spot_img
spot_img

ಪುಸ್ತಕಾವಲೋಕನ: ಲಾಟರಿ ಹುಡುಗನ ಹುಡುಕುತ್ತಾ…

Must Read

ಲಾಟರಿ ಹುಡುಗನ ಹುಡುಕುತ್ತಾ…

ಒಂದು ಪುಸ್ತಕ ಓದಿ ಅಭಿಪ್ರಾಯ ಬರೆಯುವುದು,ಇಂದು ಹಲವಾರು ಸಾಹಿತಿಗಳ ಜಾಣ್ಮೆಯ ವಿಷಯವಾಗಿದೆ. ಈಗಂತೂ ವಾಟ್ಸಾಪ್ ನಲ್ಲಿ ತದೇಕ ಚಿತ್ತದಲ್ಲಿ ವಿಮರ್ಶಾ ನುಡಿ ಬರೆಯುವುದು ಅನೇಕ ಸೃಜನಶೀಲ ಬರಹಗಾರರ ಅಭಿರುಚಿಯಾಗಿದೆ. ಲೇಖಕನ ಪುಸ್ತಕದ ಸಹ್ಯದ ಬರವಣಿಗೆ, ಸಾಹಿತ್ಯದ ಸ್ಥಾನಮಾನಗಳ ನಿರ್ಣಯವನ್ನು,ಕೃತಿಯ ಗುಣವೇ ಹೇಳುತ್ತದೆ.ಒಬ್ಬ ವಿದ್ವತ್ತು ಪಡೆದ ಬರಹಗಾರರು,ತಮ್ಮ ಪುಸ್ತಕದ ಕುರಿತು ವಿಮರ್ಶಾ ನುಡಿಯಾಗಲಿ, ಅಭಿಪ್ರಾಯವಾಗಲಿ ಬರೆದು ನೀಡಿರಿ ಎಂದು ಹೇಳುವುದಿಲ್ಲ.ಅವರ ಬದಲಾಗಿ ಆ ಪುಸ್ತಕವೇ ಓದುಗರಿಗೆ ಬರೆಯಲು ಪ್ರೇರಣೆ ತರುತ್ತದೆ.ಅಂಥ ಕೃತಿಗಳು ನಮ್ಮ ಓದಿಗೆ ತೃಪ್ತಿ ತಂದಿದೆ ಎಂದಾದರೆ ಏನಾದರೂ ಬರೆಯಲು ಆಸಕ್ತಿ ಮೂಡುತ್ತದೆ.

ಲಾಟರಿ ಹುಡುಗ ಕಥಾ ಸಂಕಲನವು ತುಂಬಾ ತೀವ್ರತರದಲ್ಲಿ ಓದಿಸಿಕೊಂಡು ಹೋಗಿರುವ ಕಾರಣಕ್ಕಾಗಿ  ನನ್ನ ಓದಿಗೆ ದಕ್ಕಿದ್ದರಿಂದ ಒಂದೆರಡು ಮಾತುಗಳಲ್ಲಿ  ಬರೆಯುತ್ತಿದ್ದೇನೆ.

ಸರಿ ಸುಮಾರು ಎಂಭತ್ತರ ದಶಕದಲ್ಲಿ ಬರೆದ ಕಥೆಗಳು  2020 ರಲ್ಲಿ ಪ್ರಕಟವಾಗಿವೆ ಎಂದರೆ,ಇವತ್ತಿಗೂ ಕಥೆಗಳು  ಎಲ್ಲೋ ಒಂದು ಕಡೆ  ಮನದ ಮೂಲೆಯಲ್ಲಿ ಮಡುಗಟ್ಟಿ,ಚಿಂತನೆಗೀಡು ಮಾಡುತ್ತವೆ.

ಗಂಗಾವತಿಯು  ಕೇವಲ ಭತ್ತದ ನಾಡು ಅಷ್ಟೇ ಅಲ್ಲ.ಜಯತೀರ್ಥರಾಜ ಪುರೋಹಿತರ ಕಾಲದಿಂದಲೂ ಸಾಹಿತ್ಯದ ರಾಶಿಯು ಬೆಳೆಯುತ್ತಾ ಬಂದು,ಕಾದಂಬರಿಕಾರರಾದ ಚೆನ್ನಳ್ಳಿಯವರು,ವಿಮರ್ಶಕರಾದ ಬಸವರಾಜ ಐಗೋಳ್ ಅವರು,ಸಂಶೋಧಕರಾದ ಡಾ.ಶರಣಬಸ್ಸಪ್ಪ  ಕೋಲ್ಕಾರವರು, ಸಂಶೋಧಕರಾದ ಡಾ.ಜಾಜಿ ದೇವೇಂದ್ರಪ್ಪನವರು,ನಾಟಕಕಾರದ ಎಸ್.ವಿ.ಪಾಟೀಲ್ ಗುಂಡೂರರವರು, ಕಥೆಗಾರರಾದ ಲಿಂಗಾರೆಡ್ಡಿ ಆಲೂರು ಅವರು,  ರಾಘವೇಂದ್ರ ದಂಡಿನ್ ಅವರು ರಮೇಶ ಗಬ್ಬೂರರವರು,ವೈದ್ಯ ಕವಿಗಳಾದ ಡಾ.ಶಿವಕುಮಾರ ಮಾಲಿ ಪಾಟೀಲ್ ರವರು,ಪರಶುರಾಮ ಪ್ರಿಯರವರು, ರಮೇಶ ಬನ್ನಿಕೊಪ್ಪರವರು,ಮೈಲಾರಪ್ಪ ಬೂದಿಹಾಳ ಅವರು,ಶ್ರೀದೇವಿ ಕೃಷ್ಣಪ್ಪನವರು,ಇನ್ನೂ  ಹಲವಾರು ಸಾಹಿತಿಗಳ ಜೊತೆ ಜೊತೆಗೆ  ರಾಘವೇಂದ್ರ ಮಂಗಳೂರು ಅವರ ತನಕ ಕಥೆಗಾರರು ಬೆಳೆಯುತ್ತಾ ಬಂದಿದ್ದಾರೆ.

ರಾಘವೇಂದ್ರ ಮಂಗಳೂರು ಅವರು ಬ್ಯಾಂಕ್ ಉದ್ಯೋಗಿಯಾಗಿ,ನಿವೃತ್ತಿ ಪಡೆದು ಈಗ ಸದ್ಯದ ಸ್ವಂತ ಗಂಗಾವತಿ ನೆಲದಲ್ಲಿ ನೆಲೆಸಿದ್ದಾರೆ.ನಾಡಿನ ಹೆಸರಾಂತ ಪತ್ರಿಕೆಗಳಾದ ರಾಗಸಂಗಮ, ಪ್ರಜಾಮತ, ಮಯೂರ, ತುಷಾರ, ಸುಧಾ,ಕರ್ಮವೀರ,ಕಸ್ತೂರಿ ಪತ್ರಿಕೆಗಳಲ್ಲಿ  ಅವರ ಕಥೆಗಳು ಪ್ರಕಟಗೊಂಡಿವೆ. ತಮ್ಮ ಸಾಹಿತ್ಯದ ಅನುಭವದೊಳಗೆ,ವೃತ್ತಿಯಿಂದ  ನಿವೃತ್ತಿಯಾದ ಬಳಿಕ ಕಥಾ ಸಂಕಲನದ  ರೂಪದಲ್ಲಿ ಓದುಗರ ಮನದೊಳಗೆ ಉಳಿಯಬೇಕೆಂಬ,ಮನುಷ್ಯ ಬದುಕಿನ ರಹಸ್ಯಗಳನ್ನು ಅಭಿವ್ಯಕ್ತಿಸಿ ಕಣ್ಣೆದುರು ಚಿತ್ರಗಟ್ಟುವಂತೆ ಚಿತ್ರಿಸಿ ನಿಲ್ಲಿಸಿದ್ದಾರೆ.

ಲಾಟರಿ ಹುಡುಗ ಕಥಾ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ. ಒಂದೊಂದು ಕಥೆಗಳು ಒಂದೊಂದು ಅಗಾಧವಾದ ಪ್ರಭಾವ ಬೀರುತ್ತವೆ.ಎಂಭತ್ತರ ದಶಕದಾಚೆ ಬರೆದ ಕಥೆಗಳು ಇಲ್ಲಿಯವರೆಗೆ ಓದುಗರನ್ನು ಪ್ರಶ್ನೆಗೀಡು ಮಾಡುತ್ತವೆ ಎಂದರೆ ಸಾರ್ವಕಾಲಿಕವಾದವುಗಳಾಗಿವೆ. ಸಮಾಜದಲ್ಲಿ ಸುಲಭವಾಗಿ ಮೋಸ ಹೋಗುವ ಯಾರನ್ನಾದರೂ ಹಿಂಬಾಲಿಸಲು,ನಾಯಕತ್ವ ಒಪ್ಪಿಕೊಳ್ಳುವ ಮತ್ತು ಕುರಿ ಹಿಂಡಿನೊಳಗೆ ತಾನೂ ಒಬ್ಬ ಎಂದು ಶರಣಾಗಿ ಸಾಗಲು,ನೂರೆಂಟು ನಂಬಿಕೆ ವಿಶ್ವಾಸಗಳನ್ನು ಮುಖಾಮುಖಿಯಾಗಿ ಪ್ರಶ್ನಿಸಲು ಸಾಧ್ಯವಿಲ್ಲ ಎಂಬಂತೆ,ಮುಂದಿನ ವಾಸ್ತವ ಏನಿದೆ…? ಹೇಗಾಗಬಹುದು….? ಎಂಬ ಅರಿವನ್ನು ಈ ಕಥೆಗಳನ್ನು ಓದಿದ ತರುವಾಯ ಉತ್ತರ ಸಿಗಬಲ್ಲದು.

ರಾಘವೇಂದ್ರ ಮಂಗಳೂರು ಅವರು ಈ ಭಾಗದ ಹಿರಿಯ ಸಾಹಿತಿಗಳು.ಬಹಳ ಬುದ್ಧಿವಂತಿಕೆಯಿಂದ ಸುಪ್ತ ಪ್ರಜ್ಞೆಯ ಆಳವನ್ನು,ಆಳದ ಗಾಯಗಳನ್ನು ಜಾಗುರೂಕತೆಯಿಂದ ಲೇಖಿಸಿದ್ದಾರೆ.ಚಿಂತನಾ ಬರಹಗಳು, ವೈಚಾರಿಕ ಲೇಖನಗಳು, ಕಥೆಗಳು,ನ್ಯಾನೋ ಕಥೆಗಳು ಮುಂತಾದ ಸಾಹಿತ್ಯ ಕೃಷಿ ಮಾಡಿರುವ ಇವರು ವ್ಯವಸ್ಥೆಯನ್ನು ಕನ್ನಡೀಕರಿಸುತ್ತಾ, ಸ್ವಾತಂತ್ರ್ಯದ ದಿನಮಾನಗಳು, ಆಷಾಡಭೂತಿತನ, ಸಭ್ಯತೆ ತೋರುವ ಮಾರ್ಜಲ ಗುಣದ ಅಮಾನುಷತನ, ಮಡಿವಂತಿಕೆ ಮುಚ್ಚಿಟ್ಟ ಪ್ರೀತಿ ಪ್ರೇಮದ ಗುಪ್ತತೆ,ಹೀಗೆ ಒಳದಾರಿಯ ರಹಸ್ಯವನ್ನು ತೆರೆದು ತೋರಿಸುವ ಚಿಂತನೆಯ ಚೌಕಟ್ಟುಗಳಿವೆ. ವಸ್ತು ಹಾಗೂ ರಚನೆಯ ಪದ ಬಳಕೆಯಿಂದ ವಿಚಾರಗಳು  ಓದುಗನ ಮನಸ್ಸನ್ನು ಬಗೆ ಬಗೆಯ  ಪರಿಭಾವಿಸುವಿಕೆಯಲ್ಲಿ ತೊಡಗಿಸಿಕೊಳ್ಳುತ್ತದೆ.

ಇಲ್ಲಿನ ಕಥೆಗಳು  ಹೆಚ್ಚಿನ ವಿಸ್ತೃತ ಪಡೆಯದೆ ಎತ್ತರವಾಗಿ ಸಾಗಿವೆ. ಕಥೆಗಾರರು ಸಫಲರಾಗಲು ತಮ್ಮ ಕಲ್ಪನಾ ಲೋಕದಲ್ಲಿ ಕಂಡದ್ದನ್ನು  ಅತ್ಯಂತ ಕಿರಿದಾದುರಲ್ಲಿ ಹಿರಿದಾಗಿ ಅನುಪಮ ರೂಪ ಪಡೆದಿವೆ.

ಒಂದು ಕಥಾ ವಸ್ತುವಿನ ಮೇಲೆ ಓದುಗರ ಮನಸ್ಸು ಕೇಂದ್ರಿಕೃತವಾದಾಗ,ಅದೇ ಪುಸ್ತಕದ ಇನ್ನೊಂದು ಕಥೆಯನ್ನು ಓದಲು ಪ್ರೇರಣೆ ದೊರೆಯುತ್ತದೆ. ಕಥೆಗಳ ಮುಖ್ಯ ಲಕ್ಷಣವೆಂದರೆ, ಕಥೆಯೊಳಗಿನ ಭಾವನಾತ್ಮಕ ವಿಚಾರ, ವಿಸ್ತಾರ, ಅನುಭವ, ಆಳ ಎಲ್ಲವೂ ಉತ್ಕಟತೆಯಿಂದ ಓದಿಸಿಕೊಂಡು ಹೋಗುವ ವ್ಯಾಪ್ತಿ ಹಿರಿದಾಗುವಲ್ಲಿ ನಿರ್ಣಯವಾಗುತ್ತದೆ.

ಕಥೆಯು ಪ್ರಾರಂಭವಾದ ಐದಾರು ಸಾಲುಗಳಲ್ಲಿ ಒಬ್ಬ ಒಳ್ಳೆಯ ಓದುಗನು ತನ್ನ ಆಂತರಿಕ ಅರಿವು ಪಡೆದುಕೊಳ್ಳುತ್ತಾನೆ. ಓದುವ ವಿಕಾಸವೂ ಕಾರ್ಯತತ್ಪರವಾಗಿ ಚಿತ್ರಮಯ ದರ್ಶನವನ್ನರಳಿಸುತ್ತದೆ. ಕಥೆಯ ಮುಂದುವರಿಕೆ ಹೀಗೇ ಇರಬಹುದೇನೋ…? ಕಥೆಯ ಹಂದರ ಹೀಗೇ ಮುಕ್ತಾಯಗೊಳ್ಳಬಹುದೇನೋ….?ಎಂಬ ಕಾತರತೆಯನ್ನನುಭವಿಸುತ್ತಾ ಆಶ್ರಯಿಸುತ್ತಾ ಓದುಗನ ನಿರೀಕ್ಷೆಯಲ್ಲಿ ತನ್ನದೆಯಾದ ಭಾವ ಪರದೆ ತೆರೆದು ಕಥಾವಸ್ತುವಿನ ನೈಜ ವಿಚಾರಪಥ ಕಂಡುಕೊಳ್ಳುತ್ತಾನೆ.

ಕಥೆಯ ಚಿತ್ರಣ ಮುಕ್ತಾಯದ ಅಂತ್ಯದವರೆಗೆ ಬಂದರೂ, ಕೊನೆಯ ಉತ್ತರಕ್ಕಾಗಿ ತಡಕಾಡಿಸುವ ವಿಷಯ ವಸ್ತುಗಳ ತುಮುಲವೆ ಕಥಾ ಶಕ್ತಿಯೆಂದು ನನ್ನ ಅರಿವಿಗೆ ಲಭಿಸಿದೆ. ಈ ನೆಲೆಯಲ್ಲಿ ಲಾಟರಿ ಹುಡುಗ ಕಥಾ ಸಂಕಲನದ ಕುರಿತು ಕಥೆಗಳ ಹಿಡಿಯ ಭಾವನಾತ್ಮಕವನ್ನು ಗಮನಿಸಿದಾಗ ಅನುಕ್ಷಣದ ಅನುಭವ ನಾನಾ ಕಲಿಕೆಯ ಕ್ರಿಯೆಯಲ್ಲಿ ಹಾದು ಸಂಗತಿಗಳಿಗೆ ಅಂಟಿಕೊಳ್ಳದೆ ಇರಲಾರದು. ಲೇಖಕರ ವ್ಯಕ್ತಿತ್ವದಲ್ಲಿ ಒಳತಿರುಳು ನಿರೂಪಿಸುವಲ್ಲಿ ಮತ್ತು ಆಯ್ದುಕೊಂಡ ವಸ್ತುವಿಗಿಂತ ಜೀವನ ದೃಶ್ಯಾವಳಿಯ ಸಮಸ್ಯೆಯನ್ನು ಬಿಡಿಸುವ,ಹಸಿವನ್ನು ನೀಗಿಸುವ, ನಿಜವನ್ನರಿಯುವ, ಬದುಕನ್ನು ಬದುಕಿಸುವ, ಬಳುವಳಿಯಾಗಿ ಎಚ್ಚರದಿಂದ ಬೆಳೆದಿದೆ ಈ ಕೃತಿ.

“ಹೀಗೆರಡು ಪತ್ರಗಳು ಮತ್ತು ಒಂದು ಟಿಪ್ಪಣಿ” ಎಂಬ ಪ್ರಾರಂಭದ ಕಥೆಯು ಪ್ರೀತಿ ಪ್ರೇಮದ ಪತ್ರ ವ್ಯವಹಾರದಲ್ಲಿ ಮನೋಭಿಪ್ರಾಯಗಳು ವಿನಿಮಯವಾದ ನಂತರವೇ ಕಥೆಗಾರನ ತಂತ್ರಗಾರಿಕೆ ಅರಿವಾಗುತ್ತದೆ. ಕಥಾ ನಾಯಕನ ನಾಟಕೀಯ ಪತ್ರಕ್ಕೆ ಪ್ರತ್ಯುತ್ತರ ನೀಡಿದ ನಾಯಕಿಯೂ ಸಹ ಅಷ್ಟೇ ನಾಟಕೀಯ ತಿರುವಿನಲ್ಲಿ ಮರು ಉತ್ತರ ನೀಡುತ್ತಾಳೆ. ಅವರಿಬ್ಬರಿಗೂ ಮದುವೆಯ ಸಮ್ಮತವಿದ್ದರೂ,ಅವರವರ ಕಲ್ಪನಾ ಲೋಕವು ಅಂತಿಮವಾಗಿ ಮನಸ್ಸಿನ ವೇಗ ಆವೇಗ,ರಾಗಾನುರಾಗಗಳ ನಿಗೂಢ ಸಮಸ್ಯೆಗಳು ನಾಟಕೀಯ ರಹಸ್ಯ ಪಡೆದು  ಹೊರಬೀಳುವುದು ಬೆರಗೆನಿಸುತ್ತದೆ. ಲೇಖಕರು ಈ ಕಥೆಯ ಅಂತಿಮವನ್ನು, ಅಂತರಾಳದಲ್ಲಿ ಅಡಕವಾಗುವಂತೆ ಚಿತ್ರಿಸಿದ್ದಾರೆ.ಇದು ಹೊಸ ಪ್ರಯೋಗ ಎನ್ನಬಹುದು.

“ಸ್ವಾತಂತ್ರೋತ್ಸವ” ಕಥೆಯು ಭಿನ್ನವಾಗಿದೆ. ನಮ್ಮ ದೇಶದ ಉಸಿರಾಡೋ ಶವಕ್ಕೆ ಲಾಠಿ ಪೆಟ್ಟು ಬಿದ್ದರೆ ಹೇಗಾಗಬಹುದು…?  ನಮ್ಮ ದೇಶದಲ್ಲಿ ದುರ್ನೀತಿಯನ್ನು ಖಂಡಿಸುವವರ ತಲೆ ಉಳಿಯುವುದಿಲ್ಲ. ನಿರ್ಗತಿಕರು, ಭಿಕ್ಷುಕರು, ಊರೂರು ತಿರುಗಿ ಹೊರ ವಲಯದಲ್ಲಿ ಗುಡಾರ ಕಟ್ಟಿ ಬದುಕುವವರ ವಿರುದ್ಧ  ಬಹುತೇಕವಾಗಿ ದೌರ್ಜನ್ಯವಿದ್ದದ್ದೆ.ಮನುಷ್ಯ ಸ್ವಭಾವ ಮೀರಿ ಮೃಗದಂತೆ ವರ್ತಿಸುವ ಆರಕ್ಷಕರ ಕರ್ತವ್ಯವು ಇಲ್ಲಿ ಮನುದ್ವೇಷಿಯಾಗಿದೆ. ಮಂತ್ರಿಗಳು ಹೋಗುತ್ತಾರೆ ಬರುತ್ತಾರೆ. ಅವರ ಕಣ್ಣಿಗೆ ಭಿಕ್ಷುಕರು, ನಿರ್ಗತಿಕರು  ಕಾಣಬಾರದು. ಹೊರವಲಯದಲ್ಲಿ ಗುಡಾರ ಹೂಡಿ ಬದುಕುವವರು  ಇರಬಾರದು ಎಂಬ ನಿಯಮವಿದೆಯೆ? ಇವರ ಅವಸ್ಥೆಗೆ,ಅವ್ಯವಸ್ಥೆಗೆ ಕಾರಣ ಯಾರು…? ಹಸಿವಿನ ಕೆಂಡವನು ಒಡಲೊಳಗಿಟ್ಟುಕೊಂಡವರ ತಾಕಲಾಟವು ರಾಜರಿಗೇನು ಗೊತ್ತು…? ಹಸಿದವನ ನೋವು ಉಂಡವನಿಗೇನು ಗೊತ್ತು…?  ಆರಕ್ಷಕರು ಯಾರ ಸೇವೆಗಿದ್ದಾರೆ…? ಯಾರಿಗಾಗಿದ್ದಾರೆ….? ಮಂತ್ರಿಯಾದವ ಯಾರಿಂದ  ಪದವಿಗೇರಿದನು….? ಇಂತಹ ವಿಚಾರಗಳು ಸಾಹಿತ್ಯದ ಸಾಗುವಳಿಯಲ್ಲಿ ಕುಂಟೆಯ ಮೇಳೆ ಹಿಡಿದು ವೃಥಾ ಮರುಭೂಮಿಯಲ್ಲಿ ತಿರುಗಾಡಿದಂತಿದೆ  ಇವತ್ತಿಗೂ  ವ್ಯವಸ್ಥೆಯು ಬದಲಾಗಿಲ್ಲ.

“ಸ್ವಾತಂತ್ರ್ಯೋತ್ಸವ”  ಕಥೆಯ ಕೊನೆಯಲ್ಲಿ ನಿರ್ಗತಿಕ ಮುದುಕನು ಪೋಲಿಸರ ಏಟಿಗೆ ಸತ್ತು  ಶವವಾದಾಗ  ಕಾನೂನು ಮೆತ್ತಗೆ  ಜಾರಿಕೊಳ್ಳುತ್ತದೆ. ತೀರಾ ಅಸಹಾಯಕ ಮುದುಕನು ಸ್ವಾತಂತ್ರ್ಯ ಹೋರಾಟಗಾರನೆಂದು ಅರಿವಾಗುತ್ತದೆ. ನಿಜಕ್ಕೂ ಈ ತರಹದ ಸ್ವಾತಂತ್ರ್ಯ ಹೋರಾಟಗಾರರು ಪ್ರಾಮಾಣಿಕರಾಗಿ, ತಮ್ಮತನದ ಪ್ರಚಾರ ಪಡೆಯದೆ, ಸುಪ್ತಪ್ರಜ್ಞೆಯಿಂದ ಹೆಸರು,ಕೀರ್ತಿ ಪಡೆಯದೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಕೊನೆಗೆ ಶವವಾದ ಕಥೆಗಳಿವೆ. ಲೇಖಕರ ಕಲ್ಪನೆ ಸುಳ್ಳಲ್ಲ.ದೇಶದ ತುಂಬಾ ಇವೆ.ಆದರೆ ಮುಚ್ಚಲ್ಪಟ್ಟಿವೆ.

“ವ್ಯಾಪಾರ” ಕಥೆಯು  ತಥಾಕಥಿತದ ಹೃದ್ರಾವಕ  ನೋವಾಗಿದೆ.ಕುರುಡು ಪ್ರೇಮವ ಬೆನ್ನಟ್ಟಿದ ಹದಿ ಹರೆಯದ ಸುಂದರ ತರುಣಿ, ಕಥಾನಾಯಕಿಯು, ಬಣ್ಣದ ಕನಸು ಕಟ್ಟಿಕೊಂಡು ತನ್ನ ಜೀವನದ ಭದ್ರತೆಯನ್ನು ಕಳೆದುಕೊಳ್ಳುತ್ತಾಳೆ.ವಿರೋಧ, ಹತಾಶೆಯೊಳಗೆ ತನ್ನ ಶರೀರವನ್ನು ವ್ಯಾಪಾರ ಮಾಡುವ ಅಡ್ಡದೊಳಗೆ ಬಂಧಿಯಾಗುತ್ತಾಳೆ.

ಸಂಬಂಧಗಳು ನಲುಗುತ್ತವೆ, ಜಡವಾಗುತ್ತವೆ. ಹೀಗೇ ಸಾಗುವ ದಿನಗಳಲ್ಲಿ ಮತ್ತೊಬ್ಬ ಆಗಂತುಕನ ಪ್ರವೇಶವಾಗುತ್ತದೆ. ತನ್ನ ಶರೀರದ ಮೇಲೆ ದಾಳಿ ಮಾಡುವ ಗಂಡಸು  ವ್ಯಾಘ್ರದಂತೆರಗಿ ತನ್ನ ನಯವಾದ ಶಬ್ದಗಳಲ್ಲಿಡಿದು, ತಾನು ಸೃಜನಶೀಲ ಲೇಖಕನೆಂದು, ಬರೆದಂತೆ ಬದುಕುವೆನೆಂದು, ಬದುಕಿದಂತೆ ಬರೆಯುವೆನೆಂದು, ನಯವಾದ ಮಾತಾಡಿ, ಮದುವೆ ಮಾಡಿಕೊಳ್ಳುವೆನೆಂದು ನಂಬಿಸಿ,ಸಮಾಜದೊಳಗಿರುವ ನಿತ್ಯದ ತಾಕಲಾಟವು ತನ್ನಿಂದಲೇ ಸುಧಾರಿಸಿಬಿಡುತ್ತದೆಂಬ ಮಾತಲ್ಲಿ ಅವಳ ಮನಸ್ಸನ್ನು ನಿರುಮ್ಮಳವಾಗುವಂತೆ ತೊಳೆಯುತ್ತಾನೆ. ಆ ಭದ್ರಕೋಟೆಯಿಂದ ಖರೀದಿಸಿ ಕರೆ ತಂದು, ಮತ್ತೊಂದು ಚಕ್ರವ್ಯೂಹದೊಳಗೆ ವ್ಯಾಪಾರ ಮಾಡುವ ವೃತ್ತಿಯು ತೀರಾ ಅಮಾನುಷವೆನಿಸುತ್ತದೆ. ಅಷ್ಟೇ ಭಯಾನಕ ಪಾತಕಿ ಲೋಕವು ಓದುಗರಿಗೆ ತಿಳಿಸುತ್ತದೆ. ನಂಬಿಕೆ ಎನ್ನುವುದು ಮತಿಭ್ರಾಂತಿ ಎಂದೆನಿಸದೇ ಇರದು.ಒಮ್ಮೆ ಸತ್ತುಹೋಗಿರುವ ನಾಯಕಿಯು ಮತ್ತೆ…ಮತ್ತೆ…ಪಾಪಕೂಪದಲ್ಲಿ  ಮುಳುಗಿ ಸಾಯುವ ನಾಯಕಿಯ ಬದುಕು ತಲ್ಲಣವೆನಿಸುತ್ತದೆ.

“ಪರೀಕ್ಷೆ” ಎಂಬ ಕಥೆಯು, ಮನದೊಳಗೆ  ಅವಿತ ಸಮಸ್ಯೆಯನ್ನು ಶೋಧಿಸುವ, ಕಣ್ಣುಗಳ ಮುಖಾಂತರ ಹುಡುಕಾಟ ನಡೆಸುವ ಚಡಪಡಿಕೆಯ ಪರೀಕ್ಷೆಯಾಗಿದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಉದಾತ್ತ ಮಾತಿಗೆ ಸಹನೆಬೇಕು. ಮನಸ್ಸಿನ ಯಾತನೆಗಳು, ಅಂತರಂಗದ ಭೇದಗಳ ನಡುವೆ ಕಥೆಯು ಓದಿಸಿಕೊಂಡೋಗುತ್ತದೆ.

ನಂಬಿಕೆ ವಿಶ್ವಾಸದ ಮೇಲೆ ಜಗತ್ತು ಸಾಗಿದೆ.ಬದುಕಿನ ಅಸ್ತಿತ್ವದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಾಳ್ಮೆ ಮತ್ತು ಸವಾಲುಗಳನ್ನು ಸಮಾನತೆಯಲ್ಲಿ ಸ್ವೀಕರಿಸುವ ಮನೋಭಾವ ಬೇಕು. ಇಡೀ ಜೀವನವೆ ಒಂದು  ಸಮಸ್ಯೆ. ತಾಳ್ಮೆಯಿಲ್ಲದಿದ್ದರೆ, ಸಂಸಾರದಲ್ಲಿ ಒಡಕಿಗೆ ಕಾರಣವಾಗುತ್ತದೆ. ಸಂಕುಚಿತ ಭಾವನೆ ಪತ್ನಿಯಿಂದಾಗಿರಬಹುದು ಹಾಗೂ ಕಾಲ ಸಂದರ್ಭ ಮತ್ತು ವ್ಯವಹಾರಿಕ ರೀತಿಯಿಂದಾಗಿರಬಹುದು. ಸ್ಪಷ್ಟ ಆಧಾರವಿಲ್ಲದ ಅನುಮಾನ ಅರ್ಥವಿಲ್ಲದ ತಳಪಾಯವಾಗಬಹುದು.ಪೈಶಾಚಿಕ ಅನ್ವೇಷಣೆಯು ಜೀವನದಲ್ಲಿ ಜಟಿಲ ಪ್ರಶ್ನೆಗಳುಟ್ಟುತ್ತವೆ.ಇಂತಹ ಸ್ವತೀರ್ಮಾನದಿಂದ ಬಾಳಲ್ಲಿ ಬಿರುಕು ಸೃಷ್ಟಿಸುವ ಅರಿವು ನೀಡುತ್ತದೆ ಈ ಕಥೆ.

“ಕಥೆಯಾದಳು ಹುಡುಗಿ” ಕಥೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಬೆಳವಣಿಗೆಯ ವಯಸ್ಸಿನಲ್ಲಿ  ಮನಸ್ಸು ಒಂದೆಡೆ ನಿಲ್ಲುವುದಿಲ್ಲ. ಪ್ರೀತಿಯನ್ನು   ಅಳೆಯುವಿಕೆ,ತೂಗಿ ನೋಡುವಿಕೆ ಸರಳ ಸಾಧ್ಯವಲ್ಲ. ಒಮ್ಮೆ ಪ್ರೀತಿಯ ಬೆನ್ನ ಹಿಂದೆ ಸಾಗಿದ್ದರೆ, ಅದರ ನಿಲುಕುವಿಕೆಯು ಮಿಗಿಲಾದದ್ದಾಗಿದೆ. ಕಾಮಕ್ಕೆ ಕಣ್ಣಿಲ್ಲ,ಲಜ್ಜೆಯಿಲ್ಲ ಎಂದು ಹೇಳುತ್ತಾರೆ. ಪ್ರೀತಿಗೆ ಮಾತ್ರ ಸಾವಿರ ಕಣ್ಣುಗಳಿವೆ. ಅಂದಶ್ರದ್ಧೆಯಿಂದಲೆ ಭಯಭೀತರಾಗುತ್ತಾ. ನಮಗೆ ನಾವೇ ಪ್ರೇಮ ನಿವೇದನೆ ಮಾಡಿಕೊಳ್ಳುವುದಾಗಿದೆ. ಮನಸ್ಸಿಗೆ ಕಡಿವಾಣವಿಲ್ಲ. ಒಂದೆಡೆಗೆ ನಿಲ್ಲಿಸಲಾಗುವುದಿಲ್ಲ. ಸಂಗತಿಗಳನ್ನು ಬಯಲುಪಡಿಸಲಾಗುವುದಿಲ್ಲ. ಸೂಕ್ತ ಸಮಯದಲ್ಲಿ ಪ್ರೀತಿಯ ನೀವೇದನೆ ಮಾಡುಕೊಳ್ಳಬೇಕೆನಿಸುವಾಗಲೆ ಮನಸ್ಸು ಪಲಾಯನ ಮಾಡುತ್ತದೆ. ಮಾನಸಿಕ ಒಯ್ದಾಟ ಮತ್ತು ಗಾಢವಾದ ಹತಾಶೆಗಳ,ವಿವಿಧ ಕಾಮನೆಗಳ,ಬಯಕೆ ಬೇಡಿಕೆಗಳು ಯಾವುದೋ ಭಯದ ಸೆಳೆತದಲ್ಲಿ ಸಿಲುಕಿ, ಕೊನೆಗೆ ಪ್ರೀತಿಯು ಭಗ್ನವಾಗುವ ವಸ್ತು ಈ ಕಥೆಯಲ್ಲಿ ಕಾಣಬಹುದು.

“ಬಯಕೆ” ಎಂಬುದು ಜೀವಮಾನದ ಮೂಲಭೂತ ಸಮಸ್ಯೆಯೆ ಸರಿ.ಸಂಸಾರದ ಭಾರದಲ್ಲಿ ಬದುಕು ಭವಣೆಯ ಲೆಕ್ಕಾಚಾರ ಮಾಡುವುದರೊಳಗೆ, ಮಕ್ಕಳ ವಿದ್ಯಾಭ್ಯಾಸ, ಅವರ ಶ್ರೇಯಸ್ಸು, ಮದುವೆ ಪೂರೈಸುವದರೊಳಗೆ ಗೊತ್ತಾಗದಂತೆ  ವಯಸ್ಸು ಕಳೆದುಹೋಗುತ್ತದೆ. ಹಲವಾರು ತಾಪತ್ರಯದ ಪ್ರಪಾತದಲ್ಲಿ ಬಿದ್ದೇಳುವುದರಲ್ಲಿ ಸಾವು ಹತ್ತಿರವಾಗುತ್ತದೆ. ಬಯಕೆಗಳಿಗೆ ಅರ್ಥವೇ ಕಾಣುವುದಿಲ್ಲ.ತೀರಾ ಬಡತನದಲ್ಲಿರುವವರ ಬದುಕು ಯಾವತ್ತಿದ್ದರೂ ಜಡವು, ನೀರಸವು, ಯಾತನಮಯವು, ಯಾಂತ್ರಿಕವೂ ಆಗುತ್ತಿರುವಾಗ ಬಯಸಿದ್ದು, ಕಲ್ಪಿಸಿದ್ದು ಸಿಗದಿರುವುದೇ ಬದುಕಿನ  ಬಯಕೆಯಾಗಿದೆ.

ತೂಕ ತಪ್ಪಾಗದಂತೆ ಹೇಳಿದ್ದ ಸಭ್ಯಸ್ಥ ಹುಡುಗ. ಆ ಹುಡುಗನ ಲೆಕ್ಕಾಚಾರದ ಯೋಚನೆಯಲ್ಲಿ ಅದೇನು ಅಗಾಧ ನಂಬಿಕೆ ಇತ್ತೋ… ಇಲ್ಲವೋ.‌.. ಅದು ಬೇರೆ ಮಾತು. ಆದರೆ “ಲಾಟರಿ ಹುಡುಗ” ಯಥಾಸ್ಥಿತಿಯ ಅಂಬೋಣವೂ ಸತ್ಯಕ್ಕೆ ಹತ್ತಿರವಾಗಿದ್ದಂತೂ ಸತ್ಯ. ಲಾಟರಿ ಮಾರುವ ಹುಡುಗ ತೀರಾ ಬಡತನದಲ್ಲಿ ಬದುಕೆಲೆತ್ನಿಸಿದವನು. ಕಥಾನಾಯಕನು ತನ್ನ ನೌಕರಿಗಾಗಿ ಹಣ ಹೊಂದಿಸಿಕೊಳ್ಳುವ ತರಾತುರಿಯಲ್ಲಿ ನಿರಾಶೆಗೊಳಗಾದ ಸಮಯದಲ್ಲಿ ಅನಿರೀಕ್ಷತವಾಗಿ ಲಾಟರಿ ಬಹುಮಾನ ಗಿಟ್ಟಿದ ಕಾರಣ ಮನವು ಪ್ರಪುಲ್ಲಿತವಾಗಿ ಆ ಹುಡುಗನನ್ನು ಅತೀ ತೀವ್ರವಾಗಿ  ಚಡಪಡಿಕೆಯೊಂದಿಗೆ, ಕಾಣಬೇಕೆಂದು, ಮನಸ್ಸು,ಕಣ್ಣು,ವೇಗದ ಚಲನೆಯಲಿ ಹುಡುಕುತ್ತಾನೆ.

ಹುಡುಗ ಸಿಗುತ್ತಾನೆ. ಆದರೆ ಎಲ್ಲವೂ ಶೂನ್ಯವಾಗಿಬಿಡುವ ವಿಷಯವು  ಸಿಕ್ಕಿರುವ ಹುಡುಗನು ಲಾಟರಿ ಟಿಕೇಟು ನೀಡಿದ ಸಹೋದರನಿಂದ ಎಲ್ಲಾ ವಿಷಯ ಗೊತ್ತಾಗುತ್ತದೆ.ಕಥಾ ನಾಯಕನ ವೇದನೆಯ ಗಾಯಗಳನ್ನು ಅಳಿಸಿ ಹಾಕಲು ಮನದ ಮೂಲೆಯಲ್ಲಿ ಕೆಲವು  ನೋವಿನ ಎಳೆಗಳು ಹೃದಯವನ್ನು ಘಾಸಿಗೊಳಿಸುವ ಅವ್ಯವಸ್ಥೆ ಮತ್ತು ದುರ್ವಿಧಿಯ ಕರಾಳ ರೂಪವನ್ನು ಲೇಖಕರು ಮನ ಕರಗುವಂತೆ ಕಥೆ ಕಟ್ಟಿದ್ದಾರೆ.

ಸ್ವಾತಂತ್ರ್ಯೋತ್ಸವ, ಸಿದ್ದು,ಲಾಟರಿ ಹುಡುಗ,ಮತ್ತು ಮುತ್ತಮ್ಮನ ಮನದಾಳದ ಮಾತು, ಈ ಕಥೆಗಳೆಲ್ಲಾ ಬಹು ವಿಷಣ್ಣತೆ ಮತ್ತು ಆತ್ಮ ಮರುಕದಲ್ಲಿ ಮುಳುಗಿಸುವಂತವುಗಳು. ತುಂಬಿದ ಸಭೆಯಲ್ಲಿ ಮೂಗಿನ ನೇರಕ್ಕೆ  ಮುತ್ತಮ್ಮನ ಮಾತುಗಳು ಸಮಾಜದ ಕಲ್ಯಾಣಕ್ಕಾಗಿ ರಾಜಕೀಯ ಉದಾತ್ತ ಸೇವೆ ಸಲ್ಲಬೇಕು ಎನ್ನುವ ನುಡಿಗಳು ಹಿತವಾಗುತ್ತವೆ. ಸಮ ಸಮಾಜದಲ್ಲಿ ಸರ್ಕಾರದ ಗುರಿ ಮುಟ್ಟುವುದು ಬಿಡುವುದು ಗೌಣ ವಿಷಯ ಎನ್ನುತ್ತಾ ತನ್ನ ವಿಧವಾ  ವೇತನವನ್ನು ನಿರಾಕರಿಸುತ್ತಾಳೆ. ಅದು ಸಮಸ್ಯೆಗಳನ್ನು ಗುರುತಿಸುತ್ತದೆ.

ರಾಜಕೀಯ ಚಿತ್ತ ವೃತ್ತಿಗಳ ಚಿತ್ರಣದಲ್ಲಿ  ಸಿದ್ದು ಎನ್ನುವ ಅಮಾಯಕ ಕೂಲಿನಾಲಿ ಮಾಡಿ ಹಸಿವು ನೀಗಿಸಿಕೊಳ್ಳುವ ನಿರಕ್ಷರ ಕುಕ್ಷಿ. ರಾಜಕೀಯ ಪಕ್ಷದ ಮಿಶನರಿಗಳು ಸಹಾಯ ಮಾಡುವ ನೆಪದಲ್ಲಿ ಬಾಡಿಗೆಗೆ ಕರೆದೊಯ್ದು  ದಂಗೆ ಎಬ್ಬಿಸಿ ಅದರಾಚೆಗೆ ನಿಲ್ಲುವುದು ಅತೀ ಕ್ರೂರವೆನಿಸುತ್ತದೆ. ಬರಿ ಮೈಯಲ್ಲಿರುವ ಸಿದ್ದುವಿನ ಎದೆಗೆ ಬ್ಯಾನರ್ ಅಂಟಿಸಲು ಗುಂಡುಸೂಜಿಯನ್ನು ಅವನ ಚರ್ಮಕ್ಕೆ ಚುಚ್ಚುವ, ಸಂಘರ್ಷಣೆಯಲ್ಲಿ ಸಿದ್ಧುವಿಗೆ ಗೋಲಿ ತಗುಲಿ ಬೀಳುವ, ಸತ್ತವವನ್ನು ಕಣ್ಣು ಕಾಣದ ಅವನ ತಾಯಿಯ ಎದುರು ಹೆಣವನ್ನು ಬಿಸಾಡಿ ಸಾಗುವ ದಾರುಣ ಸನ್ನಿವೇಶವು ಬೆಂದು ಬೇಗುದಿಯಾಗುತ್ತದೆ.

ಈ ಬಗೆಯ ಬದುಕಿನಲ್ಲಿ ಸ್ವಾರ್ಥವು ಎಷ್ಟು ಗಾಢವಾದದ್ದು…? ಅದೆಷ್ಟು ಒಳಮುಚಗದ್ದು.ದೇಶದ ವಿರೋದಿ ಕಾರ್ಯಗಳಲ್ಲಿ ಅಮಾಯಕರು ಪ್ರಾಣದ ಜೊತೆ ಚೆಲ್ಲಾಟವಾಡುವುದು  ಸಾಮಾನ್ಯವಾಗಿದೆ.

ರಾಜಕೀಯ ಮಾಡುವವರಿಗೆ ಅದಾವುದು ಕಡಿಮೆಯಿದೆ.ಆದರ್ಶ ಜೀವನವೆನ್ನುವುದು ಅವರ ವೇದಿಕೆಯ ನುಡಿ ಮಾತ್ರವಾಗಿದೆ. ಸಾಸಿವೆ ಕಾಳಿನ ಜವಬ್ದಾರಿಯ ಹೊಣೆಗೇಡಿತನಕ್ಕೆ ಇಡೀ ಸಮಾಜವನ್ನೇ ಗೊಂದಲದ ಗೂಡಾಗಿಸುತ್ತಾರೆ. ಜಗದೊಳಗೆ ನಿತ್ಯವೂ ಅವ್ಯಾಹತವಾಗಿ ನಡೆದಿರುವುದೇ “ಲಾಟರಿ ಹುಡುಗ”ಎಂಬ ಕೃತಿಯು ಚಿಂತನೆಯ  ಜೀವ ಪ್ರೇರಕ ಸಂಗತಿಯಾಗಿದೆಂದು ನಿಸ್ಸಂದೇಹವಾಗಿ ಹೇಳಬಹುದು.

ಜೀವನವು ಒಂದು ದೃಷ್ಟಿಯಲ್ಲಿ ಆದರ್ಶವಾದರೆ, ಮತ್ತೊಂದು ದೃಷ್ಟಿಯಲ್ಲಿ ಅಳೆಯಲಾಗದ ಭಾವತೀವ್ರತೆಯಾಗಿದೆ. “ಲಾಟರಿ ಹುಡುಗ” ಕೃತಿಯ ಲೇಖಕರಾದ ರಾಘವೇಂದ್ರ ಮಂಗಳೂರು ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಹೊಸತನದೆಂಬುದು ಸಾಕ್ಷಿಯಾಗಿದೆ. ಅವರ ಬದುಕು ಬರಹವು ಮುಂದಿನ ಕಥಾ ಸಂಕಲನವು  ಓದುಗರ  ಮೇಲೆ  ಮತ್ತಷ್ಟು ಪ್ರಭಾವ ಮೂಡಲಿ ಎಂದು ಬಯಸುವೆ.


ಶರಣಪ್ಪ ತಳ್ಳಿ ಕುಪ್ಪಿಗುಡ್ಡ

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!