ಬೆಳಗಾವಿ – ದಿ. 24 ರಂದು ರವಿವಾರ ಬೆಳಗಾವಿ ನಗರದ ಫ. ಗು. ಹಳಕಟ್ಟಿ ಭವನದಲ್ಲಿ ನಗರ ಸೇವಕರಾದ ರಾಜಶೇಖರ ಧೋನಿಯವರ ಮುಂದಾಳತ್ವದಲ್ಲಿ ಲಿಂಗಾಯತ ಸಂಘಟನೆ ಸಹಯೋಗದಲ್ಲಿ ಬೂಸ್ಟರ್ ಲಸಿಕೆ ನೀಡುವ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನಗರ ಸೇವಕ ರಾಜಶೇಖರ್ ಧೋನಿ, ಸರ್ಕಾರದ ವತಿಯಿಂದ ಉಚಿತವಾಗಿ ಬೂಸ್ಟರ್ ಲಸಿಕೆಯನ್ನು ವಿತರಣೆ ಮಾಡಲಾಗುತ್ತಿದೆ. ಮಳೆಗಾಲದ ಈ ಸಂದರ್ಭದಲ್ಲಿ ಎಲ್ಲೆಡೆ ವಾತಾವರಣದ ವೈಪರೀತ್ಯದಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದು ಮುಂಜಾಗ್ರತೆ ಕ್ರಮವಾಗಿ ಬೂಸ್ಟರ್ ಲಸಿಕೆಯನ್ನು ನೀಡುವ ಶಿಬಿರ ಏರ್ಪಡಿಸಲಾಗಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಆರೋಗ್ಯವಾಗಿರುವಂತೆ ಸಲಹೆ ನೀಡಿದರು.
ಸರಕಾರದ ಯೋಜನೆಯನ್ನು ಎಲ್ಲರಿಗೆ ಮುಟ್ಟಿಸುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಮಾಡಲಾಗುತ್ತಿದೆ ಇದರ ಪ್ರಯೋಜನ ಪಡೆಯಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಡಾ ಜಯಾನಂದ ಧನವಂತ, ಡಾ. ಜಗದೀಶ್ ಪಾಟೀಲ, ಸಿದ್ದಮ್ಮ ಸನಗಾರ, ಶಂಕರ ಹತ್ತರಕಿಹಾಳ ಲಿಂಗಾಯತ ಸಂಘಟನೆಯ ಸಂಗಮೇಶ ಅರಳಿ,ಸುರೇಶ ನರಗುಂದ, ಸತೀಶ ದೇವರಮನಿ ಶಂಕರ್ ಶೆಟ್ಟಿ ಸೇರಿದಂತೆ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ಮಹಾಂತೇಶ ನಗರ, ರುಕ್ಮಿಣಿ ನಗರ ಆಂಜನೇಯ ನಗರ ಸೇರಿದಂತೆ ವಾರ್ಡ್ ನಂ.36 ರ 150 ಜನರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.