ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ವತಿಯಿಂದ ಹಾಸನದ ಸಂಸ್ಕೃತ ಭವನದಲ್ಲಿ ಕರ್ನಾಟಕದ ಮೂವರು ಹಿರಿಯ ಕಲಾವಿದರ ಜನ್ಮ ಶತಮಾನೋತ್ಸವ ಸಮಾರಂಭ ಎರಡು ದಿನ ನಡೆಯಿತು. ಈ ಕಲಾವಿದರ ಕುರಿತ ಉಪನ್ಯಾಸದಲ್ಲಿ ಈ ಕಲಾವಿದರ ಬದುಕು ಚಿತ್ರ ಕಲೆ ಸಂಘಟನೆ ಹೋರಾಟಗಳು ಅನಾವರಣೆಗೊಂಡಿತು.
ಎಂ.ಎಸ್.ಚಂದ್ರಶೇಖರ್ ೧೬-೪-೧೯೨೪ರಲ್ಲಿ ಮೈಸೂರಿನಲ್ಲಿ ಜನಿಸಿ ಇಲ್ಲಿಯ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯದಲ್ಲಿ ಕಲಾ ಶಿಕ್ಷಣ ಮುಗಿಸಿದ ಇವರು ರೇಖಾಚಿತ್ರ, ಸ್ಥಿರಚಿತ್ರ, ನಿಸರ್ಗ ಚಿತ್ರಗಳನ್ನು ತೈಲವರ್ಣ ಜಲವರ್ಣ ಚಿತ್ರಿಕೆಯಲ್ಲಿ ನಿಪುಣರು. ೧೯೫೭ರಲ್ಲಿ ಕೇಂದ್ರ ಸರ್ಕಾರದ ಹುದ್ದೆಗೆ ಸೇರಿ ತಮ್ಮ ವೃತ್ತಿ ಜೀವನದಲ್ಲಿ ಅಜಂತಾ, ಎಲ್ಲೋರದ ಗುಹೆಗಳಲ್ಲಿ ರಚಿತ ಭಿತ್ತಿಪತ್ರಗಳನ್ನು ನಕಲು ಮಾಡಿ ದಾಖಲೆಯನ್ನು ನಿರ್ಮಿಸಿದವರು. ಇವರ ಕಲಾಶಿಕ್ಷಣ ಮತ್ತು ಜೀವನ ಕುರಿತು ಡಾ.ಸಂಕ ಗೋವರ್ಧನ ಸಂಶೋಧಕರು, ಬೆಂಗಳೂರು ಮತ್ತು ಅಜಂತಾ ಎಲ್ಲೋರದಲ್ಲಿ ಎಂ.ಎಸ್.ಚಂದ್ರಶೇಖರ್ ಅವರ ಜೀವನ ಮತ್ತು ಭಿತ್ತಿ ಚಿತ್ರಗಳ ರಚನೆ ಕುರಿತು ಉ.ರಾ.ನಾಗೇಶ್, ಕಲಾವಿದರು, ಕುಶಾಲನಗರ ಮಾತನಾಡಿದರು.
ಆರ್.ಜಿ.ರಾಯ್ಕರ್ ೩೦-೮-೧೯೨೪ರಲ್ಲಿ ಜನಿಸಿ ಮಾಧ್ಯಮಿಕ ಶಿಕ್ಷಣ ಶಿರಸಿಯಲ್ಲಿ ಮುಗಿಸಿ ಚಿತ್ರಕಲಾ ಶಿಕ್ಷಣ ಡಿ.ವಿ.ಹಾಲಬಾವಿ ಕಲಾಶಾಲೆ ಧಾರವಾಡದಲ್ಲಿ,ಮುಂಬೈನ ಜೆ.ಜೆ.ಕಲಾಶಾಲೆಯಲ್ಲಿ ಡಿಪ್ಲೋಮೋ ಕೋರ್ಸ್ ಮಾಡಿ ಇವರು ಭಾವಚಿತ್ರ, ನಿಸರ್ಗ ಚಿತ್ರಗಳಲ್ಲಿ ಪರಿಣಿತರು. ೧೯೪೭ ರಿಂದ ೧೯೮೦ವರೆಗೆ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತಿ ನಂತರ ಕಲಾಕೃತಿ ರಚನೆ ಸಂಘಟನೆಯಲ್ಲಿ ಕ್ರಿಯಶೀಲರಾಗಿ ಹಲವು ಕಲಾವಿದರಿಗೆ ಮಾರ್ಗದರ್ಶಕರು. ಇವರ ಕಲೆ ಸಂಘಟನೆ ಬಗ್ಗೆ ಕಲಬುರಗಿಯ ಡಾ.ಪಿ.ಪರಶುರಾಮ್ ಪ್ರಬಂಧ ಮಂಡಿಸಿದರು.
ಮ.ಈ.ಗುರು ಹೊಸಪೇಟೆ ತಾ.ನಲ್ಲಿ ೧೯೨೪ರಲ್ಲಿ ಜನಿಸಿ ಬಾಲ್ಯದ ಶಿಕ್ಷಣ ಊರಿನಲ್ಲಿ, ಚಿತ್ರಕಲಾ ಅಭ್ಯಾಸ ಬೆಂಗಳೂರಿನ ಕಲಾಮಂದಿರದಲ್ಲಿ ನಡೆಯಿತು. ಮೈಸೂರು ಜಯರಾಜೇಂದ್ರ ಟೆಕ್ನಿಕಲ್ ಇನ್ಸಿಟ್ಯೂಟ್‌ನಲ್ಲಿ ಉನ್ನತ ಅಭ್ಯಾಸ ಮುಗಿಸಿ ೧೯೪೨ರ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಅಕಾಡೆಮಿ ಆಯೋಜಿಸಿದ್ದ ಶ್ರವಣಬೆಳಗೊಳ ಭಿತ್ತಿಚಿತ್ರಗಳ ನಕಲು ತಯಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಇವರು ಪ್ರಕೃತಿ ಮತ್ತು ವ್ಯಕ್ತಿ ಚಿತ್ರಗಳಿಂದ ಜನಮನ್ನಣೆ ಗಳಿಸಿದ್ದರು. ಇವರ ಕಲೆ, ಜೀವನ ಕುರಿತು ಅವರ ಒಡನಾಡಿ ಎಲ್.ಶಿವಲಿಂಗಪ್ಪ ಮತ್ತು ಕಲಾ ಸಂಘಟನೆ ಕುರಿತು ಚಿಕ್ಕನಾಯಕನಹಳ್ಳಿ ಚಿತ್ರಕಲಾ ಶಿಕ್ಷಕಿ ಹೇಮಾ ಪಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಕರ್ನಾಟಕ ಲಲಿತಕಲಾ ಅಕಾಡೆಮಿ ೨೨ ವರ್ಷ ಸುಧೀರ್ಘ ಅವಧಿ ನಂತರ ಹಾಸನದಲ್ಲಿ ಉಪನ್ಯಾಸ, ರೇಖಾಶಿಬಿರ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದೆ. ಈಗಿನಂತೆ ಅಷ್ಟಾತಿ ಸೌಲಭ್ಯಗಳಿಲ್ಲದ ದಿನಗಳಲ್ಲಿ ಈ ಕಲಾವಿದರ ಸಾಧನೆ ಮಹತ್ವಪೂರ್ಣವಾಗಿದೆ. ಹಲ್ಮಿಡಿ ಶಾಸನ ಕನ್ನಡ ಭಾಷ ಇತಿಹಾಸಕ್ಕೆ ಪ್ರಾಮುಖ್ಯ ಪಡೆದಂತೆ ಅಜಂತ ಎಲ್ಲೋರ ಶ್ರವಣಬೆಳಗೊಳ ಭಿತ್ತಿಚಿತ್ರಗಳ ಕಲೆಯ ಇತಿಹಾಸಕ್ಕೆ ಅಷ್ಟೇ ಪ್ರಾಮುಖ್ಯ. ಇವುಗಳ ನಕಲು ಮಾಡಿ ಪ್ರಾಚಿನ ಕಲೆಯ ಮರುಸೃಷ್ಟಿಗೆ ಕಾರಣಕರ್ತರ ಈ ಕಾರ್ಯ ಶ್ರೇಷ್ಟವಾದುದು ಎಂದರು. ನಿವೃತ್ತ ಚಿತ್ರಕಲಾ ಶಿಕ್ಷಕರು ಕೇಶವೇಶ ಎಂ.ಎಸ್. ಡಿವಿಜಿಯವರ ಮಂಕು ತಿಮ್ಮನ ಕಗ್ಗ ಹಾಡಿದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರು ಪ.ಸ.ಕುಮಾರ್, ರಜಿಸ್ಟಾರ್ ಬಿ.ನೀಲಮ್ಮ ಇದ್ದರು. ಅಕಾಡೆಮಿಯ ಸದಸ್ಯ ಸಂಚಾಲಕರು ಹೆಚ್.ಎಸ್.ಮಂಜುನಾಥ್, ಚನ್ನರಾಯಪಟ್ಟಣ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕರು ಶಿವಶಂಕರಪ್ಪ, ಚನ್ನರಾಯಪಟ್ಟಣ ನಿರೂಪಿಸಿ ಚಿತ್ರಕಲಾ ಶಿಕ್ಷಕರು ಶಂಕರಪ್ಪ ವಂದಿಸಿದರು.