ಮೂಡಲಗಿ: ರೈತರ ಕೃಷಿ ಉತ್ಪನ್ನಗಳ ಸಾಗಣಿಕೆಗಾಗಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಟ್ರಾಕ್ಟರ್ ಮತ್ತು ಕೊಯ್ಲು ಮಾಡುವ ವಾಹನಗಳು ಸೇರಿದಂತೆ ಎತ್ತಿನ ಗಾಡಿಗಳನ್ನು ಬಳಸುವ ರೈತರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಶುಲ್ಕದ ಸಂಪೂರ್ಣ ವಿನಾಯತಿ ನೀಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ರವಿವಾರ ಮಾ.06 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು, ರೈತರು ಬಳಸುವ ವಾಹನಗಳಿಗೆ ಟೋಲ್ ಶುಲ್ಕದ ಸಂಪೂರ್ಣ ವಿನಾಯತಿ ನೀಡುವಂತೆ ಕೋರಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಸಂಸದ ಈರಣ್ಣ ಕಡಾಡಿ ಅವರ ಪತ್ರಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ನಿತಿನ ಗಡ್ಕರಿ ಅವರು ಸಂಸದರ ರೈತ ಪರ ಕಳಕಳಿಯನ್ನು ಮೆಚ್ಚಿ ರೈತರು ಬಳಸುವ ಎಲ್ಲ ವಾಹನಗಳಿಗೆ ಟೋಲ್ ವಿನಾಯತಿ ನೀಡುವುದಾಗಿ ತಿಳಿಸಿ ಪತ್ರ ಬರೆದಿದ್ದಾರೆ.
ತಮ್ಮ ಪತ್ರಕ್ಕೆ ಸ್ಪಂದಿಸಿ ರೈತ ಪರವಾದ ನಿಲುವನ್ನು ತಳೆದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕರ್ನಾಟಕ ರಾಜ್ಯದ ರೈತರ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ತಿಳಿಸುವುದಾಗಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಈ ಮೂಲಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.