನಾಗರಬೆಟ್ಟ, ಹಿರೇಮುರಾಳ, ಕವಡಿಮಟ್ಟಿ, ಗದ್ದಲಮರಿ, ಚಲಮಿ, ಜಟಗಿ ತಾಂಡಾ, ಹುಲ್ಲೂರ ತಾಂಡಾ, ನಿಡಗುಂದಿ, ಆಲಮಟ್ಟಿವರೆಗೆ ೬೦ ಕಿಮೀ ಮಾರ್ಗ ಮಧ್ಯೆ ೩೮ನೇ ಕಿಮೀ ದಿಂದ ೪೭ ಕಿಮೀ ದವರೆಗೆ ಅಕ್ರಮಿಸುವ ಕಾರ್ಯಕ್ರಮಕ್ಕೆ ಸಿಂದಗಿ ತಾಲೂಕಿನಿಂದ ೨ ಬಸ್ಸುಗಳನ್ನು ನೇಮಿಸಿದ್ದು ಅಲ್ಲದೆ ಸಾರ್ವಜನಿಕರು ಹಾಗೂ ಎಲ್ಲ ಇಲಾಖೆಯ ಅದಿಕಾರಿಗಳು, ಸಾರ್ವಜನಿಕರು, ವಿವಿಧ ಸಂಘಟನೆಯ ಪ್ರಮುಖರು, ಸರಕಾರಿ, ಅರೆ ಸರಕಾರಿ ಕಾಲೇಜು ವಿದ್ಯಾರ್ಥಿಗಳು ಸ್ವ ಇಚ್ಚೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು ಮತ್ತು ೧೭ ರಂದು ಜರುಗಲಿರುವ ವಿಶ್ವಕರ್ಮ ಜಯಂತಿಯು ಸರಳ ಹಾಗೂ ಅದ್ಧೂರಿಯಾಗಿ ಆಚರಿಸೋಣ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆರ್.ಡಿಪಿಆರ್‌ನ ಎಇಇ ಜಿ.ವೈ.ಮುರಾಳ ಮಾತನಾಡಿ, ಮುದ್ದೇಬಿಹಾಳ ವೀರೇಶ ನಗರದಿಂದ ಪ್ರಾರಂಭವಾಗುವ ಮಾನವ ಸರಪಳಿ ೩೮ ಕಿಮೀ ದಿಂದ ೪೭ ಕಿಮೀದವರೆಗೆ ಸಿಂದಗಿ ತಾಲೂಕಿನ ಜವಾಬ್ದಾರಿಯಿದ್ದು ಎಲ್ಲ ಅಧಿಕಾರಿಗಳು ಒಂದೇ ಸ್ಥಳದಲ್ಲಿದ್ದು ಮೆರುಗು ತರಬೇಕು ಎಂದರು.
ದಸಂಸನ ಸಂಚಾಲಕ ಶ್ರೀಶೈಲ ಜಾಲವಾದಿ ಮಾತನಾಡಿ, ಕಳೆದ ಬಾರಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಂವಿಧಾನ ಓದು ಕಾರ್ಯಕ್ರಮ ಅತೀ ಅದ್ದೂರಿಯಾಗಿ ಜರುಗಿ ಇಡೀ ಜಿಲ್ಲೆಯಲ್ಲಿ ಹೆಸರು ಮಾಡಿತ್ತು ಅದರಂತೆ ಈ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶಿವು ಬಡಿಗೇರ, ರಾಜಶೇಖರ ಚೌರ ವಕೀಲರು, ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್.ಟಕ್ಕೆ, ಸಾಯಬಣ್ಣಾ ದೇವರಮನಿ, ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಮತ್ತು ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ತಮ್ಮ ಸಲಹೆ ಸೂಚಿಸಿದರು.
ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ ಕಾರ್ಯಕ್ರಮದ ಕುರಿತು ವಿವರಿಸಿದರು. ಆರ್.ಎಸ್.ಬನ್ನೇಟ್ಟಿ ಸ್ವಾಗತಿಸಿ ವಂದಿಸಿದರು.