ಭಾರತ ಸಮಸ್ತ ಜನತೆಗೆ ಬೇಕಾದ ನ್ಯಾಯನೀತಿಗಳನ್ನು ಬೆಳಗಲು ಮಾಡಬೇಕಾದ ಲೋಕಪರ ಸಂಶೋಧನೆಗೆ ಭಾರತ ಸಂವಿಧಾನವು ಅತ್ಯುತ್ತಮ ಮಾದರಿ ಎಂದು ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ವಿದ್ವಾಂಸರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಾಯಪಟ್ಟರು.
ಕೊಡಗು ವಿಶ್ವವಿದ್ಯಾಲಯ ವ್ಯಾಪ್ತಿಯ ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಸಂಶೋಧನಾ ಅಭಿವೃದ್ದಿ ಕೋಶದ ಸಹಯೋಗದಲ್ಲಿ ಅಂತರ್ಜಾಲದ ಮೂಲಕ ಆಯೋಜಿಸಲಾಗಿದ್ದ ೭ ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ “ಸಂಶೋಧನೆ ಮತ್ತು ಪ್ರಕಟಣಾ ಮೌಲ್ಯ” ಕುರಿತು ಮಾತನಾಡಿದರು.
ಭಾರತ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪಿಸಲ್ಪಟ್ಟ ನಮ್ಮ ಭಾರತ ಸಂವಿಧಾನವೂ ಸಹ ವಿಶ್ವಾತ್ಮಕ ಸಂಶೋಧನೆಯಿಂದಲೇ ಸಾಧ್ಯವಾಗಿದ್ದು. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶೋಧಿಸಿ ಮೌಲ್ಯೀಕರಿಸಿ, ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಪರಾಮರ್ಶಿಸಿ, ಸಮಕಾಲೀನ ಮತ್ತು ಸಾರ್ವಕಾಲೀನ ಜನಜೀವನ ಸುಭದ್ರವಾಗಿರಲು ಬೇಕಾದ ನೀತಿನಿರೂಪಣೆಯನ್ನು ಮಾಡಿದ್ದಾರೆ. ಜೊತೆಗೆ ಕಾಲಕ್ಕೆ ತಕ್ಕಂತೆ ದೇಶದ ಸಮಗ್ರತೆ ಹಾಗೂ ಜನತೆಗೆ ಧಕ್ಕೆಯಾಗದಂತೆ ಮಾಡಿಕೊಳ್ಳಬಹುದಾದ ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಹೀಗೆ ಯಾವುದೇ ಒಂದು ಸಂಶೋಧನಾ ಕಾರ್ಯವು ಪ್ರಾಮಾಣಿಕತೆ, ಪ್ರಬುದ್ಧತೆ, ಪ್ರಜಾಪರತೆ ಹಾಗೂ ಪ್ರಸ್ತುತತೆಯಿಂದ ಕೂಡಿರಬೇಕು ಎಂಬುದಕ್ಕೆ ಭಾರತ ಸಂವಿಧಾನವೂ ಮಾರ್ಗದರ್ಶಿಯಾಗಿದೆ ಎಂದರು.
ಗ್ರಾಮೀಣ ಪರಿಸರದ ಜಾನಪದರಲ್ಲಿ ಜೀವನ ನೀತಿಗೆ ಮಹತ್ವದ ಸ್ಥಾನಮಾನ ನೀಡಲಾಗಿದೆ. ‘ಕೈ-ಬಾಯಿ-ಕಚ್ಚೆ ಶುದ್ಧವಾಗಿದ್ರೆ ಏಳೇಳು ಲೋಕಾನೂ ಜೈಸಬೋದು’ ಎಂಬುದು ಜಾನಪದರ ಲೋಕಾನುಭವದ ನುಡಿ. ನೀತಿನಿಯತ್ತುಗಳು ಯಾವಾಗಲೂ ಹದ ತಪ್ಪಬಾರದು ಎಂದು ನಂಬಿದ ಜನಪದರು ನೀತಿಬೋಧಕ, ನ್ಯಾಯಸಾಧಕ ಹಾಗೂ ಸಮಾಜಸುಧಾರಕರನ್ನು ಸದಾ ಸ್ಮರಿಸುತ್ತಾರೆ. ಪ್ರತಿಯೊಂದು ಧರ್ಮವೂ ತನ್ನದೇ ಆದ ನೀತಿಗ್ರಂಥಗಳನ್ನು ಅನುಸರಿಸಲು ನಿರಂತರವಾಗಿ ಪ್ರಯತ್ನಿಸುತ್ತದೆ. ಹಾಗೆಯೇ ಸಂಶೋಧನೆಯಲ್ಲೂ ನೈತಿಕ ಮೌಲ್ಯವನ್ನು ಕಾಪಿಟ್ಟಕೊಂಡು ಬರಲು ಆಶಿಸಲಾಗಿದೆ. ಯುಜಿಸಿಯು ಸೂಚಿಸಿರುವ ಮತ್ತು ಹಿಂದಿನ ಸಂಶೋಧನ ಜಗತ್ತು ಪಾಲಿಸಿಕೊಂಡು ಬಂದಿರುವ ರೀತಿನೀತಿಗಳನ್ನು ವರ್ತಮಾನದ ಸಂಶೋಧಕರು ಪಾಲಿಸಬೇಕಿದೆ ಎಂದು ತಿಳಿಸಿದರು.
ಆಧುನಿಕ ಸಂದರ್ಭದಲ್ಲಿ ತಂತ್ರಜ್ಞಾನ ಹಾಗೂ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗಿದ್ದು ಅನೈತಿಕ ಮಾರ್ಗದ ಸಂಶೋಧನೆ ಮತ್ತು ಪ್ರಕಟಣೆಗಳು ಎಗ್ಗಿಲ್ಲದೆ ಸಾಗಿವೆ. ಫೇಕ್ ನ್ಯೂಸ್ ಹಾವಳಿ ವಿಪರೀತವಾಗಿ ಯಾವುದು ಸತ್ಯ, ಯಾವುದು ಸುಳ್ಳು ಎಂಬ ದ್ವಂದ್ವಕ್ಕೆ ಜನಸಮುದಾಯಗಳು ಬೀಳುತ್ತಿವೆ. ತಮಗೆ ಆಗದವರ ವಿರುದ್ಧವಾಗಿ ಅಸಂಗತ ನುಡಿಹೊಂದಾಣಿಕೆ ಮಾಡಿಕೊಂಡು ತೇಜೋವಧೆ ಮಾಡುವ ಅಮಾನವೀಯತೆ ಎದ್ದುಕಾಣುತ್ತಿದೆ. ಸಂಶೋಧನ ಲೇಖನ ಪ್ರಕಟಣೆಯಲ್ಲಿ ಈಚೆಗೆ ಕಾಣಿಸಿಕೊಳ್ಳುತ್ತಿರುವ ತೀವ್ರವಾದ ವ್ಯಾವಹಾರಿಕ ಪೈಪೋಟಿ ಕಾರಣದಿಂದಾಗಿ ಸಂಶೋಧನಾತ್ಮಕ ಗುಣಮಟ್ಟ ಕುಸಿತಗೊಂಡಿರುವುದು ದುರಂತದ ಸಂಗತಿ. ಬೆಂಕಿ ಹಚ್ಚಿ ಜನಸಮುದಾಯಗಳನ್ನು ಒಡೆಯುವ ಲೋಕವಿರೋಧಿ ಪಕ್ಷಪಾತದ ಅನೈತಿಕ ಸಂಶೋಧನೆಗಿಂತ ಲೋಕಪರ ಬದುಕು ಬೆಳಗುವ ನೈತಿಕ ಸಂಶೋಧನೆಗಳು ನಡೆಯಬೇಕಾಗಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಸಿ.ದಯಾನಂದ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರಾದ ಪ್ರೊ.ಚರಿತ, ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕರಾದ ಡಾ.ಪ್ರಭು ಡಿ. ಹುಣಸೂರು ಹಾಗೂ ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಇತಿಹಾಸ ಪ್ರಾಧ್ಯಾಪಕ ಪ್ರೊ.ರುದ್ರ ಅವರು ಸ್ವಾಗತಿಸಿ ನಿರೂಪಿಸಿದರು. ಸುಮಾರು ೨೫೦ಕ್ಕೂ ಹೆಚ್ಚು ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.