ಮೂಡಲಗಿ: ಪ್ರಬುದ್ಧ ಮತದಾರರನ್ನೊಳಗೊಂಡ ವಾಯವ್ಯ ಪದವಿಧರ ಹಾಗೂ ಶಿಕ್ಷಕರ ವಿಧಾನ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ ಮತ್ತು ಸುನೀಲ ಸಂಕರವರಿಗೆ ಅಮೂಲ್ಯ ಮತ ನೀಡುವ ಮೂಲಕ ಭ್ರಷ್ಟ ಬಿಜೆಪಿ ಸರಕಾರಕ್ಕೆ ಅಂತ್ಯ ನೀಡಬೇಕು ಎಂದು ಅರಭಾಂವಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅವರು ಪಟ್ಟಣದ ವಿವಿಧ ಶಾಲೆ, ಸಂಘ-ಸಂಸ್ಥೆ, ಕಛೇರಿಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಳಗಾವಿ, ಬಾಗಲಕೋಟ, ವಿಜಯಪೂರ ಜಿಲ್ಲೆಗಳ ವ್ಯಾಪ್ತಿಯ ವಾಯುವ್ಯ ಪದವಿಧರ ಹಾಗೂ ಶಿಕ್ಷಕರ ಮತಕ್ಷೇತ್ರವು ಬಹು ವಿಸ್ತಾರವಾಗಿದೆ. ಪ್ರಸಕ್ತ ದಿನಗಳಲ್ಲಿ ಆಡಳಿತ ನಡೆಸುವಲ್ಲಿ ಸರಕಾರ ವಿಫಲವಾಗಿದೆ. ಪ್ರಜ್ಞಾವಂತ ಮತದಾರರು ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಂತಿರುವ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ರಾಜಕೀಯವಾಗಿ ಸಬಲರಾಗಲು ಸಹಕಾರ ನೀಡಬೇಕು.
ಬಿಜೆಪಿ ಪಕ್ಷದ ಮುಖಂಡರು ಆರೋಪಿಸುತ್ತಿರುವ ಶಿಕ್ಷಕರಲ್ಲದವರು, ಪದವಿ ಹೊಂದದೆ ಇರುವ ಅಭ್ಯರ್ಥಿಗಳೆಂದು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಪ್ರಕಾಶ ಹುಕ್ಕೇರಿಯವರು ಸಕ್ರಿಯವಾಗಿ ಮೂರು ದಶಕಗಳ ಕಾಲ ಸಾರ್ವಜನಿಕ ರಾಜಕೀಯ ಅನುಭವಿಗಳು. ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭಾ ಸದಸ್ಯರಲ್ಲದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮರ್ಥವಾಗಿ ಆಡಳಿತ ನೀಡಿದ ಚಿಂತಕರ ಚಾವಡಿಯ ಹಿನ್ನೆಲೆಯುಳ್ಳವರು ಎಂದು ಹೇಳಿದರು.
ಪದವಿಧರ ಕ್ಷೇತ್ರದ ಸುನೀಲ ಸಂಕರವರು ನಿರುದ್ಯೋಗ, ಸೇವಾ ಭದ್ರತೆ, ತಂತ್ರಜ್ಞಾನ ಕೌಶಲ್ಯಗಳ ಕುರಿತು ಹೆಚ್ಚಿನ ಜ್ಞಾನವುಳ್ಳವರಾಗಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಜನತೆಯ ಗುಣಮಟ್ಟ ಹೆಚ್ಚಿಸಲು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಬೇಕು. ಅರಭಾಂವಿ ಮತಕ್ಷೇತ್ರದ ಮೂಡಲಗಿ ಹಾಗೂ ಗೋಕಾಕ ತಾಲೂಕು ಹಾಗೂ ಬೆಳಗಾವಿ ಜಿಲ್ಲೆಯ ಮತದಾರ ಪ್ರಭುಗಳು ತಮ್ಮ ವಿವೇಚನೆಯನುಸಾರ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಮತ ನೀಡಬೇಕು. ಹಣದುಬ್ಬರ, ದೈನಂದಿನ ದಿನ ಬಳಕೆ ವಸ್ತುಗಳು, ಇಂಧನ, ವಿದ್ಯುತ್ ಇನ್ನೂ ಹಲವಾರು ಜ್ವಲಂತ ಸಮಸ್ಯೆಗಳಿಗೆ ಸಿಲುಕಿ ಜನಸಾಮಾನ್ಯರು ಪಡಬಾರದ ನಷ್ಟಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಜೂನ್ ೧೩ ರಂದು ಅರ್ಹ ಮತದಾರರು ಮತನೀಡಬೇಕು ಎಂದು ಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಉಪಾಧ್ಯಕ್ಷ ಸುರೇಶ ಮಗದುಮ, ಬೆಳಗಾವಿ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯ ಬಿ.ಪಿ ನಾಯಕ, ಪ್ರಧಾನ ಕಾರ್ಯದರ್ಶಿ, ರವಿ ತುಪ್ಪದ, ಮುಖಂಡರುಗಳಾದ ಗಿರೀಶ ಕರಡಿ, ಭೀಮಶಿ ಹೊಸಟ್ಟಿ, ಮದಾರ ಜಕಾತಿ, ಸಲಿಂ ಇನಾಮದಾರ ಉಪಸ್ಥಿತರಿದ್ದರು.