ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ಅವರು ಜೂನ್ 6, 1891ರಲ್ಲಿ ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಗ್ರಾಮದಲ್ಲಿ ಜನಿಸಿದರು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ವಂತ ಪ್ರತಿಭೆಯಿಂದ 1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ, 1909ರಲ್ಲಿ ಎಫ್. ಎ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಎಲ್ಲ ತರಗತಿಗಳಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಅವರಿಗೆ ಪ್ರಥಮ ಸ್ಥಾನದ ಗಳಿಕೆ ನೀರು ಕುಡಿದಷ್ಟು ಸಲೀಸು. 1913ರಲ್ಲಿ ಮೈಸೂರು ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅದೇ ವರ್ಷ ಅಸಿಸ್ಟೆಂಟ್ ಕಮೀಷನರ್ ಆಗಿ ನೇಮಕಗೊಂಡರು. 1930ರಲ್ಲಿ ಅವರಿಗೆ ಡೆಪ್ಯೂಟಿ ಕಮೀಷನರ್ ಹುದ್ದೆಗೆ ಭಡ್ತಿ ದೊರೆಯಿತು. ಸರಕಾರದ ಹಲವು ಉನ್ನತ ಹುದ್ದೆಗಳಲ್ಲಿ, ರಾಜ್ಯದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದರು. 1943ರಲ್ಲಿ ಸರಕಾರದ ಸೇವೆಯಿಂದ, ಸ್ವಾಪೇಕ್ಷಿತ ನಿವೃತ್ತಿ ಪಡೆದರು. ಅವರ ಸರಕಾರೀ ಸೇವೆಯ ಅವಧಿ ಸಾಕಷ್ಟು ದೀರ್ಘವಾದುದು; ವೈವಿಧ್ಯಮಯವಾದುದು. ದೊರಕಿದ ಹುದ್ದೆಗೆ ಅಪಚಾರವಾಗದಂತೆ ದುಡಿದು ದಕ್ಷ ಆಡಳಿತಗಾರರೆಂಬ ಮನ್ನಣೆಗೆ ಪಾತ್ರರಾದರು. ಮಾಸ್ತಿಯವರ ರಾಜನಿಷ್ಠೆ ಹೆಸರುವಾಸಿಯಾದುದು. 1942ರಲ್ಲಿ ಮೈಸೂರು ಮಹಾರಾಜರು ‘ರಾಜಸೇವಾ ಪ್ರಸಕ್ತ’ ಬಿರುದು ನೀಡಿ ಮಾಸ್ತಿಯವರನ್ನು ಗೌರವಿಸಿದರು. ಸರಕಾರಿ ನೌಕರಿಯ ಅನುಭವ ಅವರ ಸಾಹಿತ್ಯಕೃಷಿಗೆ ಬಹಳ ಸ್ಫೂರ್ತಿ ನೀಡಿದೆ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ರಚನೆಗೆ ಪ್ರಾರಂಭಿಸಿದರು. 1910-11ರ ಸುಮಾರಿನಲ್ಲಿ ‘ರಂಗನ ಮದುವೆ’ ಎಂಬ ಮೊದಲ ಸಣ್ಣ ಕಥೆಯನ್ನು ಬರೆದರು. ‘ಶ್ರೀನಿವಾಸ’ ಎಂಬುದು ಅವರ ಕಾವ್ಯನಾಮ. ಅವರ ಹೆಸರಿನ ಜೊತೆ ಇರುವ ಅವರ ಹುಟ್ಟೂರಿನ ಹೆಸರು ‘ಮಾಸ್ತಿ’ ಅವರ ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ. 1920ರಲ್ಲಿ ‘ಕೆಲವು ಸಣ್ಣಕಥೆಗಳು’ ಎಂಬ ಪ್ರಥಮ ಪುಸ್ತಕ ಪ್ರಕಟವಾಯಿತು. ಇದು ಮಾಸ್ತಿಯವರ ಮೊದಲ ಪುಸ್ತಕವಷ್ಟೇ ಅಲ್ಲ, ಆಧುನಿಕ ಕನ್ನಡ ಸಾಹಿತ್ಯದ ವಿಶಿಷ್ಟವಾದ ಮೊದಲ ಪುಸ್ತಕವೂ ಹೌದು. ಮಾಸ್ತಿಯವರ ಸುಮಾರು 90 ಕಥೆಗಳು ಹಿಂದೆ 14 ಸಂಪುಟಗಳಲ್ಲಿ ಪ್ರಕಟಗೊಂಡಿದ್ದವು. ಇತ್ತೀಚಿನ ವರ್ಷಗಳಲ್ಲಿ ಇವು 5 ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಅವರು ಕನ್ನಡದ ಮೊದಲ ಕಥೆಗಾರರಲ್ಲ, ಆದರೆ ಅವರಷ್ಟು ಉತ್ತಮ ಕಥೆಗಳನ್ನು ಕನ್ನಡದಲ್ಲಿ ಬರೆದವರು ವಿರಳ. ಕಥೆಗಳಿಗೂ ಮಾಸ್ತಿಯವರಿಗೂ ಅವಿನಾ ಸಂಬಂಧ. ಕನ್ನಡ ಕಥಾಬ್ರಹ್ಮ, ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ ಎಂಬ ಹೇಳಿಕೆಗಳು ಇದಕ್ಕೆ ಸಾಕ್ಷಿ. ಅವರ ಕಥೆಗಳಲ್ಲಿ ಕಥಾಸಾಹಿತ್ಯದ ಅತ್ಯುತ್ತಮ ಅಂಶಗಳಿವೆ. ನಿಜಗಲ್ಲಿನ ರಾಣಿ, ಒಂದು ಹಳೆಯ ಕಥೆ, ಕಾಮನ ಹಬ್ಬದ ಒಂದು ಕಥೆ, ಮೊಸರಿನ ಮಂಗಮ್ಮ, ಜೋಗ್ಯೋರ ಅಂಜಪ್ಪನ ಕೋಳಿ ಕಥೆ, ವೆಂಕಟಶಾಮಿಯ ಪ್ರಣಯ, ಕಲ್ಮಾಡಿಯ ಕೋಣ ಮೊದಲಾದವು ಶ್ರೇಷ್ಠ ಕಥೆಗಳಾಗಿವೆ. ಮಾಸ್ತಿಯವರ ಸಣ್ಣಕಥೆಗಳ ಭಾಷೆ, ನಿರೂಪಣೆ, ಶೈಲಿ ಸರಳ. ಜೀವನದ ಅನುಭವ ನಿಚ್ಚಳ. ಕಥೆಯ ನಿರೂಪಣೆಗೆ ಅವರದ್ದೇ ಆದ ವಿಧಾನವಿದೆ. ಸಂಗೀತಗಾರನೊಬ್ಬನ ಜೀವನವನ್ನು ಆಧರಿಸಿರುವ ‘ಸುಬ್ಬಣ್ಣ’ ಎಂಬ ನೀಳ್ಗತೆ ಪ್ರಪಂಚದ ಅತ್ಯುತ್ತಮ ಕಥೆಗಳ ಸಾಲಿಗೆ ಸೇರುವಂಥದು. ಇದು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಜರ್ಮನ್ ಭಾಷೆಗಳಿಗೂ ಅನುವಾದವಾಗಿವೆ. ಕುರುಡರಿಗಾಗಿ ಬ್ರೈಲ್ ಆವೃತ್ತಿಯೂ ಬಿಡುಗಡೆಯಾಗಿದೆ; ಹಲವು ಪುನರ್ ಮುದ್ರಣಕಂಡಿರುವ ಜನಪ್ರಿಯ ಗ್ರಂಥವಾಗಿದೆ.
ಮಾಸ್ತಿಯವರ ಕಥೆಗಳ ವಸ್ತು, ಪಾತ್ರ, ಘಟನೆ, ಅನುಭವ, ವಿನ್ಯಾಸಗಳ ಕ್ಷೇತ್ರ ವಿಶಾಲವಾಗಿದೆ; ವಿವಿಧ ಮುಖಗಳಿಂದ ಕೂಡಿದೆ. ಅವರ ಕಥಾ ನಿರೂಪಣೆ ಅನುಕರಣೀಯವಾದುದು. ಅವರಿಗೆ ಕಥಾ ನಿರೂಪಣೆ ಮುಖ್ಯ, ಘಟನೆಯಲ್ಲ. ಮನುಷ್ಯ ಸ್ವಭಾವ ಮುಖ್ಯ ತಂತ್ರವಲ್ಲ. 1968ರಲ್ಲಿ ಮಾಸ್ತಿಯವರ ‘ಸಣ್ಣಕಥೆ’ಗಳು (ಸಣ್ಣಕಥೆಗಳು 12-13ರ ಸಂಯುಕ್ತ ಸಂಪುಟ) ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು. ಆ ಸಂದರ್ಭದಲ್ಲಿ ಮೈಸೂರಿನಲ್ಲಿ ಸಾರ್ವಜನಿಕರು ಅವರನ್ನು ಸನ್ಮಾನಿಸಿದರು. ‘ಸಣ್ಣಕಥೆಗಳು’ ಎರಡನೇ ಸಂಪುಟ ‘ಗುರುದಕ್ಷಿಣೆ’ ಎಂಬ ಹೆಸರಿನಲ್ಲಿ ತಮಿಳು ಭಾಷೆಗೆ ಭಾಷಾಂತರವಾಗಿದೆ.
ಮಾಸ್ತಿಯವರ ಕಥಾಸಾಹಿತ್ಯದಲ್ಲಿ ಚೆನ್ನಬಸವನಾಯಕ ಮತ್ತು ಚಿಕ್ಕವೀರರಾಜೇಂದ್ರ ಕಾದಂಬರಿಗಳು ಶಿಖರಪ್ರಾಯವಾಗಿವೆ. ಇವು ಕ್ರಮವಾಗಿ 1949 ಮಾತು 1956ರಲ್ಲಿ ಪ್ರಕಟವಾಗಿವೆ. ಇವೆರಡೂ ಐತಿಹಾಸಿಕ ಕಾದಂಬರಿಗಳು. ಕಾದಂಬರಿಯ ಶಿಲ್ಪ, ಆರಂಭ, ಬೆಳವಣಿಗೆ, ಮುಕ್ತಾಯ, ಪರಿಣಾಮಗಳಲ್ಲಿ ಎರಡು ಕಾದಂಬರಿಗಳಿಗೂ ಸಾಮ್ಯವಿದೆ. ಇವು ದುರಂತ ಕಾದಂಬರಿಗಳು. ಬಿದನೂರಿನ ನಾಯಕ ಮನೆತನದ ಕಥೆ ಚೆನ್ನಬಸವನಾಯಕ ಕಾದಂಬರಿಯ ವಸ್ತು. ಮನೆತನದ ಅವ್ಯವಸ್ಥೆ, ರಾಣಿಯ ಕೆಟ್ಟ ನಡತೆ, ತಾಯಿ ಮಕ್ಕಳ ಮೈಮನಸ್ಸು, ಅಕ್ರಮ ಸಂಬಂಧ, ಇತಿಹಾಸದ ಘಟನಾವಳಿಗಳು ಕಾದಂಬರಿಯಲ್ಲಿ ಮುಖ್ಯವಾಗಿವೆ. ಬಿದನೂರಿನ ಇತಿಹಾಸ ನಮ್ಮ ಜನಾಂಗದ ಭಾಗವಾಗಿ ವರ್ಣನೆಯಾಗಿದೆ. ಭೂತಕಾಲದ ಕತೆಯನ್ನು ವರ್ತಮಾನದೊಡನೆ ಬೆಸುಗೆ ಹಾಕಿ ಜೀವಂತಗೊಳಿಸುವ ಪ್ರಯತ್ನ ಕಾದಂಬರಿಯಲ್ಲಿ ನಡೆದಿದೆ. ಚೆನ್ನಬಸವನಾಯಕ ಕಾದಂಬರಿ ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೂ ಅನುವಾದವಾಗಿವೆ.
ಕೊಡಗಿನ ರಾಜಕೀಯದ ದುರವಸ್ಥೆ, ಕೊನೆಯ ರಾಜನ ದುರಂತ ಚಿಕ್ಕವೀರರಾಜೇಂದ್ರ ಕಾದಂಬರಿಯ ವಸ್ತು. ರಾಜನ ಲಂಪಟತನ, ದುಷ್ಟ ಸ್ನೇಹ, ಅಧಿಕಾರ ಲಾಲಸೆ, ಕಾಮುಕತನ, ಪ್ರಜಾಹಿತ ನಿರ್ಲಕ್ಷ್ಯ, ಸ್ವಾರ್ಥ, ಸ್ವೇಚ್ಛಾ ಪ್ರವೃತ್ತಿ, ಅದರಿಂದಾಗುವ ಅವನತಿ ಕಾದಂಬರಿಯಲ್ಲಿ ಪ್ರಧಾನವಾಗಿದೆ. ವೈಯಕ್ತಿಕ ಅಧಃಪತನ, ಐತಿಹಾಸಿಕ ಮುನ್ನಡೆಯ ಅನಿವಾರ್ಯತೆ ಏಕಕಾಲದಲ್ಲಿ ಚಿತ್ರಿತವಾಗಿದೆ. ಕಾದಂಬರಿಯಲ್ಲಿ ಸಾರ್ವಕಾಲಿಕವಾದ, ಶಾಶ್ವತವಾದ ಆಲೋಚನೆಯಿದೆ. ಅಂದಿನ ಕತೆಗೆ ಇಂದಿನ ಅರ್ಥ ತುಂಬಲು ಅವಕಾಶವಿದೆ. ಕೊಡಗಿನ ಅಂದಿನ ಆಡಳಿತದ ಕತೆ ಸಮಕಾಲೀನ ಆಡಳಿತಕ್ಕೆ ಅನ್ವಯಿಸುವಂತಿದೆ. ಕೊಡಗಿನ ಕೊನೆಯ ಅರಸ, ಚಿಕ್ಕವೀರರಾಜನ ದುರಂತ ಕಥೆ ಕಣ್ಣಿಗೆ ಕಟ್ಟುವಂತೆ, ಮನಕರಗುವಂತೆ ವರ್ಣನೆಯಾಗಿದೆ.
ಚಿಕ್ಕವೀರರಾಜೇಂದ್ರ ಕಾದಂಬರಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿತು. ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಸಾಹಿತ್ಯ ಗ್ರಂಥವೆಂಬುದು ಪ್ರಶಸ್ತಿ ಆಯ್ಕೆಯ ಕಾರಣ. ಮಾಸ್ತಿಯವರ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ಜ್ಞಾನಪೀಠ ದೊಡ್ಡದೇನಲ್ಲ. ಮಾಸ್ತಿಯವರಿಗೆ ಬಂದ ಪ್ರಶಸ್ತಿ ಕನ್ನಡಕ್ಕೆ, ಕನ್ನಡಿಗರಿಗೆ, ಕನ್ನಡ ನಾಡಿಗೆ ಬಂದ ಪ್ರಶಸ್ತಿಯಾಗಿದೆ. ನ್ಯಾಷನಲ್ ಬುಕ್ ಟ್ರಸ್ಟ್ ಚಿಕ್ಕವೀರ ರಾಜೇಂದ್ರ ಕಾದಂಬರಿಯನ್ನು ಭಾರತದ ಎಲ್ಲ ಭಾಷೆಗಳಿಗೂ ಅನುವಾದಿಸಲು ಕಾರ್ಯ ಕೈಗೊಂಡಿತು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಕಷ್ಟು ಕಾವ್ಯಗಳನ್ನು ಬರೆದಿದ್ದಾರೆ. ಅವರ ಕಾವ್ಯಗಳಲ್ಲಿ ‘ಶ್ರೀನಿವಾಸ’ ದರ್ಶನ ಪ್ರಮುಖವಾಗಿದೆ. ದೇವರ ಲೀಲೆ, ಆತ್ಮ ನಿವೇದನೆ, ಪ್ರಕೃತಿ ಸೌಂದರ್ಯ, ಕನ್ನಡ ಪ್ರೇಮ, ಸಮಾಜದ ಅಂಕುಡೊಂಕು, ನಾಡುನುಡಿ ವ್ಯಕ್ತಿಗಳಿಗೆ ಸಂಬಂಧಿಸಿದ ರಚನೆಗಳು ಭಾವಗೀತೆಗಳಲ್ಲಿ ಎದ್ದು ಕಾಣುತ್ತವೆ. ಶ್ರೀನಿವಾಸರ ಕಾವ್ಯ ಸರಳವಾದುದುದು. ಸುಂದರವಾದುದು. ಅವರ ಪದ್ಯ ಸಾಹಿತ್ಯದಲ್ಲಿ ಚೆಲುವು, ಹಾಸ್ಯ ಹೆಚ್ಚಾಗಿದೆ. ಗದ್ಯ ಪದ್ಯಗಳ ನಡುವಿನ ಮಡಿ ಮೈಲಿಗೆಯ ನಿರ್ಬಂಧವನ್ನು ತೆಗೆದುಹಾಕಿ ಕಾವ್ಯ ಬರೆದಿರುವುದು ಅವರ ವೈಶಿಷ್ಟ್ಯ. ಶ್ರೀನಿವಾಸರ ಮೊದಲ ಭಾವಗೀತೆಗಳ ಸಂಗ್ರಹ ‘ಬಿನ್ನಹ’ 1922ರಲ್ಲಿ ಪ್ರಕಟವಾಯಿತು. ಹೂವುಗಳು, ಕನ್ನೈದಿಲೆ, ನಾಲ್ವತ್ತರ ನಲುಗು, ಕೊಂಬು, ಕೋಗಿಲೆ ಮೊದಲಾದ ಭಾವಗೀತೆಗಳು ವಿಶಿಷ್ಟವಾಗಿವೆ. ಕನ್ನಡ ನವೋದಯ ಕಾವ್ಯದಲ್ಲಿ ಶ್ರೀನಿವಾಸರ ಕಾವ್ಯಕ್ಕೆ ಚಾರಿತ್ರಿಕ ಮಹತ್ವವಿದೆ. ಬಿನ್ನಹ, ಅರುಣ, ತಾವರೆ, ಮಲಾರ, ಸಂಕ್ರಾಂತಿ ಮುಂತಾದ ಕವನ ಸಂಗ್ರಹಗಳಲ್ಲಿ ಭಾವಗೀತೆಗಳ ವೈವಿಧ್ಯವನ್ನು ಕಾಣಬಹುದು.
ಕಥನ ಗೀತೆಗಳಲ್ಲಿ ಶ್ರೀನಿವಾಸರ ಸಾಧನೆ, ಸಿದ್ಧಿ ಗಮನಾರ್ಹ. ಗದ್ಯದಲ್ಲಾಗಲೀ, ಪದ್ಯದಲ್ಲಾಗಲೀ ಕಥೆ ಹೇಳುವುದರಲ್ಲಿ ಒಂದೇ ರೀತಿಯ ಪರಿಣತಿ ಕಂಡುಬರುತ್ತದೆ. ಸರಳರಗಳೆಯನ್ನು ಸಾರ್ಥಕವಾಗಿ ಬಳಸಿದ್ದಾರೆ. 1940ರಲ್ಲಿ ಪ್ರಕಟವಾದ ಗೌಡರ ಮಲ್ಲಿ, ಅನಂತರ ಬೆಳಕುಕಂಡ ನವರಾತ್ರಿ, ಮೂಕನ ಮಕ್ಕಳು, ರಾಮನವಮಿ ಸಂಗ್ರಹಗಳಲ್ಲಿ ಶ್ರೀನಿವಾಸರ ಕಥನಗೀತೆಗಳು ಅಡಕವಾಗಿವೆ. ಕನ್ನಡ ನವೋದಯದ ಕಾಲದಲ್ಲಿ ರಚನೆಯಾದ ಅವರ ಕಥನಗೀತೆಗಳಲ್ಲಿ ಚಾರಿತ್ರಿಕವಾದ, ಸಾಹಿತ್ಯಕವಾದ, ಸುಸಂಸ್ಕೃತವಾದ ಮೌಲಿಕ ಗುಣಗಳಿವೆ. ಮದಲಿಂಗನ ಕಣಿವೆ, ಗೌಡರ ಮಲ್ಲಿ, ಸೋಜಿಗದ ಹೊಳಲು, ದೇಶಾಚಾರ, ಗುಂಡುಸೂಜಿ ಮುಂತಾದ ಕಥನಗೀತೆಗಳು ಉತ್ತಮವಾಗಿವೆ.
ಶ್ರೀನಿವಾಸರ ಕಾವ್ಯ ಪ್ರಕಾರದ ಆಚಾರ್ಯ ಕೃತಿ ‘ಶ್ರೀರಾಮಪಟ್ಟಾಭಿಷೇಕ’. ಸರಳ ರಗಳೆಯನ್ನು ಸಹಜವಾಗಿ ದುಡಿಸಿಕೊಂಡಿರುವ ಗ್ರಂಥ. ಶ್ರೀರಾಮನ ಪಟ್ಟಾಭಿಷೇಕವನ್ನು ಕೇಂದ್ರವಾಗಿರಿಸಿ ಸಂಪೂರ್ಣ ರಾಮಾಯಣದ ಕತೆಯನ್ನು ರೂಪಿಸಿರುವ ಬೃಹತ್ ಕೃತಿ. ಇದು ಶ್ರೀನಿವಾಸರ ಮಹತ್ವಾಕಾಂಕ್ಷೆಯ ಕಾವ್ಯವೂ ಹೌದು. ಒಂಬತ್ತು ಸಾವಿರ ಸಾಲುಗಳಿಗೆ ಮಿಕ್ಕಿರುವ ಈ ದೀರ್ಘ ಕಾವ್ಯದಲ್ಲಿ ಸಂಪ್ರದಾಯಬದ್ಧವಾದ ಹಾಗೂ ಹೊಸ ಆಯಾಮದ ಅಂಶಗಳನ್ನೊಳಗೊಂಡ ರಾಮಾಯಣದ ಕಥೆಯನ್ನು ಕಾಣಬಹುದು. ‘ಶ್ರೀರಾಮಪಟ್ಟಾಭಿಷೇಕ’ ಕಾವ್ಯ 1972ರಲ್ಲಿ ಪ್ರಕಟವಾಯಿತು.
ಮಾಸ್ತಿಯವರು ಹಲವು ನಾಟಕಗಳನ್ನು ಬರೆದಿದ್ದಾರೆ. 1923ರಲ್ಲಿ ಪ್ರಕಟವಾದ ‘ಶಾಂತಾ’ ಅವರ ಮೊದಲ ನಾಟಕ. ‘ಮಂಜುಳಾ’ ಎಂಬುದು ಸಾಮಾಜಿಕ ನಾಟಕ. ಉಳಿದವು ಪುರಾಣ ಹಾಗೂ ಇತಿಹಾಸದಿಂದ ಪ್ರೇರಣೆ ಪಡೆದಿವೆ. ಕಾಡುಕುರುಬರಿಗೆ ಸಂಬಂಧಿಸಿದ, ಐತಿಹಾಸಿಕ ಅಂಶಗಳನ್ನೊಳಗೊಂಡ ‘ಕಾಕನಕೋಟೆ’ ಮಾಸ್ತಿಯವರ ಉತ್ತಮ ನಾಟಕ. ಗೌತಮ ಬುದ್ಧನ ಹೆಂಡತಿ ಯಶೋಧರೆಯ ಮಾನಸಿಕ ತುಮುಲವನ್ನು ಪ್ರಧಾನವಾಗಿ ಚಿತ್ರಿಸಿರುವ ‘ಯಶೋಧರಾ’ ಅತ್ಯುತ್ತಮ ನಾಟಕ. ಮಹಾಕವಿ ಕಾಳಿದಾಸನ ಬಗೆಗೆ ಇರುವ ಕಟ್ಟುಕತೆ, ಇತಿಹಾಸವನ್ನು ಬಳಸಿಕೊಂಡು ರಚಿಸಿರುವ ಏಳು ಅಂಕಗಳ ನಾಟಕ ‘ಕಾಳಿದಾಸ’. ಇದಕ್ಕೆ 1983ರಲ್ಲಿ ‘ವರ್ಧಮಾನ ಪ್ರಶಸ್ತಿ’ ಸಂದಿತು. ಮಾಸ್ತಿಯವರ ಸುಸಂಸ್ಕೃತ ಮನೋಧರ್ಮ ಅವರ ನಾಟಕ ರಚನೆಯಲ್ಲಿ ನಿಚ್ಚಳವಾಗಿ ಕಾಣುತ್ತದೆ. ಕನ್ನಡ ನಾಟಕ ಕ್ಷೇತ್ರಕ್ಕೆ ಮಾಸ್ತಿಯವರ ನಾಟಕ ಕೃಷಿ ಸಾಕಷ್ಟು ಕಸುವು ತುಂಬಿದೆ. ಷೇಕ್ಸ್ ಪಿಯರ್ ಮಹಾಕವಿಯ ಕೆಲವು ನಾಟಕಗಳನ್ನು ಚಂಡಮಾರುತ, ದ್ವಾದಶ ರಾತ್ರಿ, ಲಿಯರ್ ಮಹಾರಾಜ ಮೊದಲಾದ ಹೆಸರುಗಳಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ಧಾರೆ. ಮಾಸ್ತಿಯವರ ಭಾಷಾಂತರ ನಾಟಕಗಳಿಂದ ಕನ್ನಡ ನಾಟಕಸಾಹಿತ್ಯ ಗರಿಗಟ್ಟಿಕೊಳ್ಳಲು ಸಹಾಯಕವಾಗಿದೆ.
ಮಾಸ್ತಿಯವರ ಆತ್ಮಕಥೆ ‘ಭಾವ’ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ‘ಭಾವ’ದಲ್ಲಿ ಅವರ ಬದುಕಿನ ಮೂಲಧಾತುಗಳ ದಾಖಲೆಗಳಿವೆ. ನವರತ್ನ ರಾಮರಾವ್, ರವೀಂದ್ರನಾಥ ಠಾಗೂರರು, ಶ್ರೀರಾಮಕೃಷ್ಣ ಎಂಬ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ವೇದಗಳ ಕಾಲದಿಂದ ಬೆಳೆದುಬಂದ ಧರ್ಮ, ಸಂಸ್ಕೃತಿ, ಪರಂಪರೆಗಳ ಅವಲೋಕನವಾದ ‘ಅಂತರಗಂಗೆ’; ವಾಲ್ಮೀಕಿ ರಾಮಾಯಣವನ್ನು ಕುರಿತ ವಿಮರ್ಶಾತ್ಮಕ ಅಧ್ಯಯನವಾದ ‘ಆದಿಕವಿ ವಾಲ್ಮೀಕಿ’; ಅಧುನಿಕ ಕನ್ನಡ ಸಾಹಿತ್ಯದ ಪ್ರಾರಂಭದ ಮುಖ್ಯ ಘಟ್ಟಗಳನ್ನು ವಿವೇಚಿಸುವ ‘ನಮ್ಮ ಹೊಸ ಸಾಹಿತ್ಯದ ಆರಂಭ’; ಹಿಂದೂ ಧರ್ಮದ ಹಿನ್ನೆಲೆಯಲ್ಲಿ ಮೂಡಿರುವ ‘ಧರ್ಮಸಂರಕ್ಷಣೆ’; ಮಹಾಭಾರತ ಕಾವ್ಯಸಂಗ್ರಹವಾದ ‘ಭಾರತ ತೀರ್ಥ’ ಗ್ರಂಥಗಳು ಮಾಸ್ತಿಯವರ ಪರಿಪಕ್ವ ಬದುಕಿನ, ಉದಾತ್ತ ಚಿಂತನೆಯ ವೈಚಾರಿಕ ಗ್ರಂಥಗಳಾಗಿವೆ. ಭಾರತ ಮತ್ತು ಪಾಶ್ಚಾತ್ಯ ಕೃತಿಗಳು ವಿವೇಚನೆಯನ್ನೊಳಗೊಂಡ ‘ವಿಮರ್ಶೆ’ಗಳು, ನೂರಾರು ‘ಪ್ರಸಂಗ’ಗಳು, ವಿಚಾರಸೂಕ್ತಿಗಳು, ಕನ್ನಡದ ಕೆಚ್ಚನ್ನು ಉತ್ತೇಜಿಸುವ ಲೇಖನಗಳು ಅವರಿಂದ ಸೃಷ್ಟಿಯಾಗಿವೆ. ಕರ್ಣಾಟ ಭಾರತ ಕಥಾಮಂಜರಿ, ರವೀಂದ್ರ ಪ್ರಶಸ್ತಿ, ಸಂಭಾವನೆ, ಸರ್ ಎಂ. ವಿಶ್ವೇಶ್ವರಯ್ಯ ಮೊದಲಾದ ಗ್ರಂಥಗಳನ್ನು ಅವರು ಸಂಪಾದಿಸಿದ್ದಾರೆ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂಗ್ಲಿಷ್ ಭಾಷೆಯಲ್ಲೂ ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಕೆಲವು ಕನ್ನಡ ಕೃತಿಗಳನ್ನು ಸ್ವತಃ ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಅವರ ಇಂಗ್ಲಿಷ್ ಭಾಷೆಯ ಬರಹ ಕೂಡಾ ಕನ್ನಡದಷ್ಟೇ ಆಕರ್ಷಕವಾಗಿದೆ.
ಮಾಸ್ತಿಯವರ ಕೃತಿಗಳು ಸಂಖ್ಯೆಯಲ್ಲಿ, ಸತ್ವದಲ್ಲಿ, ಗುಣದಲ್ಲಿ, ಗಾತ್ರದಲ್ಲಿ, ವೈವಿಧ್ಯದಲ್ಲಿ ದೊಡ್ಡವು. ಕತೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ಆತ್ಮಕತೆ, ಜೀವನ ಚರಿತ್ರೆ, ಪ್ರಬಂಧ, ಜನಪದ, ಪತ್ರಿಕೋದ್ಯಮ, ವಿಚಾರ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ 120 ಗ್ರಂಥಗಳನ್ನು ಬರೆದಿದ್ದಾರೆ. ಇದರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿಯೂ 17 ಗ್ರಂಥಗಳನ್ನು ರಚಿಸಿದ್ದಾರೆ. ಸುಮಾರು ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೃಷ್ಟಿಸಿದ್ದಾರೆ. ಅವರು ತಾವು ಸಾಹಿತಿಯಾದುದಲ್ಲದೆ ಹಲವರು ಮಹಾನೀಯರನ್ನು ಸಾಹಿತಿಗಳಾಗಲು ಸ್ಫೂರ್ತಿ ನೀಡಿದ್ದಾರೆ. ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಹಲವರ ಗ್ರಂಥಗಳನ್ನು ಪ್ರಕಟಿಸಿ, ಹಲವರಿಗೆ ನಾನಾ ರೀತಿಯಲ್ಲಿ ನೆರವು ನೀಡಿ ಬೆಂಬಲಿಸಿದ್ದಾರೆ. ಕನ್ನಡದಲ್ಲಿ ಸಾಹಿತಿಗಳ ಪಡೆ ಸೃಷ್ಟಿಯಾಗಲು ಸಹಕರಿಸಿದ್ದಾರೆ. ಅವರ ಬದುಕು ಬರಹ ಹಲವು ಕೃತಿಗಳಿಗೆ, ಕೃತಿಗಾರರಿಗೆ ಪ್ರೇರಣೆ ನೀಡಿದೆ. ಮಾಸ್ತಿಯವರನ್ನು ಕುರಿತು ಇತರರಿಂದ ಮೌಲಿಕ ಗ್ರಂಥಗಳು ಬೆಳಕು ಕಂಡಿವೆ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಮಾತು ತಮಿಳು, ಕಾಲೇಜಿನಲ್ಲಿ ಓದಿದ್ದು ಇಂಗ್ಲಿಷ್. ಬದುಕಿದ್ದು, ಬರೆದದ್ದು ಕನ್ನಡ. ಅವರು ಮೊದಲಿನಿಂದಲೂ ಕನ್ನಡದ ಪರವಾಗಿ ದನಿಗೂಡಿಸಿದವರು. 1910ರ ಸುಮಾರಿನಲ್ಲಿ ಕನ್ನಡದಲ್ಲಿ ಮಾತಾಡುವುದಕ್ಕೆ, ಬರೆಯುವುದಕ್ಕೆ ವಿದ್ಯಾವಂತರು ಹಿಂದುಮುಂದು ನೋಡುತ್ತಿದ್ದರು. ಅಂಥ ದಿನಗಳಲ್ಲಿ ಮಾಸ್ತಿಯವರು ಕನ್ನಡದಲ್ಲಿ ಬರೆದರು. ಕನ್ನಡದ ಏಳಿಗೆಗೆ ಹೋರಾಡಿದರು. ಇದರಿಂದ ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು ಸಹಾಯವಾಯಿತು. ಮಾಸ್ತಿಯವರ ಮಾರ್ಗ ಹಲವರಿಗೆ ದಾರಿದೀಪವಾಯಿತು. ಕರ್ನಾಟಕ ಏಕೀಕರಣಕ್ಕೆ ಅವರು ನಿಷ್ಠೆಯಿಂದ ದುಡಿದರು. ತಮ್ಮ ಉಪನ್ಯಾಸಗಳಿಂದ, ವೈಚಾರಿಕ ಬರಹಗಳಿಂದ ಜನರನ್ನು ಎಚ್ಚರಿಸಿದರು. ಅವರಿಂದ ಕನ್ನಡ ಸಾಹಿತ್ಯ ಕ್ಷೇತ್ರ ವಿಸ್ತಾರವಾಯಿತು.
ಮಾಸ್ತಿಯವರು ಪತ್ರಿಕೊದ್ಯಮಿಯೂ ಹೌದು. 1944ರಿಂದ 1965ರವರೆಗೆ ‘ಜೀವನ’ ಮಾಸಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದರು. ‘ಜೀವನ’ ಪತ್ರಿಕೆಯ ಮೂಲಕ ಅನೇಕ ಸಾಹಿತಿಗಳ ಕೃತಿಗಳು ಬೆಳಕು ಕಂಡಿವೆ. ‘ಜೀವನ’ ಪತ್ರಿಕೆಯ ಸಂಪಾದಕೀಯದಲ್ಲಿ ಮೂಡಿದ ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕೀಯ, ಧರ್ಮ, ದೇವರು, ಸಾಮಾಜಿಕ, ಆರ್ಥಿಕ ವಿಚಾರ ಮೊದಲಾದ ಹಲವು ಹತ್ತು ವಿಷಯಗಳ ಬಗೆಗಿನ ಲೇಖನಗಳಲ್ಲಿ ಮಾಸ್ತಿಯವರ ಭಾವ ಮಿಂಚಿದೆ. ಈ ಬರಹಗಳು ‘ಜೀವನ ಸಂಪಾದಕೀಯ’ ಎಂಬ ಹೆಸರಿನ ಗ್ರಂಥದಲ್ಲಿ ಲಭ್ಯವಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಮಾಸ್ತಿಯವರ ‘ಜೀವನ’ ಮರೆಯಲಾಗದ ನೆನಪು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರಕಾರದ ಉನ್ನತ ಹುದ್ದೆಗಳಲ್ಲಿ, ವಿವಿಧ ಸ್ಥಳಗಳಲ್ಲಿ ಅನುಭವ ಗಳಿಸಿದವರು. ಜನಸಾಮಾನ್ಯರ ಜನಜೀವನವನ್ನು ಹತ್ತಿರದಿಂದ ಗಮನಿಸಿದವರು. ನಮ್ಮ ಜನರ ಆಚಾರ ವಿಚಾರ, ಸಂಸ್ಕೃತಿ, ಪರಂಪರೆ, ಬದುಕಿನ ರೀತಿ ನೀತಿ ಮೊದಲಾದವುಗಳ ಬಗೆಗೆ ಆಸಕ್ತಿ ತಳೆದವರು. ಶುಚಿಯಾದ, ಆದರ್ಶವಾದ ಸಂಪ್ರದಾಯಕ್ಕೆ ನಿಷ್ಠೆ ತೋರಿದವರು. ರಾಜಮಹಾರಾಜರ ಗೌರವಕ್ಕೆ ಪಾತ್ರರಾದವರು. ಬ್ರಿಟಿಷರ ಆಡಳಿತವನ್ನು, ಬ್ರಿಟಿಷ್ ಆಡಳಿತಗಾರರನ್ನು ಕಣ್ಣಾರೆ ಕಂಡವರು. ಸಂಪ್ರದಾಯಬದ್ಧವಾದ ಮನೆತನದಲ್ಲಿ ಹುಟ್ಟಿ ಬೆಳೆದವರು. ದೊಡ್ಡವರನ್ನು, ದೊಡ್ಡ ಬದುಕನ್ನು ನೋಡಿದವರು; ಅನುಸರಿಸಿದವರು. ತಮ್ಮಂತೆ ಇತರರೂ ಅನುಸರಿಸಲು ಆಶಿಸಿದವರು. ಜನರ ಬದುಕು ದೊಡ್ಡದಾಗಲು ಹಾರೈಸಿದವರು. ಈ ಅಂಶಗಳಿಗೆ ಒತ್ತುಕೊಡುವ ವಸ್ತು, ಪಾತ್ರ, ಸನ್ನಿವೇಶ ನಿರೂಪಣೆಗಳು ಮಾಸ್ತಿಯವರ ಕೃತಿಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ. ಭಾರತ ದೇಶದಲ್ಲಿ ಕಾಣಬಹುದಾದ, ಕಾಣಬೇಕಾದ ಪಾತ್ರಗಳು ಅವರವು. ಮಾಸ್ತಿಯವರಲ್ಲಿ ಆದರ್ಶ ಪಾತ್ರಗಳು ಅಧಿಕ. ದುಷ್ಟರು, ಕ್ರೂರಿಗಳು, ಅಯೋಗ್ಯರು ಎನ್ನಬಹುದಾದ ಪಾತ್ರಗಳು ಕಡಿಮೆ. ಇದ್ದರೂ ಅವುಗಳ ಬಗೆಗೆ ಇನ್ನಿಲ್ಲದ ಅನುಕಂಪ. ದುಷ್ಟತನವೂ ದೌರ್ಬಲ್ಯ ಎನ್ನುವುದು ಅವರ ಮನೋಧರ್ಮ. ಆದರ್ಶ ಸ್ತ್ರೀ ಪಾತ್ರಗಳ ಬಗೆಗೆ ಮಾಸ್ತಿಯವರಿಗೆ ಅಪಾರ ಒಲವು.
ಮಾಸ್ತಿಯವರ ಎಲ್ಲ ಕೃತಿಗಳಲ್ಲಿ ಸರಳತೆಗೆ ಮೊದಲ ಪಟ್ಟ. ಸಾಧಾರಣ ಮಾತುಗಳಿಂದ ಅಸಾಧಾರಣ ಚಿತ್ರ ನಿರ್ಮಿಸುವ ಕಲೆ ಅವರದು. ಮಾಸ್ತಿಯವರಿಗೆ ಸಂದ ಗೌರವಗಳು ಅನೇಕ. ಇಂಥಹ ಹಿರಿಯರಿಗೆ ಗೌರವ ಸಲ್ಲಿಸುವುದು ಆ ಗೌರವಕ್ಕೇ ಹಿರಿತನವಲ್ಲವೇ!
ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕೂ ದೊಡ್ಡದು. ಅವರ ಬದುಕು ಒಂದು ಮಹಾಕೃತಿ. ಅವರ ಬದುಕಿಗೂ, ಬರಹಕ್ಕೂ ಅಂತರ ಕಡಿಮೆ. ಬದುಕಿದಂತೆ ಬರೆಯಬೇಕು, ಬರೆದಂತೆ ಬದುಕಬೇಕು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ ಕೀರ್ತಿ ಅವರದ್ದು. 1986ರಲ್ಲಿ ಅವರು ನಿಧನರಾದಾಗ ಅವರಿಗೆ 95 ವರ್ಷ ತುಂಬಿತ್ತು.
ಗಾಂಧೀಬಜಾರಿನಲ್ಲಿ ಚಾಕೊಲೇಟು, ಪೆಪ್ಪರಮೆಂಟುಗಳನ್ನು ಮಕ್ಕಳಿಗಾಗಿ ಕೋಟಿನ ಜೇಬಿನಲ್ಲಿ ತುಂಬಿಕೊಂಡು, ಬದುಕಿನ ಕಲೆಯನ್ನು, ನಯ ವಿನಯ, ಸೌಜನ್ಯ, ಸಂಸ್ಕೃತಿ, ಹಸನ್ಮುಖ ಪ್ರೀತಿ ಸೊಬಗುಗಳನ್ನು ಸರ್ವಲೋಕಗಳಿಗೂ ಸಾಲುವಷ್ಟು ತಮ್ಮನ್ನೇ ಮಾದರಿಯಾಗಿರಿಸಿಕೊಂಡು ನಡೆದಾಡುತ್ತಿದ್ದ ಈ ಹಿರಿಯ ಜೀವನವನ್ನು ಕಂಡ ಸೌಭಾಗ್ಯವನ್ನು ನೆನೆದಾಗ, ಅವರ ಬಳಿಯಲ್ಲಿ ಸುಳಿದ ನಮ್ಮ ಸುಕೃತವನ್ನು ನೆನೆಸಿಕೊಂಡು ಹೃದಯ ಉಕ್ಕಿ ಬರುತ್ತದೆ. ಮಾಸ್ತಿಯಂತಹ ಇಂಥಹ ಶ್ರೇಷ್ಠ ಆಸ್ತಿಗಳು ನಮ್ಮ ಉಳಿದ ಜೀವನದಲ್ಲೂ, ಮುಂದಿನ ಯುಗ ಯುಗಗಳ ಜೀವನದಲ್ಲೂ ಮರಳೀತೆ ಎಂದು ಮಾಸ್ತಿಯವರನ್ನು ಇಲ್ಲಿಗೆ ಕಳುಹಿಸಿಕೊಟ್ಟ ಆ ವಿಧಾತನ ಬಳಿ ಮೊರೆಯಿಡುವಂತಾಗುತ್ತಿದೆ.
ಸಂಗ್ರಹ: ಎಮ್ ವೈ ಮೆಣಸಿನಕಾಯಿ, ಬೆಳಗಾವಿ