spot_img
spot_img

ಚಿಲಿಪಿಲಿ ಕನ್ನಡ ಕಲಿ” ಒಂದು ವಿಶಿಷ್ಟ ಮಕ್ಕಳ ಕವನ ಸಂಕಲನ

Must Read

- Advertisement -

ಅಮೆರಿಕದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ, ಅಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ‍್ಥಿಗಳಿಗೆ ಅಗತ್ಯ ಸಹಕಾರ ಕಲ್ಪಿಸುವ ಮೂಲಕ ಕವಯತ್ರಿ ಶ್ರೀಮತಿ ಸವಿತಾ ರವಿಶಂಕರ್ ಅಮೆರಿಕದಲ್ಲಿ ಕನ್ನಡ ನಾಡು,ನುಡಿ ಸೇವೆಯನ್ನು ನಿರಂತರವಾಗಿ ನಡೆಸಿದ್ದಾರೆ. ಇವರು ಕವಯತ್ರಿ ಜೊತೆಗೆ ಗಾಯಕಿಯೂ ಹೌದು. ಹೀಗಾಗಿ ಅಮೆರಿಕದ ಮಕ್ಕಳಿಗೆ ಹಾಡಲು ಅನುಕೂಲ ಕಲ್ಪಿಸುವ ಕವನ ರಚಿಸಿದ್ದಾರೆ.ಈ ಎಲ್ಲಾ ಸರಳ,ಸುಂದರ ಕವನಗಳೂ ಚಿಲಿಪಿಲಿ ಕನ್ನಡ ಕಲಿ ಮಕ್ಕಳ ಪದ್ಯಗಳ ಸಂಕಲನವಾಗಿ ಮೂಡಿಬಂದಿದೆ.ಬೆಂಗಳೂರಿನ ಅವ್ಯಕ್ತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಭಾಷೆ ಕಲಿಸಲು ಪದ್ಯಗಳು ಒಂದು ಉತ್ತಮ ಮಾದ್ಯಮ.ಇದರಿಂದಾಗಿಯೇ ಹಿಂದೆ ಪುರಾತನ ರಾಜಮಹಾರಾಜರುಗಳ ಶೌರ‍್ಯ,ಸಾಹಸಗಳ ಕತೆಗಳು ಲಾವಣಿಯ ರೂಪದಲ್ಲಿ, ಕಥಾನಕಗಳ ರೂಪದಲ್ಲಿ ಗ್ರಾಮೀಣ ಜನರ ಮುಂದೆ ಹಾಡಲ್ಪಡುತ್ತಿದ್ದವು. ಮುಂದೆ ಭಾರತದ ಸ್ವಾತಂತ್ರ ಹೋರಾಟದ ಬಗ್ಗೆ ಲಾವಣಿಗಳನ್ನು ಹಾಡುವ ಮೂಲಕ ಗ್ರಾಮೀಣ ಜನರನ್ನು ಜಾಗೃತಿ ಮಾಡಲಾಯಿತು.

ಸ್ವತಂತ್ರ ಭಾರತದಲ್ಲಿ ಕುಟುಂಬ ಯೋಜನೆ ,ಆರೋಗ್ಯ ಜಾಗೃತಿ ಕಾರ‍್ಯಕ್ರಮಗಳಿಗೆ ಗೀತೆಗಳನ್ನು ರಚಿಸಿ ಹಾಡುವ ಮೂಲಕ, ಬೀದಿ ನಾಟಕಗಳನ್ನು ಅಭಿನಯಿಸುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು. ಏಕೆಂದರೆ ಹಾಡುಗಳು, ಲಾವಣಿಗಳು, ಕಥೆಗಳು ಮಕ್ಕಳನ್ನು ಮಾತ್ರವಲ್ಲದೆ ಅನಕ್ಷರಸ್ಥ ರನ್ನು ಜಾಗೃತಿಗೊಳಿಸುತ್ತದೆ.ವಿದೇಶದಲ್ಲಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಸರಳ ಕವನಗಳ ಮೂಲಕ ಜಾಗೃತಿ ಮೂಡಿಸುವ ಕವಯಿತ್ರಿ ಸವಿತಾ ರವಿಶಂಕರ್ ಅವರ ಕಾರ‍್ಯ ಶ್ಲಾಘನೀಯ. ಪತಿ ರವಿಶಂಕರ್ ಅವರ ಬೆಂಬಲದೊಂದಿಗೆ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲು ಮೊದಲು ತಮ್ಮ ಮನೆಯನ್ನೇ ಗುರುಕುಲವಾಗಿಸಿದರು.ಮುಂದೆ ಅದು ಕನ್ನಡ ಕಲಿ ಶಾಲೆಯಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಿತು.ನಂತರದ ದಿನಗಳಲ್ಲಿ ಹೊರ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ಆಕಾಡೆಮಿ ಆರಂಭಗೊಂಡಿತು.

- Advertisement -

ಮೊದಲು ತಮ್ಮ ಮನೆಯ ಕನ್ನಡ ಗುರುಕುಲದಲ್ಲಿ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದ ಕನ್ನಡ ಶಿಕ್ಷಕಿ ಸವಿತಾ ಇದೀಗ ಆನ್ಲೈನ್ ತರಗತಿಗಳಲ್ಲಿ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ. ಇಂತಹ ಮಕ್ಕಳಿಗೆ ಕನ್ನಡ ಭಾಷೆಯನ್ನು ಪದ್ಯದ ಮೂಲಕ ಕಲಿಸಿದರೆ ಕಲಿಕೆ ಬಹಳ ಸುಲಭವಾಗುತ್ತದೆ.ಹೊರ ರಾಷ್ಟ್ರದ ಕಂದಮ್ಮಗಳು ಆಡುತ್ತಾ, ಹಾಡುತ್ತಾ,ಕನ್ನಡ ಭಾಷೆ ಕಲಿಯಲಿ, ಕನ್ನಡ ಸಂಸ್ಕೃತಿಯ ಮಹತ್ವ ಅರಿಯಲಿ ಎಂಬ ಕವಯತ್ರಿ ಸವಿತಾ ಅವರ ಉದ್ದೇಶ ಅಮೂಲ್ಯವಾದುದು.

ಇತ್ತೀಚೆಗೆ ಸರ‍್ಕಾರಿ ಇಲಾಖೆಯೊಂದು ತನ್ನ ಕಚೇರಿಯ ಹೊರ ಆವರಣದಲ್ಲಿ ಬರೆಸುವ ಸಲುವಾಗಿ ಕನ್ನಡಪರ ಜಾಗೃತಿ ಘೋಷಣೆಗಳನ್ನು ಬರೆದುಕೊಡುವಂತೆ ನನ್ನನ್ನು ಕೋರಿತ್ತು. ಆ ಸಂದರ‍್ಭದಲ್ಲಿ ನಾನು ಬರೆದ ಘೋಷಣೆಯೊಂದು ಅಪಾರ ಜನರ ಮೆಚ್ಚುಗೆ ಪಡೆಯಿತು.

ಬದುಕನ್ನು ಯಾವ ದೇಶದಲ್ಲಾದರೂ ಕಟ್ಟಿಕೋ,
ಉದ್ಯೋಗಕ್ಕಾಗಿ ಯಾವುದೇ ಭಾಷೆ ಕಲಿತುಕೋ,
ಆದರೆ ನಿನ್ನ ಮನದ ಭಾಷೆ,
ನಿನ್ನ ಮನೆಯ ಆಡು ಭಾಷೆ ಎಂದೆಂದಿಗೂ ಕನ್ನಡ ಆಗಿರಲಿ…
ಡಾ.ಭೇರ‍್ಯ ರಾಮಕುಮಾರ್

- Advertisement -

ಈ ಮೇಲಿನ ಕನ್ನಡ ಜಾಗೃತಿ ಘೋಷಣೆಗೆ ಸಾರ‍್ವಜನಿಕರಿಂದ ಅಪಾರ ಮೆಚ್ಚುಗೆ ದೊರೆಯಿತು. ಸವಿತಾ ರವಿಶಂಕರ್ ಅವರ ಕವನಗಳು ಹಾಗೂ ಹಾಡುಗಳ ಮೂಲಕ ಹೊರ ರಾಷ್ಟ್ರಗಳ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಕೆಲಸ ನಿಜವಾಗಿಯೂ ಶ್ಲಾಘನೀಯ. ಚಿಲಿಪಿಲಿ ಕನ್ನಡ ಕಲಿ ಮಕ್ಕಳ ಕವನಸಂಕಲನದಲ್ಲಿ ಒಟ್ಟು ೩೬ ಮಕ್ಕಳ ಕವಿತೆಗಳಿವೆ. ಇವುಗಳ ಪೈಕಿ ಸುಮಾರು ಇಪ್ಪತ್ತು ಮಕ್ಕಳ ಕವಿತೆಗಳು ಇವರ ಸ್ವರಚಿತ ಕವಿತೆಗಳು. ಏಳು ಕವಿತೆಗಳು ಅನುವಾದಿತ ಪದ್ಯಗಳು.ಒಂಬತ್ತು ಒಗಟಿನ ರೂಪದ ಸ್ವರಚಿತ ಕವಿತೆಗಳು.

ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಕುಟುಂಬದ ಮಕ್ಕಳಿಗೆ ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ಕನ್ನಡ ಅಕ್ಷರ ಮಾಲೆ,ಅಕ್ಷರ ಮಾಲೆಯಲ್ಲಿ ಅಮ್ಮ,ಅಮೆರಿಕದ ಕಂದ,ಭಾನುವಾರ ಸಂಡೆ ಕವನಗಳು ಸರಳವಾಗಿ,ಹಾಡಲು ಅನುಕೂಲಕರವಾಗಿವೆ.ಈ ಎಲ್ಲಾ ಕವನಗಳೂ ಕನ್ನಡ ಭಾಷೆಯ ಮಹತ್ವವನ್ನು ಮುಗ್ಧ ಮಕ್ಕಳಿಗೆ ಅರಿವು ಮೂಡಿಸುವಂತಿವೆ.

ಕನ್ನಡ ಅಕ್ಷರಮಾಲೆ ಇಂದು
ನಾವು ಕಲಿಯೋಣ
ಕನ್ನಡ ತಾಯಿಗೆ ಗೌರವದಿ
ಬಾಗಿ ನಮಿಸೋಣ..

ಕನ್ನಡ ಮಾತೆಗೆ ಗೌರವ ತೋರಿಸುವ ಈ ಕವನ ಮಕ್ಕಳ ಮನ ಸೆಳೆಯುವಂತಿದೆ.

ಅಕ್ಷರ ಮಾಲೆಯಲ್ಲಿ ಅಮ್ಮ ಕವನದಲ್ಲಿ ಅ ಇಂದ ಅಂ ವರೆವಿಗೆ ಆದಿಪ್ರಾಸ ಅಳವಡಿಸಿ ಕವನ ರಚಿಸಿದ್ದಾರೆ.ಜೊತೆಗೆ ಅಮ್ಮನ ಬಗ್ಗೆ ಮಕ್ಕಳಿಗಿರುವ ಅಪಾರ ಪ್ರೀತಿ,ಮಮತೆಯನ್ನು ಕಟ್ಟಿಕೊಟ್ಟಿದ್ದಾರೆ.ಅಮ್ಮನ ಪ್ರೀತಿಯ ಮಳೆಯಲ್ಲಿ ಪ್ರತಿದಿನ ಸಂತಸಪಡುವ ಮಕ್ಕಳಿಗೆ ಹಾಡಲು ಈ ಕವನ ಹೆಚ್ಚು ಸಂತಸ ನೀಡುತ್ತದೆ.

ಅಮೇರಿಕನ್ನಡ ಕಂದನ ಕವನದಲ್ಲಿ ಇಪ್ಪತ್ತಾರು ಅಕ್ಷರ ಹೊಂದಿರುವ ಇಂಗ್ಲಿಷ್ ಭಾಷೆಯ ಮುಂದೆ ಐವತ್ತೆರಡು ಅಕ್ಷರ ಹೊಂದಿರುವ,ಕಾಗುಣಿತ,ಒತ್ತಕ್ಷರ ಹೊಂದಿರುವ ಕನ್ನಡ ಭಾಷೆಯ ಕಲಿಕೆ ಕಷ್ಟ.ಆದರೂ ಕನ್ನಡ ಶಾಲೆಗೆ ಹೋಗುವೆನು. ತಾತ,ಅಜ್ಜಿ ಜೊತೆ ಕನ್ನಡ ದಲ್ಲೇ ಮಾತನಾಡುವೆನು ಎಂದು ಮಗುವಿನ ತೊಡಲು ಭಾಷೆಯಲ್ಲಿ ಹೇಳಿಸುವ ಕವನ ರಚಿಸುವ ಮೂಲಕ ಮಕ್ಕಳಲ್ಲಿ ಕನ್ನಡ ಕಲಿಕೆ ಬಗ್ಗೆ ವಿಶೇಷ ಆಸಕ್ತಿ ಮೂಡುವಂತೆ ಮಾಡಿದ್ದಾರೆ.

ಭಾನುವಾರ ಸಂಡೆ ಕವನದಲ್ಲಿ
ಶನಿವಾರ ಸಾಟರ‍್ಡೆ
ಸರಳ ಕನ್ನಡ ಕಲಿತೀನಿ
ಅಆಇಈ ಬರೆದು
ಕನ್ನಡ ಪಾಠ ಓದ್ತೀನಿ

ಎಂದು ಚಿತ್ರಿಸಿ ಮಕ್ಕಳಲ್ಲಿ ಕನ್ನಡ ಕಲಿಯುವ ಆಸಕ್ತಿ ಮೂಡಿಸಿದ್ದಾರೆ.

ದೇಶ ಯಾವುದಾದರೂ ಮಕ್ಕಳಿಗೆ ತಮ್ಮ ತಂದೆ,ತಾಯಿ ಎಂದರೆ ಅಪ್ರತಿಮ ಪ್ರೀತಿ.ಹ್ಯಾಪಿ ಫಾದರ‍್ಸ್ ಡೇ ಹಾಗೂ ಹ್ಯಾಪಿ ಮದರ‍್ಸ್ ಡೇ ಕವನಗಳಲ್ಲಿ ಮಕ್ಕಳಲ್ಲಿರುವ ತಂದೆ, ತಾಯಿ ಮೇಲಿನ ಪ್ರೇಮವನ್ನು ಕವನವಾಗಿ ಚಿತ್ರಿಸಿದ್ದಾರೆ.ಈ ಕವನವು ಮಕ್ಕಳ ಮನದಲ್ಲಿ ಬಹುಕಾಲ ನಿಲ್ಲುತ್ತದೆ.
ಹಬ್ಬ ಕವನದಲ್ಲಿ ಸರಳ ಭಾಷೆಯಲ್ಲಿ ಮಕ್ಕಳಲ್ಲಿ ಕನ್ನಡಿಗರ ಮನಸೆಳೆಯುವ ಹಬ್ಬಗಳಾದ ಗಣೇಶ ಹಬ್ಬ, ಹೋಲಿ ಹಬ್ಬ, ದೀಪಾವಳಿ, ನವರಾತ್ರಿ ಇವುಗಳ ಬಗ್ಗೆ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಚಿತ್ರಿಸಿದ್ದಾರೆ. ಇದೇ ಕವನದಲ್ಲಿ ಅಮೆರಿಕದ ಹಬ್ಬಗಳಾದ ವ್ಯಾಲೆಂಟೈನ್ ಡೇ, ಟ್ರಿಕ್ ಆರ್ ಟ್ರೀಟು,ಕ್ರಿಸ್ಮಸ್,ಹುಟ್ಟಿದ ಹಬ್ಬ ಇವುಗಳ ಬಗ್ಗೆಯೂ ಸರಳವಾಗಿ,ಮಕ್ಕಳು ಹಾಡುವಂತೆ ಸುಂದರವಾಗಿ ಚಿತ್ರಿಸಿದ್ದಾರೆ.

ಬಣ್ಣದ ಹಾಡು ಸಹ ಅಮೆರಿಕ ಕನ್ನಡಿಗರ ಬಣ್ಣದ ಬದುಕಿಗೆ ಹತ್ತಿರವಾಗಿದೆ.ಅಲ್ಲಿನ ಜನಜೀವನದ ವಿವಿದ ಹಣ್ಣುಗಳ ಬಣ್ಣಗಳೊಂದಿಗೆ ಕನ್ನಡ ನಾಡಿನ ಬಾಳೆಯ ಹಣ್ಣು,ದ್ರಾಕ್ಷಿಯ ಹಣ್ಣು,ಗುಲಾಬಿ ಹೂ,ಕಿತ್ತಳೆ ಹಣ್ಣು ಗಳ ಬಣ್ಣಗಳೂ ಸಹ ಚಿತ್ರಿಸಲ್ಪಟ್ಟಿವೆ.ಈ ಕವನದಲ್ಲಿ ಮಕ್ಕಳು ತಾವು ಬಳಸುವ ಹಣ್ಣುಗಳ ಹೆಸರುಗಳು ಹಾಗೂ ವಿವಿಧ ಬಗೆಯ ಬಣ್ಣಗಳ ಹೆಸರುಗಳನ್ನೂ ತಿಳಿದುಕೊಳ್ಳುತ್ತಾರೆ.ಈ ಕವನ ಉತ್ತಮ ಕಲಿಕೆಯ ಉದ್ದೇಶ ಹೊಂದಿದೆ.

ಒಂದು ಎರಡು ಇಂಡಿಯಾಕೆ ಹೊರ ಡು ಕವನದೊಳಗೇ ನಾಲ್ಕು ವಿವಿದ ಬಗೆಯ ಕವನಗಳಿವೆ. ಮಕ್ಕಳ ಮನಸ್ಸಿನಲ್ಲಿ ಒಂದು ಎರಡು ಇಂಡಿಯಾಕ್ಕೆ ಹೊರಡು, ಶಾಲೆಗೆ ಹೊರಡು, ಕೈ ತೊಳಿ ಹೊರಡು,ಚಂದ್ರನತ್ತ ಹೊರಡು..ಹೀಗೆ ಭಾರತ ದೇಶದ ಬಗ್ಗೆ,ಶಾಲೆಗೆ ಹೋಗುವ ಬಗ್ಗೆ,ಸ್ವಚ್ಚತೆ ಬಗ್ಗೆ,ಚಂದ್ರನ ಬಗ್ಗೆ ಅರಿವು ಮೂಡಿಸುವ ಬಹು ಉದ್ದೇಶಗಳು ಉಳ್ಳ ಕವನ ಇದಾಗಿದೆ.ಸಂಕಲನದ ಅತ್ಯುತ್ತಮ ಕವನ ಇದಾಗಿದೆ.

ಹೇಳು ಹೇಗಿದ್ದೀಯ ಕವನದಲ್ಲಿ ಮಗು ವಿವಿದ ಪ್ರಾಣಿಗಳ ,ಪಕ್ಷಿಗಳ ಜೊತೆ ತೊಡಲು ನುಡಿಯಲ್ಲಿ ಮಾತನಾಡಿ ನಾನು ನಮ್ಮೂರಿನ ಮನೆಯಲ್ಲಿ ವಾಸಿಸುತ್ತೇನೆ.ನೀವು ಎಲ್ಲಿ ವಾಸಿಸುತ್ತೀರ ಎಂದು ಪ್ರಶ್ನೆ ಕೇಳುವ ಭಾವನೆ ತುಂಬಾ ಮನಸೆಳೆಯುತ್ತದೆ.ಕವನದ ಉದ್ದೇಶವೇ ಮಕ್ಕಳಿಗೆ ಸರಳವಾಗಿ ಅತಿ ಹೆಚ್ಚು ವಿಷಯ ತಿಳಿಸುವುದು.ಕವಯತ್ರಿ ಸವಿತಾ ಈ ಕರ‍್ಯದಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ಭಾವುಟ ಕವನದಲ್ಲಿ
ನೋಡಿ ಮೂರು ಬಣ್ಣ
ಕೇಸರಿ,ಬಿಳಿ,ಹಸಿರು
ಮಧ್ಯದಲ್ಲಿ ನೀಲಿಯ
ಗುಂಡಾದ ಚಕ್ರವು..
ಭಾವುಟವ ಹಿಡಿಯೋಣ
ಜನಗಣಮನ ಹಾಡೋಣ
ಭಾರತಾಂಬೆ ನಮ್ಮ ಹೆಮ್ಮೆ ಅನ್ನೋಣ

ಮೇಲಿನ ಸಾಲುಗಳು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಭಾರತದ ಬಗ್ಗೆ ಪ್ರೀತಿ,ಅಭಿಮಾನ ಮೂಡಿಸುತ್ತದೆ. ಈ ಕವನ ಸಂಕಲನದಲ್ಲಿ ಮಕ್ಕಳ ಮನಸ್ಸನ್ನು ಆರ‍್ಷಿಸುವ ಬೆಳಕು,ಚಳಿಗಾಲ,ದೋಸೆ ಫ್ಯಾಮಿಲಿ,ನಾನು ಯಾರು ಗೊತ್ತೇ ಕವನಗಳೂ ಇವೆ. ಮಕ್ಕಳ ಮನಸ್ಸು ಗೆಲ್ಲುವ ಒಗಟಿನ ರೂಪದ ಕವನಗಳೂ ಇವೆ.ಚಿಲಿಪಿಲಿ ಕನ್ನಡ ಕಲಿ ಕೃತಿಯನ್ನು ಕವಯತ್ರಿ ಸವಿತಾ ರವಿಶಂಕರ್ ಅವರು ವಿಶ್ವದಾದ್ಯಂತ ಅರಳುತ್ತಿರುವ ಕನ್ನಡ ಪುಟಾಣಿಗಳಿಗೆ ರ‍್ಪಿಸಿರುವುದು ಈ ಕೃತಿಯ ವೈಶಿಷ್ಟ್ಯ.

ಸವಿತಾ ರವಿಶಂಕರ್ ಅವರು ಮೂಲತಃ ಮೈಸೂರಿನವರು.ಕಳೆದ ೩೪ ವರ‍್ಷಗಳಿಂದ ಅಮೆರಿಕದ ನಾರ‍್ತ್ ಕೆರೊಲಿನಾ ರಾಜ್ಯದಲ್ಲಿ ನೆಲೆಸಿದ್ದಾರೆ.ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ ಹಾಗೂ ಸಂಸ್ಕೃತಿ. ಕಲಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಲ್ಲ ಮಕ್ಕಳಿಗೂ ಸರಳ ಪದ್ಯಗಳ ಮೂಲಕ,ಹಾಡುಗಳ ಮೂಲಕ ಕನ್ನಡ ಭಾಷೆ ಕಲಿಸುವ ಉದ್ದೇಶ ಅವರದು.ಅವರಿಗೆ ಒಳಿತಾಗಲಿ.

ಕವಯತ್ರಿ ಸವಿತಾ ರವಿಶಂಕರ್ ಅವರು ಭಾರತದ ಹಬ್ಬಗಳು,ಸಾಂಸ್ಕೃತಿಕ ವ್ಯಕ್ತಿಗಳು,ಭಾರತೀಯ ತಿಂಡಿಗಳು, ಭಾರತದ ಪುರಾತನ ನಾಯಕರು. ಇವೆಲ್ಲವನ್ನೂ ಕುರಿತು ಸರಳ ಮಕ್ಕಳ ಕವನಗಳನ್ನು ರಚಿಸಿ ವಿದೇಶಗಳಲ್ಲಿ ನೆಲೆಸಿರುವ ಮಕ್ಕಳಿಗೆ ಕರ‍್ನಾಟಕ ಹಾಗೂ ಭಾರತದ ಕಾವ್ಯ ದರ‍್ಶನ ಮಾಡಿಸಲಿ ಎಂಬುದು ನಮ್ಮ ಆಶಯ.

ಡಾ.ಭೇರ‍್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು
ಮೈಸೂರು
ಮೊಬೈಲ್ ೯೪೪೯೬೮೦೫೮೩,
೬೩೬೩೧೭೨೩೬೮

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group