ರಾಮದುರ್ಗ – ಕೋವಿಡ್ ಪರಿಣಾಮದಿಂದ ಎರಡು ವರ್ಷ ಶಾಲೆಗಳಲ್ಲಿ ಮಕ್ಕಳ ಕಲಿಕೆ ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಅದನ್ನು ಸರಿದೂಗಿಸಲು ಈ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಸರಕಾರ ಘೋಷಿಸಿದ್ದು ಶಿಕ್ಷಕರು ಶಾಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಜಿ.ಸಿ.ಶೀಲವಂತಮಠ ಹೇಳಿದರು.
ತುರನೂರ ಸಿದ್ಲಿಂಗೇಶ್ವರ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿ ಕಲಿ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕಲಿಕಾ ಚೇತರಿಕೆ ಉಪಕ್ರಮದ ಮೂಲಕ ಕಲಿಕಾ ಫಲಗಳನ್ನು ಕಲಿತು ಮುಂದಿನ ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ಪ್ರತಿಯೊಬ್ಬರೂ ತನ್ನ ತರಗತಿಯ ಮಟ್ಟದ ಕಲಿಕೆಯನ್ನು ಯಾವುದೇ ಅಡೆತಡೆ ಇಲ್ಲದೆ ಸಾಧಿಸಲು ಸಜ್ಜುಗೊಳಿಸುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಶಿಕ್ಷಕರಿಗೆ ಕಲಿಕಾ ಹಾಳೆಗಳು ಮತ್ತು ಕೈಪಿಡಿಗಳು ಬೇಗನೆ ತಲುಪಿದರೆ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಆದರೂ ಶಾಲೆಗಳಲ್ಲಿ ಶಿಕ್ಷಕರು ತಾವೆ ಚಟುವಟಿಕೆಗಳನ್ನು ರೂಪಿಸಿಕೊಂಡು ಕಲಿಸುವಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ಪಾಟೀಲ ಹೇಳಿದರು.
ಸಿ.ಆರ್.ಪಿ ಸಂಘದ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿ ಮಳೆಬಿಲ್ಲು, ವಿದ್ಯಾಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮಗಳು ಮಕ್ಕಳ ಕಲಿಕಾ ನಷ್ಟವನ್ನು ತುಂಬಿಕೊಳ್ಳಲು ಪೂರಕವಾಗಿವೆ ಎಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಹನಮಂತ ಆಡಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿ.ಆರ್.ಪಿ ಗಳಾದ ಶಿವು ಮಠದ, ಬಸವರಾಜ ಯಡಹಳ್ಳಿ, ಎಸ್.ಎಂ.ಬಡಿಗೇರ ವೇದಿಕೆ ಮೇಲಿದ್ದರು.
ಹಣಮಸಾಗರ, ತುರನೂರ ಮತ್ತು ನರಸಾಪೂರ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ 42 ಜನ ಶಿಕ್ಷಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಟಿ.ಸಿ.ಹುಗ್ಗಿ, ಪಿ.ಎಸ್.ಕರಡಿಗುಡ್ಡ, ಜಿ.ಎಸ್.ಕೊಳದೂರ ತರಬೇತಿ ನೀಡಿದರು.
ಪ್ರಧಾನ ಗುರುಗಳಾಗ ಎಸ್.ಎಸ್.ಹುಚ್ಚನ್ನವರ ಸ್ವಾಗತಿಸಿದರು.ಹಣಮಾಪೂರ ಸಿ.ಆರ್.ಪಿ ಟಿ.ಜಿ.ಕರದೀನ ಕಾರ್ಯಕ್ರಮ ನಿರೂಪಿಸಿದರು. ಆರ್.ವಿ.ಪಾಟೀಲ ವಂದಿಸಿದರು.