ಹೊಸದೆಹಲಿ – ಮಹತ್ವದ ಬೆಳವಣಿಗೆಯೊಂದರಲ್ಲಿ ಮೋದಿ ಸರ್ಕಾರ -೦೨ ರ ಮಹತ್ವಾಕಾಂಕ್ಷಿ ಯೋಜನೆಯಾದ ‘ಒಂದು ದೇಶ, ಒಂದು ಚುನಾವಣೆ’ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯು ದೇಶದಲ್ಲಿ ಏಕ ಕಾಲಕ್ಕೆ ಚುನಾವಣೆ ನಡೆಸಬೇಕೆಂಬ ಮಹತ್ವಾಕಾಂಕ್ಷಿ ಯೋಜನೆ ‘ ಒಂದು ದೇಶ ಒಂದು ಚುನಾವಣೆ ‘ ಯೋಜನೆ ಜಾರಿಗೆ ತರಲು ಕಳೆದ ಮಾರ್ಚ್ ತಿಂಗಳಲ್ಲಿ ಲೋಕಸಭಾ ಚುನಾವಣೆ ಮುಂದಿರುವಾಗಲೇ ವರದಿ ಸಲ್ಲಿಸಿತ್ತು.
ಕೋವಿಂದ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದಂತೆ ದೇಶದಲ್ಲಿ ಮೊದಲು ಲೋಕಸಭಾ ಚುನಾವಣೆಗಳು, ವಿಧಾನ ಸಭಾ ಚುನಾವಣೆಗಳು ನಡೆದು ನಂತರ ೧೦೦ ದಿನಗಳ ಒಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಲಿವೆ. ಸಮಿತಿಯು ಸಲ್ಲಿಸಿದ ವರದಿ ಜಾರಿ ಹಾಗೂ ನಿರ್ವಹಣೆ ಕೈಗೊಳ್ಳಲು ‘ ಜಾರಿ ಗಣ’ ವೊಂದನ್ನು ರಚಿಸಲಾಗಿದೆ.
ಈ ಮಧ್ಯೆ ಒಂದು ದೇಶ ಒಂದು ಚುನಾವಣೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದೊಂದು ಅವಾಸ್ತವ ಎಂದರಲ್ಲದೆ ಬಿಜೆಪಿಯು ದೇಶದ ನಿಜವಾದ ವಿಷಯಗಳ ವಿಷಯಾಂತರ ಮಾಡಲು ಇಂಥ ಅನಗತ್ಯ ವಿಷಯಗಳನ್ನು ಹರಡುತ್ತದೆ ಎಂದು ಟೀಕಿಸಿದ್ದಾರೆ.
ಈಗಿನ ಸಂವಿಧಾನದ ಅಡಿಯಲ್ಲಿ ಒಂದು ದೇಶ ಒಂದು ಚುನಾವಣೆ ನಡೆಸುವುದು ಅಸಾಧ್ಯ ಎಂದು ಮಾಜಿ ಹಣಕಾಸು ಮಂತ್ರಿ ಪಿ.ಚಿದಂಬರಂ ಹೇಳಿದ್ದಾರೆ