spot_img
spot_img

ಸಿದ್ಧರಾಮ ಶಿವಯೋಗಿಗಳ ಮೇಲೆ ಬೆಳಕು ಚೆಲ್ಲುವ ಕೃತಿ

Must Read

spot_img
- Advertisement -

ಕೃತಿ :  ಶಿವಯೋಗಿ ಸಿದ್ಧರಾಮ : ಸಾಂಸ್ಕೃತಿಕ ಮುಖಾಮುಖಿ (ರಾಷ್ಟ್ರೀಯ ವಿಚಾರ ಸಂಕಿರಣದ ಸಂಸ್ಮರಣ ಸಂಪುಟ).                                                               ಪ್ರಧಾನ ಸಂಪಾದಕರು : ಪೂಜ್ಯಶ್ರೀ ಡಾ. ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು                                         ಗೌರವ ಸಂಪಾದಕರು : ಪೂಜ್ಯ ಶ್ರೀ ಮ.ಘ.ಚ. ಗುರುಬಸವ ಪಟ್ಟದ್ದೇವರು                                                  ಸಂಪಾದಕರು : ಡಾ. ಕಲ್ಯಾಣರಾವ ಜಿ. ಪಾಟೀಲ       ಸಹ ಸಂಪಾದಕರು : ಡಾ. ರಘುಶಂಖ ಭಾತಾಂಬ್ರಾ ; ರಾಜು ಬ. ಜುಬರೆ                                          ಪ್ರಕಾಶಕರು : ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ, ಬಸವಕಲ್ಯಾಣ, ೨೦೨೪

೧೨ನೇ ಶತಮಾನದ ಬಸವಾದಿ ಶಿವಶರಣರಲ್ಲಿ ಪ್ರಮುಖ ಸ್ಥಾನಪಡೆದವರು ಶಿವಯೋಗಿ ಸಿದ್ಧರಾಮೇಶ್ವರರು. ಕರ್ಮಯೋಗದಿಂದ ಶಿವಯೋಗದೆಡೆಗೆ ಸಾಗಿದ ಸಿದ್ಧರಾಮ ಶಿವಯೋಗಿಗಳ ಕುರಿತು ಇತಿಹಾಸದ ಅನೇಕ ಪಠ್ಯಗಳಲ್ಲಿ ವಿವಾದಗ್ರಸ್ಥ ವಿಷಯಗಳು ಸೇರಿಕೊಂಡು ಗೊಂದಲಕ್ಕೆಡೆ ಮಾಡಿಕೊಟ್ಟಿದೆ. ಸೊಲ್ಲಾಪುರದಿಂದ ಖೊಟ್ಟಿ ಸಿದ್ಧರಾಮೇಶ್ವರ ಚರಿತ್ರೆಯೊಂದು ಪ್ರಕಟವಾಗಿತ್ತು, ತದನಂತರ ಎಲ್. ಬಸವರಾಜು ಅವರು ನಿಜ ಸಿದ್ಧರಾಮನ ವಚನಗಳು ಎಂಬ ಮತ್ತೊಂದು ವಿವಾದಾಸ್ಪದ ಕೃತಿ ಪ್ರಕಟಿಸಿದರು. ಶರಣರ ಚಾರಿತ್ರ್ಯಕ್ಕೆ ಧಕ್ಕೆ ಬಂದ ಈ ಸಂದರ್ಭದಲ್ಲಿ ಡಾ. ಎಂ. ಎಂ. ಕಲಬುರ್ಗಿ ೨೦೦೯ರಲ್ಲಿ ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದಲ್ಲಿ ‘ಸಿದ್ಧರಾಮನ ನಿಜ ವೃತ್ತಾಂತ’ ಎಂಬ ವಿಚಾರ ಸಂಕಿರಣವೊಂದನ್ನು ಸಂಯೋಜಿಸಿದ್ದರು.

ಈ ಸಂದರ್ಭದಲ್ಲಿ ಸಿದ್ಧರಾಮ ಶಿವಯೋಗಿಗಳ ನಿಜ ಜೀವನ ವೃತ್ತಾಂತ; ಖೊಟ್ಟಿ ಸೃಷ್ಟಿ, ಸಿದ್ಧರಾಮ ವಚನಗಳು-ನಿಜಪಠ್ಯ ಪ್ರಕ್ಷಿಪ್ತ ಪಠ್ಯ ಕುರಿತು ನಾಡಿನ ಹಿರಿಯ ವಿದ್ವಾಂಸರಿಂದ ಪ್ರಬಂಧ ಮಂಡನೆಯಾಗಿದ್ದವು. ಆ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಬೇಕೆಂದು ಡಾ. ಎಂ. ಎಂ. ಕಲಬುರ್ಗಿ ಅವರು ಅಪೇಕ್ಷೆಪಟ್ಟು, ಆ ಕೆಲಸವನ್ನು ನನಗೆ ಒಪ್ಪಿಸಿದ್ದರು. ಆದರೆ ನಮ್ಮ ವಿದ್ವಾಂಸರ ದಿವ್ಯ ನಿರ್ಲಕ್ಷ್ಯ ಕಾರಣವಾಗಿ ಸಕಾಲಕ್ಕೆ ಲೇಖನಗಳು ಬರಲಿಲ್ಲ; ಪುಸ್ತಕ ಪ್ರಕಟವಾಗಲಿಲ್ಲ. ಡಾ. ಕಲಬುರ್ಗಿ ಅವರು ಕಂಡ ಕನಸು ಇಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ನಾಡೋಜ ಡಾ. ಬಸವ ಲಿಂಗ ಪಟ್ಟಾಧ್ಯಕ್ಷರ ಮೂಲಕ ನನಸಾಗಿದೆ ಎಂದು ನಾನು ಭಾವಿಸಿದ್ದೇನೆ.

- Advertisement -

ಕಳೆದ ಕೆಲ ದಶಕಗಳಿಂದ ಶರಣರ ಜೀವನ ಚರಿತ್ರೆಗಳನ್ನು ತಿರುಚುವ ಮತ್ತು ಕಲ್ಪಿತ ಸನ್ನಿವೇಶಗಳನ್ನು ಹೆಣೆದು ಚರಿತ್ರೆಗಳಲ್ಲಿ ಸೇರಿಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿರುವುದು ದುರ್ದೈವದ ಸಂಗತಿ. ಹನ್ನೆರಡನೆಯ ಶತಮಾನದ ಸಮಾಜೋ-ಧಾರ್ಮಿಕ ಚಳುವಳಿಯಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮನೂ ಕೂಡ ಇಂಥ ಪ್ರಹಸನಗಳಿಂದ ಮುಕ್ತನಾಗಿಲ್ಲ. ಸಿದ್ಧರಾಮನ ಜೀವಿತ ಕಾಲ ನಿರ್ಣಯ, ಆತನ ಮತಸಂಪ್ರದಾಯ, ವಚನಗಳ ಸಂಖ್ಯೆ ಲಿಂಗಾಯತತ್ವ, ಲಿಂಗದೀಕ್ಷಾ ಪ್ರಸಂಗ ಮುಂತಾದ ವಿಷಯಗಳು ಗಂಭೀರ ಚರ್ಚೆಗೆ ಗ್ರಾಸವಾದ ಸಂಗತಿಗಳು. ಇಂದಿಗೂ ಕೂಡ ಕಗ್ಗಂಟಾಗಿ ಪರಿಣಮಿಸಿರುವ ಇಂಥ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಭಾಲ್ಕಿ ಪೂಜ್ಯರು ಪ್ರಸ್ತುತ ‘ಶಿವಯೋಗಿ ಸಿದ್ಧರಾಮ : ಸಾಂಸ್ಕೃತಿಕ ಮುಖಾಮುಖಿ’ ಎಂಬ ಮೌಲಿಕ ಗ್ರಂಥವನ್ನು ಪ್ರಕಟಿಸಿದ್ದಾರೆ.

ಪ್ರಸಿದ್ಧಿಗೊ, ಪ್ರಚಾರಕ್ಕೊ ಪಾಂಡಿತ್ಯ ಪ್ರದರ್ಶನಕ್ಕೊ ಇತ್ತೀಚಿನ ದಿನಗಳಲ್ಲಿ ಶರಣ ಸಾಹಿತ್ಯವನ್ನು ತಿರಿಚುವುದು, ಚರಿತ್ರೆಗಳಿಗೆ ಅಪಮಾನವಾಗುವಂತೆ ಬರೆಯುವುದು ಒಂದು ಹವ್ಯಾಸವಾಗಿದೆ. ಅಂಥ ಕೃತ್ಯಗಳಿಗೆ ಇತಿಶ್ರೀ ಹೇಳಲು ವಿಚಾರ ಸಂಕಿರಣಗಳು ನಿಶ್ಚಿತವಾಗಿ ಸಹಾಯಕಾರಿಯಾಗಬಲ್ಲವು. ಈ ಹಿನ್ನೆಲೆಯಲ್ಲಿ ಭಾಲ್ಕಿ ಅಪ್ಪಗಳು ‘ರಾಷ್ಟ್ರೀಯ ವಿಚಾರ ಸಂಕಿರಣ’ವೊಂದನ್ನು ಆಯೋಜಿಸಿ, ಅಲ್ಲಿ ಮಂಡಿತವಾದ ಪ್ರಬಂಧಗಳನ್ನು ಪ್ರಸ್ತುತ ಕೃತಿಯಲ್ಲಿ ಪ್ರಕಟಿಸಿದ್ದಾರೆ.

ಸಿದ್ಧರಾಮ ಶಿವಯೋಗಿಗಳ ಜೀವನ ಕಾಲ, ಮತಸಂಪ್ರದಾಯ ಹಾಗೂ ಆತನ ವಚನಗಳ ಕುರಿತ ಉಹಾಪೋಹಗಳಿಗೆ ಪ್ರಸ್ತುತ ವಿಚಾರ ಸಂಕಿರಣದ ಮೂಲಕ ತೆರೆ ಎಳೆದು, ವಸ್ತುಸ್ಥಿತಿಯ ಅನಾವರಣಗೊಳಿಸುವುದು ಈ ಚಿಂತನೆಯ ಆಶಯವೆಂದು ಭಾಲ್ಕಿ ಶ್ರೀಗಳು ತಮ್ಮ ನುಡಿಯಲ್ಲಿ ಹೇಳುತ್ತಾರೆ.

- Advertisement -

ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮನ ಕುರಿತು ಆತನ ಕಾಲ, ಮತಸಂಪ್ರದಾಯ, ಲಿಂಗಾಯತ ಧರ್ಮಸ್ವೀಕಾರ, ಲಿಂಗದೀಕ್ಷಾ ಪ್ರಸಂಗ ಮುಂತಾದವು ಅಪಾರ ಚರ್ಚೆಗೆ ಗ್ರಾಸವಾದ ವಿಷಯಗಳಾಗಿವೆ. ವಚನಗಳು, ಕಾವ್ಯಗಳು, ಶಾಸನಗಳು ತಾಡೋಲೆಗಳು, ಹಸ್ತಪ್ರತಿಗಳು ಮತ್ತು ಶೂನ್ಯಸಂಪಾದನೆಗಳು ಸಿದ್ಧರಾಮನ ಚರಿತ್ರೆಯ ಮೇಲೆ ಖಂಡಿತವಾಗಿ ಬೆಳಕು ಬೀರಬಲ್ಲ ಮೂಲ ಸಂಪನ್ಮೂಲಗಳು. ಸಿದ್ಧರಾಮನು ತಾನು ೬೮೦೦೦ ವಚನಗಳನ್ನು ಹಾಡಿದೆನೆಂದು ಹೇಳಿಕೊಂಡರೂ ಕೂಡ ನಮಗೆ ಈವರೆಗೆ ದೊರೆತ ಆತನ ವಚನಗಳು ಕೇವಲ ೩೬೨೬ ಮಾತ್ರ. ಇವುಗಳಲ್ಲಿ ಪ್ರಕ್ಷಿಪ್ತ ವಚನಗಳೆಷ್ಟೋ! ವಚನಗಳಲ್ಲದೆ ಸಿದ್ಧರಾಮನು ಸ್ವರವಚನ, ತ್ರಿವಿಧಿಗಳನ್ನು ಕೂಡ ರಚಿಸಿದ್ದಾನೆ. ಸೊನ್ನಲಿಗೆಯ ಹಾಗೂ ಸಿದ್ಧರಾಮನ ಕುರಿತ ವರ್ಣನೆ ಮಾಡುವ ೨೦ಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿವೆ. ವಿಪುಲವಾಗಿ ದೊರೆತ ಆಕರಗಳನ್ನು ಮುಂದಿಟ್ಟುಕೊಂಡು ಕಳೆದ ಆರೇಳು ದಶಕಗಳಲ್ಲಿ ಸಿದ್ಧರಾಮನ ಕುರಿತು ಅಪಾರವಾದ ಸಾಹಿತ್ಯ ನಿರ್ಮಾಣವಾಗಿದೆ. ಆದರೆ ದುರ್ದೈವದಿಂದ ವಿದ್ವಾಂಸರ ಕೃತಿಗಳಲ್ಲಿ ವೈಚಾರಿಕ ಸಮಾನತೆ ಮೂಡದೆ, ಆತನನ್ನು ತಮಗೆ ಸರಿಕಂಡಂತೆ ಭಿನ್ನಭಿನ್ನವಾಗಿ ಚಿತ್ರಿಸಿದ್ದೇ ಸಮಸ್ಯೆಯಾಗಿ ಪರಿಣಮಿಸಿದೆ. ಕುರುಡರು ಆನೆಯನ್ನು ಸ್ಪರ್ಶಿಸಿ ಅದರ ವರ್ಣನೆಯನ್ನು ಮಾಡಿದಂತೆ ಸಿದ್ಧರಾಮನು ಚಿತ್ರಿತನಾಗಿದ್ದಾನೆ.

ಸಿದ್ಧರಾಮನ ಕುರಿತ ಮೊದಲ ಪ್ರಸ್ತಾವನೆ ಆಕ್ಷೇಪಣೆಗಳಿಂದಲೇ ಪ್ರಾರಂಭವಾಯಿತು. ಕ್ರಿ.ಶ.೧೯೪೧ರಲ್ಲಿ ಪ್ರೊ. ಡಿ.ಎಲ್.ನರಸಿಂಹಾಚಾರ್ಯ ಮತ್ತು ಟಿ.ಎಸ್.ವೆಂಕಣ್ಣಯ್ಯ ಅವರು ನಾಲ್ಕು ಹಸ್ತಪ್ರತಿಗಳ ಸಹಾಯದೊಂದಿಗೆ ಜಂಟಿಯಾಗಿ ಪ್ರಕಟಿಸಿದ “ರಾಘವಾಂಕನ ಸಿದ್ಧರಾಮ ಚರಿತ್ರೆ” ಹಾಗೂ ತದನಂತರ ಕ್ರಿ.ಶ. ೧೯೫೨ರಲ್ಲಿ ಡಾ. ಎಚ್.ದೇವೀರಪ್ಪನವರ ತಾಡೋಲೆಯನ್ನು ಅನುಕರಿಸಿ, ಡಿ.ಎಲ್.ಎನ್.ರ ಕ್ರಿ.ಶ.೧೯೪೧ರ ಪರಿಷ್ಕೃತ ಆವೃತ್ತಿ, ಸಿದ್ಧರಾಮನ ಚರಿತ್ರೆಯ ಕುರಿತ ಆಕ್ಷೇಪಣೆಗಳಿಂದಲೇ ಪ್ರಾರಂಭವಾದ ಮೊದಲ ಹಂತದ ಕೃತಿಗಳು. ೧೯೬೮ರ ಸುಮಾರಿಗೆ ಕೊಲ್ಲಾಪುರದ ಹಬ್ಬು ಮಂಡಳಿಯಿಂದ ಖೊಟ್ಟಿ ಸಿದ್ಧರಾಮ ಚಾರಿತ್ರವೊಂದು ಪ್ರಕಟವಾಯಿತು. ಆ ಕೃತಿಯಲ್ಲಿ ಸಿದ್ಧರಾಮ ಶಿವಯೋಗಿ ಶಿವಾಚಾರ್ಯನಾದ, ಚನ್ನಬಸವಣ್ಣನವರಿಗೆ ಲಿಂಗ ದೀಕ್ಷೆ ಕೊಟ್ಟ ಎಂಬ ಸಂಗತಿಯನ್ನು ಬರೆದು ಸೇರಿಸಲಾಯಿತು. ತದನಂತರ ಅಲ್ಲಮಪ್ರಭು-ಸಿದ್ಧರಾಮ ವಾದದ ವಚನಗಳು ಎಂಬ ಕೃತಿಯೊಂದು ಸೊಲ್ಲಾಪುರದಿಂದಲೇ ಪ್ರಕಟವಾಯಿತು. ಇಲ್ಲಿಯ ವಚನಗಳೆಲ್ಲವೂ ಖೊಟ್ಟಿ ಸೃಷ್ಟಿಗಳೇ ಆಗಿದ್ದವು. ತದನಂತರ ಎಲ್. ಬಸವರಾಜು ಅವರು ‘ಸಿದ್ಧರಾಮ ನಿಜ ವಚನಗಳು’ ಎಂಬ ಕೃತಿ ಪ್ರಕಟಿಸುವ ಮೂಲಕ ವಿವಾದ ಸೃಷ್ಟಿಸಿದರು. ಎಲ್ಲಕ್ಕೂ ಮಿಗಿಲಾಗಿ ಪಿ.ಎಂ.ಗಿರಿರಾಜು ಅವರು ೮೪೮ ಸಿದ್ಧರಾಮ ಆರೋಪಿತ ಖೊಟ್ಟಿ ವಚನಗಳ ಕೃತಿಯೊಂದನ್ನು ಪ್ರಕಟಿಸಿದ್ದರು. ಹೀಗೆ ಸಿದ್ಧರಾಮ ಶಿವಯೋಗಿಗಳ ಜೀವನ-ವಚನ ಸಾಹಿತ್ಯ ಕುರಿತು ಅನೇಕ ಅಸಂಗತ ವಿಚಾರಗಳ ಕೃತಿಗಳು ಪ್ರಕಟವಾಗಿವೆ.

ಈ ಎಲ್ಲ ವಿವಾದಾಸ್ಪದ ಸಂಗತಿಗಳಿಗೆ ಒಂದು ಅಂತಿಮ ತೆರೆ ಎಳೆಯುವ ನಿಟ್ಟಿನಲ್ಲಿ ಭಾಲ್ಕಿ ಪೂಜ್ಯ ಶ್ರೀ ನಾಡೋಜ ಬಸವಲಿಂಗ ಪಟ್ಟಾಧ್ಯಕ್ಷರು ಪ್ರಸ್ತುತ ‘ಶಿವಯೋಗಿ ಸಿದ್ಧರಾಮ ಸಾಂಸ್ಕೃತಿಕ ಮುಖಾಮುಖಿ’ ಕೃತಿಯ ಮೂಲಕ ತಕ್ಕ ಉತ್ತರವನ್ನು ನೀಡಿದ್ದಾರೆ.

ಈ ಕೃತಿಯಲ್ಲಿ ವಿಚಾರ ಸಂಕಿರಣದಲ್ಲಿ ಮಂಡಿತವದ ಪ್ರಬಂಧಗಳಲ್ಲದೆ, ಕೆಲವು ಹಳೆಯ ಸಂಶೋಧನಾತ್ಮಕ ಲೇಖನಗಳನ್ನು ಕೂಡ ಅಳವಡಿಸಲಾಗಿದೆ. ಉದಾಃ ಎಂ. ಎಂ. ಕಲಬುರ್ಗಿ ಅವರ ‘ಸಿದ್ಧರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನ ತುಂಬ ಗಮನ ಸೆಳೆಯುತ್ತದೆ.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ನಾಡೋಜ ಡಾ. ಗೊ. ರು. ಚನ್ನಬಸಪ್ಪನವರು ಮಾತನಾಡುತ್ತ ‘ಈ ವಿಚಾರ ಗೋಷ್ಟಿಯ ಪ್ರಧಾನ ವಿಷಯ : ‘ಶಿವಯೋಗಿ ಸಿದ್ಧರಾಮ : ಸಾಂಸ್ಕೃತಿಕ ಮುಖಾಮುಖಿ’ ಎಂದಿರುವುದು ಸೂಕ್ತವಾಗಿದೆ. ಲೌಕಿಕ ಸಂಬಂಧದಲ್ಲೇ ಮುಳುಗಿದ ವ್ಯಕ್ತಿಗೆ ಆಧ್ಯಾತ್ಮಿಕ ಸಂಸ್ಕಾರದ ಅಗತ್ಯವೂ ಇದೆ ಎಂಬುದನ್ನು ಸ್ವಾನುಭಾವದಿಂದ ಕಂಡುಕೊಂಡ ಶರಣರು ಆ ಬಗೆಗೆ ಸೂಕ್ತವಾದ ಸಾರ್ವತ್ರಿಕ ಪ್ರಜ್ಞೆ ಮೂಡಿಸಲು ತಾವು ರಚಿಸಿದ ವಚನ ಸಾಹಿತ್ಯವನ್ನೇ ಮಾಧ್ಯಮವನ್ನಾಗಿ ಮಾಡಿಕೊಂಡರು. ಆ ವಿಧಾನವೇ ಸಾಂಸ್ಕೃತಿಕ ಮುಖಾಮುಖಿ. ಈ ದೃಷ್ಟಿಯಿಂದ ವರ್ತಮಾನದ ಸಂದರ್ಭ ಸನ್ನಿವೇಶದಲ್ಲೂ ಶರಣ ಸಿದ್ಧರಾಮನನ್ನು ಕುರಿತ ಬಹುಮುಖಿ ಚಿಂತನವು ಮಹತ್ವ ಪಡೆಯುತ್ತದೆಂದು ನಾನು ಭಾವಿಸಿದ್ದೇನೆ’ ಎಂದು ವಿಚಾರ ಸಂಕಿರಣದ ಔಚಿತ್ಯವನ್ನು ಪ್ರಸ್ತಾಪಿಸಿದ್ದಾರೆ.

ನಾಡಿನ ಹಿರಿಯ ಚಿಂತಕರಾದ ಗುರುರಾಜ ಕರಜಗಿ ಅವರು ‘ಅತ್ಯದ್ಭುತ ಅಂತರೀಕ್ಷಣೆ’ ಎಂಬ ಪ್ರಬಂಧ ಕೊಟ್ಟಿದ್ದಾರೆ. ಸಿದ್ಧರಾಮ : ಇತಿವೃತ್ತ, ಶಾಸನಗಳಲ್ಲಿ ಸಿದ್ಧರಾಮ, ಸಿದ್ಧರಾಮನ ಸ್ಮಾರಕಗಳು, ಕನ್ನಡ ಕಾವ್ಯಗಳಲ್ಲಿ ಸಿದ್ಧರಾಮ, ಜಾನಪದ-ಶೂನ್ಯಸಂಪಾದನೆಗಳಲ್ಲಿ ಸಿದ್ಧರಾಮ, ಬಸವಣ್ಣ, ಅಲ್ಲಮಪ್ರಭು, ರೇವಣಸಿದ್ಧ, ಚನ್ನಬಸವಣ್ಣ, ವೇಮನ, ಹಾವಿನ ಹಾಳ ಕಲ್ಲಯ್ಯ, ಅಮುಗಿದೇವಯ್ಯ ಅವರೊಂದಿಗಿನ ಸಿದ್ಧರಾಮನ ಒಡನಾಟದ ಕ್ಷಣಗಳ ಕುರಿತು ಆರು ಮೌಲಿಕ ಲೇಖನಗಳು ಇಲ್ಲಿವೆ.

ಸಿದ್ಧರಾಮನ ವಚನಗಳಲ್ಲಿ ದಾರ್ಶನಿಕ ನೆಲೆ ಸ್ತ್ರೀ ಸಂವೇದನೆಯ ಅಂಶಗಳು, ಶೈಕ್ಷಣಿಕ ಅಂಶಗಳು, ಸಾಹಿತ್ಯಿಕ-ಜಾನಪದೀಯ ಅಂಶಗಳು, ಕರ್ಮಯೋಗ, ಪ್ರಕೃತಿ, ವೈಚಾರಿಕತೆ, ಸರ್ವೋದಯ, ಲೋಕದೃಷ್ಟಿ, ಗಗನ ಸಿದ್ಧಾಂತ, ಶಿಲ್ಪ ಮತ್ತು ಸೌಂರ್ಯ ಮೊದಲಾದ ವಿಷಯಗಳ ಕುರಿತು ಹತ್ತಾರು ಚಿಂತನ ಬರಹಗಳು ಇಲ್ಲಿವೆ.

ನಮ್ಮ ನಾಡಿನ ಖ್ಯಾತ ವಿದ್ವಾಂಸರಾದ ಚನ್ನಬಸವಯ್ಯ ಹಿರೇಮಠ, ಅಮರೇಶ ಯತಗಲ್, ಕೆ. ರವೀಂದ್ರನಾಥ, ರಘುಶಂಖ ಭಾತಾಂಬ್ರಾ, ಸೋಮನಾಥ ಯಾಳವಾರ, ವಿಜಯಕುಮಾರ ಕಮ್ಮಾರ, ರಾಜಶೇಖರ ಜಮದಂಡಿ, ಶೈಲಾ ನಾಗರಾಜ್, ಶಂಕರ ದೇವನೂರ ಮೊದಲಾದ ಹಿರಿಯರ ಲೇಖನಗಳು ಕೃತಿಗೆ ಮೌಲಿಕತೆಯನ್ನು ತಂದುಕೊಟ್ಟಿವೆ. ಕೆಲವು ಹೊಸ ಲೇಖಕರ ಲೇಖಕರು ಇನ್ನಷ್ಟು ಪರಿಪೂರ್ಣತೆಯನ್ನು ಬಯಸುತ್ತವೆ. ಅವಸರದಲ್ಲಿ ಬರೆದ ಬರಹಗಳಂತೆ ತೋರುತ್ತವೆ. ಕೆಲವು ಲೇಖನಗಳು ತುಂಬ ಜಾಳು ಜಾಳಾಗಿವೆ. ಅವುಗಳಲ್ಲಿ ಗಟ್ಟಿತನ ಕಡಿಮೆಯೆನಿಸುತ್ತದೆ. ಉದಾಃ ‘ಸಿದ್ಧರಾಮನು ತನ್ನ ಅಂತರಂಗ ಅಂದಂದಿನ ಅನುಭವಗಳನ್ನು ವ್ಯಕ್ತಪಡಿಸಬಲ್ಲ ಅನುಭಾವಿಯಾಗಿ, ಆಧ್ಯಾತ್ಮಿಕ ಅಭಿವ್ಯಕ್ತಿಗಳನ್ನು ತತ್ವಗಳನ್ನು ಗ್ರಹಿಸಿ ಅಭಿವ್ಯಕ್ತಿಸಬಲ್ಲ ಸಾಧಕನಾಗಿ, ಯೋಗಿಕ ಅನುಭವಗಳನ್ನು ಹೊಂದಿದ ಅನುಭಾವಿಯಾಗಿ ಕಂಡು ಬರುತ್ತಾನೆ’ (ಪು. ೪೦೧). ‘ಭೂಮಿಯು ಪಂಚಭೂತಗಳಲ್ಲಿ ಮೊದಲನೆಯದು ಭೂಮಿ’ (ಪು. ೪೦೫), ‘ಪಂಚಭೂತಗಳ ಕುರಿತಾದ ಶಿವಜೀವರ ತತ್ವಗಳನ್ನು ಅರಿತುಕೊಂಡ ಸಿದ್ಧರಾಮ ತನ್ನ ವಚನಗಳಲ್ಲಿ ಆಕಾಶತತ್ವ, ಗಗನ ಸಿದ್ಧಾಂತ ತತ್ವಗಳನ್ನು, ಪಂಚಮಹಾಭೂತಗಳ ಕುರಿತು ವಚನಗಳಲ್ಲಿ ಅದ್ಭುತವಾಗಿ ವಿವರಿಸಿದ್ದಾನೆ.’ (ಪು. ೪೦೫) ಹೀಗೆ ಅನೇಕ ಲೇಖನಗಳು ಅಸಂಗತವಾಗಿ ಮೂಡಿಬಂದಿರುವುದನ್ನು ಕಾಣಬಹುದು.

ಶಿವಯೋಗಿ ಸಿದ್ಧರಾಮರ ಕುರಿತು ೫೧ ಲೇಖನಗಳಿದ್ದರೂ ಇನ್ನೂ ಕೆಲವು ಕೊರತೆಗಳು ಈ ಕೃತಿಯನ್ನು ಓದಿದಾಗ ಎದ್ದು ಕಾಣುತ್ತವೆ. ಸಿದ್ಧರಾಮನು ಲಿಂಗಾಯತನಲ್ಲ ಶೈವ ಎಂದು ಡಿ.ಎಲ್.ಎನ್. ಪ್ರತಿಪಾದಿಸಿದಾಗ ರೆ. ಉತ್ತಂಗಿ ಚನ್ನಪ್ಪನವರು ಸಿದ್ಧರಾಮ ಸಾಹಿತ್ಯ ಸಂಗ್ರಹ ಎಂಬ ಸಂಶೋಧನಾತ್ಮಕ ಗ್ರಂಥವನ್ನು ರಚಿಸುವ ಮೂಲಕ ಸಿದ್ಧರಾಮ ಲಿಂಗಾಯತ ಎಂದು ಸಿದ್ಧಪಡಿಸಿದ್ದರು. ಈ ಕುರಿತು ಒಂದು ಪ್ರತ್ಯೇಕ ಲೇಖನ ಇಲ್ಲಿ ಬೇಕಾಗಿತ್ತು ಎಂದೆನಿಸುತ್ತದೆ. ಸೊಲ್ಲಾಪುರದ ಹಬ್ಬು ಮಂಡಳಿಯವರು ಪ್ರಕಟಿಸಿದ ಖೊಟ್ಟಿ ಸಿದ್ಧರಾಮ ಚರಿತ್ರೆಯ ಒಳಹೂರಣಗಳನ್ನು ಬಯಲಿಗೆಳೆಯುವ ಒಂದು ಲೇಖನ ಇಲ್ಲಿ ಬೇಕಾಗಿತ್ತು. ಮುಖ್ಯವಾಗಿ ಸಿದ್ಧನಂಜೇಶ ಕವಿ ಬರೆದ ರಾಘವಾಂಕ ಚಾರಿತ್ರದಲ್ಲಿ ‘ಸಿದ್ಧರಾಮ ಚಾರಿತ್ರ’ದ ವಿವರಣೆಯನ್ನು ನೀಡಿದ್ದಾನೆ. ಆ ಕೃತಿಯ ಮೂಲಕ ಕಲ್ಯಾಣದಲ್ಲಿ ಕ್ರಾಂತಿ ನಡೆದ ಘಟನೆಯ ವಾಸ್ತವ ಸತ್ಯ ಮತ್ತು ಸಿದ್ಧರಾಮ ಶಿವಯೋಗಿ ಶೂನ್ಯಪೀಠದ ಮೂರನೆಯ ಅಧಿಪತಿಯಾಗುವ ಎಲ್ಲ ವಿವರಗಳು ದೊರೆಯುತ್ತವೆ. ಆದರೆ ನಮಗಿಂದು ಮೂಲ ಸಿದ್ಧರಾಮ ಚಾರಿತ್ರ ದೊರೆಕಿರುವುದು ಕೇವಲ ಒಂಬತ್ತು ಸಂಧಿಗಳು. ಹೀಗಾಗಿ ಸಿದ್ಧನಂಜೇಶನ ರಾಘವಾಂಕ ಚಾರಿತ್ರದಲ್ಲಿ ಮೂಡಿಬಂದ ಸಿದ್ಧರಾಮನ ನಿಜವೃತ್ತಾಂತ ಕುರಿತು ವಿವರಣೆ ನೀಡುವ ಒಂದು ಲೇಖನ ಇಲ್ಲಿ ಇರಬೇಕಾಗಿತ್ತು. ಎಲ್. ಬಸವರಾಜು ಅವರ ‘ನಿಜ ಸಿದ್ಧರಾಮನ ವಚನಗಳು’ ಕೃತಿಯ ಕುರಿತ ವಿಮರ್ಶಾತ್ಮಕ ಲೇಖನ ಬರೆಸಬೇಕಾಗಿತ್ತು.

ಸಿದ್ಧರಾಮ ಶಿವಯೋಗಿಗಳ ವಚನಗಳಲ್ಲಿ ‘ಕಪಿಲ ಸಿದ್ಧಮಲ್ಲಿಕಾರ್ಜುನ’ ‘ಯೋಗಿನಾಥ’ ಎಂಬ ಅಂಕಿತಗಳಲ್ಲಿ ವಚನಗಳಲ್ಲಿ ಬರೆದಿದ್ದಾರೆ, ಹಾಗೆಯೇ ಬಸವಸ್ತೋತ್ರ ತ್ರಿವಿಧಿ, ಮಿಶ್ರಸ್ತೋತ್ರದ ತ್ರಿವಿಧಿ, ಮಂತ್ರಗೋಪ್ಯ ಮೊದಲಾದ ಕಿರು ಕೃತಿಗಳನ್ನು ರಚಿಸಿದ್ದಾರೆ. ಈ ವಿಷಯ ಕುರಿತು ಸಮಗ್ರ ವಿವರಣೆ ನೀಡುವ ಮಹತ್ವಪೂರ್ಣ ಲೇಖನಗಳು ಇಲ್ಲಿ ಪ್ರಕಟವಾಗಿದ್ದಾರೆ ಸಿದ್ಧರಾಮ ಶಿವಯೋಗಿಗಳ ಸಮಗ್ರ ಸಮೃದ್ಧ ಚಿತ್ರಣ ನಮಗೆ ದೊರಕುತ್ತಿತ್ತು.

೧೮ನೇ ಶತಮಾನದಲ್ಲಿ ರಾಘವಾಂಕ ಮಹಾಕವಿಯ ಸಿದ್ಧರಾಮ ಚಾರಿತ್ರ ಕೃತಿಯ ಮರಾಠಿ ಅನುವಾದ ಕೃತಿ ಪ್ರಕಟವಾಗಿದೆ. ‘ಕಾನಡಿ ರಾಘವಾಚಾರ್ಯ ಕೃತ ಸಿದ್ಧರಾಮ ಚಾರಿತ್ರ’ ಎಂಬ ಹೆಸರು ಅಲ್ಲಿದೆ. ಈ ಕೃತಿಯಲ್ಲಿಯ ಮತ್ತೊಂದು ವಿಶೇಷವೆಂದರೆ ಸಿದ್ಧರಾಮ ಹುಟ್ಟಿನಿಂದ ‘ಕುಡು ಒಕ್ಕಲಿಗ’ನಾಗಿದ್ದನೆಂದು ‘ಮರಾಠಿಯಲ್ಲಿಯೂ ‘ಕುಡು ಒಕ್ಕಲಿಗ’ ಪದ ಬಳಿಸಿರುವುದು ಗಮನಾರ್ಹ ಸಂಗತಿ. ಈ ಕೃತಿಯ ಅವಲೋಕನಾತ್ಮಕ ಲೇಖನ ಇಲ್ಲಿ ಸೇರಿದ್ದರೆ ಕೃತಿಗೆ ಔಚಿತ್ಯ ಪ್ರಾಪ್ತವಾಗುತ್ತಿತ್ತು.

ಡಾ. ಎಂ. ಎಂ. ಕಲಬುರ್ಗಿ ಅವರು ಸಿದ್ಧರಾಮನು ನಾಥಪಂಥೀಯನಾಗಿದ್ದ ಎಂಬುದರತ್ತ ಗಮನ ಸೆಳೆಯಲು ನಾಲ್ಕಾರು ಲೇಖನಗಳನ್ನು ಬರೆದಿದ್ದರು. ಸಿದ್ಧರಾಮನ ನಾಥಪಂಥೀಯತೆ ಕುರಿತು ಚಿಂತನೆಯ ವಿಚಾರಗಳ ಕುರಿತು ಒಂದು ಪ್ರತ್ಯೇಕ ಲೇಖನ ಬೇಕಾಗಿತ್ತು.

ಅನುಬಂಧದಲ್ಲಿ ಸುಮಂಗಲಾ ರೆಡ್ಡಿ ಅವರು ಕೊಟ್ಟಿರುವ ಸಿದ್ಧರಾಮ ಸಾಹಿತ್ಯ ಸೂಚಿ ತುಂಬಾ ಅಪೂರ್ಣತೆಯಿಂದ ಕೂಡಿದೆ. ಉತ್ತಂಗಿ ಚೆನ್ನಪ್ಪನವರ ‘ಸಿದ್ಧರಾಮ ಸಾಹಿತ್ಯ ಸಂಗ್ರಹ’, ಜಯದೇವಿ ತಾಯಿ ಲಿಗಾಡೆ, ಎಂ. ಎಸ್. ಲಠ್ಠೆ, ಎಂ. ರಾಮಕೃಷ್ಣ ಮತ್ತು ಶಾಂತಲಾ ಯಡ್ರಾವಿ ಅವರು ಬರೆದ ‘ಸಿದ್ಧರಾಮ’ ಜೀವನ ಚರಿತ್ರೆಗಳು, ಮುಂಡರಗಿ ಅನ್ನದಾನೀಶ್ವರ ಸ್ವಾಮಿಗಳು ಸಂಪಾದಿಸಿದಿ ‘ಸಿದ್ಧರಾಮರೇಶ್ವರ ಸಮಗ್ರ ವಿಚಾರ ಸಂಕಿರಣ ಸಂಪುಟ’, ಎಂ. ಬಿ. ನೇಗಿನಹಾಳ ಅವರು ಸಂಪಾದಿಸಿದ ‘ಸಿದ್ಧರಾಮ ಚಾರಿತ್ರ’, ಎಲ್.ಬಸವರಾಜು ಅವರ ‘ಸರಳ ಸಿದ್ಧರಾಮ ಚರಿತ್ರೆ’, ಚನ್ನಪ್ಪ ಎರೇಸೀಮೆ ಅವರು ಬರೆದ ‘ಸಿದ್ಧರಾಮ ಲಿಂಗತಪಸ್ಸು’, ‘ಸಿದ್ಧರಾಮನ ಅಖಂಡ ಸಾಕ್ಷಾತ್ಕಾರ’, ಡಾ. ಫ.ಗು.ಹಳಕಟ್ಟಿ ಅವರು ಸಂಪಾದಿಸಿದ ‘ಸಿದ್ಧರಾಮೇಶ್ವರ ವಚನಗಳು’, ಶೂನ್ಯಸಂಪಾದನೆಯ ‘ಸಿದ್ಧರಾಮ ದೇವರ ಸಂಪಾದನೆ’, ಡಾ. ಎಂ. ಎಂ. ಕಲಬುರ್ಗಿ ಮತ್ತು ಸಾ.ಶಿ. ಮರುಳಯ್ಯ ಹೊಸದಾಗಿ ಶೋಧಿಸಿದ ‘ಸಿದ್ಧರಾಮದೇವಯ್ಯಗಳ ವಚನಗಳು’ ಮೊದಲಾದ ಇನ್ನೂ ಹತ್ತಾರು ಕೃತಿಗಳ ಉಲ್ಲೇಖಗಳೇ ಅಲ್ಲಿ ಇಲ್ಲದಿರುವುದು ಆಕರಗಳನ್ನು ಪರಿಶೀಲಿಸುವವರಿಗೆ ತುಂಬ ನಿರಾಶೆಯನ್ನುಂಟು ಮಾಡುತ್ತದೆ. ಮುಂದೆ ಅಧ್ಯಯನ ಮಾಡುವವರಿಗೆ ಇಷ್ಟೇ ಆಕರಗಳಿವೆ ಎಂಬ ಭ್ರಮೆ ಮೂಡುತ್ತದೆ. ಹೆಚ್ಚಿನ ಆಕರಗಳನ್ನು ಹುಡುಕದೇ ಹೋಗುವ ಸಂಭವ ಇರುತ್ತದೆ. ಹೀಗಾಗಿ ಸೂಚಿ ಮಾಡುವಾಗ ತುಂಬ ಎಚ್ಚರಿಕೆ ಅವಧಾನ ಪ್ರಜ್ಞೆ ರೂಢಿಸಿಕೊಳ್ಳಬೇಕಾದುದು ಅತ್ಯಗತ್ಯವಾಗಿದೆ.

ಹೀಗೆ ಅನೇಕ ಕೊರತೆಗಳು ಕಂಡರೂ, ಸಿದ್ಧರಾಮ ಶಿವಯೋಗಿಗಳ ಕುರಿತು ಅಧ್ಯಯನ ಮಾಡುವವರಿಗೆ ಒಂದು ಪ್ರಮುಖ ಆಕರ ಗ್ರಂಥವಾಗಿ ಇದು ಮೂಡಿ ಬಂದಿದೆ. ಕೊರತೆಗಳನ್ನು ತುಂಬಿ ಕೊಳ್ಳುವ ನಿಟ್ಟಿನಲ್ಲಿ ಇನ್ನೊಂದು ಇಂತಹದೇ ವಿಚಾರ ಸಂಕಿರಣ ಏರ್ಪಡಿಸಿ ಪುಸ್ತಕ ಪ್ರಕಟಿಸಿದರೆ ತುಂಬ ಔಚಿತ್ಯಪೂರ್ಣವಾಗುವುದು.

ಒಟ್ಟಾರೆ, ಸಿದ್ಧರಾಮ ಶಿವಯೋಗಿಗಳ ಕುರಿತಾದ ಒಂದು ಮಹತ್ವಪೂರ್ಣ ಕೃತಿಯನ್ನು ಪ್ರಕಟಿಸಿದ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಇತರ ಸಂಪಾದಕ ಮಂಡಳಿಗೆ ಅನಂತ ಶರಣು ಶರಣಾರ್ಥಿಗಳು.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group