ನ್ಯಾಷನಲ್ಲ ಹೆರಾಲ್ಡ್ ಹಗರಣದ ಕುರಿತಂತೆ ಇಡಿಯು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸಿದಾಗ ಕಾಂಗ್ರೆಸ್ ಪಕ್ಷದ ಉಳಿದ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ವಿರುದ್ದ ಉರಿದೆದ್ದರು. ತಮ್ಮ ನಾಯಕರನ್ನು ಉದ್ದೇಶಪೂರ್ವಕವಾಗಿ ಕಾಡಲಾಗುತ್ತಿದೆ ಎಂದೆಲ್ಲ ಗಾಂಧಿ ಪರಿವಾರದವರ ಪರವಾಗಿ ಪ್ರತಿಭಟನೆ ಮಾಡಿದ್ದೇ ಮಾಡಿದ್ದು.
ಆದರೆ ಇನ್ನೊಂದು ವಿಷಯ ಎಲ್ಲಾ ಜನತೆಯ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗಮನಕ್ಕೆ ಯಾಕೆ ಬರಲಿಲ್ಲ ಎಂಬುದೇ ತಿಳಿಯದಾಗಿದೆ. ಅದೆಂದರೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನೂ ಇದೇ ನ್ಯಾಷನಲ್ಲ ಹೆರಾಲ್ಡ್ ಕೇಸು ಕುರಿತಂತೆ ಇಡಿ ಏಳು ತಾಸು ವಿಚಾರಣೆ ನಡೆಸಿತು. ಯಾರ ಬಾಯಿಂದಲೂ ಒಂದೇ ಒಂದು ಮಾತು ಕೂಡ ಪ್ರತಿಭಟನಾರ್ಥವಾಗಿ ಹೊರಬರಲಿಲ್ಲ. ಯಾಕೆ, ಖರ್ಗೆಯವರು ಕಾಂಗ್ರೆಸ್ ಗಾಗಿ ದುಡಿದಿಲ್ಲವೆ ? ಗಾಂಧಿ ಪರಿವಾರವಷ್ಟೇ ಈ ಕಾರ್ಯಕರ್ತರ ದೇವರೆ ? ಖರ್ಗೆಯವರ ಬಗ್ಗೆ ವಿಷಾದವೆನಿಸುತ್ತಿದೆ.
ಅಷ್ಟಕ್ಕೂ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪಾತ್ರ ಅಷ್ಟಕ್ಕಷ್ಟೇ. ಇತ್ತೀಚೆಗಷ್ಟೆ ಅವರು ಗಾಂಧಿಗಳ ಯಂಗ್ ಇಂಡಿಯಾ ಕಂಪನಿ ಸೇರಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಈ ನಕಲಿ ಗಾಂಧಿ ಪರಿವಾರದವರು ಮಾಡಿರುವ ಹಗರಣದಲ್ಲಿ ಖರ್ಗೆಯವರ ಪಾಲು ಎಳ್ಳಷ್ಟೂ ಇಲ್ಲವೆಂಬುದು ಸ್ಪಷ್ಟವಾಗಿದೆ. ಆದರೂ ಅವರು ಆ ಕಂಪನಿಯ ಸದಸ್ಯರೆಂಬುದಕ್ಕಾಗಿ ಈಗ ಇಡಿ ವಿಚಾರಣೆ ಎದುರಿಸಬೇಕಾಗಿದೆ.
ಸೋನಿಯಾ ಮತ್ತು ರಾಹುಲ್ ಅವರ ವಿಚಾರಣೆ ಮಾಡುವಾಗ ದೇಶಾದ್ಯಂತ ಕಾಂಗ್ರೆಸ್ ನಾಯಕರು ಗಂಟಲು ಹರಿಕೊಂಡಿದ್ದೆಷ್ಟು. ತಾವೇನೂ ತಪ್ಪು ಮಾಡದಿದ್ದರೆ ಧೈರ್ಯದಿಂದ ಇಡಿ ತನಿಖೆ ಎದುರಿಸಬೇಕಾಗಿದ್ದ ಕಾಂಗಿಗಳು ವಿನಾಕಾರಣ ಇಡಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸತೊಡಗಿದರು. ಕರ್ನಾಟಕದಲ್ಲಿಯಂತೂ ಸಿದ್ಧರಾಮಯ್ಯ ಹಾಗೂ ಡಿ ಕೆ ಶಿವಕುಮಾರ ಅವರ ಕಾಂಗ್ರೆಸ್ ನಿಷ್ಠೆ ( ಗಾಂಧಿ ಕುಟುಂಬ ನಿಷ್ಠೆ ?) ಯಾವ ರೀತಿ ಪ್ರಕಟವಾಯಿತೆಂಬುದನ್ನು ರಾಜ್ಯವೇ ನೋಡಿದೆ.
ಇದೇ ಥರದ ನಿಷ್ಠೆ ಮಲ್ಲಿಕಾರ್ಜುನ ಖರ್ಗೆಯವರ ಕುರಿತಂತೆ ಕಾಂಗ್ರೆಸ್ ನಾಯಕರಿಗೆ ಯಾಕೆ ಬರಲಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಮಾತೆತ್ತಿದರೆ ದಲಿತ ಉದ್ಧಾರದ ಬಗ್ಗೆ ಬಾಯಿ ಬಡಿದುಕೊಳ್ಳುವ ಕಾಂಗ್ರೆಸ್ ಪಕ್ಷವು ದಲಿತ ಮುಖಂಡ ಖರ್ಗೆಯವರ ಬೆನ್ನಿಗೆ ನಿಲ್ಲದಿದ್ದುದು ಏನು ಸೂಚಿಸುತ್ತದೆ ?
ಉಮೇಶ ಬೆಳಕೂಡ, ಮೂಡಲಗಿ