ಬೀದರ – ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಹಾಗೂ ದೇಶದ ಜನರು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇರುವ ತನಕ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಾರಿಗೆ ಮತ್ತು ಪರಿಶಿಷ್ಟವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀ ರಾಮುಲು ಹೇಳಿದರು.
ಬೀದರನಲ್ಲಿ ಹೊಸ ಆರ್ ಟಿಓ ಕಚೇರಿಯ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ನಂತರ ಪತ್ರಕರ್ತರೊಡನೆ ಅವರು ಮಾತನಾಡಿದರು.
ಕಾಂಗ್ರೆಸ್ ನಲ್ಲಿ ಯಾವುದೂ ಸರಿಯಾಗಿಲ್ಲ. ಸಿದ್ದರಾಮಯ್ಯ ನಾನು ಸಿಎಂ ಅನ್ನುತ್ತಿದ್ದಾರೆ ಇತ್ತ ಡಿಕೆಶಿ ನಾನು ಸಿಎಂ ಅನ್ನುತ್ತಿದ್ದಾರೆ. ಸಿದ್ದರಾಮಯ್ಯ ಯಾವ ಪಕ್ಷಕ್ಕೆ ಹೋಗಿದ್ದಾರೆಯೋ ಆ ಪಕ್ಷವನ್ನು ಮುಳುಗಿಸಿ ಬಂದಿದ್ದಾರೆ.ಸಿದ್ದರಾಮಯ್ಯ ಭಸ್ಮಾಸುರ ಇದ್ದ ಹಾಗೆ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ ಸಪೋರ್ಟ್ ಮೇಲೆ ಸಿದ್ದರಾಮಯ್ಯ ಹಾರಾಡುತ್ತಿದ್ದಾರೆ ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ. ಸ್ವಂತ ಶಕ್ತಿ ಇಲ್ಲ ಅವರಿಗೆ ಸಿದ್ದಾಂತಗಳಿಲ್ಲ. ಹಿಂದುಳಿದ ಜಾತಿಯ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಮತ್ತೆ ಸ್ಫರ್ಧಿಸಿದರೆ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದರು.
ಶಾಸಕರು ಎಲ್ಲಿ ಎಂದು ಬಾದಾಮಿಯ ಜನರು ಹುಡುಕುವಂತಾಗಿದೆ ಇಂಥದ್ದರಲ್ಲಿ ಸಿದ್ಧರಾಮಯ್ಯ ಹೇಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಕೇಳಿದ ಅವರು, ಅಲ್ಲಿನ ಜನ ಶ್ರೀರಾಮುಲು ಅವರನ್ನು ಸೋಲಿಸಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.
ಬೀದರ ನಗರದ ಪ್ರತಾಪ ನಗರದಲ್ಲಿ ಆರ್ ಟಿ ಒ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶ್ರೀರಾಮುಲು ಅಡಿಗಲ್ಲು ಹಾಕಿದರು. ಪುರೋಹಿತ ರಿಂದ ವಿಶೇಷ ಪೂಜೆ ಸಲ್ಲಿಸಿ ಗುದ್ದಲಿ ಯಿಂದ ಭೂಮಿ ಅಗೆದು ಅಡಿಗಲ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಶ್ರೀರಾಮಲು ಅವರ ಜೊತೆಗೆ ಬೀದರ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ ಹಾಗು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಇದ್ದರು.
ಕಾರ್ಯಕ್ರಮದಲ್ಲಿ ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ