ಸಿಂದಗಿ: ಕರ್ನಾಟಕ ರಾಜ್ಯದ ವಿವಿಧ ಪಕ್ಷಗಳ ನಾಯಕರು ಹಾಗೂ ಜನಪ್ರತಿನಧಿಗಳು ತಮ್ಮ ವಿರೋಧ ಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ಅಂಗವಿಕಲರನ್ನು ಬಳಸಿಕೊಂಡು ನಿಷೇಧಿತ ಪದಗಳನ್ನು ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಪೋರ್ಸ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಸುರೇಶ ಮ್ಯಾಗೇರಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಪೋರ್ಸ ರಾಜ್ಯ ಸಂಘಟನಾ ಕಾರ್ಯದರ್ಶಿ ಸಬಿಯಾಬೇಗಂ ಮರ್ತೂರ ಮಾತನಾಡಿ, ಸರಕಾರವೇ ಅಂಗವಿಕಲ ಪದ ತೆಗೆದು ಹಾಕಿ ವಿಕಲ ಚೇತನರು ಎನ್ನುವ ಪದ ಬಳಕೆ ಮಾಡಿ ವಿಕಲತೆಯನ್ನು ಹೋಗಲಾಡಿಸುತ್ತಿದೆ ಆದರೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಪಕ್ಷಗಳ ನಾಯಕರು ಮತ್ತು ಜನಪ್ರತಿನಿಧಿಗಳು ವಿರೋಧ ಪಕ್ಷದವರನ್ನು ಟೀಕಿಸುವ ಭರದಲ್ಲಿ ನಿಯತ್ತಿನ ಪ್ರಾಣಿಗಳಿಗೆ ಹೋಲಿಸಿ ಟೀಕಿಸುವುದರ ಜೊತೆಗೆ ಅಂಗವಿಕಲರನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿತನವಾಗಿದೆ ಈ ಹಿಂದೆ ವಿವಿಧ ಪಕ್ಷದ ಶಾಸಕರು ಹಾಗೂ ನಾಯಕರಾದ ಕೆ. ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಸಿ,ಟಿ, ರವಿ. ಹೀಗೆ ಹಲವಾರು ನಾಯಕರು ಒಂದಿಲ್ಲೊಂದು ಸಂದರ್ಭದಲ್ಲಿ ತಮ್ಮ ಎದುರಾಳಿಗಳನ್ನು ಟೀಕಿಸುವ ಭರದಲ್ಲಿ ನಿಷೇದಿತ ಕುಂಟ-ಕುರುಡ ಪದಗಳನ್ನು ಬಳಸಿ ಸಮಸ್ತ ಅಂಗವಿಕಲರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಹಾದಿಯಲ್ಲೇ ಮುಂದುವರಿದು ಕಳೆದ ದಿ. 07 ರಂದು ತೋಟಗಾರಿಕೆ ಸಚಿವ ಮುನಿರತ್ನರವರು ಹೆಚ್,ಡಿ, ಕುಮಾರಸ್ವಾಮಿಯವರ ವಿರುದ್ದ ಪತ್ರಿಕಾ ಗೋಷ್ಟಿ ನಡೆಸುವ ಸಂದರ್ಭದಲ್ಲಿ ಕುಂಟನ ಕಥೆ ನೆನಪಾಗುತ್ತದೆ ಎಂದು ಹೋಲಿಕೆ ಮಾಡಿ ಕಥೆ ಹೇಳುವ ಮೂಲಕ ತಮ್ಮ ನಿಜ ಮೌಲ್ಯವನ್ನು ಸಮಾಜಕ್ಕೆ ತೋರಿಸಿದ್ದಾರೆ.
ಸಾರ್ವಜನಿಕವಾಗಿ ಅಂಗವಿಕಲರಿಗೆ ನೋವುಂಟುಮಾಡುವ ಅವಮಾನಿಸುವ ಪದಗಳನ್ನು ಬಳಸುವುದು ಅಂಗವಿಕಲರ ಹಕ್ಕುಗಳ ಕಾಯ್ದೆ 2016 ರ ಅಧ್ಯಾಯ 16 ರ ಕಲಂ 92 ಪ್ರಕಾರ ಶಿಕ್ಷೆಗೊಳಗಾಗುವ ಅಪರಾಧವಾಗಿದ್ದು, ಇವರುಗಳ ವಿರುದ್ದ ದೂರು ದಾಖಲಿಸಬಹುದಾಗಿರುತ್ತದೆ. ಆದಕಾರಣ ಸಚಿವ ಮುನಿರತ್ನರವರು ತಾವು ಬಳಸಿದ ನಿಷೇಧಿತ ಪದಗಳಿಗೆ ಸಮಸ್ತ ವಿಕಲಚೇತನರಲ್ಲಿ ಕ್ಷಮೆಯಾಚಿಸಿ, ಮುಂದೆ ಇಂತಹ ಪದಗಳನ್ನು ಬಳಸದಂತೆ ಎಚ್ಚರವಹಿಸಬೇಕೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಎಂ.ಆರ್.ಡ್ಲ್ಯೂನ ಮುತ್ತು ಸಾತಿಹಾಳ ಮಾತನಾಡಿ, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ವಿಕಲಚೇತನರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಸಮಾಜದಲ್ಲಿ ಅಂಗವಿಕಲರ ಘನತೆಯನ್ನು ಕಾಪಾಡುವುದು ಅಷ್ಟೇ ಮುಖ್ಯವಾಗಿರುತ್ತದೆ. ಆದಕಾರಣ ತಾವುಗಳು ಮುಂದಿನ ದಿನಗಳಲ್ಲಿ ಯಾವುದೇ ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳು ರಾಜಕೀಯವಾಗಿ ಅಂಗವಿಕಲರ ಕುರಿತು ಯಾವುದೆ ನಿಷೇಧಿತ ಪದಗಳನ್ನು ಬಳಕೆಮಾಡದಂತೆ ಸೂಕ್ತ ಆದೇಶವನ್ನು ಹೊರಡಿಸಬೇಕೆಂದು ರೇವಣಸಿದ್ದ ಹ. ಮಡಿವಾಳಕರ ಸಾ.ಆಹೇರಿ, ವಿಠ್ಠಲ ಕರಜಗಿ, ಸುರೇಶ ಈರಣ್ಣ ಜವಳಗಿ, ಬಾಳರಾಮ ನೇಮಸಿಂಗ ರಜಪೂತ, ಚಿದಾನಂದ ಎಸ್. ಹವಳಗಿ, ಪರಮೇಶ್ವರ ಕೋರೆ, ಸಿದ್ದಯ್ಯ ಎಸ್. ಹಿರೇಮಠ. ಮಲ್ಲಿಕಾರ್ಜುನ ಎನ್. ಕರ್ನಾಳ, ಮಲ್ಲಪ್ಪ ದೊಡಮನಿ, ಸೈದಾಬಿ ಎಮ. ಬಂದಾಳ, ವಸಂತರಾವ ವ್ಹಿ. ಕುಲಕರ್ಣಿ, ಶ್ರೀಶೈಲ ಎಸ್. ದಳವಾಯಿ ಆಗ್ರಹಿಸಿದರು.