spot_img
spot_img

ನಾಡಿನ ಪ್ರಖ್ಯಾತ ವಿದ್ವಾಂಸ,ಸಾಹಿತಿ ಶ್ರೀ ಶಂ.ಬಾ‌.ಜೋಶಿಯವರ ಜನ್ಮದಿನವಿಂದು

Must Read

ನಮ್ಮ ನಾಡಿನ ಪ್ರಖ್ಯಾತ ವಿದ್ವಾಂಸರಾದ ಶಂಕರ ಬಾಳದೀಕ್ಷಿತ ಜೋಶಿ ಅವರು ‘ಶಂ. ಬಾ.’ ಎಂದೇ ಪ್ರಖ್ಯಾತರು. ಅವರು ಹುಟ್ಟಿದ್ದು ದಿನಾಂಕ 4 ನೇ ಜನವರಿ 1896ರಲ್ಲಿ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಇಂದು ಮಲಪ್ರಭಾ ಪ್ರವಾಹದಿಂದ ಮುಳುಗಡೆ ಆಗಿರುವ ಊರು. ಆ ಊರಿನಲ್ಲಿಯೇ ಶಂ. ಬಾ. ಅವರು ಜನಿಸಿದ್ದು. ತಂದೆಯವರು ನಿಧನರಾದಾಗ ಪುಣೆಯಲ್ಲಿದ್ದ ಅಜ್ಜಿ ಮನೆಗೆ ಹೋದರು. ಅಲ್ಲಿ ಅಣ್ಣ ಪುರೋಹಿತಗಾರಿಕೆ ಮಾಡಿಕೊಂಡು ಬಾ ಅಂದರು. ಶಂ. ಬಾ. ಅವರಿಗೆ ಮನಸ್ಸು ಒಪ್ಪಲಿಲ್ಲ. ಲೋಕಮಾನ್ಯ ತಿಲಕರ ದರ್ಶನ ಪಡೆದುದರ ಪ್ರಭಾವದಿಂದ ದೇಶ ಸೇವೆ ಮಾಡಬೇಕೆಂಬ ವಾಂಛೆ ಹುಟ್ಟಿತು. ತಿಲಕರು ನಿಧನರಾದಾಗ ಶೋಕತಪ್ತರಾಗಿ ಏನು ಮಾಡಬೇಕೆಂದು ತೋಚದೆ ಇದ್ದರು. ಪುನಃ ಧಾರವಾಡಕ್ಕೆ ಬಂದು ಸರಕಾರಿ ಟ್ರೈನಿಂಗ್ ಕಾಲೇಜ್ ಸೇರಿ ಕನ್ನಡ ಶಿಕ್ಷಕರಾಗಿ ಪ್ರಥಮ ಶ್ರೇಣಿ ಪಡೆದರು. ಮುಂದೆ ಬೆಳಗಾವಿಯಲ್ಲಿ ಶಿಕ್ಷಕರಾದರು. ಗಾಂಧೀಜಿ ಬೆಳಗಾವಿಗೆ ಬಂದಾಗ ಅವರ ಜೊತೆ ಜೊತೆಯೇ ಓಡಾಡಿದರು. ಇದನ್ನು ಗಮನಿಸಿದ ಸರ್ಕಾರ ಅವರನ್ನು ವರ್ಗಾಯಿಸಿತು. ಚಿಕ್ಕ ಗ್ರಾಮದಲ್ಲಿ ವ್ಯಾಸಂಗದ ಆಸಕ್ತಿಗಳು ಇಲ್ಲದೆ ಬೇಸರಿಸಿ ಕೆಲಸಕ್ಕೆ ರಾಜೀನಾಮೆ ನೀಡಿ ಒಂದಷ್ಟು ಪತ್ರಿಕೆಗಳಿಗೆ ಬರೆಯುವ ಕೆಲಸ ಮಾಡಿದರು. ಮೊದಲ ಕರ್ನಾಟಕ ಏಕೀಕರಣ ಸಮಾವೇಶಕ್ಕೆ ಕಾರ್ಯದರ್ಶಿಯಾಗಿದ್ದರು. ಸ್ಥಿರ ನೆಲೆಯಿಲ್ಲದ ಅಲೆಮಾರಿ ಜೀವನ ಮಾಡಿ ಕಡೆಗೆ 1928 ರಿಂದ 1946ರವರೆಗೆ ನಿವೃತ್ತಿಯವರೆಗೆ ವಿಕ್ಟೋರಿಯ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿ ಕೈಗೊಂಡರು. ಅವರ ಶಿಕ್ಷಕ ವೃತ್ತಿಯಲ್ಲಿ ಬಹಳಷ್ಟು ಸಮರ್ಥ ತರುಣರು ತಯಾರಾದರು.

ಶಂ.ಬಾ. ಅವರು ಶಾಲೆಯಲ್ಲಿ ವ್ಯವಸ್ಥಿತವಾಗಿ ಇಂಗ್ಲಿಷ್ ಕಲಿಯಲಿಲ್ಲವಾಗಿ, ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಇಂಗ್ಲಿಷ್ ಅಕ್ಷರಾಭ್ಯಾಸದಿಂದ ಆರಂಭ ಮಾಡಿದರು. ಕೆಲವೇ ವರ್ಷಗಳಲ್ಲಿ ಇತಿಹಾಸ ಸಂಸ್ಕೃತಿ, ತತ್ವಜ್ಞಾನದ ಗ್ರಂಥಗಳ ವಾಚನವನ್ನು ಸಾಧಿಸಿಕೊಂಡರು. ಮುಂದೆ ಕನ್ನಡದಲ್ಲಿ ಮಹತ್ವಪೂರ್ಣ ಬರಹಗಳಿಂದ ಕೂಡಿದ ಸುಮಾರು 30 ಕೃತಿಗಳನ್ನು ರಚಿಸಿದರು.

ಜೋಶಿ ಅವರಿಗೆ ಎಲ್ಲದರ ಮೂಲವನ್ನು ಸಂಶೋಧಿಸುವ ಪ್ರವೃತ್ತಿ. ಈ ಕನ್ನಡನಾಡು ಎಂದರೆ ಮೊದಲಿಗೆ ಎಲ್ಲಿತ್ತು? ಈ ಜನ ಎಲ್ಲಿಂದ ಬಂದರು? ನಾನಾ ಭಾಷಾ ಸಂಪರ್ಕ, ಜನಜೀವನ, ಆಚಾರ-ವಿಚಾರಗಳ ವಿನಿಮಯ ಯಾವಾಗ, ಯಾವ ಸಂದರ್ಭದಲ್ಲಿ, ಹೇಗೆ ಆಯಿತು? ಕವಿರಾಜಮಾರ್ಗಕಾರ ಕಾವೇರಿಯಿಂದ ಗೋದಾವರಿಯವರೆವಿಗೂ ಇರುವ ನಾಡಿನ ಎಲ್ಲೆಯನ್ನು ಹೇಳುತ್ತಾನೆ ಇದರ ವಾಸ್ತವಾಂಶ ಏನು? ಹೇಗೆ ಮಹಾರಾಷ್ಟ್ರದ ಧಾರ್ಮಿಕ ಗ್ರಂಥಗಳಲ್ಲಿ ಕನ್ನಡದ ಸುಳುಹುಗಳು ಸಿಗುತ್ತಿವೆ. ಸ್ಥಳನಾಮೆಗಳು ಇವೆ. ಇದರ ಅರ್ಥ ಏನು? ಈ ತರಹದ ಪ್ರಶ್ನೆಗಳು ಮೊದಲಿಗೆ ತಲೆ ಎತ್ತಿದವು. ಆಗ ಶಾಸನ ಕಾವ್ಯ, ಶಾಸ್ತ್ರ ಮೊದಲಾದ ಗ್ರಂಥಗಳ ವ್ಯಾಸಂಗಕ್ಕೆ ಆರಂಭಿಸಿದರು. ಇವುಗಳ ರೂಪದಿಂದ ಬಂದ ಪ್ರಥಮ ಪ್ರಾಥಮಿಕ ಗ್ರಂಥ ‘ಕಣ್ಮರೆಯಾದ ಕನ್ನಡ’. ಇಂಥದೊಂದು ವಿಶೇಷ ಗ್ರಂಥ ಬರೆದುದಕ್ಕೆ ರಾ. ನರಸಿಂಹಾಚಾರ್ಯ, ಡಿ.ವಿ.ಜಿ., ಗೋವಿಂದ ಪೈ, ಎ. ವೆಂಕಟಸುಬ್ಬಯ್ಯರಂಥ ಹಿರಿಯರು ಅಭಿನಂದಿಸಿ ಕಾಗದ ಬರೆದದ್ದು ಶಂ. ಬಾ. ಅವರಿಗೆ ಈ ಕ್ಷೇತ್ರದಲ್ಲಿ ಮುಂದುವರೆಯುವಂತೆ ಮತ್ತಷ್ಟು ಪ್ರೇರಣೆ ನೀಡಿತು.

‘ಕನ್ನಡದ ನೆಲೆ’ ಕೃತಿಯಲ್ಲಿ ಕನ್ನಡಿಗರ ಮೂಲಿಗರು ಯಾರು? ಕಂನುಡಿಯ ನುಡಿಯ ಉಗಮ ಬೆಳವಣಿಗೆ ಸಾರ ಕುರಿತು ಬರೆದರು. ಕನ್ನಡ ನಾಡು-ನುಡಿಯನ್ನು ಕುರಿತಾದ ವಿಷಯಕ್ಕೆ ವೇದೋಪನಿಷತ್ತು, ಪುರಾಣ ಸ್ಮೃತಿಗಳಿಂದ ಆಯ್ದು, ಜೋಡಿಸಿ, ಸ್ಥಳವ್ಯಾಸಂಗ, ಭೂಗರ್ಭಶಾಸ್ತ್ರಜ್ಞರ ಹೇಳಿಕೆ’ ಮುಂತಾದವುಗಳನ್ನು ಸೇರಿಸಿಕೊಂಡು ‘ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ಯನ್ನು ಬರೆದರು. ಕನ್ನಡ ಭಾಷೆಯ ಒಳಸುಳಿಗಳನ್ನು ಗುರುತಿಸುವ ಭಾಷಾಶಾಸ್ತ್ರದ ವ್ಯಾಸಂಗದ ಹಿನ್ನೆಲೆಯಲ್ಲಿ ‘ಕಂನುಡಿಯ ಹುಟ್ಟು’ ಗ್ರಂಥ ರಚನೆ ಆಯಿತು.

ಮಹಾರಾಷ್ಟ್ರದ ಮೂಲದ ಬಗ್ಗೆ ಮರಾಠಿಯಲ್ಲಿ ‘ನವಭಾರತ’ ಪತ್ರಿಕೆಗೆ ಬರೆದಾಗ ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿ ಅದೊಂದು ಗ್ರಂಥವಾಗಿ ಹೊರಬಂದಿತು. ಮುಂಬೈನ ಮರಾಠಿ ಸಂಗ್ರಹಾಲಯದವರು ಆ ಪುಸ್ತಕವನ್ನು ವರ್ಷದ ಶ್ರೇಷ್ಠ ಪುಸ್ತಕವೆಂದು ಪರಿಗಣಿಸಿ ಶಂ. ಬಾ. ಜೋಶಿಯವರನ್ನು ಕರೆಸಿ ಸನ್ಮಾನಿಸಿದರು. ಇದರಿಂದ ಶಂ. ಬಾ. ಅವರ ಹೆಸರು ಮರಾಠಿ ಸಾಹಿತ್ಯದಲ್ಲಿ ಕೂಡ ಅಚ್ಚಳಿಯದ ಹೆಸರಾಯಿತು.

ಈ ಮಧ್ಯೆ ಶಂ. ಬಾ. ಅವರು ಭಾಷೆ-ಸಂಸ್ಕೃತಿ, ಧರ್ಮ ತತ್ವಜ್ಞಾನಗಳ ಬಗೆಗೆ ಮೌಲಿಕವಾದ ಅಧ್ಯಯನ ಮಾಡಿ ‘ಹಾಲುಮತ ದರ್ಶನ’ ಕೃತಿಯಲ್ಲಿ ಶೈವ ಮತ್ತು ವೈಷ್ಣವ ಸಮಸ್ಯೆಗಳ ಮೂಲಬೇರನ್ನು ಕುರಿತು ವ್ಯಾಪಕವಾಗಿ ಚರ್ಚಿಸಿದರು. ಹೀಗೆ ಅವರ ವ್ಯಾಸಂಗ ಮತ್ತೊಂದು ದಿಕ್ಕಿನೆಡೆಗೆ ಸಾಗಿತು. ಅದರ ಫಲವಾಗಿ ಬಂದದ್ದು ‘ಋಗ್ವೇದ ಸಾರ’, ‘ನಾಗಪ್ರತಿಮಾ ವಿಚಾರ’, ‘ಪ್ರವಾಹಪತಿತರ ಕರ್ಮ’, ‘ಹಿಂದೂ ಎಂಬ ಧರ್ಮ’, ‘ಭಗವದ್ಗೀತೆಯಲ್ಲಿ ಹುದುಗಿರುವ ರಾಜಯೋಗದ ಸ್ವರೂಪ’, ‘ವೈವಸ್ವತ ಮನು ಪ್ರಣೀತ ಮಾನವ ಧರ್ಮದ ಆಕೃತಿ’, ‘ಬುಧನ ಜಾತಕ’, ‘ಭಿತ್ತಿದ್ದನ್ನು ಬೆಳಕೋ’ ಇತ್ಯಾದಿ. ಇವೆಲ್ಲ ಕೃತಿಗಳಲ್ಲಿ ಅನುಕ್ರಮವಾದ ಅಧ್ಯಯನ ಉಂಟು. ಇವು ಶಂ.ಬಾ ಅವರ ವಿಚಾರ ಸಂಶೋಧನೆಗಳಿಗೆ ಹೆಗ್ಗಂಬಗಳಾಗಿವೆ.

ಶಂ. ಬಾ. ಅವರ ‘ಬುಧನ ಜಾತಕ’ದಲ್ಲಿ ಋಷಿ-ಮುನಿ, ಜೀವ-ಜೀವಿತ, ಹಗಲು-ಕತ್ತಲು; ಮನುಜತ್ವ-ನರತ್ವ, ಸೂರ್ಯ-ಚಂದ್ರ, ಭಾವಾತ್ಮಕ-ಅಭಾವಾತ್ಮಕ, ಇವುಗಳಲ್ಲಿರುವ ಅಂತರವನ್ನು ಕುರಿತು ಮೊದಲಿನಂತೆ ಅನೇಕ ಶಾಸ್ತ್ರಗಳ ನೆರವಿನ ಅಧ್ಯಯನದಿಂದ ಶಂ. ಬಾ. ಅವರು ಕಂಡುಕೊಂಡಿರುವ ಅರ್ಥಗ್ರಹಣ ಪದ್ಧತಿ ಏನಿದೆಯೋ ಅದು ಶಂ. ಬಾ. ಅವರು ಭಾರತೀಯ ಪ್ರಾಚ್ಯೇತಿಹಾಸಕ್ಕೆ ಕೊಟ್ಟಿರುವ ಅಪ್ರತಿಮ ಕೊಡುಗೆ. ಅಷ್ಟೇ ಅಲ್ಲದೆ, ಬುದ್ಧಿ ಮತ್ತು ಪ್ರಜ್ಞೆಗೂ ಇದ್ದ ಅಂತರವನ್ನು ತಿಳಿಯಲಾಗದೆ ಇದ್ದ ಸ್ಥಿತಿ, ಇದು ನಷ್ಟವಾದದ್ದನ್ನು ಆಧುನಿಕ ಮನಃಶಾಸ್ತ್ರದ ಮೂಲಕ ಸೂಚಿಸಿ, ಆಚಾರ ವಿಚಾರಗಳನ್ನು ಬುದ್ಧಿಗೆ ಅಧೀನವಾಗಿ ಬಾಳಿದರೆ ಎಂಥ ಆಶಯಗಳು ರೂಪುಗೊಳ್ಳುತ್ತವೆ ಎಂಬುದನ್ನು ಬುಧನ ಜಾತಕದಲ್ಲಿ ಐನ್ ಸ್ಟೈನ್, ರಸೆಲ್ ಮುಂತಾದವರ ಪರಿಭಾಷಾ ಸಂಕೇತದಿಂದ ಸೊಗಸಾಗಿ ನಿರೂಪಿಸಿದ್ದಾರೆ. ಬುದ್ಧಿಗೂ ಪ್ರಜ್ಞೆಗೂ ಇರುವ ಅಂತರವನ್ನು ನಾವು ತಿಳಿಯಬೇಕು.

ಈ ಅಂತರ ತಿಳಿದಾಗಲೇ ತಿಳುವಳಿಕೆ ಆಗಲು ಸಾಧ್ಯ ಎಂಬ ಅಂಶವನ್ನು ಸೂಚಿಸಿ ಭಾಷೆಯು ಮೈದೋರಲು ಬುದ್ಧಿ ಕಾರಣವಾಗಿರದೆ; ಪ್ರಜ್ಞೆ ಕಾರಣವಾಗಿದೆ. ಇದರಿಂದ ಜೀವನ-ಸಂಸ್ಕೃತಿ ಅರಿಕೆ ಬರುತ್ತದೆ, ಎಂಬ ಸಂಗತಿಯನ್ನು ಹೊಚ್ಚ ಹೊಸದಾಗಿ ಶಂ.ಬಾ ಅವರು ನಿರೂಪಿಸಿದ್ದಾರೆ.

ಶಂ.ಬಾ ಅವರು ಮೂಲತಃ ವಿಚಾರವಾದಿಗಳು. ವಿಚಾರವೇ ಜೀವನದ ಬೆಳಕು ಎಂಬ ಪ್ರಜ್ಞೆಯನ್ನು ಹೊತ್ತುಕೊಂಡು ಹೊರಟವರು. ಕಂನಡ ನಾಡಿನಲ್ಲೇ ಸಮರ್ಪಕವಾದ ಜಿಜ್ಞಾಸೆಗೆ ಹೆಜ್ಜೆ ಹಾಕಿದವರು. ಶಂ. ಬಾ ಅವರು ತಾವು ಕೈ ಹಾಕಿದ ಪ್ರತಿಯೊಂದರಲ್ಲೂ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕಂಡುಕೊಂಡಿದ್ದಾರೆ. ಲಿಖಿತ ಶಾಸನಾದಿಗಳು, ಕಾವ್ಯಗಳಿಂದ ಸಂಸ್ಕೃತಿಯ ಅಧ್ಯಯನ ನಡೆಯುತ್ತಿದ್ದ ಕಾಲದಲ್ಲಿ ಆಚಾರ, ಸಂಪ್ರದಾಯ, ಜಾನಪದ ನಂಬಿಕೆಗಳನ್ನು ಲೆಕ್ಕಿಸದೆ ಸಂಸ್ಕೃತಿ ಅಧ್ಯಯನ ಮಾಡಿದರೆ ಅದರಲ್ಲಿ ಅರ್ಥವಿಲ್ಲವೆಂದು ಹೇಳಿದ್ದುದಲ್ಲದೆ ಅದನ್ನು ಮಾಡಿ ತೋರಿಸಿದರು. ಸಂಸ್ಕೃತಿಯ ಅಧ್ಯಯನಕ್ಕೆ ಭಾಷಾಶಾಸ್ತ್ರ, ಮನಃಶಾಸ್ತ್ರ, ಜೀವಶಾಸ್ತ್ರ, ಪರಾತತ್ವಶಾಸ್ತ್ರ, ಇತಿಹಾಸಶಾಸ್ತ್ರ, ದೈವತಾಶಾಸ್ತ್ರ ಹೀಗೆ ನಾನಾ ಶಾಸ್ತ್ರಗಳ ನೆರವಿನಿಂದ ಅಧ್ಯಯನ ಮಾಡಿದರು. ವಿ. ಸೀತಾರಾಮಯ್ಯನವರು ಶಂ.ಬಾ ಜೋಶಿಯವರನ್ನು “ಅಪಾರವಾದ ಬುದ್ಧಿಮತ್ತೆಯಿಂದ ತಮ್ಮ ಅಧ್ಯಯನವನ್ನು ಸ್ಪಷ್ಟವಾಗಿಸಿಕೊಂಡ ಧೀಮಂತ ಸಂಶೋಧಕ” ಎಂದೂ; ಶಿವರಾಮಕಾರಂತರು “ನಾಡುನುಡಿಗಳ ಬಗೆಗೆ ಪ್ರಾಂಜಲ ಮನಸ್ಸಿನಿಂದ ಜನಹಿತಕ್ಕಾಗಿ, ವಿವಸ್ವನ್ ಮನು ಮಾನವಧರ್ಮದ ಬಾಳಿಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಸತ್ಯಾನ್ವೇಷಕ” ಎಂದೂ ಬಣ್ಣಿಸಿದ್ದಾರೆ.

ವೈಚಾರಿಕ ನೋಟವೇ ಇಲ್ಲದ ಕಾಲದಲ್ಲಿ ಜನಕ್ಕೆ ವೈಚಾರಿಕ ಒಳನೋಟವನ್ನು ನೀಡಿದವರು ಶಂ.ಬಾ. ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್, ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ‘ಅಧ್ಯಯನ’ ಎಂಬ ಅಭಿನಂದನ ಗ್ರಂಥ ಮುಂತಾದ ಹಲವಾರು ಗೌರವಗಳು ಶಂ. ಬಾ. ಅವರಿಗೆ ಸಂದಿವೆ. ಶಂ. ಬಾ. ಅವರು ಸೆಪ್ಟೆಂಬರ್ 28, 1991ರಲ್ಲಿ ಈ ಲೋಕವನ್ನು ಅಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನೆನಪಿನ ನಮನಗಳು.


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!