spot_img
spot_img

ಕೃತಿ ಪರಿಚಯ: ಸಮತಾ

Must Read

- Advertisement -

ಕನ್ನಡ ಸಾಹಿತ್ಯದ ಇತರ ಪ್ರಕಾರಗಳಂತೆ ಸಣ್ಣಕಥಾ ಪ್ರಕಾರವು ಅನೇಕ ಹೊಸ ಹೊಸ ತಿರುವುಗಳನ್ನು ಪಡೆದು ಇಂದು ವಿಶಿಷ್ಟ ವಸ್ತು, ಭಾಷೆ, ತಂತ್ರ, ಸಾಂಕೇತಿಕತೆಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತ ನಡೆದಿದೆ. ಈ ಕ್ಷೇತ್ರದಲ್ಲಿ ಹೊಸದಾಗಿ ಪಾದಾರ್ಪಣೆ ಮಾಡಿದ ಹತ್ತು ಜನ ಕಥೆಗಾರರು ರಚಿಸಿದ ಕಥಾಸಂಕಲನವೇ ಸಮತಾ.

ಇದನ್ನು ಸಂಪಾದಿಸಿದವರು ಡಾ. ವೀರಣ್ಣ ರಾಜೂರ ಹಾಗೂ ಪ್ರೊ. ಕಾಶಿಪುಟ್ಟ ಸೋಮಾರಾಧ್ಯರು. ಇದು 1983ರಲ್ಲಿ ಮಂಗಳ ಪ್ರಕಾಶನ, ಧಾರವಾಡದಿಂದ ಪ್ರಕಟವಾಗಿದೆ. 129 ಪುಟದ ಹರವು ಪಡೆದಿದೆ.

ಈ ಕೃತಿಯ ಕತೆಯನ್ನು ಸಂಪಾದಕರು ಹೇಳುವದು ಹೀಗೆ. ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಎಂಬತ್ತರ ದಶಕದಲ್ಲಿ ಹತ್ತುಜನ ತರುಣರು ಸಹಾಯಕ ಸಂಶೋಧಕರಾಗಿ ಕೆಲಸಮಾಡುವ ಸುಸಂದರ್ಭದಲ್ಲಿ; ಅದರ ಸವಿನೆನಪಿನ ದ್ಯೋತಕವಾಗಿ. ನಮ್ಮೆಲ್ಲರ ಪ್ರೀತಿ ವಿಶ್ವಾಸದ ಶಾಶ್ವತ ಕುರುಹಾಗಿ ಒಂದು ಕೃತಿ ಹೊರತರಬೇಕು. ಅದರಲ್ಲಿ ಎಲ್ಲರ ಒಂದೊಂದು ಲೇಖನ ಸಮಾವೇಶಗೊಂಡಿರಬೇಕು. ಈ ನೆಪದಲ್ಲಾದರೂ ಎಲ್ಲರೂ ಬರವಣಿಗೆಗೆ ತೊಡಗಬೇಕು. ಸರಿ, ತಿಳಿಸಿದೆವು. ಎಲ್ಲರಿಂದ ಒಪ್ಪಿಗೆ ದೊರೆಯಿತು. ಕೃತಿ ಯಾವ ರೀತಿಯ ಲೇಖನಗಳನ್ನೊಳಗೊಂಡಿರಬೇಕೆಂಬ ಪ್ರಶ್ನೆ ಉದ್ಭವಿಸಿತು.

- Advertisement -

ಸಂಶೋಧಾತ್ಮಕವಾಗಿರಲೆಂದು ಕೆಲವರು. ವಿಮರ್ಶಾತ್ಮಕವಾಗಿರಲೆಂದು ಕೆಲವರು. ಕೊನೆಗೆ ಸಂಶೋಧನಾತ್ಮಕ ಲೇಖನಗಳೆ ಇರಲಿ ಎಂದು ನಿರ್ಧಾರವಾಯಿತು. ತಮ್ಮ ತಮ್ಮ ಇಷ್ಟಾನುಸಾರ ವಿಷಯ ಆಯ್ಕೆಮಾಡಿಕೊಂಡು ಲೇಖನ ಸಿದ್ದಪಡಿಸಲು ತಿಳಿಸಿದೆವು. ಸಂಶೋಧನ ಕ್ಷೇತ್ರದಲ್ಲಿ ಆಗತಾನೆ ಪ್ರವೇಶಿಸುತ್ತಿದ್ದ ನಮ್ಮಲ್ಲಿ ಕೆಲವರಿಗೆ ಹೇಗೆ ಬರೆಯುವುದು? ಏನಾದರೂ ಬರೆದರೆ ನಾಳೆ ವಿಮರ್ಶಕರ ಕಟುಟೀಕೆಗೆ ಗುರಿಯಾದರೆ ಹೇಗೆ? ಎಂಬ ಶಂಕೆ ಮೂಡಿತು.

ಬಹಳಷ್ಟು ಜನ ಅದೇ ನೆಪಒಡ್ಡಿ ಬರೆಯಲು ಹಿಂದೇಟು ಹಾಕಿದರು. ಅದರಿಂದ ಸಂಶೋಧನಾತ್ಮಕ ಪ್ರಬಂಧಗಳ ಸಂಕಲನ ಹೊರತರುವ ವಿಚಾರವನ್ನು ಅಷ್ಟಕ್ಕೆ ಕೈಬಿಡಬೇಕಾಯಿತು. ಆದರೆ ಪುಸ್ತಕ ಪ್ರಕಟಿಸಬೇಕೆಂಬ ಗುಂಗು ಮಾತ್ರ ನಮ್ಮ ತಲೆಯಿಂದ ದೂರಾಗಲಿಲ್ಲ.

ಸ್ವಲ್ಪ ದಿವಸದ ನಂತರ ಮತ್ತೊಮ್ಮೆ ಪ್ರಯತ್ನಿಸಿದೆವು. ಸಂಶೋಧನಾತ್ಮಕ ಪ್ರಬಂಧದ ವಿಚಾರ ಬೇಡವಾದರೆ ಬಿಡಿ. ನಮ್ಮ ನಮ್ಮ ಅನುಭವಕ್ಕೆ ಬಂದ ಒಂದೊಂದು ಘಟನೆಗಳನ್ನು ಎತ್ತಿಕೊಂಡು ಕಥೆಗಳನ್ನಾದರೂ ಬರೆದುಕೊಡಬಹುದಲ್ಲ. ಅದಕ್ಕೆ ಯಾವ ಅಡ್ಡಿ ಆತಂಕಗಳೂ ಇಲ್ಲ ಎಂದು ತಿಳಿಸಿದೆವು.

- Advertisement -

ಎಲ್ಲರೂ ಒಮ್ಮನಸ್ಸಿನ ಸಮ್ಮತಿ ನೀಡಿದರು. ದಿನಾಂಕ 9-3-1978 ರಂದು ಕೂಡಿದ ಹತ್ತು ಜನರ ಮಿತ್ರಕೂಟದಲ್ಲಿ ಎಲ್ಲರೂ ಒಂದೊಂದು ಕಥೆಗಳನ್ನು ಒಂದು ತಿಂಗಳ ಅವಧಿಯಲ್ಲಿ ಬರೆದುಕೊಡಬೇಕು. ಅದರ ಜೊತೆಗೆ ಗ್ರಂಥ ಮುದ್ರಣ ವೆಚ್ಚಕ್ಕಾಗಿ ಪ್ರತಿಯೊಬ್ಬರೂ ಐವತ್ತು ರೂಪಾಯಿಗಳನ್ನೂ ಕೊಡಬೇಕು. ಗುರುಗಳಾದ ಡಾ. ಆರ್.ಸಿ.ಹಿರೇಮಠ ಅವರಿಗೆ ಈ ಕೃತಿಯನ್ನು ಅರ್ಪಿಸಬೇಕು ಎಂದು ಸರ್ವಸಮ್ಮತಿಯ ನಿರ್ಣಯಕ್ಕೆ ಬರಲಾಯಿತು ಎಂದು ನೈಜವಾದ ನುಡಿಗಳನ್ನು ನೇರವಾಗಿ ಹೇಳಿದ್ದಾರೆ. ಈ ಕೃತಿ ಹೊರತರುವಲ್ಲಿ ಅಂದು ಯಶಸ್ವಿಯಾಗಿದ್ದಾರೆ.

ಈ ಕೃತಿ ಕುರಿತು ಎನ್ಕೆಯವರ ವಿಮರ್ಶಾ ನುಡಿಗಳು ಹೀಗೆ ಅನಾವರಣಗೊಂಡಿವೆ ಮುನ್ನುಡಿಯಲ್ಲಿ. ಅವುಗಳ ಒಟ್ಟು ಆಶಯವನ್ನು ಹೀಗೆ ಗ್ರಹಿಸಬಹುದು. ಐವರು ಕತೆಗಾರ್ತಿಯರು, ಐವರು ಕತೆಗಾರರುಳ್ಳ ಈ ಸಂಕಲನದಲ್ಲಿ 10 ಸಣ್ಣಕತೆಗಳಿವೆ. ಇವರಲ್ಲಿ ಕತೆಗಾರ್ತಿಯರು ಇನ್ನೂ ಪಳಗಬೇಕಾಗಿದೆ. ಪಳಗಬಲ್ಲರು ಎಂಬ ಭರವಸೆಯನ್ನು ತಾಳಿ ನಿಂತಿವೆ. ಇಲ್ಲಿಯ ಅವರ ಕತೆಗಳು. ಕತೆಯ ಹಿಡಿತ, ತಂತ್ರಗಳು ಅನುಭವ ಬೆಳೆದಂತೆ ಓದು ಹೆಚ್ಚಿದಂತೆ ಒಂದು ರೂಪಕ್ಕೆ ಬರುವ ಸಾಧ್ಯತೆ ಇದೆ. ಡಾ. ನಿಜಲಿಂಗಮ್ಮ ಕೊಪ್ಪಳ ಅವರ ಕಥಾವಸ್ತು ವಿಸ್ತಾರ.

ಒಂದು ಕಾದಂಬರಿಗೂ ಸಾಲುವಷ್ಟು ದ್ರವ್ಯವನ್ನು ಹೊತ್ತು ನಿಂತಿದೆ. ಬದುಕಿನ ಮೌಲ್ಯವನ್ನು ಎತ್ತರಿಸುವ ಹವಣಿಕೆಯಲ್ಲಿ ನೀತಿಯನ್ನು ತಿಳಿಹೇಳುವ ಗಂಗವ್ವನಂತಹ ಉದಾರ ಪಾತ್ರವೊಂದನ್ನು ಸೃಷ್ಟಿಸಿದ್ದಾರೆ. ಶ್ರೀಮತಿ ಸುಲೋಚನ ಮಟ್ಟಿ, ಶ್ರೀಮತಿ ಶಾಂತಾದೇವಿ ಸಣ್ಣೆಲಪ್ಪನವರ ಹಾಗೂ ಶ್ರೀಮತಿ ಪುಷ್ಪವತಿ ಅವರ ಕತೆಗಾರಿಕೆಯು ಇನ್ನೂ ಕುದುರಬೇಕು.

ಶ್ರೀಮತಿ ಪುಷ್ಪವತಿ ಅವರ ಕತೆ ಸಂಪ್ರದಾಯ-ಸುಧಾರಣೆಗಳ ತಿಕ್ಕಾಟವನ್ನೂ ಎರಡು ತಲೆಮಾರಿನ ಚಿತ್ರಣದ ಮೂಲಕ ರೂಪಿಸಲೆತ್ನಿಸಿದ ರೀತಿ ಇನ್ನಷ್ಟು ತೀಕ್ಷ್ಣವಾಗಿರಬೇಕು. ಶ್ರೀಮತಿ ಮಧು ವೆಂಕಾರೆಡ್ಡಿಯವರು ಪತಿವ್ರತೆ ಎಂಬ ತಮ್ಮ ಕತೆಯಲ್ಲಿ ಮೇವಾಡದ ಐತಿಹಾಸಿಕ ಕಾದಂಬರಿಯನ್ನು ಸಂಗ್ರಹಿಸಲೆತ್ನಿಸಿದಂತಿದೆ. ಸಣ್ಣ ಕತೆಯೆಂದರೆ ಇದಲ್ಲ ಎಂದು ಎತ್ತಿ ಹೇಳಿದಂತಿದೆ ಎಂದು ಕತೆಗಾತಿಯರ ಕಥೆಗಳನ್ನು ವಸ್ತುನಿಷ್ಠ ನೆಲೆಯಲ್ಲಿ ವಿಮರ್ಶಿಸಿರುವ ಅರ್ಥಪೂರ್ಣಪೂರ್ಣವೆನಿಸಿದೆ.

ಇನ್ನು ಕತೆಗಾರರ ಕಥೆಯ ಕುರಿತ ಎನ್ಕೆಯವರ ವಿಚಾರಧಾರೆ ಹೀಗೆ ಅರಳಿದೆ. ಶ್ರೀ ಬಿರಾದಾರ ಹಿಡಿತದಲ್ಲಿ ಈ ಹಿಡಿತವಿದೆ. ಕಥಾವಸ್ತು ಲೈಂಗಿಕತೆಯಾದರೂ ನಿರೂಪಣೆಯಲ್ಲಿ ಮನುಷ್ಯನ ಮನೋದೌರ್ಬಲ್ಯ ವಿಶ್ಲೇಷಣೆ ಒಳಗೊಂಡ ನಾಟ್ಯಪೂರ್ಣ ಪ್ರಭಾವದ ಕೊನೆಯುಳ್ಳದ್ದಾಗಿದೆ.

ಶ್ರೀ ವೀರಣ್ಣ ರಾಜೂರ ಅವರ ಮೊದಲ ಪ್ರೀತಿಸಿದಾಕೆ ಯಾರು ಎಂಬ ಕುತೂಹಲಿಕೆಯಿಂದ ನಮ್ಮ ಚಿತ್ತವನ್ನೂ ತೇಲಿಸಿಕೊಂಡು ಹೋಗಿ ಆಕೆ ಇನ್ನಾರು ಅಲ್ಲ. ಪುಸ್ತಕರೂಪೀ ಸರಸ್ವತಿ ಎಂದು ತಿಳಿದಾಗ ಒಳ್ಳೆಯ ಪರಿಣಾಮ ಬೀರುತ್ತದೆ. ಇದರ ಕಲ್ಪನೆ ಹೊಸದಲ್ಲದಿದ್ದರೂ ಹೇಳುವ ರೀತಿ ಹೊಸತಾಗಿದೆ.

ಅದೇ ಕಲೆಗಾರನ ಸ್ವಂತಿಕೆಯ ಬಂಡವಾಳ. ಶ್ರೀಕಾಶೀಪುಟ್ಟ ಸೋಮಾರಾಧ್ಯರ ನಿಂಗಿ ಕಥಾವ್ಯಾಪ್ತಿಯನ್ನು ಮೀರಿನಿಂತ ವಸ್ತುವಾಗಿದ್ದರೂ ನಿಂಗಿಯ ಬಾಳಿನ ಕಹಿಕಟುತೆಗಳನ್ನೂ ಹೃದಯ ಸ್ಪರ್ಶಿಯಾಗಿ ಚಿತ್ರಿಸಿದೆ. ಮೃತ್ಯುದೇವತೆ ಕರುಣಾಮಯವಾಗಿ ನಿಂಗಿಗೆ ಶಾಂತಿ ಕರುಣಿಸಿದಳೊ ಎಂಬಂತೆ ಕೊಳದ ನೀರು ಶಾಂತವಾಯಿತು ಎಂಬ ಕೊನೆ ನಮ್ಮ ಮನದ ಕೊಳವನ್ನು ಕಲಕುತ್ತದೆ.

ಶ್ರೀ ಅಣ್ಣಾರಾಯ ಸಾಲಿಮನಿ ಅವರ ತಿರುವು ಜೀತದಾಳಿನ ಜೀವನದ ಒಂದು ಅದ್ಭುತ ತಿರುವನ್ನು ಎತ್ತಿ ತೋರಿಸುತ್ತದೆ. ಇಂದಿನ ಸಿರಿವಂತ ವರ್ಗದ ತುಳಿತವನ್ನು ಅನುಭವಿಸುವ ಜೀತ ಪ್ರಶ್ನೆ ಇಲ್ಲಿ ಪ್ರಧಾನತೆಯನ್ನು ಪಡೆದಿದೆ ಎಂದು ತೂಕಬದ್ದ ಮಾತುಗಳನ್ನು ಹೇಳಿದ್ದಾರೆ.

ಈ ಕಥಾ ಸಂಕಲನದ ಶೀರ್ಷಿಕೆ ಸಮತಾ ಸ್ತ್ರೀ-ಪುರುಷರಿಬ್ಬರೂ, ಸಮನಾಗಿ ಪ್ರತಿನಿಧಿಸಲ್ಪಟ್ಟ ಈ ಸಂಕಲನ ಸಮತಾಭಾವವನ್ನೆತ್ತಿ ಹಿಡಿಯುತ್ತದೆ ಎಂದು ನೈಜ ವಿಚಾರಗಳನ್ನು ಹೇಳಿದ್ದಾರೆ.

ಹೀಗೆ ಸಂಪಾದಕರು ಕೃತಿ ಪ್ರಕಟಣೆ ಕಷ್ಟ ಎನ್ನುವ ಕಾಲದಲ್ಲಿ ಎಲ್ಲ ಕತೆಗಾರರ ಮನವೊಲಿಸಿ ಕತೆಗಳನ್ನು ಬರೆಯಿಸಿ; ತಮ್ಮ ಗುರಿಯನ್ನು ತಲುಪಿ ಸಮತಾ ಕಥಾಸಂಕಲನವನ್ನು ಬೆಳಕಿಗೆ ತಂದಿರುವದು ಅರ್ಥಪೂರ್ಣ ಕಾರ್ಯವೆಂದು ಹೇಳಬಹುದು. ಗುರುವೃಂದದ ಕಥೆ ಓದುವ ಭಾಗ್ಯ ನನಗೆ ದೊರೆತು. ಈ ಕೃತಿ ಬಗ್ಗೆ ಬರೆಯುವ ಸುಯೋಗ ಒದಗಿಸಿದ ವಿದ್ಯಾಗುರುಗಳಾದ ಡಾ.ವೀರಣ್ಣ ರಾಜೂರ ಅವರಿಗೆ ಕೋಟಿ ಪ್ರಣಾಮಗಳು.


ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group