ಸಿಂದಗಿ: ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ತತ್ವಗಳು ವಿಶ್ವದಲ್ಲಿ ಶ್ರೇಷ್ಠವಾಗಿವೆ. ನಾವೂ ಸಹ ಆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಭಾರತದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸೋಣ ಎಂದು ನ್ಯಾಯವಾದಿ ಅನ್ವರ್ ಅಂಗಡಿ ಅವರು ಹೇಳಿದರು.
ಪಟ್ಟಣದ ಜೇವರ್ಗಿ ರಸ್ತೆಯಲ್ಲಿರುವ ಲೊಯೋಲ ಶಾಲೆಯಲ್ಲಿ ಸಂವಿಧಾನ ದಿನವನ್ನು ಆಚರಿಸಿ ಮಾತನಾಡಿದರು.
ಭಾರತ ಸಂವಿಧಾನವು ವಿಶ್ವದಲ್ಲಿ ಅತ್ಯಂತ ವಿಶಿಷ್ಟವಾದ ಹಾಗೂ ಬೃಹತ್ ಲಿಖಿತ ಸಂವಿಧಾನವಾಗಿದೆ. ಸಂವಿಧಾನದ ಆತ್ಮದಂತೆ ಇರುವ ಸಂವಿಧಾನದ ಪೀಠಿಕೆಯು ಅದರ ಗುರಿ ಮತ್ತು ಉದ್ದೇಶಗಳನ್ನು ತಿಳಿಸುತ್ತದೆ. ದಲಿತ ವ್ಯಕ್ತಿ ಒಬ್ಬ ಅನುಭವಿಸಿದ ನೋವುಗಳನ್ನು ಮತ್ತಾರು ಅನುಭವಿಸಬಾರದೆಂಬ ವಿಚಾರಗಳು ಈ ಸಂವಿಧಾನದಲ್ಲಿ ಅಡಕವಾಗಿವೆ. ನಾವೆಲ್ಲರೂ ಸಂವಿಧಾನದ ಉದಾತ್ತ ವಿಚಾರಗಳನ್ನು ಅಳವಡಿಸಿಕೊಂಡು ಸುಭದ್ರ, ಸುಶಿಕ್ಷಿತ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಯತ್ನಿಸೋಣ ಎಂದು ಹೇಳಿದರು,
ಶಾಲೆಯ ಪ್ರಾಚಾರ್ಯರಾದ ಫಾದರ್ ಲ್ಯಾನ್ಸಿ ಫರ್ನಾಂಡಿಸ್ ಅವರು ಮಾತನಾಡಿದರು.
ಖಾಜಿಯಾ ಹಾಗೂ ಸಂಗಡಿಗರಿಂದ ನೃತ್ಯ ಮತ್ತು ಜೀವನ್ ಹಾಗೂ ಸಂಗಡಿಗರಿಂದ ಕಿರು ರೂಪಕದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಂಬೇಡ್ಕರ ವೇಷ ಧರಿಸಿದ ಜೀವನ ಕುಚಬಾಳ ಹಾಗೂ ವಿಶಾಲ ಇವರು ಕಾರ್ಯಕ್ರಮಕ್ಕೆ ಮೆರಗು ನೀಡಿದ್ದರು.
ವೇದಿಕೆಯ ಮೇಲೆ ಶಾಲೆಯ ಉಪ ಪ್ರಾಂಶುಪಾಲೆಯರಾದ ಸಿಸ್ಟರ್ ಗ್ರೇಸಿ ಉಪಸ್ಥಿತರಿದ್ದರು.
ಕುಮಾರ್ ನಿತಿನ್ ಕಾರ್ಯಕ್ರಮ ನಿರೂಪಿಸಿದರು, ನಿರ್ಮಾ ಪಟೇಲ್ ಸ್ವಾಗತಿಸಿದರು, ಸುಚಿತ್ರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.