spot_img
spot_img

ಅಂಗಡಿ ಮತ್ತು ಅಂಡಗಿ ಎಂಬ ಸಾಂಸ್ಕೃತಿಕ ಪ್ರತಿಭೆಗಳ ಒಡನಾಟ

Must Read

- Advertisement -

ಇಬ್ಬರೂ ಕೊಪ್ಪಳ ಜಿಲ್ಲೆಯ ಪ್ರತಿಭೆಗಳು. ಒಬ್ಬರು ಸಂಘಟನಾ ಚತುರರಾದರೆ, ಇನ್ನೊಬ್ಬರು ಸಂಘಟನೆಯ ಜೊತೆಗೆ ಸಾಹಿತ್ಯ ಮತ್ತು ಜನಪದ ಕಲಾವಿದರು. ಒಬ್ಬರು ವೃತ್ತಿಯಿಂದ ವ್ಯಾಪಾರಿಗಳು, ಇನ್ನೊಬ್ಬರು ಮೇಷ್ಟ್ರು…ಈ ಇಬ್ಬರೂ ನಮ್ಮೂರ ಹಲಗೇರಿಯ ಹೆಮ್ಮೆಯ ಕರುಳ ಬಳ್ಳಿಗಳು.

ನನ್ನೂರು ಹಲಗೇರಿ ಗ್ರಾಮವು ರಾಜಶೇಖರ ಅಂಗಡಿಯವರಿಗೆ ಹುಟ್ಟೂರಾದರೆ ; ಹನುಮಂತಪ್ಪ ಅಂಡಗಿಯವರಿಗೆ ತಂಗಿಯನ್ನು ವಿವಾಹ ಮಾಡಿಕೊಟ್ಟಿದ್ದರಿಂದ ಬೀಗರೂರು. ವರಸೆಯಿಂದ ನನಗೂ ಅಂಡಗಿಯವರು ಬೀಗರು. ಎಲ್ಲಾ ಎಲ್ಲೆಗಳನ್ನು ಮೀರಿದ ಸಹೋದರ ಬಾಂಧವ್ಯ ರಾಜಶೇಖರ ಅಂಗಡಿಯವರಿಗೂ ನನಗೂ….ಯಾಕೆಂದರೆ…

ನಮ್ಮೂರಿನಲ್ಲಿ ಪ್ರೀತಿಯ ಪಾತ್ರರಾದ ಅಂಗಡಿ ಮನೆತನದವರು, ನಮ್ಮ ಕುಟುಂಬದ ಜೊತೆಗೆ ಆಪ್ತ ಬಾಂಧವ್ಯ ಮತ್ತು ತುಂಬಾ ಹತ್ತಿರದವರು. ಅವರ ಹಿರಿಯ ಸಹೋದರ ಶಂಕ್ರಪ್ಪ ಅಂಗಡಿಯವರು ಮತ್ತು ನಮ್ಮ ಸಹೋದರ ಮಾವ ದೇವಪ್ಪ ನಾಗರಹಳ್ಳಿ (ಮೂಲಿಮನಿ) ಯವರು ಖಾಸಾ ಸ್ನೇಹಿತರು. ಸಹೋದರರಂತೆ ಬದುಕನ್ನು ಅನುಭವಿಸಿದವರು. ನಮ್ಮ ವೈಯಕ್ತಿಕ ಕುಟುಂಬದ ಯಾವುದೇ ಸಭೆ ಸಮಾರಂಭಗಳಲ್ಲಿ, ಕಷ್ಟ ಸುಖಗಳಿರಲಿ, ಸಾವು ನೋವುಗಳಿರಲಿ, ಜಗಳ, ಪಾಲುದಾರಿಕೆ ಯಾವುದೇ ಇರಲಿ ಅಲ್ಲಿ ನಮ್ಮ ಕುಟುಂಬದ ಸದಸ್ಯರಂತೆ ಶಂಕ್ರಪ್ಪಣ್ಣ ಅಂಗಡಿಯವರು ಹಾಜರಿರುತ್ತಾರೆ. ಅವರಷ್ಟೇ ಅಲ್ಲ ಅವರ ಇಡೀ ಕುಟುಂಬ ನಮ್ಮ ಕುಟುಂಬದೊಡನೆ ಪಾಲ್ಗೊಳ್ಳುತ್ತಾರೆ. ನಮ್ಮ ಕುಟುಂಬದ ಸದಸ್ಯರು ಕೂಡ ಹಾಗಿಯೇ. ಅಂತಹ ಕರುಳು ಸಂಬಂಧದ ಬಾಂಧವ್ಯ ಅವರದು ನಮ್ಮದು. ಇನ್ನು ಇನ್ನೊಬ್ಬ ಸಹೋದರ ಮಾರುತಿ ಅಂಗಡಿಯವರು ಸ್ನೇಹಜೀವಿಗಳು. ಪ್ರತಿ ನಮ್ಮ ಬದುಕಿನ ಕ್ಷಣಗಳನ್ನು ಆಪ್ತತೆಯಿಂದ ನೆನೆಯುತ್ತಾರೆ.

- Advertisement -

ರಾಜಶೇಖರ ಅಂಗಡಿ… ಸಾಂಸ್ಕೃತಿಕ ಲೋಕದಲ್ಲಿ ಸಂಘಟನಾ ಚತುರ. ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಉತ್ತಮ ಸಂಘಟನೆಯ ಬುನಾದಿ ಹಾಕಿದ್ದಾರೆಂದರೆ ತಪ್ಪಲ್ಲ. ರಾಜಶೇಖರ್ ಅಂಗಡಿಯವರಿಗೂ ನನಗೂ ಕುಟುಂಬದವರಂತೆ ಸ್ನೇಹ, ಮಾತುಕತೆ, ಕುಶಲತೆ ಎಲ್ಲವೂ ಆಪ್ತತೆಯಿಂದ ಕೂಡಿದ್ದವು. ಅವರು ಕೊಪ್ಪಳ ತಾಲೂಕ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗಲೂ ಅವರೊಡನೆ ಯಾವತ್ತಿಗೂ ತುಂಬಾ ದೂರದಿಂದಲೇ ಅವರ ಸಂಘಟನಾ ಚತುರತೆಯನ್ನು ಮೆಚ್ಚಿದವನು.ಆದರೆ…

ಕೆಲವು ವೈಯಕ್ತಿಕ ಕಾರಣಗಳಿಗಾಗಿ ಅವರ ಜೊತೆಗೆ ಮುನಿಸಿಕೊಂಡಿದ್ದೆ. 22 ವರ್ಷಗಳ ಹಿಂದಿನ ಮಾತು ನನ್ನನ್ನು ಹಿರೇಸಿಂದೋಗಿ ಹೋಬಳಿ ಘಟಕದ ಅಧ್ಯಕ್ಷನನ್ನಾಗಿ ಮಾಡಿದಾಗ, ಸಂಘಟನೆಯ ವಿಷಯದಲ್ಲಿ ಉಂಟಾದ ಮನಸ್ತಾಪ ನಾನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ದೂರ ಉಳಿಯಬೇಕಾಯಿತು. ಆದರೆ ಕೆಲವು ವರ್ಷಗಳ ನಂತರ ಕ. ಸಾ. ಪ. ದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು ರಾಜಶೇಖರ ಅಂಗಡಿ. ನಾನು ನಯವಾಗಿ ತಿರಸ್ಕರಿಸಿದೆ. ನನ್ನ ಈ ಸೈದ್ಧಾಂತಿಕ ಬದ್ಧತೆಯನ್ನು ಕಂಡು ಅವರು, ತಮ್ಮ ನಿನ್ನ ಜೊತೆಗೆ ನಾನು ಸುಮ್ನಾ ಜಗಳ ಮಾಡಿಬಿಟ್ನಾಲ್ಲೋ…ಮರತಬಿಡು…” ಎಂದು ಮುಗುಳ್ನಗುತ್ತಿದ್ದರು. ಯಾವತ್ತಿಗೂ ಸಾಹಿತ್ಯ, ಸಂಘಟನೆ ವಿಷಯಗಳು ನಮ್ಮ ಕೌಟುಂಬಿಕ ಬಾಂಧವ್ಯಕ್ಕೆ ಧಕ್ಕೆ ಬರಲಿಲ್ಲ.ಇನ್ನು…

ಹನುಮಂತಪ್ಪ ಅಂಡಗಿ…

- Advertisement -

ಸಂಘಟನಾ ಚತುರ, ಏನಾದರೂ ಸಾಧಿಸಿಯೇ ತೀರುತ್ತೇನೆ ಎನ್ನುವ ಹುಂಬುತನದ ಹಠವಾದಿ, ನೇರನುಡಿಗೆ ಕೆಲವು ಸಲ, ಕೆಲವರ ಜೊತೆಗೆ ಮನಸ್ತಾಪ ಮಾಡಿಕೊಂಡರೂ ಅದನ್ನು ಬಹಳ ಸಮಯ ಮುಂದುವರಿಸುತ್ತಿರಲಿಲ್ಲ. ಅವರನ್ನು ಅಂಡಗಿಯವರೇ ಹೋಗಿ ಮಾತನಾಡಿಸಿ, ಸ್ನೇಹವನ್ನು ಮೆರೆಯುತ್ತಿದ್ದರು.

ಕೊಪ್ಪಳದಲ್ಲಿ ಮೊದಲ ಸಲ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ ಮಾಡಿದಾಗ ಆತನ ಜೊತೆ ಜೊತೆಗೆ ಸಂಘಟನೆಯಲ್ಲಿ ತೊಡಗಿಕೊಂಡವನು ನಾನು. ನಂತರದ ದಿನಗಳಲ್ಲಿ ಹನುಮಂತಪ್ಪ ಅಂಡಗಿಯವರ ಕೌಟುಂಬಿಕ ಸ್ನೇಹಿತನಾಗಿದ್ದೆ. ಮುಂದೆ ಸಂಬಂಧಿಯೂ ಅದೆ.ಆದರೆ…

ಅವರ ಕೆಲವು ಸಲ ಸಂಘಟನೆಯ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಅವರಿಂದ ಅಂತರ ಕಾಯ್ದುಕೊಂಡೆ. ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಂದಾಗಲೂ ನಯವಾಗಿ ತಿರಸ್ಕರಿಸಿದೆ.

ರಾಜಶೇಖರ ಅಂಗಡಿ ಮತ್ತು ಹನುಮಂತಪ್ಪ ಅಂಡಗಿ ಅವರ ಸಾಹಿತ್ಯ ಮತ್ತು ಸಂಘಟನೆಯ ಲೋಕದಲ್ಲಿದ್ದರೂ ನನ್ನ ಪಾಡಿಗೆ ನಾನು ಒಂಟಿಯಾಗಿದ್ದೆ. ಯಾರ ಪರವಾಗಿಯೂ, ಯಾರ ವಿರೋಧವಾಗಿಯೂ ಇರಲಿಲ್ಲ. ಸುಮಾರು ಐದಾರು ವರ್ಷಗಳ ಕಾಲ ನನ್ನ ಪಾಡಿಗೆ ನಾನು ಓದು ಬರಹ ಅಷ್ಟಕ್ಕೇ ಸೀಮಿತನಾಗಿದ್ದೆ. ನಂತರ ಮಹೇಶ ಬಳ್ಳಾರಿ ಅವರು ಮತ್ತೆ ನನ್ನ ಪುಸ್ತಕವನ್ನು ಪ್ರಕಟಿಸಲು ಉತ್ತೇಜಿಸಿದರು. ಪುಸ್ತಕಗಳನ್ನು ಪ್ರಕಟಿಸುತ್ತಾ, ನಿರಂತರ ಸಾಹಿತ್ಯದಲ್ಲಿ ಕೃಷಿ ಮಾಡಲು ಸಹಾಯ ಮಾಡಿದರು.ಇರಲಿ,

ಈಗ ರಾಜಶೇಖರ ಅಂಗಡಿಯವರಾಗಲಿ, ಹನುಮಂತಪ್ಪ ಅಂಡಗಿಯವರಾಗಲಿ ಭೌತಿಕವಾಗಿ ನಮ್ಮೊಂದಿಗಿಲ್ಲ. ಅವರು ಬಿಟ್ಟು ಹೋದ ಸಾಂಸ್ಕೃತಿಕ ಲೋಕವನ್ನು ಕಟ್ಟುವ ಸಂಘಟನೆಯ ಪಟ್ಟುಗಳು, ಸಂಘಟನಾ ಚತುರತೆ, ಸಾಧನೆ ಮಾಡಿದ ಸಾಧಕರ ಅಭಿನಂದನಾ ಗ್ರಂಥಗಳನ್ನು ತಂದ ಹನುಮಂತಪ್ಪನವರ ಗಟ್ಟಿತನವು ನಮ್ಮೊಂದಿಗಿದೆ. ರಾಜಶೇಖರ ಅಂಗಡಿಯವರು ಸಾಕಷ್ಟು ಪರಿಶ್ರಮದಿಂದ ಬದುಕನ್ನು ಕಟ್ಟಿಕೊಂಡವರು. ಹನುಮಂತಪ್ಪ ಅಂಡಗಿಯವರು ಕೂಡ ಬದುಕಿನಲ್ಲಿ ಅನೇಕ ಏರುಪೇರುಗಳನ್ನು ಕಂಡರೂ ಬದುಕಿನ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಬದುಕಿನ ಕೊನೆಯವರೆಗೂ ಕಷ್ಟಗಳನ್ನು ನಂಬಿಕೊಂಡು ನಕ್ಕ ಈ ಎರಡು ಸಾಂಸ್ಕೃತಿಕ ಲೋಕದ ನಕ್ಷತ್ರಗಳ ಒಡನಾಟದ ಕ್ಷಣಗಳನ್ನು ನಾನೆಂದೂ ಮರೆಯಲಾರೆ.

ನೋವಿನಿಂದ, ವಿಷಾದಿಂದ, ವಿದಾಯ ಹೇಳದೆ ಬೇರೆ ದಾರಿಯಿಲ್ಲ. ಅವರಿಬ್ಬರ ಆಪ್ತತೆ, ಸ್ನೇಹತನ ನಾನೆಂದಿಗೂ ಮರೆಯಲಾರೆ.

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group