ಅನುಭವ ಪಕ್ವ ವಾದಂತೆ ಸುಧಾರಣೆ ಸಾಧ್ಯ- ವಿಜಯಲಕ್ಷ್ಮಿ ಪುಟ್ಟಿ ಅಭಿಮತ.
ಬೆಳಗಾವಿ – ಇದೇ ದಿ. 21 ರಂದು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿ ದಾನಿಗಳಾದ ಸರಳ ಹೇರೇಕರ, ಸುನಂದಾ ಮುಳೆ,ಜಯಶ್ರೀ ನಿರಾಕಾರಿ ಮತ್ತು ಸುಮಿತ್ರಾ ಮಲ್ಲಾಪುರ ಅವರುಗಳು ತಮ್ಮ ಸಂಬಂಧಿಕರ ಹೆಸರುಗಳಲ್ಲಿ ಇಟ್ಟಿರುವ ದತ್ತಿ ನಿಧಿಯಡಿಯಲ್ಲಿ ದತ್ತಿ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೊಳ್ಳಿ ಮಾತನಾಡಿ, ದತ್ತಿ ದಾನಿಗಳು ನಮ್ಮ ಸಂಘದ ಜೀವಾಳ. ಇಂತಹ ದತ್ತಿನಿಧಿ ಗಳಲ್ಲಿ ನಾವು ವಿವಿಧ ಪ್ರಕಾರದ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮೊದಲಿಗೆ ನಮ್ಮನ್ನೆಲ್ಲಾ ಅಗಲಿದ ಕನ್ನಡ ನಾಡಿನ ಕಣ್ಮಣಿ ಯುವನಟ ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ನೀಲಗಂಗಾ ಚರಂತಿಮಠ, ಕಾಣದಂತೆ ಮಾಯವಾದನು ನಮ್ಮಶಿವ,ಗೊಂಬೆಯನ್ನು ಹಾಡಿಸುವ ರಾಜಕುಮಾರ ಎಂದು ಕಂಬನಿ ಮಿಡಿದರು.
ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಉಮಾ ಅಂಗಡಿ, ಪ್ರಭಾ ಪಾಟೀಲ, ಜ್ಯೋತಿ ಮಾಳಿ ಈ ಸಂದರ್ಭದಲ್ಲಿ ತಮ್ಮ ಚುಟುಕು ಕವನಗಳ ಮೂಲಕ ಯುವರತ್ನವೊಂದು ಮಿನುಗಿ ಮರೆಯಾಯಿತು ಎಂದು ಯುವ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಮರಾಠಾ ಮಂಡಳ ಕಾಲೇಜಿನ ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ ಪುಟ್ಟಿ ಮಾತನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗೋಣ. ನಮ್ಮ ದಿನದಿನದ ಅನುಭವಗಳು ಪಕ್ವವಾಗುತ್ತಾ ಹೋದಂತೆ ಸುಧಾರಣೆ ಹೆಚ್ಚುತ್ತಾ ಹೋಗುತ್ತದೆ. ಸಾಹಿತ್ಯ ಸಹ ಆಂಗ್ಲದಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಆಂಗ್ಲಕ್ಕೆ ಅನುವಾದವಾಗುತ್ತಾ ಸಿರಿವಂತಿಕೆಯನ್ನು ಮೆರೆಯುತ್ತಿವೆ.
ಯಾವ ರೀತಿ ನಶಿಸಿ ಹೋಗುತ್ತಿದ್ದ ಯಕ್ಷಗಾನ, ಜನಪದ ಸಾಹಿತ್ಯವನ್ನು ಶಿವರಾಮ ಕಾರಂತ ಮತ್ತು ಚಂದ್ರಶೇಖರ ಕಂಬಾರರು ಸಲುಹಿದರೋ ಆ ರೀತಿಯಲ್ಲಿ ಇಂದಿನ ಕಾಲದಲ್ಲಿ ದತ್ತಿನಿಧಿ ಕಾರ್ಯಕ್ರಮಗಳು ಸಾಹಿತ್ಯಕ್ಷೇತ್ರ ಬೆಳೆಯುವಂತೆ ಪೋಷಿಸುತ್ತಿವೆ. ದತ್ತಿ ನಿಧಿಗಳು ಸಾಹಿತ್ಯದ ಆರ್ಥಿಕ ಬೆನ್ನೆಲುಬುಗಳಾಗಿವೆ ಎಂದರು.
ದತ್ತಿ ದಾನಿ ಜಯಶ್ರೀ ನಿರಾಕಾರಿ ಮಾತನಾಡುತ್ತಾ ತಾಯಿ, ಜನನಿ,ಅವ್ವ,ಅಮ್ಮ ಮಾತೆ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ತಾಯಿಯೇ ಎಲ್ಲರಿಗೂ ದೇವರು ತಾಯಿಯಿಂದಲೇ ಜೀವನದ ಸಾರ್ಥಕತೆ ಉಂಟಾಗುತ್ತದೆ ಎಂದು ತಾಯಿಯ ಹಿರಿಮೆಯನ್ನು ತಮ್ಮ ಕವನಗಳ ಮೂಲಕ ಕೊಂಡಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಆಶಾ ಕಡಪಟ್ಟಿ ಮಾತನಾಡಿ ಅಗಲಿದ ಯುವನಟ ಪುನೀತ ರಿಗೆ ನಾಮಕರಣ ಮಾಡಿದ ವರನಟ ರಾಜಕುಮಾರ ನಿಜಕ್ಕೂ ಪುಣ್ಯವಂತನನ್ನೇ ಕರ್ನಾಟಕಕ್ಕೆ ಮಾದರಿಯಾಗಿ ಕೊಟ್ಟರು.ಇದೀಗ ಪುಣ್ಯವಂತ ಪುನೀತ್ ಇಲ್ಲದ ಸುದ್ದಿ ಕೇಳಿ ನಿಜಕ್ಕೂ ಇಡೀ ಕರ್ನಾಟಕವೇ ಕಂಬನಿ ಮಿಡಿಯುತ್ತಿದೆ ಎಂದು ಭಾವುಕರಾದರು. ಹಾಗೂ ದತ್ತಿ ನಿಧಿಗಳು ಹೆಚ್ಚಲಿ. ಸಾಹಿತ್ಯ ಉಳಿಯಲಿ ಬೆಳೆಯಲಿ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಜ್ಯೋತಿ ಬದಾಮಿ,ಸುಮಿತ್ರಾ ಮಲ್ಲಾಪುರ, ಸುನಂದಾ ಎಮ್ಮಿ, ಅಕ್ಕಮಹಾದೇವಿ ಹುಲಗಬಾಳಿ, ಸುಮಾ ಕಿತ್ತೂರ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಲೇಖಕಿಯರ ಸಂಘದ ಸದಸ್ಯೆಯರು, ಸಾಹಿತ್ಯಾಸಕ್ತರು ಹಾಜರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಇಂದಿರಾ ಮೋಟೆಬೆನ್ನೂರ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಅಂಜನಾ ಪಾಟೀಲ ಮತ್ತು ಪ್ರೇಮಾ ಪಾನಶೆಟ್ಟಿ ಪ್ರಾರ್ಥಿಸಿದರು. ವಿದ್ಯಾ ಹುಂಡೇಕರ ವಂದಿಸಿದರು. ರಾಜನಂದಾ ಘಾರ್ಗಿ ಕಾರ್ಯಕ್ರಮವನ್ನು ನಿರೂಪಿಸಿದರು.