ಸಿಂದಗಿ: ಮಕ್ಕಳ ಸಾಹಿತ್ಯ ಅಧ್ಯಯನದಿಂದ ಮಕ್ಕಳಲ್ಲಿ ಸಂಸ್ಕಾರ ಜಾಗೃತಗೊಳ್ಳುತ್ತದೆ ಅದಕ್ಕೆ ಪಟ್ಟಣದ ಸಂಗಮೇಶ್ವರ ಲೇಔಟ್‌ನಲ್ಲಿ ಬಾಲವನಕ್ಕಾಗಿ ಕಾಯ್ದಿಸಿರುವ ನಿವೇಶನದಲ್ಲಿ ಎರಡು ತಿಂಗಳಲ್ಲಿ ಬಾಲವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ವಿದ್ಯಾಚೇತನ ಪ್ರಕಾಶನದ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಬಾಲಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ನಾನು ಶಾಸಕನಾದ ನಂತರ ನನ್ನ ವಿದ್ಯಾಗುರುಗಳಾದ ಹ.ಮ. ಪೂಜಾರ ಅವರು ಕ್ಷೇತ್ರದ ಅಭಿವೃದ್ಧಿ ಮಾಡುವ ಜೊತೆಗೆ ಮಕ್ಕಳ ಅಭಿವೃದ್ಧಿ ಹಾಗು ಸಿಂದಗಿ ಪಟ್ಟಣದಲ್ಲಿ ಬಾಲಭವನ, ಬಾಲವನ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಅವರ ಆಶೆ ಈಡೇರಿಸುತ್ತೇನೆ. ಅವರು ವರ್ಷದಲ್ಲಿ ನಾಲ್ಕು ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ಕಾರ್ಯವನ್ನು ಮಾಡುತ್ತಿರುವ ಮೂಲಕ ಈ ಭಾಗದಲ್ಲಿ ಮಾಡುತ್ತಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ನೈತಿಕ ಮಟ್ಟ ಕುಸಿಯುತ್ತಿದೆ, ಅವರ ಕೈಗೆ ಮೊಬೈಲ್ ಕೊಡಬೇಡಿ ಪುಸ್ತಕ ಕೊಡಿ. ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳು ವಿವಾದಗಳಿಂದ ತುಂಬಿಕೊಂಡಿವೆ. ಪ್ರಮಾದಗಳ ಸರಮಾಲೆಯೇ ಕಾಣುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳ ಸಾಹಿತಿ ಹ.ಮ. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೭೬ ರಲ್ಲಿ ತಾವು ಸ್ಥಾಪಿಸಿರುವ ಮಕ್ಕಳ ಬಳಗ ಸುವರ್ಣ ಮಹೋತ್ಸವ ಆಚರಣೆ ಸಿದ್ಧತೆಯಲ್ಲಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಶಾಂತೂ ಹಿರೇಮಠ, ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿಗಳಾದ ಬೆಂಗಳೂರಿನ ಲಲಿತಾ ಹೊಸಪ್ಯಾಟಿ, ವಿಜಯಪುರದ ಜಂಬುನಾಥ ಕಂಚ್ಯಾಣಿ, ಬೆಳಗಾವಿಯ ಎಂ.ಎಂ. ಸಂಗಣ್ಣವರ ಅವರಿಗೆ ರಾಜ್ಯಮಟ್ಟದ ಬಾಲಸಾಹಿತ್ಯ ಪ್ರಶಸ್ತಿ, ೫ ಸಾವಿರ ರೂ. ನಗದು ಮತ್ತು ಗದಗ ನಗರದ ಚಿಗುರು ಸಾಹಿತಿ ಪ್ರಣತಿ ಗಡಾದ ಅವರಿಗೆ ಚಿಗುರು ಸಾಹಿತ್ಯ ಪುರಸ್ಕಾರ ಪ್ರಶಸ್ತಿ, ೨ ಸಾವಿರ ರೂ. ನಗದು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರು ಮಾತನಾಡಿದರು.
ಸಮಾರಂಭದಲ್ಲಿ ರಾಜಶೇಖರ ಪೂಜಾರ, ವಿಜಯಕುಮಾರ ಪೂಜಾರ, ರಮೇಶ ಪೂಜಾರ ಇದ್ದರು.
ಡಾ.ಎಂ.ಎಂ. ಪಡಶೆಟ್ಟಿ, ಎಂ.ಎಸ್. ಹೈಯಾಳಕರ, ಎಸ್.ಆರ್. ಗವಸಾನಿ, ವಿ.ಸಿ. ನಾಗಠಾಣ, ಬಿ.ಎಂ. ಪಾಟೀಲ, ಎ.ಆರ್. ಹೆಗ್ಗಣದೊಡ್ಡಿ, ಎಸ್.ಕೆ. ಗುಗ್ಗರಿ, ರಾಚು ಕೊಪ್ಪಾ, ಸುನಂದಾ ಯಂಪೂರೆ, ಎಂ.ಐ. ಗಣಾಚಾರಿ, ಬಿ.ಎನ್. ಬಿರದಾರ, ವಿ.ಆರ್. ಪಾಟೀಲ, ಶ್ರೀಶೈಲ ಹೂಗಾರ, ಶಂಕರ ಹೂಗಾರ, ಶ್ರೀಮಠದ ವಿದ್ಯಾರ್ಥಿಗಳು ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಸೈನಾಜಬಿ ಮಸಳಿ ಪ್ರಾರ್ಥಿಸಿದರು. ಎಸ್.ಎಸ್. ಸಾತಿಹಾಳ, ಸತೀಶ ಕುಲಕರ್ಣಿ ನಿರೂಪಿಸಿದರು. ಶಿವಕುಮಾರ ಶಿವಸಿಂಪಿಗೇರ ವಂದಿಸಿದರು.