ಮೂಡಲಗಿ : ತಾಲೂಕಿನ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಇದೇ ಮಾ.29 ರಂದು ಜರುಗಲಿರುವ ಹೋಳಿ ಹಬ್ಬ(ಹುಣ್ಣಿಮೆ)ವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನುಮಂತ ನರಳೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಗುರುವಾರದಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಹಾರಾಷ್ಟ್ರದಲ್ಲಿ ಮಹಾಮಾರಿ ಕರೊನಾ 2 ನೇ ಅಲೆ ಅಬ್ಬರಿಸುತ್ತಿರುವುದರಿಂದ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಸಾರ್ವಜನಿಕರು ಅನುಸರಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರಳ ರೀತಿಯಲ್ಲಿ ಹೋಳಿ ಹಬ್ಬ ಆಚರಿಸಬೇಕು ಎಂದು ಹೇಳಿದ್ದಾರೆ.
ಬೆಟಗೇರಿ ಸೇರಿದಂತೆ ಕೆಲವು ಗ್ರಾಮಗಳಿಗೆ ಸುತ್ತಲಿನ ಹತ್ತೂರಿನ ಜನರು ವ್ಯಾಪಾರ ವಹಿವಾಟಗಳಿಗೆ ಬಂದು ಹೋಗುವ ಅಪರಿಚಿತರಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ, ಮಹಿಳೆಯರಿಗೆ ಒತ್ತಾಯ ಪೂರ್ವಕ ಬಣ್ಣ ಎರಚಬಾರದು. ಸ್ಥಳೀಯ ಎಲ್ಲಾ ಶಾಲೆ-ಕಾಲೇಜು ಕೊಠಡಿಗಳ ಮುಂಭಾಗದಲ್ಲಿ ಬಿಡಿಸಲಾದ ಶೈಕ್ಷಣಿಕ ಚಿತ್ರ-ಬರಹಗಳಿಗೆ ಬಣ್ಣ ಎರಚಬಾರದು. ಶಾಲಾ ಕೊಠಡಿ, ಗೇಟ್‍ಗಳಿಗೆ ಬಣ್ಣ ಎರಚಿದ, ಹಚ್ಚಿದವರ ಮೇಲೆ ದಂಡ ವಿಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.
ಸ್ಥಳೀಯರು ನೈಸರ್ಗಿಕ ಬಣ್ಣ ಬಳಕೆ ಮಾಡಬೇಕು. ಗ್ರಾಮದ ವಿವಿಧೆಡೆ ಯುವಕರು, ನಾಗರಿಕರು ಹೋಳಿ ಹಬ್ಬದ ಪ್ರಯುಕ್ತ ಹಂತಿ, ಲಾವಣಿ ಪದ ಒಬ್ಬರಿಗೊಬ್ಬರು ಜಿದ್ದಾ ಜಿದ್ದಿಯಾಗಿ ಹಾಡಿ ಕೇಳುಗರ ಮನ ರಂಜಿಸಬೇಕೇ ಹೊರತು ಯಾರನ್ನೂ ದ್ವೇಷ ಭಾವನೆಯಿಂದ ಗುರಿಯಾಗಿಸಿಕೊಂಡು ಅಶ್ಲೀಲ ಪದ ಬಳಕೆ ಮಾಡಬಾರದು. ರೋಗಿಗಳು ಇರುವ ಮನೆಗಳ ಅಕ್ಕ-ಪಕ್ಕ ಶಬ್ದ ಮಾಲಿನ್ಯದ ತೊಂದರೆಯಾಗದಂತೆ ಯುವಕರು, ಮಕ್ಕಳು ಹಲಗೆ, ತಮಟೆ ಬಾರಿಸಬೇಕು ಎಂದು ಪಿಎಸ್‍ಐ ಹನುಮಂತ ನರಳೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.