ಸಿಂದಗಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರ ಮೇಲೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಹಣ ದುರ್ಬಳಕೆ ಸೇರಿದಂತೆ ಇಲ್ಲಸಲ್ಲದ ಆರೋಪಗಳನ್ನು ಸೃಷ್ಟಿಸಿ ಕೇಂದ್ರ ಸರಕಾರದ ಅಧೀನದಲ್ಲಿರುವ ಇಡಿ, ಐಟಿ, ಸಿಬಿಐ ಸಂಸ್ಥೆಗಳ ಮೂಲಕ ವಿಚಾರಣೆಗೆ ಬುಲಾವು ಮಾಡಿದ್ದನ್ನು ಖಂಡಿಸಿ ಜು.22 ರಂದು ದೇಶದ ಎಲ್ಲ ಜಿಲ್ಲೆಗಳಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಅದರಂತೆ ವಿಜಯಪುರದಲ್ಲಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಹೇಳಿದರು.
ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಆಲಮೇಲ ಸಿಂದಗಿ ಬ್ಲಾಕ್ ಸಮಿತಿಯಿಂದ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮುಂಚೆ ರಾಹುಲ್ ಗಾಂಧಿಯವರನ್ನು 5 ದಿನಗಳ ಕಾಲ ವಿಚಾರಣೆ ನಡೆಸಿ ಯಾವುದೇ ಪುರಾವೆಗಳು ಲಭ್ಯವಾಗದಿರುವ ಕಾರಣ ನಿರ್ದೋಷಿ ಎಂದು ಸಾಬೀತುಪಡಿಸಿದ್ದಾರೆ ಅದೇ ರೀತಿಯಲ್ಲಿ ಇವರನ್ನು ವಿಚಾರಣೆಗೆ ಬುಲಾವು ಮಾಡಿದ್ದು ಎಲ್ಲ ರಾಜ್ಯಗಳಲ್ಲಿರುವ ನಾಯಕರು ಮಾತಿಗೆ ಬಗ್ಗದಿದ್ದರೆ ಐಟಿ ಅಥವಾ ಇಡಿ ದಾಳಿ ನಡೆಸುವ ಮೂಲಕ ಅವರ ರಾಜಕೀಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಇಂತಹ ಕುತಂತ್ರ ಬುದ್ದಿಗೆ ಇಳಿದಿದ್ದಾರೆ. ಕಳೆದ ಗೋವಾ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ನಡೆಸಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡು ಬ್ರಿಟೀಷ್ ಆಡಳಿತ ಕ್ಕಿಂತಲೂ ಕಠಿಣ ಆಡಳಿತ ನಡೆಸುತ್ತಿದ್ದಾರೆ ಅಲ್ಲದೆ 8 ವರ್ಷದ ಆಡಳಿತದಲ್ಲಿ ಡಾ. ಅಂಬೇಡ್ಕರರು ರಚಿಸಿದ ಸಂವಿಧಾನವನ್ನು ಧೂಳಿಪಟ ಮಾಡಿ ಇಡೀ ದೇಶವನ್ನೆ ಮಾರಾಟ ಮಾಡುವ ಹಂತಕ್ಕೆ ತಲುಪಿಸಿದ್ದಾರೆ. ಜನಸಾಮಾನ್ಯರಿಗೆ ಹೊರೆಯಾಗುವಂತೆ ದಿನಬಳಕೆ ವಸ್ತುಗಳ ಮೇಲೆ ಜಿಎಸ್ಟಿ ಹೇರಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತ ಕೆಲಸ ಮಾಡುತ್ತಿದೆ ಎಂದು ಅರೋಪಿಸಿದರು.
ರೈತರ ಗೋಳು ಕೇಳದ ಸರಕಾರ; ಗುತ್ತಿಬಸವಣ್ಣ ಏತನೀರಾವರಿಗಾಗಿ ಕಳೆದ ಕಾಂಗ್ರೆಸ್ ಸರಕಾರದಲ್ಲಿ ರೂ 58 ಕೋಟಿ ವೆಚ್ಚದಲ್ಲಿ 8 ಜಾಕವೆಲ್ಗಳಿಗೆ ಮೋಟಾರಗಳನ್ನು ಅಳವಡಿಸಲಾಗಿತ್ತು ಕಳೆದ 1 ವರ್ಷದಿಂದ ಅವು ಕೆಟ್ಟು ನಿಂತಿವೆ ಅವುಗಳನ್ನು ರಿಪೇರಿ ಮಾಡಿಸಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡದೇ ಕಣ್ಣಿರು ತರುವಂತ ಕಾರ್ಯ ನಡೆಸಿದ್ದಾರೆ. ರೈತರ ಹೋರಾಟ ನಡೆಸುತ್ತಿದ್ದಾರೆ ಸೌಜನ್ಯಕ್ಕಾದರೂ ನೀರಾವರಿ ಸಚಿವ ಗೊವಿಂದ ಕಾರಜೋಳ ಅವರು ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸಕ್ಕೆ ಮುಂದಾಗದ ರೈತ ವಿರೋಧಿ ಸರಕಾರವಾಗಿದೆ ಇದನ್ನು ಕಾಂಗ್ರೆಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಅಲ್ಲದೆ ರೈತರ ತೊಂದರೆ ನೀಗಿಸದೇ ಇದ್ದರೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗುಂಪುಗಾರಿಕೆ ಇಲ್ಲ; ಈ ಮತಕ್ಷೇತ್ರದಲ್ಲಿ ಯಾವುದೇ ಬಣವಿಲ್ಲ ಹಾಗೂ ಯಾವುದೇ ಗುಂಪು ಇಲ್ಲ ಎಲ್ಲರು ಕಾಂಗ್ರೆಸ್ ಪಕ್ಷದ ಮುಖಂಡರೇ. ಇದನ್ನು ವಿರೋಧ ಪಕ್ಷಗಳು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಳಿವೆ ಎಂದು ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿವೆ ಇದಕ್ಕೆ ಕಾರ್ಯಕರ್ತರು ಕಿವಿಗೊಡದೇ ನಾವೆಲ್ಲ ಒಂದು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರ 75 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಅಗಷ್ಟ್ 3 ರಂದು ದಾವಣಗೆರೆಯಲ್ಲಿ ಅಭಿಮಾನಿಗಳು ಹಮ್ಮಿಕೊಳ್ಳುತ್ತಿರುವ ಅಮೃತ ಮಹೋತ್ಸವಕ್ಕೆ ಹೋಗುವ ನಿಟ್ಟಿನಲ್ಲಿ ಜು.25 ರಂದು ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬ್ಲಾಕ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಮುಸ್ತಾಕ ಮುಲ್ಲಾ, ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಹಿರೇಕುರಬರ, ಎಂ.ಎ.ಖತೀಬ, ಮಲ್ಲಣ್ಣ ಸಾಲಿ, ಮಹಿಬೂಬ ತಂಬೋಳಿ(ಎಂ.ಆರ್ಟಿ), ಆಲಮೇಲ ಬ್ಲಾಕ್ ಸಮಿತಿ ಅಧ್ಯಕ್ಷ ಅಯೂಬ ದೇವರಮನಿ, ಶಾರದಾ ಬೇಟಗೇರಿ, ಇರ್ಫಾನ ಆಳಂದ, ಅಮೀತ ಚವ್ಹಾಣ, ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಗೊಲ್ಲಾಳ ಬಂಕಲಗಿ, ಬಸವರಾಜ ಯರನಾಳ, ಪ್ರತಿನಿಧಿ ಅನೀಲ ಕಡಕೋಳ ಸೇರಿದಂತೆ ಅನೇಕರು ಇದ್ದರು.