Homeಸಂಪಾದಕೀಯಆರ್ ವಿ ಲರ್ನಿಂಗ್ ಹಬ್ ಸಂಸ್ಥೆಯ ಪರವಾನಿಗೆ ರದ್ದು ಮಾಡಿ

ಆರ್ ವಿ ಲರ್ನಿಂಗ್ ಹಬ್ ಸಂಸ್ಥೆಯ ಪರವಾನಿಗೆ ರದ್ದು ಮಾಡಿ

ಬೆಂಗಳೂರಿನ ಪ್ರತಿಷ್ಠಿತ (?) ಕಾಲೇಜು ಆರ್ ವಿ ಲರ್ನಿಂಗ್ ಹಬ್ ಎಂಬ ಸಂಸ್ಥೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕರೊಬ್ಬರನ್ನು ಆಡಳಿತ ಮಂಡಳಿ ವಜಾ ಮಾಡಿದೆ ಎಂಬ ವರದಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕಳವಳಕಾರಿಯಾದುದು.

ಕನ್ನಡದ ಅನ್ನ ತಿಂದು, ಇಲ್ಲಿಯ ಸೌಲಭ್ಯಗಳನ್ನು ಅನುಭವಿಸುವ ಇಂಥ ಸಂಸ್ಥೆಗಳು ಕನ್ನಡಕ್ಕೆ ಋಣಿಯಾಗಿರಬೇಕು ಆದರೆ ಕನ್ನಡ ಮಾತನಾಡುವವರನ್ನೇ ಸೇವೆಯಿಂದ ವಜಾ ಮಾಡುತ್ತಾರೆ ಎಂದರೆ ಇವರು ಒಳಗಿಂದೊಳಗೆ ಕನ್ನಡ ಭಾಷೆಗೆ ಎಷ್ಟಯ ದ್ರೋಹ ಬಗೆಯುತ್ತಿರಬೇಕು ?

ಒಬ್ಬ ವಿದ್ಯಾರ್ಥಿ ಕನ್ನಡದಲ್ಲಿ ಪ್ರಶ್ನೆ ಕೇಳಿದಾಗ ಕನ್ನಡದಲ್ಲಿಯೇ ಉತ್ತರ ಕೊಟ್ಟರೆ ಇನ್ನೊಬ್ಬ ವಿದ್ಯಾರ್ಥಿಗೆ ಯಾಕೆ ಸಮಸ್ಯೆಯಾಯಿತು ? ಇದರ ಒಳ ಹೂರಣವೇನು ? ಎಂಬ ಬಗ್ಗೆ ಆ ಸಂಸ್ಥೆಯಲ್ಲಿನ ಒಳ ವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು.

ಅದು ಸಂಪೂರ್ಣವಾಗಿ ಆಂಗ್ಲ ಮಾಧ್ಯಮ ಕಾಲೇಜಾಗಿದ್ದರೆ ಪ್ರಥಮ ಭಾಷೆಯಾಗಿ ಕನ್ನಡ ಇರಲೇಬೇಕು. ಅದು ಇಲ್ಲದಿದ್ದರೆ ವಿದ್ಯಾರ್ಥಿ ಕನ್ನಡದಲ್ಲಿ ಪ್ರಶ್ನೆ ಕೇಳಿದಾಗ ಉಪನ್ಯಾಸಕರು ಕನ್ನಡದಲ್ಲಿಯೇ ಉತ್ತರ ಕೊಟ್ಟಿದ್ದು ಕೂಡ ಸಮಂಜಸವಾಗಿಯೇ ಇದ್ದು ಆ ಉಪನ್ಯಾಸಕರನ್ನು ಯಾಕೆ ಅಮಾನತು ಮಾಡಿದರೆಂಬ ಬಗ್ಗೆ ಸ್ಪಷ್ಟೀಕರಣ ಕೇಳಬೇಕಾಗುತ್ತದೆ. ಒಂದು ವೇಳೆ ಕನ್ನಡ ಮಾತನಾಡಿದ್ದಕ್ಕಾಗಿಯೇ ಕ್ರಮ ಆಗಿದ್ದರೆ ಇಂಥ ಭಾಷಾ ದ್ರೋಹಿ, ರಾಜ್ಯ ದ್ರೋಹಿ ಸಂಸ್ಥೆಯ ಪರವಾನಿಗೆಯನ್ನೇ ರದ್ದುಪಡಿಸಿದರೆ ಯಾವ ತಪ್ಪಿಲ್ಲ.

ಇತ್ತೀಚೆಗೆ ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ದ್ರೋಹಿಗಳ ಆಕ್ರಮಣ ಹೆಚ್ಚಾಗುತ್ತಿದೆ. ಇತ್ತೀಚಿನ ಕಮಲ್ ಹಾಸನ ಪ್ರಕರಣವೇ ಇದಕ್ಕೆ ಸಾಕ್ಷಿ. ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ತನ್ನ ಮಾತಿಗೆ ಸಾಕ್ಷಿ ಕೂಡ ನೀಡದೆ ಭಂಡತನ ತೋರುತ್ತ ಕೋರ್ಟಿಗೆ ಹೋದರೆ ಅಲ್ಲಿಂದಲೂ ತಪರಾಕಿ ಇಕ್ಕಿಸಿಕೊಂಡೂ ಕ್ಷಮೆ ಕೇಳದ ಆ ಚಿಲ್ಲರೆ ನಟನ ಧಿಮಾಕು ಹೆಚ್ಚಾಗಲೂ ನಮ್ಮ ಕನ್ನಡ ಪರ ಸಡಿಲ ಧೋರಣೆಯೇ ಕಾರಣ. ಈಗ ಇದು ಇನ್ನೊಂದು ಪ್ರಕರಣ.

ಇಂಥ ಘಟನೆಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಬರೀ ಕನ್ನಡ ಸಂಘಟನೆಗಳಷ್ಟೇ ಹೋರಾಟ ಮಾಡಬೇಕೆಂದಿಲ್ಲ. ಕೇವಲ ಪತ್ರಿಕಾ ವರದಿ ನೋಡಿಯೇ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಾದದ್ದು ಕರ್ನಾಟಕದ ಕನ್ನಡ ಸರ್ಕಾರದ ಕರ್ತವ್ಯ. ಸರ್ಕಾರ  ಮೊದಲು ಆರ್ ವಿ ಲರ್ನಿಂಗ್ ಹಬ್ ಎಂಬ ಆ ದ್ರೋಹಿ ಸಂಸ್ಥೆಯನ್ನು ಬರಖಾಸ್ರು ಮಾಡಬೇಕು. ಆದರೆ ಇದೊಂದು ಬೃಹತ್ ಸಂಸ್ಥೆಯಾಗಿದೆಯೆಂದು ವರದಿಗಳಿವೆ ಅಂಥ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವ ಕನಿಷ್ಠಪಕ್ಷ ಪ್ರಶ್ನೆ ಮಾಡುವ ತಾಕತ್ತಾದರೂ ರಾಜ್ಯ ಸರ್ಕಾರಕ್ಕೆ ಅಥವಾ ಕನ್ನಡಪರ ಸಂಘಟನೆಗಳಿಗೆ ಇದೆಯೇ ?

ಉಮೇಶ ಮ. ಬೆಳಕೂಡ, ಮೂಡಲಗಿ, ೯೪೪೮೮೬೩೩೦೯

 

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group