‘ವಚನ ಪರಿಮಳ’: ಒಂದು ಅವಲೋಕನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

೧೨ನೇ ಶತಮಾನದ ಬಸವಾದಿ ಶಿವಶರಣರಿಂದ ರಚನೆಗೊಂಡ ವಚನಸಾಹಿತ್ಯ ಕನ್ನಡ ಸಾಹಿತ್ಯಿಕ-ಸಾಂಸ್ಕೃತಿಕ-ಸಾಮಾಜಿಕ-ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಪ್ರಭಾವ-ಪರಿಣಾಮ ಅನೂಹ್ಯವಾದುದು. ಒಂದು ಸಾಹಿತ್ಯ ಪ್ರಕಾರ ಎಲ್ಲ ಆಯಾಮಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡದ್ದು ವಚನಸಾಹಿತ್ಯದ ಘಟ್ಟದಲ್ಲಿಯೇ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಪಂಪ-ರನ್ನ ಮೊದಲಾದವರು ಉತ್ತರ ಭಾರತದ ಆರ್ಯೀಕರಣದ ಮಹಾಭಾರತ ಕಥಾಪಾತ್ರಗಳೊಂದಿಗೆ ತಮ್ಮನ್ನು ಗೌರವಿಸಿದ ರಾಜ-ಸಾಮಂತರನ್ನು ಹೋಲಿಸಿ ಕಾವ್ಯಗಳನ್ನು ಬರೆದರು. ಹೀಗಾಗಿ ಪಂಪನ ಕಾಲದ ಸಾಹಿತ್ಯವನ್ನು ‘ವೀರಯುಗ’ವೆಂದು ಕರೆಯಲಾಯಿತು. ನಂತರ ೧೨ನೇ ಶತಮಾನದಲ್ಲಿ ರೂಪಗೊಂಡ ವಚನ ಸಾಹಿತ್ಯ ರಾಜಾಶ್ರಯದಿಂದ ಜನಸಾಮಾನ್ಯರ ಹತ್ತಿರ ಬಂದಿತು.

ಯಾಕೆಂದರೆ ವಚನಗಳನ್ನು ರಚಿಸಿದ ಬಹುತೇಕರು ಜನಸಾಮಾನ್ಯರೇ ಆಗಿದ್ದರು. ವಚನಸಾಹಿತ್ಯದ ಘಟ್ಟವನ್ನು ‘ಭಕ್ತಿಯುಗ’ವೆಂದು ಕರೆಯಲಾಗಿತು. ವಚನಗಳ ಮೂಲವನ್ನು ಎಂ. ಚಿದಾನಂದಮೂರ್ತಿ ಅವರು ತ್ರಿಪದಿಯಲ್ಲಿ, ಎಂ.ಎಂ.ಕಲಬುರ್ಗಿ ಅವರು ನಾಥಪಂಥದ ಸಾಹಿತ್ಯದಲ್ಲಿ, ಇನ್ನೂ ಕೆಲವು ವಿದ್ವಾಂಸರು ತಮಿಳುನಾಡಿನ ತೇವಾರಂ ಮೊದಲಾದ ಸಾಹಿತ್ಯದಿಂದ ಪ್ರೇರಣೆಗೊಂಡಿರಬಹುದೆAದು ಊಹಿಸಿದ್ದಾರೆ.

- Advertisement -

ಆದರೆ ‘ದೇವವಾಣಿ ಜನವಾಣಿಯಾಗದೇ ಇದ್ದಾಗ, ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೆ ಏರಿಸಿದ ಪವಾಡ ವಚನಕಾರರದು’ ಎಂಬ ಬಸವನಾಳರ ನುಡಿ, ಎಂ. ಆರ್. ಶ್ರೀ ಅವರು ‘ವಚನಗಳು ಕನ್ನಡದ ಸ್ವಯಾರ್ಜಿತ ಸಂಪತ್ತು’ ಎಂದು ವಚನಧರ್ಮಸಾರದಲ್ಲಿ ಹೇಳಿದ ಮಾತುಗಳಿಂದ ವಚನಗಳು ಸ್ವಯಂ ಸೃಷ್ಟಿ ಎಂಬುದನ್ನು ಮನಗಾಣಬಹುದು.

ವಚನಗಳ ಅಧ್ಯಯನ ಎನ್ನುವುದು ಹೊಸದೇನಲ್ಲ. ಕಳೆದ ಶತಮಾನದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಕಾಲದಿಂದಲೂ ಅದು ನಡೆಯುತ್ತಲೇ ಇದೆ. ವಚನಗಳ ಸಂಗ್ರಹ, ಸಂಪಾದನೆ, ಸಂಶೋಧನೆ, ವಿಶ್ಲೇಷಣೆ, ವಿಮರ್ಶೆ ಇತ್ಯಾದಿಗಳ ಕೆಲಸ ಗಣನೀಯ ಎನ್ನುವಷ್ಟು ಪ್ರಮಾಣದಲ್ಲಿ ನಡೆದಿರಬಹುದು. ವಚನಗಳ ಸಂದೇಶವನ್ನು ಇಂದಿನ ಲೋಕಕ್ಕೆ ತಿಳಿಸುವ ಸಲುವಾಗಿ ವಚನಾರ್ಥ, ವಚನಪದ ಕೋಶ, ವಚನ ವ್ಯಾಖ್ಯಾನ, ವಚನಸಾರ, ವಚನ-ನಿರ್ವಚನ, ವಚನಾಂತರಂಗ, ವಚನ ವಿಚಾರ-ಹೀಗೆ ಮತ್ತು ಇನ್ನೂ ಅನೇಕ ರೂಪಗಳಲ್ಲಿ ವಚನಗಳ ವಿವರಣೆ-ವರ್ಣನೆಗಳು ಪ್ರಕಟವಾಗಿವೆ.

ಆದರೂ ೧೯೬೦ರ ದಶಕದ ವರೆಗೆ ವಚನಗಳನ್ನು ಧರ್ಮದ ಚೌಕಟ್ಟಿನೊಳಗೆ ನೋಡುವ ಪ್ರಯತ್ನ ನಡೆದಿತ್ತು. ಡಾ. ಹಳಕಟ್ಟಿಯವರು ‘ವಚನ ಶಾಸ್ತç ಸಾರ’ ಎಂದು ಕರೆದರೆ, ರಂಗನಾಥ ದಿವಾಕರರು ‘ವಚನಶಾಸ್ತç ರಹಸ್ಯ’ ಎಂಬ ಕೃತಿ ರಚಿಸಿದರು. ನವ್ಯದ ಪ್ರಾರಂಭದ ಘಟ್ಟದಲ್ಲಿ ವಚನಗಳನ್ನು ಸಾಹಿತ್ಯಿಕ ದೃಷ್ಟಿಯಿಂದ ನೋಡುವ ಪರಂಪರೆ ಬೆಳೆಯಿತು. ಹೀಗಾಗಿ ವಿಶ್ವವಿದ್ಯಾಲಯಗಳಲ್ಲಿ ಈ ವಚನಗಳ ಕುರಿತು ನಿರಂತರವಾಗಿ ಅಧ್ಯಯನ ನಡೆದುಕೊಂಡು ಬಂದಿತು.

ಈ ಹಿನ್ನೆಲೆಯಲ್ಲಿ ಡಾ. ವಿ. ಬಿ. ಸಣ್ಣಸಕ್ಕರಗೌಡರ ಮತ್ತು ಡಾ. ಜಿ. ಜಿ. ಹಿರೇಮಠ ಅವರು ಕೂಡಿ ಸಂಪಾದಿಸಿದ ‘ವಚನ ಪರಿಮಳ’ ಒಂದು ಮೌಲಿಕ ಸಂಪಾದನಾ ಕೃತಿಯಾಗಿದೆ. ವಚನಗಳನ್ನು ವಿಭಿನ್ನ ನೆಲೆಗಳಲ್ಲಿ ತಲಸ್ಪರ್ಶಿಯಾಗಿ ವಸ್ತುನಿಷ್ಠವಾಗಿ ವ್ಯಾಖ್ಯಾನಿಸುವ ಪ್ರಯತ್ನ ಇಲ್ಲಿದೆ. ಆಧುನಿಕ ಸಾಮಾಜಿಕ ಸಂದರ್ಭಕ್ಕೂ ವಚನಗಳು ಹೇಗೆಲ್ಲ ಪ್ರಸ್ತತವೆನಿಸಿವೆ ಎಂಬುದನ್ನು ಇಲ್ಲಿಯ ಎಲ್ಲ ಲೇಖನಗಳು ಸಾಕ್ಷೀಕರಿಸುತ್ತವೆ.

ಡಾ. ಸಣ್ಣವೀರಣ್ಣ ದೊಡಮನಿ ಅವರು ‘ಹೊನ್ನ ನೇಗಿಲದಿ ಉಳುವಿದೊಡೆ…’ ಎಂಬ ಬಸವಣ್ಣನವರ ವಚನದ ಸಾಲುಗಳನ್ನು ಬಳಸಿಕೊಂಡು ವರ್ತಮಾನದಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟದ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಮಹದಾಯಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ಅವಲೋಕನ ಅರ್ಥಪೂರ್ಣವಾಗಿ ಮೂಡಿಬಂದಿದೆ. ನೀರಿಗಾಗಿ ರೈತ ಸಮುದಾಯ ಮಾಡುತ್ತಿರುವ ನಿರಂತರ ಹೋರಾಟವು ವಚನ ಸಾಹಿತ್ಯದ ಪ್ರಭಾವಲಯದಲ್ಲಿ ಹೇಗೆ ಪ್ರಕಾಶಿಸುತ್ತಿದೆ ಎಂಬುದನ್ನು ಚಿತ್ರಿಸಿದ್ದಾರೆ.

ಡಾ. ವಾಯ್. ಬಿ. ಕಡಕೋಳ ಅವರು ‘ಗುರು’ ಎಂಬ ಲೇಖನದಲ್ಲಿ, ವಚನಗಳಲ್ಲಿ ಅಲ್ಲಲ್ಲಿ ಉಕ್ತವಾದ ಗುರು ಪದದ ಸಾಲುಗಳನ್ನು ಬಳಸಿಕೊಂಡು ವಿಶ್ಲೇಷಣೆ ಮಾಡಿದ್ದಾರೆ. ಪ್ರಾಚೀನ ಕಾಲದ ಗುರುಗಳು-ಆಧುನಿಕ ಗುರುಗಳು ಉಭಯ ಗುರುಗಳ ವಾಸ್ತವ ಚಿತ್ರಣವನ್ನು ನಿರೂಪಿಸಿದ್ದಾರೆ.

ಐ. ಎಸ್. ಹಳ್ಳಿಕೇರಿ ಅವರ ‘ಶಿವಶರಣರಲ್ಲಿ ದೈವಭಕ್ತಿ’ ಲೇಖನದಲ್ಲಿ ಭಕ್ತನ ಸಕಲ ಸಲ್ಲಕ್ಷಣಗಳನ್ನು ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ. ಭಕ್ತಿಯ ಆಯಾಮಗಳು, ಭಕ್ತನಾದವನು ಮಾಡುವ ಭಕ್ತಿಯ ಪರಿಕಲ್ಪನೆಯ ವಿಭಿನ್ನ ಚಿಂತನೆಗಳು ಇಲ್ಲಿವೆ.

ಡಾ. ರೇಣುಕಾ ಕಠಾರಿ ಅವರು ‘ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ವ್ಯಕ್ತಿತ್ವ ವಿಕಸನ : ಪುನರ್‌ಮನನ’ ಎಂಬ ಲೇಖನದಲ್ಲಿ ಲಕ್ಕಮ್ಮನ ಸುಪ್ರಸಿದ್ಧ ವಚನ ‘ಆಸೆಯೆಂಬುದು ಅರಸಿಂಗಲ್ಲದೆ…’, ‘ತನುಶುದ್ಧವಿಲ್ಲದವಂಗೆ..’ ಮೊದಲಾದ ವಚನಗಳನ್ನು ಆಧುನಿಕ ಸಂದರ್ಭಕ್ಕೆ ಅನ್ವಯಿಸಿ ವಿವೇಚಿಸಿರುವುದು ತುಂಬ ಅರ್ಥಪೂರ್ಣವಾಗಿದೆ.

ಜಿ. ಜಿ. ಹಿರೇಮಠ ಅವರ ‘ಅಕ್ಕಮಹಾದೇವಿ ಅನುಭಾವ ಸಂಸ್ಕೃತಿ’ ಲೇಖನದಲ್ಲಿ ಅನುಭಾವದ ನೆಲೆ ಕಲೆಗಳನ್ನು ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾರೆ. ಡಾ. ರೇಖಾ ಹಳೆಮನಿ ಅವರು ‘ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಚಿಂತನೆಗಳು’ ಎಂಬ ಲೇಖನದಲ್ಲಿ ಜಾತಿಯತೆ, ಮಹಿಳಾ ಅಸಮಾನತೆಗಳನ್ನು ಹೊಡೆದೊಡೆಸಿ ಸರ್ವಾಂಗ ಸುಂದರ ಸಮಸಮಾಜದ ನಿರ್ಮಾಣಕ್ಕಾಗಿ ಏನೆಲ್ಲ ಪ್ರಯತ್ನ ಮಾಡಿದರು ಎಂಬುದನ್ನು ವಚನಗಳ ಉದಾಹರಣೆಯೊಂದಿಗೆ ತಿಳಿಸಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ನನ್ನ ಗಮನ ಸೆಳೆದ ಒಂದು ಮಹತ್ವದ ಲೇಖನವೆಂದರೆ- ಡಾ. ಸುರೇಶ ಹನಗಂಡಿ ಅವರ ‘ಬಸವ ತತ್ತ÷್ವದರ್ಶನ : ದೇಜಗೌ ದೃಷ್ಟಿ-ಸೃಷ್ಟಿ’. ಲಿಂಗಾಯತರಲ್ಲದವರು ಬಸವಣ್ಣನವರನ್ನು ಕುರಿತು ಇಟ್ಟುಕೊಂಡ ಭಕ್ತಿ-ಶ್ರದ್ಧೆ-ಗೌರವಗಳಿಗೆ ಈ ಲೇಖನ ನಿದರ್ಶನ ಒದಗಿಸುತ್ತದೆ. ದೇಜಗೌ ಅವರು ಬಸವಣ್ಣನವರನ್ನು ಕುರಿತು ಒಟ್ಟು ೧೦ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಆ ಎಲ್ಲ ಕೃತಿಗಳ ಸಮಗ್ರ ಸಂಪುಟವನ್ನು ಸುತ್ತೂರು ಮಠದ ಶ್ರೀಗಳು ಪ್ರಕಟಿಸಿದ್ದಾರೆ. ದೇಜಗೌ ಅವರು ರಚಿಸಿದ ಎಲ್ಲ ಕೃತಿಗಳನ್ನು ಡಾ. ಸುರೇಶ ಹನಗಂಡಿಯವರು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಹೊಸವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಡಾ. ಎಸ್.ಸಿ.ಪ್ರಭಾವತಿ ಅವರ ‘ವಚನಗಳಲ್ಲಿ ತಾತ್ವಿಕತೆ’ ಲೇಖನದಲ್ಲಿ ದಾರ್ಶನಕತೆ ಮತ್ತು ಅನುಭಾವಗಳು ಭಾರತೀಯ ತತ್ವಶಾಸ್ತçದ ಎರಡು ಅಮೂಲ್ಯ ಪದಗಳು. ಈ ಹಿನ್ನೆಲೆಯಲ್ಲಿ ವಚನಗಳಲ್ಲಿ ಅಡಕವಾಗಿರುವ ದಾರ್ಶನಿಕ ಚಿಂತನೆಗಳನ್ನು ಇಲ್ಲಿ ಗುರುತಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಲೋಹಿತ್ ಪಿ. ಅವರ ‘ಅಕ್ಕಮಹಾದೇವಿಯ ಸಾಮಾಜಿಕ ನಿಲುವು’ ಲೇಖನದಲ್ಲಿ ಅಕ್ಕಮಹಾದೇವಿಯು ಮೂಲತಃ ವೀರವಿರಾಗಿಣಿ. ಸಂಸಾರವನ್ನು ಬೆಂದ ಒಡಲು ಎಂದು ಜರಿದವಳು. ಇಂಥ ವೈರಾಗ್ಯಪರ ನಿಲುವಿನ ಅಕ್ಕ ಸಮಾಜದ ಕುರಿತು ಅಭಿವ್ಯಕ್ತಿಸುವ ವಿಚಾರಗಳೇನು ಎಂಬುದನ್ನು ಶೋಧಿಸಿಸಲಾಗಿದೆ.

ಗೀತಾ ಎಸ್. ಬೆಂಗಳೂರು ಅವರ ‘ವಚನಗಳಲ್ಲಿ ವೈಚಾರಿಕತೆಯ ನಿಲುವುಗಳು’ ಲೇಖನ ಸುದೀರ್ಘವಾಗಿದೆ. ಇಡೀ ವಚನ ಸಾಹಿತ್ಯದ ಅಸ್ತಿತ್ವವೇ ವೈಚಾರಿಕತೆಯ ತಳಹದಿಯ ಮೇಲೆ ನಿಂತಿದೆ. ಶರಣರ ವೈಚಾರಿಕ ಚಿಂತನೆಗಳು ಇಂದಿಗೂ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಹನುಮಂತ ನಿಂ. ತಳ್ಳಳ್ಳಿ ‘ವಚನ ಸಾಹಿತ್ಯ’ ಎಂಬ ಲೇಖನದಲ್ಲಿ ವಚನ ಸಾಹಿತ್ಯದ ಅರ್ಥ, ವಚನ ಸಾಹಿತ್ಯದ ಮೂಲ, ಈ ಕುರಿತು ವಿದ್ವಾಂಸರ ಅಭಿಪ್ರಾಯಗಳುಯ, ವಚನ ಸಾಹಿತ್ಯ ವೈಶಿಷ್ಟಗಳ ಕುರಿತು ತುಂಬ ವಾಸ್ತವ ನೆಲೆಯಲ್ಲಿ ವಿವರಿಸಿದ್ದಾರೆ.

ಸಂಶೋಧನಾ ವಿದ್ಯಾಥಿಗಳಾದ ಕಾವ್ಯಶ್ರೀ ಮಹಾಗಾಂವಕರ ಅವರ ‘ವಚನಕಾರ್ತಿಯರು : ಯಶೋದಮ್ಮ ಸಿದ್ದಬಟ್ಟೆ’ ಆಧುನಿಕ ವಚನಕಾರ್ತಿಯರ ಪರಿಚಯ ನೀಡುತ್ತದೆ.

ಡಾ. ತಿಪ್ಪೇಸ್ವಾಮಿ ಡಿ.ಎಸ್. ಅವರ ‘ವಚನ ಸಾಹಿತ್ಯ ಮತ್ತು ಶೈಕ್ಷಣಿಕ ಮೌಲ್ಯಗಳು’ ಎಂಬ ಲೇಖನದಲ್ಲಿ ಆಧುನಿಕ ಶಿಕ್ಷಣ ಪದ್ಧತಿಯ ಯಾವ ಲಕ್ಷಣಗಳೂ ಇಲ್ಲದ ಕಾಲದಲ್ಲಿಯೂ ಶಿವಶರಣರು ತಮ್ಮ ವಚನಗಳಲ್ಲಿ ಶೈಕ್ಷಣಿಕ ಚಿಂತನೆಗಳನ್ನು ಹೇಗೆಲ್ಲ ಆಲೋಚಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

ಡಾ. ಶೋಭಾ ಜನಗೊಂಡ ಅವರ ‘ವರ್ಣವ್ಯವಸ್ಥೆಯ ವಿರುದ್ಧ ಹೋರಾಡಿದ ದಲಿತ ಶರಣರು’ ಗಮನ ಸೆಳೆಯುವ ಲೇಖನವಾಗಿದೆ. ಕಕ್ಕಯ್ಯ, ಚನ್ನಯ್ಯ, ಅಂಬಿಗರ ಚೌಡಯ್ಯ, ಉರಿಲಿಂಗಪೆದ್ದಿ ಈ ದಲಿತ ವರ್ಗದ ಶರಣರು ವರ್ಣವ್ಯವಸ್ಥೆಯನ್ನು ಹೇಗೆ ವಿರೋಧಿಸಿದರು ಎಂಬುದನ್ನು ಪ್ರತಿಪದಿಸಿದ್ದಾರೆ.

ಶ್ರೀ ಆರ್. ಎ. ಬಡಿಗೇರ ಅವರ ‘ವಚನಗಳಲ್ಲಿ ಸಾರ್ವತ್ರಿಕ ಮೌಲ್ಯಗಳು’ ಲೇಖನ ತುಂಬ ವಸ್ತುನಿಷ್ಠ ಆಲೋಚನೆಗಳಿಂದ ಪರಿಪೂರ್ಣವಾಗಿದೆ. ಸಾರ್ವತ್ರಿಕ ಮೌಲ್ಯಗಳು ಯಾವ ಕಾಲಕ್ಕೂ ಈ ಮೌಲ್ಯಗಳು ಸಾರ್ವಕಾಲಿಕವಾಗಿರುತ್ತವೆ. ಅಂಥ ಮೌಲ್ಯಗಳನ್ನು ವಚನಕಾರರು ಅಭಿವ್ಯಕ್ತಿಸಿ ಇಂದಿಗೂ ಪ್ರಸ್ತುತವೆನಿಸಿದ್ದಾರೆ ಎಂಬುದನ್ನು ಇಲ್ಲಿ ಕಾಣಬಹುದು.

ಡಾ. ವ್ಹಿ. ಬಿ. ಸಣ್ಣಸಕ್ಕರಗೌಡರ ಅವರ ‘ಅಕ್ಕಮಹಾದೇವಿ ವಚನಗಳಲ್ಲಿ ಪ್ರಕೃತಿ ಸೌಂದರ್ಯ’ ಗಮನಾರ್ಹ ಲೇಖನವಾಗಿದೆ. ಪ್ರಕೃತಿಯೊಂದಿಗೆ ಅಕ್ಕಮಹಾದೇವಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಳು. ಚಿಲಿಮಿಲಿ ಎಂದೋದುವ ಗಿಳಿಗಳನ್ನು ಅವಳು ಮಾತನಾಡಿಸುತ್ತಾಳೆ. ಪ್ರಕೃತಿಯೊಂದಿಗೆ ಅವಳ ತಾದ್ಯಾತ್ಮತೆ ಅನನ್ಯವಾಗಿತ್ತು. ಅಂಥ ಕೆಲವು ವಚನಗಳನ್ನು ಸೋದಾಹರಣವಾಗಿ ವಿವರಿಸಿ ಅಕ್ಕ ಕಂಡ ಪ್ರಕೃತಿ ವಿಸ್ಮಯವನ್ನು ಇಲ್ಲಿ ಗುರುತಿಸಿದ್ದಾರೆ.

ಹೀಗೆ ಹದಿನೇಳು ಜನ ಲೇಖಕರು ವಚನಸಾಹಿತ್ಯದ ವೈವಿಧ್ಯಮಯ ಮುಖಗಳನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ವಚನ ಸಾಹಿತ್ಯದ ಸ್ವರೂಪ-ಲಕ್ಷಣ-ವಚನಗಳಲ್ಲಿ ಅಡಕವಾಗಿರುವ ಮೌಲ್ಯಪ್ರಜ್ಞೆ ಮೊದಲಾದವುಗಳನ್ನು ಸಮರ್ಪಕವಾಗಿ ವಿಶ್ಲೇಷಣೆಗೊಳಪಡಿಸಿದ್ದಾರೆ. ಈ ಲೇಖನಗಳ ಮೂಲಕ ವಚನಸಾಹಿತ್ಯದ ಕುರಿತಾಗಿ ಹೊಸ ಬಾಗಿಲೊಂದು ತೆರೆದಂತಾಗಿದೆ.

ಗಂಭೀರ ಚಿಂತನೆ, ವಸ್ತುನಿಷ್ಠ ವಿಮರ್ಶೆ, ಸಂವನಹಶೀಲ ಗುಣಗಳಿಂದಾಗಿ ಇಲ್ಲಿಯ ಎಲ್ಲ ಲೇಖನಗಳು ತುಂಬ ಆಪ್ತವಾಗಿವೆ. ವಚನ ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡುವವರಿಗೆ ಇದೊಂದು ಅತ್ಯುತ್ತಮ ಆಕರ ಕೃತಿಯಾಗಿದೆ. ಇಲ್ಲಿಯ ಎಲ್ಲ ಲೇಖಕರು ಗುಣಗ್ರಾಹಿಗಳು, ತಮ್ಮ ಗುಣಾತ್ಮಕ ಬರವಣಿಗೆಯ ಮೂಲಕ ವಚನ ಸಾಹಿತ್ಯದ ಅಂತಃಸತ್ವವನ್ನು ತೆರೆದು ತೋರಿಸುವ ಪ್ರಯತ್ನ ಮಾಡಿದ್ದಾರೆ.

ಓದುಗರಿಗೆ ಅತ್ಯುತ್ತಮ ಚಿಂತನೆಗಳನ್ನು ಕೊಡಮಾಡಿದ ಎಲ್ಲ ಲೇಖಕರನ್ನು ಮತ್ತು ಸಂಪಾದಕರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.


ಪ್ರಕಾಶ ಗಿರಿಮಲ್ಲನವರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!