ಮಹಾತ್ಮಾ ಗಾಂಧಿ ಸ್ಮರಣೆಯಲ್ಲಿ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ಜರುಗಿತು.
ಕೆ.ಎಲ್.ಇ. ಸಂಸ್ಥೆಯ ಜೆ.ಟಿ.ಕಾಲೇಜ ಗದಗಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಎನ್.ಎಸ್.ಎಸ್. ಘಟಕದ ಸಂಯೋಜನಾಧಿಕಾರಿ ಡಾ. ವಿಠಲ ಕೋಳಿ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರದ ಸಂಚಾಲಕರಾದ ಶ್ರೀಮತಿ ರಂಜನಿ ಎ.ಎಮ್. ರವರ ನೇತೃತ್ವದಲ್ಲಿ ಗಾಂಧೀ ಸ್ಮರಣೆಯಲ್ಲಿ ಸ್ವಚ್ಛತಾ ಹಿ ಸೇವಾ ಅಂಗವಾಗಿ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನವು ಯಶಸ್ವಿಯಾಗಿ ಜರುಗಿತು. 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉನ್ಯಾಸಕರು ಅಭಿಯಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಶ್ರೀ ನಂದಿವೇರಿ ಬಸವಣ್ಣನ ಎದುರಿನಲ್ಲಿರುವ ಉದ್ಭವ ನಂದಿ ತೀರ್ಥ ದ ಜೀರ್ಣೋದ್ಧಾರ ಜರುಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶ್ರಮದಾನ ತುಂಬಾ ಉಪಯುಕ್ತವಾಗಿತ್ತು.
ನಂದಿ ತೀರ್ಥ ದ ಪ್ರೋಕ್ಷಣೆಗಾಗಿ ಆಗಮಿಸುತ್ತಿರುವ ಭಕ್ತರು ಸರಾಗವಾಗಿ ತಲುಪಲು ಕಾಲುದಾರಿ ನಿರ್ಮಿಸಲಾಯಿತು.
ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುವ ಬಂಗಾರದ ಹಳ್ಳವು ಶ್ರೀ ನಂದಿವೇರಿ ಬಸವಣ್ಣನ ಎದುರಿಗೆ ಮಾತ್ರ ಉದ್ಭವಿಸಿ ಬಸವಣ್ಣನ ದರ್ಶನ ಪಡೆದು ಮತ್ತೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವುದು ಈ ಸ್ಥಳದ ವಿಶೇಷ ಹಾಗೂ ಮಹಿಮೆಯಾಗಿದ್ದು ಇಂಥ ಸತ್ಕಾರ್ಯದಲ್ಲಿ ಕೈ ಜೋಡಿಸಿರುವ ವಿದ್ಯಾರ್ಥಿಗಳ ಶ್ರಮ ಶ್ಲ್ಯಾಘನೀಯವೆಂದು ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನುಡಿದಿದ್ದಾರೆ.
ಕಪ್ಪತಗುಡ್ಡದ ಮಹತ್ವ ಹಾಗೂ ಅದರ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕಾರ್ಯಗಳು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ ಕುರಿತು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡುವ ಸಂದರ್ಭದಲ್ಲಿ ವಿವರಿಸಿದರು.
ಈ ಕಾರ್ಯಕ್ರಮದ ವಿವರಗಳನ್ನು ಭಾಲಚಂದ್ರ ಜಾಬಶೆಟ್ಟಿಯವರು ನಂದಿವೇರಿ ಮಠದ ಪರವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.