ಮೈಸೂರು – ಸಾಂಸ್ಕೃತಿಕ ನಗರಿ ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಅತಿ ಸನಿಹದಲ್ಲಿರುವ ಛತ್ರಿ ಮರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸೆಂಟ್ರೋ ವಾಣಿಜ್ಯ ಸಂಕೀರ್ಣದ ಎಲ್ಲಾ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಬಗ್ಗೆ ತೀವ್ರ ಅಸಡ್ಡೆ ತೋರಲಾಗಿದೆ ಎಂದು ಹಿರಿಯ ಸಾಹಿತಿ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ದೂರಿದ್ದಾರೆ.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಅವರಿಗೆ ಈ ಬಗ್ಗೆ ದೂರು ನೀಡಿರುವ ಅವರು ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದ ಸಮೀಪವರುವ ನಂಜನಗೂಡು ರಸ್ತೆಯಲ್ಲಿನ ಸೆಂಟ್ರೋ ವಾಣಿಜ್ಯ ಸಂಕೀರ್ಣದಲ್ಲಿರುವ ಎಲ್ಲಾ ಮಾರಾಟ ಕೇಂದ್ರಗಳ ಹೆಸರುಗಳೂ ಆಂಗ್ಲ ಭಾಷೆಯಲ್ಲಿವೆ. ರಸ್ತೆಯಲ್ಲಿ ನಿಂತು ನೋಡಿದರೆ ಈ ವಾಣಿಜ್ಯ ಸಂಕೀರ್ಣವು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿದೆಯೇ ಅಥವಾ ಲಂಡನ್ನಿನ ಯಾವುದೋ ರಸ್ತೆಯಲ್ಲಿದೆಯೇ ಎಂಬ ಅನುಮಾನ ಎಂತಹವರನ್ನೂ ಕಾಡುತ್ತದೆ ಎಂದು ಆರೋಪಿಸಿದ್ದಾರೆ.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೂಡಲೇ ಶಿಸ್ತಿನ ಕ್ರಮ ಕೈಗೊಂಡು ಸೆಂಟ್ರೋ ವಾಣಿಜ್ಯ ಸಂಕೀರ್ಣದ ಎಲ್ಲಾ ವ್ಯಾಪಾರ ಕೇಂದ್ರಗಳಲ್ಲಿ ಇರುವ ನಾಮಫಲಕಗಳಲ್ಲಿ ಆಂಗ್ಲ ಭಾಷೆಯ ಜೊತೆಗೆ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಪ್ರಮುಖವಾಗಿ ಅಳವಡಿಸುವಂತೆ ಸೂಚಿಸಬೇಕೆಂದು ಆಗ್ರಹಪಡಿಸಿದ್ದಾರೆ.
ಆ ಮೂಲಕ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಕನ್ನಡಪರ ಚಿಂತನೆಗೆ ಉಂಟಾಗಿರುವ ಧಕ್ಕೆ ತಡೆಗಟ್ಟಬೇಕೆಂದು ಡಾ.ಭೇರ್ಯ ರಾಮಕುಮಾರ್ ಒತ್ತಾಯಿಸಿದ್ದಾರೆ.